ಗುರುವಾರ , ಮೇ 19, 2022
21 °C

ವೈಯಕ್ತಿಕ ಹಿತಾಸಕ್ತಿಯ ಅಣ್ಣಾ ಹೋರಾಟ-ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಐಎಎನ್‌ಎಸ್): ಸರ್ಕಾರದಲ್ಲಿನ ಭ್ರಷ್ಟಾಚಾರಕ್ಕೆ ಸ್ವತಃ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅವರೇ ಕುಮ್ಮಕ್ಕು ನೀಡುತ್ತಿದ್ದು, ಮಹಾಭಾರತದ ಧೃತರಾಷ್ಟ್ರನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ತಂಡದ ಸದಸ್ಯೆ ಕಿರಣ್ ಬೇಡಿ ಕಿಡಿಕಾರಿದ್ದಾರೆ.14 ಜನ ಸಂಪುಟ ದರ್ಜೆ ಸಚಿವರು ಸೇರಿದಂತೆ ಪ್ರಧಾನಿ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಒತ್ತಾಯಿಸಿ ಜುಲೈ 25ರಿಂದ `ಮಾಡು ಇಲ್ಲವೆ ಮಡಿ~ ಮಾದರಿಯ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಮನಸ್ಸು ಮಾಡಿದರೆ ಸಂಸತ್ತಿನಲ್ಲಿ ಪರಿಣಾಮಕಾರಿ ಭ್ರಷ್ಟಾಚಾರ ತಡೆ ಮಸೂದೆ ಮಂಡಿಸಬಹುದು. ಹೀಗಾಗಿ ನಾವು ಈ ವಿಷಯದಲ್ಲಿ ಕಾಂಗ್ರೆಸ್ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದ್ದೇವೆ ಎಂದರು.ಬೇಡಿ ಟೀಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ `ವೈಯಕ್ತಿಕ ಬೇಡಿಕೆ ಈಡೇರಿಸಿಕೊಳ್ಳಲು ಅಣ್ಣಾ ತಂಡ ಆಂದೋಲನ ನಡೆಸಿದೆ~ ಎಂದು ತಿರುಗೇಟು ನೀಡಿದೆ.ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, `ಅವರು (ಅಣ್ಣಾ ತಂಡ) ಮೊದಲು ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಇವರಿಂದ ಪ್ರಜಾಪ್ರಭುತ್ವಕ್ಕೆ ಅನುಕೂಲವಾಗುತ್ತದೆ ಎಂದು ನಾನಂದುಕೊಂಡಿಲ್ಲ. ಅವರ ಆಂದೋಲನ ಈಗ ವೈಯಕ್ತಿಕ ಹಿತಾಸಕ್ತಿ ಕಾಪಾಡುವ ಹೋರಾಟವಾಗಿ ಪರಿವರ್ತಿತವಾಗಿದೆ~ ಎಂದು ಟೀಕಿಸಿದರು.ಬಿಜೆಪಿ ಮುಖಂಡ ಶಾನವಾಜ್ ಹುಸೇನ್ ಮಾತನಾಡಿ, `ಸರ್ಕಾರದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಧಾನಿ ವಿಫಲರಾಗಿದ್ದು ಇದಕ್ಕಾಗಿ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ~ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.