ವೈಮಾನಿಕ ತಂತ್ರಜ್ಞಾನ ಕ್ಷೇತ್ರಕ್ಕೂ ಕಾಲಿಟ್ಟ ಓಪನ್ ಸೋರ್ಸ್

7

ವೈಮಾನಿಕ ತಂತ್ರಜ್ಞಾನ ಕ್ಷೇತ್ರಕ್ಕೂ ಕಾಲಿಟ್ಟ ಓಪನ್ ಸೋರ್ಸ್

Published:
Updated:

ಯಲಹಂಕ ವಾಯುನೆಲೆ: ಸಾಫ್ಟ್‌ವೇರ್ ಕ್ಷೇತ್ರದ ದೈತ್ಯ ಕಂಪೆನಿಗಳನ್ನು ನಡುಗಿಸಿರುವ ‘ಓಪನ್ ಸೋರ್ಸ್’ (ಮುಕ್ತ ಮಾಹಿತಿ) ವ್ಯವಸ್ಥೆ ವೈಮಾನಿಕ ತಂತ್ರಜ್ಞಾನ ಕ್ಷೇತ್ರಕ್ಕೂ ಕಾಲಿಟ್ಟಿದೆ. ಏರೊ ಇಂಡಿಯಾ-2011 ವೈಮಾನಿಕ ಪ್ರದರ್ಶನದ ಸಂದರ್ಭದಲ್ಲೇ ಇದಕ್ಕೆ ಚಾಲನೆ ನೀಡಲಾಗಿದೆ.ಓಪನ್ ಸೋರ್ಸ್ ವ್ಯವಸ್ಥೆ, ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಸಾಫ್ಟ್‌ವೇರ್‌ನ ‘ಸೋರ್ಸ್ ಕೋಡ್’ಗಳನ್ನು ಮುಕ್ತವಾಗಿಸಿ, ಯಾರು ಬೇಕಾದರೂ ಬದಲಾವಣೆ ತರುವ ಅವಕಾಶ ನೀಡಿರುವುದು ಈಗ ಹಳೆಯ ಸಂಗತಿ. ಅಲ್ಲದೆ ಸಾಫ್ಟ್‌ವೇರ್ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಕಂಪೆನಿಗೂ ‘ಓಪನ್ ಸೋರ್ಸ್’ ವ್ಯವಸ್ಥೆ ಸವಾಲು ಹಾಕಿರುವುದೂ ಹೊಸದಲ್ಲ.ವೈಮಾನಿಕ ತಂತ್ರಜ್ಞಾನ ಕ್ಷೇತ್ರದ ಜೆನ್ಸರ್ ಏವಿಯೇಷನ್ ಸಂಸ್ಥೆ ಓಪನ್ ಸೋರ್ಸ್ ಆಧಾರದಲ್ಲಿ ವಿಮಾನ ಅಭಿವೃದ್ಧಿಪಡಿಸುವ ವೇದಿಕೆಗೆ ನಾಂದಿ ಹಾಡಿದೆ. ಏರೊ ಇಂಡಿಯಾ-2011 ಕಾರ್ಯಕ್ರಮದಲ್ಲಿ ತೆರೆಯಲಾಗಿದ್ದ ಸಂಸ್ಥೆಯ ಮಳಿಗೆಯಲ್ಲಿ ಈ ವೇದಿಕೆಗೆ ಡಾ. ಕೋಟ ಹರಿನಾರಾಯಣ್ ಅವರು ಚಾಲನೆ ನೀಡಿದ್ದಾರೆ. ಭಾರತದ ಹೆಮ್ಮೆಯ ಲಘು ಯುದ್ಧ ವಿಮಾನ ‘ತೇಜಸ್’ ಅನ್ನು ಅಭಿವೃದ್ಧಿಪಡಿಸಿದ ತಂಡವನ್ನು ಆರಂಭದ ಹಂತದಿಂದಲೂ ಮುನ್ನಡೆಸಿದವರೇ ಡಾ.ಕೋಟ ಹರಿನಾರಾಯಣ್.ಏನಿದು?: ಜೆನ್ಸರ್ ಏವಿಯೇಷನ್ ಸಂಸ್ಥೆ ತನ್ನ ನೂತನ ಜೆನ್‌ಜೆಟ್ ಜಿಎಲ್‌ಜೆ ವಿಮಾನವನ್ನು ಓಪನ್ ಸೋರ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಿದೆ. ಇದು ಎರಡು ಎಂಜಿನ್‌ಗಳ, ಒಂಬತ್ತು ಮಂದಿ (ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು) ಕೂರಬಹುದಾದ ಪುಟ್ಟ ವಿಮಾನ.ಓಪನ್ ಸೋರ್ಸ್ ವ್ಯವಸ್ಥೆಯಡಿ ಅಭಿವೃದ್ಧಿಪಡಿಸಲಿರುವ ವಿಮಾನಗಳನ್ನು ಜೆನ್ಸರ್ ಏವಿಯೇಷನ್ ಸಂಸ್ಥೆ ‘ಕೋಡೆಡ್ ಏರ್‌ಕ್ರಾಫ್ಟ್’ (ಸಾಂಘಿಕವಾಗಿ ಅಭಿವೃದ್ಧಿಪಡಿಸಲಾದ ವಿಮಾನ) ಎಂದು ಕರೆಯಲಿದೆ.ವಿಶ್ವದ ಬೇರೆ ಬೇರೆ ಭಾಗಗಳಲ್ಲಿರುವ ವಿಮಾನಗಳ ವಿನ್ಯಾಸಕರು ಮತ್ತು ವೈಮಾನಿಕ ತಂತ್ರಜ್ಞರು ಒಟ್ಟು ಸೇರಿ ಜೆನ್ಸರ್ ಏವಿಯೇಷನ್ ಸಂಸ್ಥೆಯ ವಿಮಾನವನ್ನು ಅಭಿವೃದ್ಧಿಪಡಿಸಲಿದ್ದಾರೆ. ಓಪನ್ ಸೋರ್ಸ್ ಮಾದರಿಯಲ್ಲಿ ಅಭಿವೃದ್ಧಿ ಹೊಂದಿರುವ ಸಾಫ್ಟ್‌ವೇರ್‌ಗಳಾದ ಲೈನಕ್ಸ್, ಸೈಲ್ಯಾಬ್‌ಗಳಂತೆಯೇ ಈ ವಿಮಾನದ ತಂತ್ರಜ್ಞಾನ ಮತ್ತು ವಿನ್ಯಾಸ ಮುಕ್ತವಾಗಿರಲಿದೆ ಎಂಬುದು ಕಂಪೆನಿಯ ಅಂಬೋಣ.ಇದರಿಂದ ವೈಮಾನಿಕ ತಂತ್ರಜ್ಞಾನ ಬದಲಾದಂತೆಲ್ಲ ವಿಮಾನದ ವಿನ್ಯಾಸ ಮತ್ತು ತಂತ್ರಜ್ಞಾನವನ್ನೂ ವೇಗವಾಗಿ ಬದಲಾಯಿಸಬಹುದು, ಸಂಶೋಧಕರಿಗೆ ಮತ್ತು ವೈಮಾನಿಕ ಕೈಗಾರಿಕೆಗಳಿಗೆ ಕಲಿಯಲು ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ಸಂಸ್ಥೆ ಹೇಳುತ್ತದೆ.ಅಲ್ಲದೆ, ಈ ವಿಮಾನದ ತಂತ್ರಜ್ಞಾನವನ್ನು ಯಾರು ಬೇಕಾದರೂ ಮುಕ್ತವಾಗಿ ಪ್ರಶ್ನಿಸಬಹುದು, ಬದಲಾವಣೆಗಳನ್ನು ತರಬಹುದು ಮತ್ತು ತಂತ್ರಜ್ಞಾನವನ್ನು ಕಲಿತುಕೊಳ್ಳಲೂ ಸಾಧ್ಯ. ವೈಮಾನಿಕ ತಂತ್ರಜ್ಞಾನ ಬದಲಾದಂತೆಲ್ಲ ಅದನ್ನು ಈ ವಿಮಾನದಲ್ಲಿ ಅಳವಡಿಸುವ ತಂತ್ರಜ್ಞರ ಸಹಾಯವೂ ಇದಕ್ಕೆ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ.ಅಂದಹಾಗೆ, ಜೆನ್ಸರ್ ಏವಿಯೇಷನ್ ಸಂಸ್ಥೆ ಅಪ್ಪಟ ಭಾರತೀಯ ಮೂಲದ್ದು. ಇದರ ಘೋಷವಾಕ್ಯ ಋಗ್ವೇದದಲ್ಲಿ ಬರುವ ‘ಆನೋ ಭದ್ರಾ ಕ್ರತವೋ ಯಂತು ವಿಶ್ವತಃ’ (ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ನಮಗೆ ಬರಲಿ) ಎಂದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry