ವೈರಿ ನಿಗ್ರಹ ಕ್ಷಿಪಣಿ ಯಶಸ್ವಿ ಪರೀಕ್ಷೆ

7

ವೈರಿ ನಿಗ್ರಹ ಕ್ಷಿಪಣಿ ಯಶಸ್ವಿ ಪರೀಕ್ಷೆ

Published:
Updated:

ಬಾಲಸೋರ್(ಒಡಿಶಾ): ವೈರಿ ದೇಶಗಳು ಪ್ರಯೋಗಿಸುವ ಖಂಡಾಂತರ ಕ್ಷಿಪಣಿಗಳನ್ನು ನಾಶಪಡಿಸಬಲ್ಲ ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ವೈರಿ ನಿಗ್ರಹ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿದೆ.ಒಡಿಶಾದ ಕರಾವಳಿಯಲ್ಲಿ ಬಾಲಸೋರ್‌ನಿಂದ 15 ಕಿ.ಮೀ. ದೂರದಲ್ಲಿರುವ ಚಂಡೀಪುರದ ಪರೀಕ್ಷಾ ಕೇಂದ್ರದಲ್ಲಿ ಈ ಪ್ರಯೋಗ ನಡೆಸಲಾಯಿತು. ಸುಧಾರಿತ `ಪೃಥ್ವಿ~ ಭೂ ಕ್ಷಿಪಣಿಯನ್ನು ಬೆಳಿಗ್ಗೆ 10.13ರ ಸಮಯದಲ್ಲಿ ಉಡಾವಣಾ ವೇದಿಕೆಯಿಂದ ಹಾರಿಸಲಾಯಿತು.`ಪೃಥ್ವಿ~ ಕ್ಷಿಪಣಿ ಆಗಸಕ್ಕೆ ನೆಗೆದ ಮೂರೇ ನಿಮಿಷಗಳಲ್ಲಿ ಚಂಡೀಪುರದಿಂದ 70 ಕಿ.ಮೀ. ದೂರದಲ್ಲಿರುವ ವೀಲ್ಹರ್ ದ್ವೀಪದಲ್ಲಿ ಪ್ರತಿದಾಳಿಗೆ ಸಜ್ಜಾಗಿ ನಿಂತಿದ್ದ ಅತ್ಯಾಧುನಿಕ ವೈರಿ ನಿಗ್ರಹ ವಾಯು ಕ್ಷಿಪಣಿ (ಎಎಡಿ), ಕರಾವಳಿಯುದ್ದಕ್ಕೂ ಸ್ಥಾಪಿಸಲಾಗಿರುವ ರೇಡಾರ್‌ನಿಂದ ಸಂದೇಶ ಗ್ರಹಿಸಿತು. ಆಗಸಕ್ಕೆ ನೆಗೆದು `ಪೃಥ್ವಿ~ ಕ್ಷಿಪಣಿಯನ್ನು ಧ್ವಂಸಗೊಳಿಸಿತು.ಈ ಕ್ಷಿಪಣಿ ಸಮುದ್ರ ಮಟ್ಟದಿಂದ 15 ಕಿ.ಮೀ. ಎತ್ತರದಲ್ಲಿ `ಪೃಥ್ವಿ~ಯನ್ನು ನಾಶ ಮಾಡಿದೆ ಎಂದು ಐಟಿಆರ್ ಕೇಂದ್ರದ ನಿರ್ದೇಶಕ ಎಸ್.ಪಿ. ದಾಸ್ ಹೇಳಿದ್ದಾರೆ. ಈ ಹಿಂದೆ ಹಲವು ಬಾರಿ ಈ ಪ್ರಯೋಗ ವಿಫಲವಾಗಿತ್ತು. ಆದರೆ, 2010ರ ಜುಲೈ ಹಾಗೂ 2011ರ ಮಾರ್ಚ್‌ನಲ್ಲಿ ಯಶಸ್ವಿಯಾಗಿ ಕ್ಷಿಪಣಿ ಧ್ವಂಸ ಮಾಡಲಾಗಿತ್ತು.

ಈಗ ವೈರಿ ನಿಗ್ರಹ ಕ್ಷಿಪಣಿಯಲ್ಲಿ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry