ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಬಲಾಢ್ಯರ ಕೈವಾಡ

7

ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಬಲಾಢ್ಯರ ಕೈವಾಡ

Published:
Updated:

ಬೆಂಗಳೂರು: ವಿವಾದಿತ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಿಯಮ ಉಲ್ಲಂಘಿಸಿ ನಿವೇಶನ ಖರೀದಿಸಿರುವುದೇ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರು ಲೋಕಾಯುಕ್ತ ಹುದ್ದೆಯಿಂದ ನಿರ್ಗಮಿಸಲು ಕಾರಣವಾಗಿತ್ತು. ಇದೇ ಸಂಘದಲ್ಲಿ ಕಾನೂನುಬಾಹಿರವಾಗಿ 48 ಪ್ರಭಾವಿ ವ್ಯಕ್ತಿಗಳಿಗೆ ಅಪಾರ್ಟ್‌ಮೆಂಟ್ ವಿತರಿಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.ನಗರದ ರಾಜಮಹಲ್ ವಿಲಾಸ್ ಎರಡನೇ ಹಂತದ (ಆರ್‌ಎಂವಿ ಎರಡನೇ ಹಂತ) ಬಡಾವಣೆಯಲ್ಲಿ ಸಂಘವು ಖಾಸಗಿ ಬಿಲ್ಡರ್ ಜೊತೆ ಜಂಟಿ ಪಾಲುದಾರಿಕೆಯಲ್ಲಿ ಅನುಷ್ಠಾನಕ್ಕೆ ತಂದಿರುವ ಗುಂಪು ವಸತಿ ಯೋಜನೆಯಲ್ಲಿ ಮೂಲ ಸದಸ್ಯರಲ್ಲದವರಿಗೆ ಅಪಾರ್ಟ್‌ಮೆಂಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಸದಸ್ಯರಿಗಾಗಿಯೇ ಮೀಸಲಾದ ಯೋಜನೆಯಲ್ಲಿ ಚುನಾಯಿತ ಪ್ರತಿನಿಧಿಗಳ ಸಂಬಂಧಿಗಳು, ಬಲಾಢ್ಯ ಉದ್ಯಮಿಗಳು ಆಸ್ತಿ ಖರೀದಿಸಿದ್ದಾರೆ.`ಪ್ರಜಾವಾಣಿ~ಗೆ ಲಭ್ಯವಾಗಿರುವ ಕ್ರಯಪತ್ರಗಳ ಪ್ರತಿಗಳ ಪ್ರಕಾರ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘವು (ವಿಎಚ್‌ಬಿಸಿಎಸ್) ಆರ್‌ಎಂವಿ ಎರಡನೇ ಹಂತದಲ್ಲಿ ಜಂಟಿ ಪಾಲುದಾರಿಕೆಯಲ್ಲಿ ನಿರ್ಮಿಸಿರುವ `ವೈಷ್ಣವಿ ಸ್ಪ್ಲೆಂಡರ್ಸ್~ ಹೆಸರಿನ ಗುಂಪು ವಸತಿ ಯೋಜನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಬ್ಬರು ಪುತ್ರರು ಮತ್ತು ಅಳಿಯ ಪಾಲುದಾರರಾಗಿರುವ ಧವಳಗಿರಿ ಪ್ರಾಪರ್ಟೀಸ್ ಅಂಡ್ ಡೆವಲಪರ್ಸ್ ಒಂದು ಅಪಾರ್ಟ್‌ಮೆಂಟ್ ಖರೀದಿಸಿದೆ.ಮಾಜಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಪುತ್ರ ಅರವಿಂದ ಜತ್ತಿ, ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರ ಪುತ್ರಿ ಶಿಲ್ಪಾ ಗೌಡ ಕೂಡ ಇಲ್ಲಿ ಅಪಾರ್ಟ್‌ಮೆಂಟ್ ಖರೀದಿ ಮಾಡಿದವರಲ್ಲಿ ಸೇರಿದ್ದಾರೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾಯ್ದೆ-1976, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ- 1959 ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಉಪನಿಯಮ (ಬೈಲಾ) ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ವಿಎಚ್‌ಬಿಸಿಎಸ್, ಹೊರಗಿನವರಿಗೆ ಅಪಾರ್ಟ್‌ಮೆಂಟ್ ಮಾರಾಟ ಮಾಡುವ ಮೂಲಕ ಮತ್ತೊಂದು ಉಲ್ಲಂಘನೆಯಲ್ಲಿ ಭಾಗಿಯಾಗಿದೆ.ವಿಜಯನಗರ ಸಮೀಪದ ಕೆಂಪಾಪುರದಲ್ಲಿ ಮೊದಲು ಸಹಕಾರ ಸಂಘಕ್ಕೆ 40 ಎಕರೆ ಭೂಮಿ ಮಂಜೂರು ಮಾಡಿದ್ದ ರಾಜ್ಯ ಸರ್ಕಾರ, ಬಳಿಕ 20 ಎಕರೆಯನ್ನು ವಾಪಸ್ ಪಡೆದು ಬೇರೊಂದು ಸಂಘಕ್ಕೆ ನೀಡಿತ್ತು.ಅದಕ್ಕೆ ಪರ್ಯಾಯವಾಗಿ 1988ರಲ್ಲಿ ಗೆದ್ದಲಹಳ್ಳಿಯ (ಈಗಿನ ಆರ್‌ಎಂವಿ ಎರಡನೇ ಹಂತ) ಸರ್ವೇ ನಂಬರ್ 54/2ರಲ್ಲಿ 2.02 ಎಕರೆ ಮತ್ತು ಸರ್ವೇ ನಂಬರ್ 3ರಲ್ಲಿ 17 ಗುಂಟೆ ಜಮೀನು ನೀಡಿತ್ತು. ಈ ಜಮೀನಿನಲ್ಲಿ ಬಡಾವಣೆ ಅಥವಾ ಅಪಾರ್ಟ್‌ಮೆಂಟ್ ನಿರ್ಮಿಸಿ ಸಂಘದ ಸದಸ್ಯರಿಗೆ ವಸತಿ ಸೌಕರ್ಯ ಕಲ್ಪಿಸುವುದಕ್ಕೇ ಬಳಸಬೇಕು ಎಂಬ ಷರತ್ತು ವಿಧಿಸಲಾಗಿತ್ತು.ಸರ್ಕಾರ ನೀಡಿದ 2.19 ಎಕರೆ ಭೂಮಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ, ಬಹುಮಹಡಿ ವಸತಿ ಸಮುಚ್ಚಯ ನಿರ್ಮಿಸಲು ವಿಎಚ್‌ಬಿಸಿಎಸ್ ಮೊದಲು ಎಲ್ ಅಂಡ್ ಸಿ ಕನ್‌ಸ್ಟ್ರಕ್ಷನ್ಸ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಯೋಜನೆಯಿಂದ ಹಿಂದೆ ಸರಿದ ಎಲ್ ಅಂಡ್ ಸಿ ಕಂಪೆನಿ, ಬೇರೊಂದು ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ವಿನಂತಿ ಮಾಡಿತ್ತು.ಬಳಿಕ ಶೇಕಡ 67:33ರ ಅನುಪಾತದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಂಘವು ವೈಷ್ಣವಿ ಇನ್‌ಫ್ರಾಸ್ಟ್ರಕ್ಚರ್ ಎಂಬ ಕಂಪೆನಿ ಜೊತೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿತ್ತು. ಸುಸಜ್ಜಿತ ಮತ್ತು ಲಕ್ಸುರಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕಾಗಿ ಮಾಡಿಕೊಂಡ ಈ ಒಪ್ಪಂದಕ್ಕೆ ಸಹಕಾರ ಸಂಘದ ಆಡಳಿತ ಮಂಡಳಿ 2007ರ ಮಾರ್ಚ್ 10ರಂದು ಅನುಮೋದನೆ ನೀಡಿತ್ತು.ವಿಎಚ್‌ಬಿಸಿಎಸ್‌ಗೆ ಭೂಮಿ ನೀಡುವ ಸಂಬಂಧ 1988ರ ಏಪ್ರಿಲ್ 15ರಂದು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ (ಆದೇಶ ಸಂಖ್ಯೆ- ಎಚ್‌ಯುಡಿ 228 ಎಂಎನ್‌ಎಕ್ಸ್88) ವ್ಯತಿರಿಕ್ತವಾಗಿ ಸಹಕಾರ ಸಂಘವು ವೈಷ್ಣವಿ ಇನ್‌ಫ್ರಾಸ್ಟ್ರಕ್ಚರ್ ಜೊತೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿತ್ತು. ಬಳಿಕ 2007ರ ಸೆಪ್ಟೆಂಬರ್ 2ರಲ್ಲಿ ಹೊಸ ಆದೇಶವೊಂದನ್ನು ಹೊರಡಿಸುವ ಮೂಲಕ ಈ ಉಲ್ಲಂಘನೆಗೆ ಸರ್ಕಾರ ಅನುಮೋದನೆ ನೀಡಿತ್ತು.ಗೃಹ ನಿರ್ಮಾಣ ಸಹಕಾರ ಸಂಘಗಳ ಉಪ ನಿಯಮಗಳ ಕಲಂ 53ರ ಪ್ರಕಾರ, `ಸಹಕಾರ ಸಂಘವು ಕಡ್ಡಾಯವಾಗಿ ಸದಸ್ಯರ ಜೇಷ್ಠತೆಯ ಆಧಾರದಲ್ಲೇ ನಿವೇಶನ/ಫ್ಲ್ಯಾಟ್/ಅಪಾರ್ಟ್‌ಮೆಂಟ್/ಮನೆಗಳನ್ನು ಹಂಚಿಕೆ ಮಾಡುವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು~.ಆದರೆ ಈ ನಿಯಮಕ್ಕೆ ವಿರುದ್ಧವಾಗಿ ಸಹಕಾರ ಸಂಘ ಮತ್ತು ವೈಷ್ಣವಿ ಕಂಪೆನಿ ನಡುವೆ ಒಪ್ಪಂದ ನಡೆದಿತ್ತು. ಈ ಒಪ್ಪಂದದಲ್ಲಿ, `ವೈಷ್ಣವಿ ಇನ್‌ಫ್ರಾಸ್ಟ್ರಕ್ಚರ್ ಸೂಚಿಸುವ ವ್ಯಕ್ತಿಗಳಿಗೆ ಸದರಿ ಯೋಜನೆಯಲ್ಲಿ ಅಪಾರ್ಟ್‌ಮೆಂಟ್ ಖರೀದಿಗೆ ಅವಕಾಶ ನೀಡಬೇಕು. ನಂತರ ಅವರನ್ನು ಸಹಕಾರ ಸಂಘದ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಬೇಕು~ ಎಂಬ ಅಂಶವನ್ನು ಒಪ್ಪಂದದಲ್ಲಿ ಸೇರಿಸಲಾಗಿತ್ತು. ಈ ಒಪ್ಪಂದದ ಆಧಾರದಲ್ಲೇ ಸಂಘದ ಸದಸ್ಯರಲ್ಲದ 48 ಮಂದಿಗೆ ಅಪಾರ್ಟ್‌ಮೆಂಟ್ ಹಂಚಿಕೆ ಮಾಡಲಾಗಿದೆ ಎಂಬ ಆರೋಪವಿದೆ.ಗೃಹ ನಿರ್ಮಾಣ ಸಹಕಾರ ಸಂಘಗಳ ಉಪ ನಿಯಮಗಳ ಕಲಂ 10ರ ಪ್ರಕಾರ, `ಸಹಕಾರ ಸಂಘವು ಕಾರ್ಯನಿರ್ವಹಿಸುತ್ತಿರುವ ಮಹಾನಗರ ಪಾಲಿಕೆ/ಅಭಿವೃದ್ಧಿ ಪ್ರಾಕಾರ/ನಗರಸಭೆ ವ್ಯಾಪ್ತಿಯಲ್ಲಿ ಫಲಾನುಭವಿ ಅಥವಾ ಆತನ ಕುಟುಂಬದ ಸದಸ್ಯರು ಸ್ವಂತ ನಿವೇಶನ, ಮನೆ, ಫ್ಲ್ಯಾಟ್ ಅಥವಾ ಅಪಾರ್ಟ್‌ಮೆಂಟ್ ಹೊಂದಿರದೇ ಇದ್ದರೆ ಮಾತ್ರ ಸಂಘದಿಂದ ನಿವೇಶನ/ಮನೆ/ಫ್ಲ್ಯಾಟ್/ಅಪಾರ್ಟ್‌ಮೆಂಟ್ ಪಡೆಯಲು ಅರ್ಹರು~.ಆದರೆ, ವಿಎಚ್‌ಬಿಸಿಎಸ್‌ನ `ವೈಷ್ಣವಿ ಸ್ಪ್ಲೆಂಡರ್ಸ್~ನಲ್ಲಿ ನಡೆದಿರುವ ಅಪಾರ್ಟ್‌ಮೆಂಟ್‌ಗಳ ಹಂಚಿಕೆಯಲ್ಲಿ ಸಹಕಾರ ಸಂಘಗಳ ಉಪ ನಿಯಮಗಳ ಕಲಂ 10ರ ಉಲ್ಲಂಘನೆಯೂ ನಡೆದಿದೆ ಎಂಬ ಆರೋಪ ಪ್ರಬಲವಾಗಿ ಕೇಳಿಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry