ವೈಮಾನಿಕ ಪ್ರದರ್ಶನಕ್ಕೆ ತೆರೆ ಎಳೆದ `ಸಾರಂಗ'

7

ವೈಮಾನಿಕ ಪ್ರದರ್ಶನಕ್ಕೆ ತೆರೆ ಎಳೆದ `ಸಾರಂಗ'

Published:
Updated:
ವೈಮಾನಿಕ ಪ್ರದರ್ಶನಕ್ಕೆ ತೆರೆ ಎಳೆದ `ಸಾರಂಗ'

ಬೆಂಗಳೂರು: ಯಲಹಂಕದ ಬಾನಿನಲ್ಲಿ ಭಾನುವಾರ ಸಂಜೆ 4.30ರ ವೇಳೆಗೆ ಭಾರತೀಯ ವಾಯುಪಡೆಯ ಎರಡು ಜೋಡಿ `ಸಾರಂಗ' ಹೆಲಿಕಾಪ್ಟರ್‌ಗಳ ರಂಗಿನಾಟ ಶುರುವಾದಾಗ ಕಿಕ್ಕಿರಿದು ತುಂಬಿದ ಜನಸಾಗರಕ್ಕೆ ಅಮಿತ ಸಂಭ್ರಮ- ಬೇಸರದ ಸಮ್ಮಿಶ್ರ ಭಾವ.ಐದು ನಿಮಿಷಗಳ ಕಾಲ ಸಿಡಿಲಬ್ಬರದ ಪ್ರದರ್ಶನ ನೀಡಿದ `ಸಾರಂಗ' ನೋಡನೋಡುತ್ತಿದ್ದಂತೆ ನಿಧಾನಕ್ಕೆ ರನ್‌ವೇಯಲ್ಲಿ ಇಳಿದು ವೇಗವಾಗಿ ಓಡಿ ಸದ್ದು ನಿಲ್ಲಿಸಿತು. ಐದು ದಿನಗಳಲ್ಲಿ ರಣಭಯಂಕರ ಸದ್ದಿನಿಂದ ಜಗದ ಚಿತ್ತಾಕರ್ಷಿಸಿದ ಸಂತೆಯಲ್ಲಿ ಒಂದು ಕ್ಷಣ ನೀರವ ಮೌನ. ಜನಕ್ಕೆ ವಾಪಸಾಗುವ ಗಡಿಬಿಡಿ. ಈ ಎಲ್ಲ ದೃಶ್ಯಗಳಿಗೆ ಯಲಹಂಕದ ವಾಯುನೆಲೆ ಸಾಕ್ಷಿಯಾಯಿತು.ಈ ಮೂಲಕ ಏಷ್ಯಾದ ಬಹುದೊಡ್ಡ ವೈಮಾನಿಕ ಜಾತ್ರೆ `ಏರೋ ಇಂಡಿಯಾ' ಪ್ರದರ್ಶನಕ್ಕೆ ತೆರೆಬಿತ್ತು. ಯಲಹಂಕದ ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ ನೋಡಲು 2015ರ ಫೆಬ್ರುವರಿ 18ರ ವರೆಗೆ ಕಾಯಬೇಕು. ಮುಂದಿನ ಪ್ರದರ್ಶನಕ್ಕೆ ದಶಮಾನೋತ್ಸವದ ಸಂಭ್ರಮ.ಐದು ದಿನಗಳಲ್ಲಿ ವೈಮಾನಿಕ ದಿಗ್ಗಜಗಳು ಬಾನನ್ನೇ ಆಟದ ಮೈದಾನವನ್ನಾಗಿ ಮಾಡಿಕೊಂಡು ಬಿರುಗಾಳಿ ಎಬ್ಬಿಸಿದ್ದವು. ಬುಧವಾರ ಬೆಳಿಗ್ಗೆ 10.45ರ ವೇಳೆಗೆ ದೇಸಿ ವೈಮಾನಿಕ ಪ್ರತಿಭೆ `ತೇಜಸ್' ರಣಭಯಂಕರ ಸದ್ದು ಮಾಡುತ್ತಾ ಉತ್ಸವಕ್ಕೆ ಚಾಲನೆ ನೀಡಿದ್ದರೆ, ಉತ್ಸವದ ಕೊನೆಯ ಪ್ರದರ್ಶನ ನೀಡಿದ್ದು `ಸಾರಂಗ'.ಜೆಕ್ ಗಣರಾಜ್ಯದ `ಹಾರುವ ಹೋರಿಗಳು' (ಫ್ಲೈಯಿಂಗ್ ಬುಲ್ಸ್), ರಷ್ಯಾದ `ರಣಹದ್ದುಗಳು' (ರಷ್ಯನ್ ನೈಟ್ಸ್), ಎರಡನೇ ವಿಶ್ವ ಸಮರ ಕಾಲದ `ಹುಲಿ ಮರಿ' (ಟೈಗರ್ ಮಾತ್), ಭಾರತದ `ತೇಜಸ್', ಫ್ರಾನ್ಸ್‌ನ ರಫೇಲ್, ಅಮೆರಿಕದ ಎಫ್-16 ವಿಮಾನಗಳು ನಭದಲ್ಲಿ ಕಸರತ್ತು ನಡೆಸಿದವು. ವಾಯುಪಡೆ ನೆಲೆ ಮೇಲೆ ಸುತ್ತು ಹೊಡೆದ ತಂಡಗಳು ಸಿಡಿಲಬ್ಬರದ ಸದ್ದು ಹೊರಡಿಸಿ ಜನರಲ್ಲಿ ನಡುಕ ಹುಟ್ಟಿಸಿದವು. ಸ್ವಚ್ಛಂದವಾಗಿ ನೆಗೆದವು. ಮನ ಬಂದಂತೆ ಲಾಗ ಹಾಕಿದವು.ರಷ್ಯಾದ ಮೆರುಗು: ಈ ಪ್ರದರ್ಶನಕ್ಕೆ ಊರಿನ ಜಾತ್ರೆಯ ಮೆರುಗು ತಂದವರು ರಷ್ಯನ್ ಪ್ರತಿನಿಧಿಗಳು. ಕೊನೆಯ ಎರಡು ದಿನಗಳಲ್ಲಿ ಆಗಸವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಂತೆ `ರಷ್ಯಾದ ರಣಹದ್ದುಗಳು' ಸಾಹಸ ಪ್ರದರ್ಶಿಸಿದ್ದವು. ಈ ತಂಡವು ಜಾತ್ರೆಗೆ ಗೈರುಹಾಜರಾಗಲಿದೆ ಎಂಬ ಗುಲ್ಲಿನ ನಡುವೆಯೇ ಮೂರನೇ ದಿನ ಆಗಸದಲ್ಲಿ ಕಾಣಿಸಿಕೊಂಡು ಚಿತ್ತಾಕರ್ಷಿಸಿತು.

ಮೈ ನಡುಗಿಸುವ ಸಾಹಸದ ಮೂಲಕ ಎಲ್ಲರಲ್ಲೂ ಬೆರಗು ಹುಟ್ಟಿಸಿತು. ಅಲ್ಲದೆ ಮಳಿಗೆಯಲ್ಲೂ ರಷ್ಯಾದ ಮಳಿಗೆ ಹೆಚ್ಚು ಗಮನ ಸೆಳೆಯಿತು. ವಿಮಾನಪ್ರಿಯರನ್ನು ಕೈಹಿಡಿದು ಖುಷಿಯಿಂದ ಬರಮಾಡಿಕೊಳ್ಳುತ್ತಿದ್ದ ತಂಡದ ಆತಿಥ್ಯ ಮೆಚ್ಚುಗೆಗೆ ಪಾತ್ರವಾಯಿತು.

ದೇಸಿ ಮಳಿಗೆಗಳು ಜಾಸ್ತಿ: ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಮಳಿಗೆಗಳ ಸಂಖ್ಯೆಯಲ್ಲಿ ಜಾಸ್ತಿಯಾಗಿತ್ತು. ವಿದೇಶಿ ತಂಡಗಳ ಸಂಖ್ಯೆ ಕಡಿಮೆಯಾಗಿತ್ತು. ದೇಸಿ ತಂತ್ರಜ್ಞಾನದ ಸೊಬಗು ಮೇಳೈಸಿತ್ತು.ವಿಮಾನಯಾನ ಹಾಗೂ ರಕ್ಷಣಾ ಕ್ಷೇತ್ರದ ದಿಗ್ಗಜರಾದ ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್, ಜಪಾನ್, ದಕ್ಷಿಣ ಕೋರಿಯಾ ಸೇರಿದಂತೆ 27 ದೇಶಗಳು ಪಾಲ್ಗೊಂಡಿದ್ದವು. ವಿಮಾನ ಉತ್ಪಾದಕರ 650 ಮಳಿಗೆಗಳು ಇದ್ದವು. ಕಳೆದ ಸಲ 75 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿದ್ದರೆ ಈ ಬಾರಿ ವ್ಯಾಪ್ತಿ 1.25 ಲಕ್ಷ ಚದರ ಮೀಟರ್‌ಗೆ ಹಿಗ್ಗಿತ್ತು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ರಕ್ಷಣಾ ಇಲಾಖೆಯ ಉತ್ಪಾದನಾ ಘಟಕಗಳಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ವೈಮಾನಿಕ ಉತ್ಪಾದನಾ ಸಂಸ್ಥೆ (ಎಡಿಎ)ಗಳು ಮಳಿಗೆಗಳಲ್ಲಿ ಹೆಚ್ಚು ಜಾಗವನ್ನು ಆಕ್ರಮಿಸಿದ್ದವು.ಎಚ್‌ಎಎಲ್ ಹೆಗ್ಗಳಿಕೆ: ಎಚ್‌ಎಎಲ್ ಕೀರ್ತಿಪತಾಕೆಯನ್ನು ಹಾರಿಸಲು ಈ ಪ್ರದರ್ಶನ ವೇದಿಕೆಯಾಯಿತು. ಸಂಸ್ಥೆಯ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ನಿರ್ಮಾಣಗೊಂಡ ಭಾರತದ ಮೊಟ್ಟಮೊದಲ ಶಸ್ತ್ರಸಜ್ಜಿತ ಲಘು ಯುದ್ಧ ಹೆಲಿಕಾಪ್ಟರ್ (ಎಎಲ್‌ಎಚ್) `ರುದ್ರ' ವಾಯುಪಡೆಗೆ ಸೇರ್ಪಡೆಯಾಯಿತು. ಅಲ್ಲದೆ ಸಂಸ್ಥೆಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ವಾಂಗಿ ಗ್ರಾಮದ ಟ್ರ್ಯಾಕ್ಟರ್ ಮೆಕ್ಯಾನಿಕ್ ಪ್ರದೀಪ್ ಮೋಹಿತೆ ಅವರ ಪ್ರತಿಭೆಯನ್ನು ಗುರುತಿಸಿ `ಧ್ರುವ' ದೇಸಿ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry