ಶುಕ್ರವಾರ, ಮೇ 7, 2021
25 °C
ಪ್ರವಾಸಿ ಕಂಡ ಚೀನಾ

ವೈವಿಧ್ಯದೊಳಗೆ ಬಹುತ್ವ ಹುಡುಕುತ್ತಾ...

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ವೈವಿಧ್ಯದೊಳಗೆ ಬಹುತ್ವ ಹುಡುಕುತ್ತಾ...

ಮೊದಲು ನನ್ನ ಅರಿವಿಗೆ ಬಂದ ಚೀನೀ ಬುದ್ಧಿಜೀವಿಯ ಹೆಸರು ಫೈ ಝಿಯಾವೋತಾಂಗ್. ಅದು 1980ನೇ ಇಸ್ವಿ. ನಾನು ಆಗಷ್ಟೇ   ಕೊಲ್ಕೊತ್ತದಲ್ಲಿ ಸಮಾಜಶಾಸ್ತ್ರದ ಡಾಕ್ಟೋರಲ್ ಪದವಿಯ ಅಧ್ಯಯನ ಆರಂಭಿಸಿದ್ದೆ. ನನ್ನ ಅಧ್ಯಯನ ಶಿಸ್ತಿನ ಮಟ್ಟಿಗೆ ಆ ನಗರದಲ್ಲಿ ಇದ್ದದ್ದು ಪ್ರತಿಕೂಲ ವಾತಾವರಣ. ಇದಕ್ಕಿದ್ದ ಮುಖ್ಯ ಕಾರಣ ಆ ನಗರದ ಬೌದ್ಧಿಕ ಸಂಸ್ಕೃತಿಯನ್ನು ಬಹುವಾಗಿ ಪ್ರಭಾವಿಸಿದ್ದ ಮಾರ್ಕ್ಸ್‌ವಾದ. ಹಾಗೆಯೇ ಈ ಬೌದ್ಧಿಕ ಸಂಸ್ಕೃತಿಗೊಂದು ಪೀಡೆಯಂತೆ ಅಂಟಿಕೊಂಡಿದ್ದ ಮಾವೋವಾದ. ಮಾರ್ಕ್ಸ್‌ವಾದವನ್ನು ಓದಿಕೊಂಡವರೆಲ್ಲಾ ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಲ್ಲಿ ವಿದ್ವತ್ಪೂರ್ಣ ಅಧ್ಯಯನಕ್ಕೆ ಅವಕಾಶವಿದೆ ಎಂದು ಯಾಂತ್ರಿಕವಾಗಿ ನಂಬಿದ್ದರು. ಸಮಾಜಶಾಸ್ತ್ರಕ್ಕೆ ಆ ಸೌಭಾಗ್ಯವಿರಲಿಲ್ಲ. ಮಾರ್ಕ್ಸ್ `ರಾಜಕೀಯ ಅರ್ಥಶಾಸ್ತ್ರ'ದ ಬಗ್ಗೆ ಹೇಳಿದ್ದ. ಈ ವಿಧಾನವನ್ನು ಮಾರ್ಕ್ಸ್‌ನ ಸಹಚರ ಏಂಗೆಲ್ಸ್ `ಚರಿತ್ರೆಯ ಭೌತವಾದಿ ವ್ಯಾಖ್ಯಾನ' ಎಂದು ವಿವರಿಸಿದ್ದ. ಆದರೆ ಮಾರ್ಕ್ಸ್ ಯಾವತ್ತೂ ಸಮಾಶಾಸ್ತ್ರ ಅಥವಾ ಮಾನವ ಶಾಸ್ತ್ರದ ಬಗ್ಗೆ ಮಾತನಾಡಿರಲಿಲ್ಲ.ಒಂದು ವೇಳೆ ಆತ ಮಾತನಾಡಿದ್ದರೂ ಕೊಲ್ಕೊತ್ತದಲ್ಲಿರುವ ಯಾರಿಗೂ ಅದು ಗೊತ್ತಿರಲಿಲ್ಲ. ಸಾಲದ್ದಕ್ಕೆ ಈ ಹೊತ್ತಿಗಾಗಲೇ ಮಾವೋ ತ್ಸೆ ತುಂಗ್ (ಆ ಕಾಲದಲ್ಲಿ ಕೊಲ್ಕೊತ್ತಾದ ಬುದ್ಧಿಜೀವಿಗಳಿಗೆ ಆರಾಧ್ಯನಾಗಿದ್ದ ವ್ಯಕ್ತಿ) ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳನ್ನು ಪ್ರತಿಗಾಮಿ ಬೂರ್ಷ್ವಾ ಅಧ್ಯಯನ ವಿಧಾನಗಳೆಂದು ಖಂಡಿಸಿದ್ದ.ಆಗ ನನ್ನ ಶಿಕ್ಷಕರಾಗಿದ್ದವರು ಅಂಜನ್ ಘೋಷ್ ಎಂಬ ಬಹು ಪ್ರೀತಿಪಾತ್ರ ವ್ಯಕ್ತಿ. ಅವರು ಮಾರ್ಕ್ಸ್‌ವಾದಿಯಾಗಿದ್ದೇ ಸಮಾಜ ಶಾಸ್ತ್ರಜ್ಞರಾಗಿದ್ದವರು. ತಮ್ಮ ರಾಜಕಾರಣ ಮತ್ತು ವೃತ್ತಿಯ ನಡುವೆ ಸಮನ್ವಯ ಸಾಧಿಸಲು ಫೈ ಝಿಯಾವೋತಾಂಗ್ ಎಂಬ ವ್ಯಕ್ತಿತ್ವವನ್ನು ಕಂಡುಕೊಂಡಿದ್ದರು. 1930ರಲ್ಲಿ ಫೈ ಆಧುನಿಕ ಸಾಮಾಜಿಕ ಮಾನವಶಾಸ್ತ್ರದ ಜನಕ ಬ್ರೋನಿಸ್ಲಾವ್ ಮಾಲಿನೋವ್‌ಸ್ಕಿ ಅವರ ವಿದ್ಯಾರ್ಥಿಯಾಗಿದ್ದವರು. ತಮ್ಮ ಪಿಎಚ್.ಡಿ ಮುಗಿಸಿದ ನಂತರ ಫೈ ಚೀನಾಕ್ಕೆ ಹಿಂತಿರುಗಿದರು. ಪ್ರಕ್ಷುಬ್ಧ ಕಾಲಘಟ್ಟವಾದ 30 ಮತ್ತು 40ರ ದಶಕದಲ್ಲಿ ಅಲ್ಲಿ ಅಧ್ಯಾಪಕರಾಗಿದ್ದರು. ಚೀನಾದ ಅತ್ಯಂತ ಪ್ರಭಾವಶಾಲಿ ಸಮಾಜಶಾಸ್ತ್ರಜ್ಞ ಮತ್ತು ಸಾಮಾಜಿಕ ಮಾನವಶಾಸ್ತ್ರಜ್ಞರಾಗಿದ್ದ ಅವರು, ಹಲವು ವಿದ್ವತ್ಪೂರ್ಣ ಪುಸ್ತಕಗಳು ಮತ್ತು ಸಂಪ್ರಬಂಧಗಳನ್ನು ರಚಿಸಿದ್ದರಷ್ಟೇ ಅಲ್ಲದೆ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಮುಖ್ಯವಾಹಿನಿ ಮಾಧ್ಯಮದಲ್ಲಿಯೂ ಸಕ್ರಿಯವಾಗಿ ಲೇಖನಗಳನ್ನು ಪ್ರಕಟಿಸುತ್ತಿದ್ದರು.1949ರಲ್ಲಿ ಚೀನಾದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಅಧಿಕಾರಕ್ಕೆ ಬಂದು ಛಿದ್ರವಾಗಿದ್ದ ರಾಷ್ಟ್ರದ ಏಕೀಕರಣದ ಪ್ರಕ್ರಿಯೆಯನ್ನು ಆರಂಭಿಸಿತು. ಫೈ ಝಿಯಾವೋತಾಂಗ್ ಅವರಿಗೆ `ಶುದ್ಧ' ಸಂಶೋಧನೆಯ ಕಾಲ ಮುಗಿಯಿತು ಅನ್ನಿಸಿತು. ದೇಶಪ್ರೇಮಿಯಾಗಿದ್ದ ಅವರು ತನ್ನ ದೇಶದ ಬಹುಸಂಖ್ಯಾತ ಸಂಸ್ಕೃತಿಯಾಗಿದ್ದ ಹಾನ್ ಸಂಸ್ಕೃತಿಯೊಂದಿಗೆ ಇತರ ಸಮುದಾಯಗಳನ್ನು ಬೆಸೆಯುವ ಉದ್ದೇಶವನ್ನಿಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯಗಳ ಮಧ್ಯೆ ತಮ್ಮ ಕ್ಷೇತ್ರ ಕಾರ್ಯ ಆರಂಭಿಸಿದರು.ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ಹೆಚ್ಚು ಹೆಚ್ಚು ತೊಡಗಿಸಿಕೊಂಡಂತೆ ಫೈ ಅವರಿಗೆ ಈ ಸಮುದಾಯಗಳು ತಮ್ಮ ಸಾಂಸ್ಕೃತಿಕ ಪರಂಪರೆಗೆ ಎಷ್ಟು ಗಾಢವಾಗಿ ಬದ್ಧವಾಗಿವೆ ಎಂಬುದು ಅರ್ಥವಾಗುತ್ತಾ ಹೋಯಿತು. ಸಾಮಾಜಿಕ ಸುಧಾರಣೆ ಮತ್ತು ಆರ್ಥಿಕ ಅಭಿವೃದ್ಧಿಗಳು ಅಗತ್ಯ ಎಂಬುದನ್ನು ಒಪ್ಪಿಕೊಂಡಿದ್ದ ಅವರು ಅಲ್ಪಸಂಖ್ಯಾತ ಸಮುದಾಯಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಆ ಸಮುದಾಯಗಳ ಮಾರ್ಗದರ್ಶನದಲ್ಲಿಯೇ ನಡೆಯಬೇಕು ಎಂದು ವಾದಿಸಿದರು. 1950ರ ದಶಕದ ಕೊನೆಯಲ್ಲಿ ರಾಜಕೀಯ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದರು.1957-58ರ ಅವಧಿಯಲ್ಲಿ ನಡೆದ `ಬಲಪಂಥೀಯ ವಿರೋಧಿ ಆಂದೋಲನ'ದ ಸಂದರ್ಭದಲ್ಲಿ ಮಾಜಿ ಸಹೋದ್ಯೋಗಿಗಳೇ ಫೈ ಅವರನ್ನು ಸಮಾಜವಾದ ಮತ್ತು ಪಕ್ಷದ ವಿರೋಧಿ ಎಂದು ಬಿಂಬಿಸಿ ದಾಳಿ ನಡೆಸಿದರು. ಅವರ ಸಂಚಾರಕ್ಕೂ ತಡೆಯೊಡ್ಡಲಾಯಿತು. ಮತ್ತೆ ಕೆಲಕಾಲದ ನಂತರ ಅಂದರೆ ಸಾಂಸ್ಕೃತಿಕ ಕ್ರಾಂತಿಯ ಅವಧಿಯಲ್ಲಿ ಅವರನ್ನು `ಮರು-ಶಿಕ್ಷಣ' ಶಿಬಿರಕ್ಕೆ ಕಳುಹಿಸಲಾಯಿತು. ಅಲ್ಲಿ ಅವರು ಕೃಷಿ ಕಾರ್ಮಿಕನಾಗಿ ಕೆಲಸ ಮಾಡಿದರು. 1976ರಲ್ಲಿ ಮಾವೋನ ಸಾವಿನೊಂದಿಗೆ ಅಂಧಾಭಿಮಾನದ ನಾಲ್ವರ ಗುಂಪು ದುರ್ಬಲವಾಯಿತು. ಫೈ ಮತ್ತೆ ಬೌದ್ಧಿಕ ಜಗತ್ತಿಗೆ ಹಿಂದಿರುಗಿದರು. ಅವರಿಗೆ ಬರೆಯುವುದಕ್ಕೂ ಬೋಧಿಸುವುದಕ್ಕೂ ಅವಕಾಶ ದೊರೆಯಿತು. 1979ರಲ್ಲಿ ಅವರನ್ನು ಪಶ್ಚಿಮ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಲು ರೂಪಿಸಿದ ಮೊದಲ ಚೀನೀ ನಿಯೋಗದ ಸದಸ್ಯರನ್ನಾಗಿ ಆರಿಸಲಾಯಿತು.1980ರ ಜನವರಿ ಆರಂಭದಲ್ಲಿ ಅಂಜನ್ ಘೋಷ್ ಮತ್ತು ನಾನು ಕೊಲ್ಕೊತ್ತಾದ ಬೋಯಿಮೇಳಕ್ಕೆ ಹೋಗಿದ್ದೆವು. ಆಗ ಮೇಳ ದೊಡ್ಡ ಮೈದಾನದಲ್ಲಿ ನಡೆಯುತ್ತಿತ್ತು, ಈಗಿನಂತೆ ಉಪನಗರದ ಸಣ್ಣ ಸಣ್ಣ ಸ್ಥಳಗಳಲ್ಲಿ ನಡೆಯುತ್ತಿರಲಿಲ್ಲ. ನಕ್ಸಲೀಯರಿಗೆ ನಿಷ್ಠವಾಗಿದ್ದ ಸಂಸ್ಥೆಯೊಂದರ ಸ್ಟಾಲ್‌ನಲ್ಲಿ ಬೀಜಿಂಗ್ ವಿದೇಶೀ ಭಾಷೆಗಳ ಮುದ್ರಣಾಲಯ ಪ್ರಕಟಿಸಿದ್ದ ಹೊಸ ಪುಸ್ತಕಗಳು ಕಂಡವು. ಅವುಗಳಲ್ಲೊಂದು ಫೈ ಝಿಯವೋತಾಂಗ್ ಅವರ ಪುಸ್ತಕ. ಅದರ ಹೆಸರು Towards a Peoples Anthropology’ (ಜನತಾ ಮಾನವಶಾಸ್ತ್ರದೆಡೆಗೆ). ಅದರ ಬೆಲೆ ಮೂರು ರೂಪಾಯಿಗಳು (ಹೆಚ್ಚೆಂದರೆ ಐದು ರೂಪಾಯಿಯೂ ಆಗಿದ್ದಿರಬಹುದು). ಆದರೆ ನಾವದನ್ನು ಅದರ ಹತ್ತು ಪಟ್ಟು ಹೆಚ್ಚಿನ ಬೆಲೆ ಕೊಟ್ಟು ಖರೀದಿಸಲೂ ಸಿದ್ಧರಿದ್ದೆವು. ಏಕೆಂದರೆ ನಾವು ಕೆಲಸ ಮಾಡುತ್ತಿದ್ದ ಮತ್ತು ಬದುಕುತ್ತಿದ್ದ ಜಗತ್ತಿಗೆ ಬೇಕಿದ್ದ ಮುಖ್ಯ ಕೀಲಿಕೈ ಆಗಿತ್ತು.

                                2

ಫೈ ಝಿಯಾವೋಟಾಂಗ್ ಅವರನ್ನು ಮೊದಲ ಬಾರಿಗೆ ಓದಿದ ಮೂವತ್ತು ವರ್ಷಗಳ ನಂತರ ಮತ್ತೆ ಆ ಹೆಸರನ್ನು ಕೇಳುತ್ತಿದ್ದೆ. ಚೀನಾದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣವೊಂದರಲ್ಲಿ ಇಯರ್ ಫೋನ್‌ನ ಮೂಲಕ ಫೈ ಹೆಸರು ನನ್ನ ಕಿವಿಯ ಮೇಲೆ ಬೀಳುತ್ತಿತ್ತು. ಗಿರಿಜನರ ಮಧ್ಯೆ ಕೆಲಸ ಮಾಡುತ್ತಿದ್ದ ಭಾಷಣಕಾರ ಬೃಹತ್ ಅಣೆಕಟ್ಟುಗಳ ವಿನಾಶಕಾರಿ ಪರಿಣಾಮಗಳನ್ನು ವಿವರಿಸುತ್ತಿದ್ದರು. `ಈ ಯೋಜನೆಗಳು `ರಾಷ್ಟ್ರೀಯ ಹಿತಾಸಕ್ತಿ'ಯವು ಎಂದು ಹೇಳಲಾಗುತ್ತದೆ. ಇವುಗಳ ಪರಿಣಾಮವನ್ನು ಪ್ರಶ್ನಿಸಿದವರನ್ನೆಲ್ಲಾ `ರಾಷ್ಟ್ರ ವಿರೋಧಿ'ಗಳೆಂದು ಕಡೆಗಣಿಸಲಾಗುತ್ತದೆ. ಅದೇನೇ ಇದ್ದರೂ ಈ ಅಣೆಕಟ್ಟುಗಳಿಂದ ನಿರ್ವಸಿತರಾದ ಬುಡಕಟ್ಟು ಜನರಿಗೆ ಸರಿಯಾದ ಪರಿಹಾರ ದೊರೆಯಲಿಲ್ಲ ಎಂಬುದು ಸತ್ಯ. ಅವರಿಗೆ ನೀಡಲಾಗಿದ್ದ ಭೂಮಿ, ಮನೆ ಮತ್ತು ಉದ್ಯೋಗದ ಭರವಸೆಗಳು ನಿಜವಾಗಲೇ ಇಲ್ಲ. ಇವೆಲ್ಲವುಗಳಾಚೆಗೆ ಇಂಥ ಅಣೆಕಟ್ಟುಗಳ ಪಾರಿಸರಿಕ ಕಾರ್ಯಸಾಧುತ್ವದ ಪ್ರಶ್ನೆ ಇನ್ನೂ ಉಳಿದುಕೊಂಡೇ ಇದೆ'. ಆ ಭಾಷಣಕಾರ ತಮ್ಮ ಮಾತುಗಳನ್ನು ಕೊನೆಗೊಳಿಸುತ್ತಾ ಹೇಳಿದರು- `ನನ್ನ ಗುರುಗಳಾದ ಫೈ ಝಿಯಾವೋಟಾಂಗ್ ನಾವು `ಸಮನ್ವಯದ ಸೌಂದರ್ಯ'ವನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳುತ್ತಿದ್ದರು. ನಾವು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳು ಮತ್ತು ರಾಷ್ಟ್ರದ ಅಗತ್ಯಗಳ ನಡುವೆ ಒಂದು ಸಮನ್ವಯ ಸಾಧಿಸಬೇಕು'.ಈ ವಿಚಾರ ಸಂಕಿರಣ ಚೀನಾದ ದಕ್ಷಿಣ ಭಾಗದಲ್ಲಿರುವ ಫುಝೋವು ನಗರದಲ್ಲಿ ನಡೆಯತ್ತಿತ್ತು. ಈ ನಗರ ಫುಜಿಯನ್ ಪ್ರಾಂತ್ಯದ ರಾಜಧಾನಿಯೂ ಹೌದು. ವಿಚಾರ ಸಂಕಿರಣದ ವಿಷಯ `ರಾಷ್ಟ್ರ ನಿರ್ಮಾಣ ಮತ್ತು ಸಾಂಸ್ಕೃತಿಕ ವೈವಿಧ್ಯ'. ಇದನ್ನು ಸಂಘಟಿಸಿದ್ದು ಲೇಖಕ ಹೆನ್ರಿಷ್ ಬೋಲ್ ಅವರ ಹೆಸರಿನಲ್ಲಿರುವ ಸಣ್ಣ ಆದರೆ ಪ್ರಗತಿಗಾಮಿಯಾದ ಜರ್ಮನ್ ಪ್ರತಿಷ್ಠಾನ. ಈ ಸಂಸ್ಥೆ `ಸಾಗರೋತ್ತರ ಸಾಮಾಜಿಕ ಮತ್ತು ತಾತ್ವಿಕ ಸಿದ್ಧಾಂತಗಳ ಚೀನೀ ಕೇಂದ್ರ' ಎಂಬ ಭಾರೀ ಹೆಸರಿನ ಬೀಜಿಂಗ್ ಥಿಂಕ್ ಟ್ಯಾಂಕ್ ಜೊತೆಗೆ ಸೇರಿ ಕೆಲಸ ಮಾಡುತ್ತಿತ್ತು. ನಾನು ಭಾಗವಹಿಸಿದ್ದು ಈ ಬಗೆಯ ಏಳನೆಯ ವಿಚಾರಸಂಕಿರಣದಲ್ಲಿ. ಇದರಲ್ಲಿ ಮೊದಲ ಬಾರಿಗೆ ಜರ್ಮನಿ ಮತ್ತು ಚೀನಾ ಮೂಲದವರಲ್ಲದ ವಿದ್ವಾಂಸರು ಭಾಗವಹಿಸಿದ್ದರು.ಕಮ್ಯುನಿಸ್ಟ್ ಆಡಳಿತದ ಆರಂಭದ ಕಾಲಘಟ್ಟದಿಂದಲೂ ಒಂದೇ ಪಕ್ಷ ಚೀನಾವನ್ನು ಆಳುತ್ತಿರುವುದರಿಂದ ರಾಜಕೀಯ ವೈವಿಧ್ಯ ಎಂಬುದು ಇಲ್ಲ. ಸಾಂಸ್ಕೃತಿಕ ವೈವಿಧ್ಯದ ಕುರಿತ ಮಾತನಾಡುವುದಕ್ಕೂ ಮೊದಲಿನಿಂದಲೂ ಅವಕಾಶವಿರಲಿಲ್ಲ. ಪೌರರು ಯಾವ ಧರ್ಮ ಅಥವಾ ಭಾಷಿಕ ಹಿನ್ನೆಲೆಯವರಾಗಿದ್ದರೂ ದೇಶವನ್ನು ಸದೃಢಗೊಳಿಸುವುದಕ್ಕೂ ಅದರ ಸಮಾಜವಾದೀ ಆರ್ಥಿಕತೆಯನ್ನು, ಬುನಾದಿಯನ್ನು ಗಟ್ಟಿಗೊಳಿಸುವುದಕ್ಕೂ ಬದ್ಧರಾಗಿರಬೇಕೆಂಬುದು ಪ್ರಭುತ್ವದ ಆಜ್ಞೆಯಾಗಿತ್ತು.ಅಲ್ಪಸಂಖ್ಯಾತರ ಆಶೋತ್ತರಗಳನ್ನು ಪ್ರಜ್ಞಾಪೂರ್ವಕವಾಗಿ ಕಡೆಗಣಿಸುವ ಕ್ರಿಯೆ ಒಂದು ಬಗೆಯಲ್ಲಿ ಹಾನ್ ಸಂಸ್ಕೃತಿಯ ಯಾಜಮಾನ್ಯ ಗಟ್ಟಿಯಾಗುವಂತೆ ಮಾಡಿತು. ಇದು ಉಯ್‌ಘುರ್‌ಗಳು ಮತ್ತು ಟಿಬೆಟನ್ನರಲ್ಲಿ ಅಸಮಾಧಾನ ಹುಟ್ಟಲು ಕಾರಣವಾಯಿತು. ಈ ಎರಡೂ ಸಮುದಾಯಗಳಿಗೆ ಅವುಗಳದ್ದೇ ಆದ ಬಹಳ ಸುಧಾರಿತ ಎನ್ನಬಹುದಾದ ಬರಹದ ಸಂಸ್ಕೃತಿ ಇತ್ತು. ಹಾಗೆಯೇ ಅವಕ್ಕೆ ತಮ್ಮ ಧಾರ್ಮಿಕ ಪರಂಪರೆಗಳ ಬಗ್ಗೆ ಹೆಮ್ಮೆಯಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್‌ನ ಸಿದ್ಧತೆಯ ಅವಧಿಯಲ್ಲಿ ಟಿಬೆಟ್ ಮತ್ತು ಝಿನ್‌ಜಿಯಾಂಗ್‌ಗಳಲ್ಲಿ ಸ್ಥಳೀಯರು ಮತ್ತು ಭದ್ರತಾಪಡೆಗಳ ಮಧ್ಯೆ ಹಿಂಸಾತ್ಮಕ ಸಂಘರ್ಷಗಳು ನಡೆದವು. ಈಗ ಕೆಲವು ವಿದ್ವಾಂಸರು, ಆಡಳಿತಾರೂಢ ಪಕ್ಷದ ಕೆಲವು ಪದಾಧಿಕಾರಿಗಳು ಕೂಡಾ ಭಾರೀ ಸಾಂಸ್ಕೃತಿಕ ವೈವಿಧ್ಯವಿರುವ ದೇಶವೊಂದರಲ್ಲಿ ಸಾಂಸ್ಕೃತಿಕ ಏಕತೆಯ ಹೇರಿಕೆಯ ಪರಿಣಾಮದ ಬಗ್ಗೆ ಆಲೋಚಿಸಲು ತೊಡಗಿದ್ದಾರೆ. ಪರಿಣಾಮವಾಗಿ ನಾನು ಭಾಗವಹಿಸಿದ್ದಂಥ ವಿಚಾರ ಸಂಕಿರಣಗಳ ಸರಣಿ ಆರಂಭವಾಗಿದೆ.ಫುಝೋವು ಸಮ್ಮೇಳನ ಏರ್ಪಾಡಾಗಿದ್ದ ಕಟ್ಟಡಕ್ಕೆ ಕನ್‌ಫ್ಯೂಷಿಯಸ್ ಪ್ರತಿಮೆಯ ಕಾವಲಿತ್ತು. ಮಾವೋ ಕಾಲದಲ್ಲಿ ಛೀಮಾರಿಗೆ ಗುರಿಯಾಗಿದ್ದ ಈ ಪ್ರಾಚೀನ ಚಿಂತಕ ಈಗ ಚೀನಾದ ಮುಖ್ಯವಾಹಿನಿಗೆ ಮತ್ತೆ ಹಿಂದಿರುಗಿದ್ದಾನೆ. ವಿಚಾರಸಂಕಿರಣದಲ್ಲಿ ಒಟ್ಟು ಇದ್ದದ್ದು 25 ಮಂದಿ. ಅವರಲ್ಲಿ ನಾಲ್ವರು ಜರ್ಮನ್ನರು, ಒಬ್ಬ ಭಾರತೀಯನಾದ ನಾನು, ಉಳಿದವರೆಲ್ಲಾ ಚೀನೀಯರೇ.

ಇವರಲ್ಲಿ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು, ಪಕ್ಷದ ಪದಾಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರಿದ್ದರು. ಅರ್ಧದಷ್ಟು ಮಂದಿ ಹಾನ್ ಮೂಲದವರು. ವಿಚಾರ ಸಂಕಿರಣದ ವಿಷಯಕ್ಕೆ ಮಾನ್ಯತೆ ಒದಗಿಸುವಂತೆ ಅಲ್ಪಸಂಖ್ಯಾತ ಸಮುದಾಯಗಳಾದ ಟಿಬೆಟನ್ನರು, ಯಿ ಮತ್ತು ಮಂಗೋಲ್ ಸಮುದಾಯಕ್ಕೆ ಸೇರಿದವರಿಗೂ ಪ್ರಾತಿನಿಧ್ಯ ಇತ್ತು.ಈ ಸಮ್ಮೇಳನ ಚೀನಾದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಲಾಗಿದೆ ಎಂಬುದರ ಪಕ್ಷಿನೋಟದೊಂದಿಗೆ ಆರಂಭವಾಯಿತು. ನಂತರದ ಭಾಷಣಗಳು ಅಲ್ಪಸಂಖ್ಯಾತ ಜನಾಂಗಗಳು ಮತ್ತು ಜೀವ ವೈವಿಧ್ಯ ಸಂರಕ್ಷಣೆ, ಬೃಹತ್ ಅಣೆಕಟ್ಟುಗಳು, ಭಾಷಾ ನೀತಿ ಇತ್ಯಾದಿಗಳ ಕುರಿತಾಗಿದ್ದವು. ಬಹಳ ಮುಕ್ತವಾದ ಚರ್ಚೆಗಳು ನಡೆದವು. ಕೆಲ ಸಂದರ್ಭಗಳಲ್ಲಂತೂ ಯಾವ ಮುಚ್ಚುಮರೆಗಳೂ ಇಲ್ಲದೆ ಅಭಿಪ್ರಾಯಗಳು ಹೊರಬಂದವು. ಇದಕ್ಕೊಂದು ಕಾರಣ ಈ ಸಭೆ ಬೀಜಿಂಗ್‌ನಿಂದ ಹೊರಗೆ ನಡೆಯುತ್ತಿದ್ದುದೂ ಆಗಿರಬಹುದು. ಸಭೆಯಲ್ಲೇ ಇದ್ದ ಏಕೈಕ ಭಾರತೀಯನಾದ ನಾನು ಸಮ್ಮೇಳನದ ಬಹುಭಾಗ ಹಿನ್ನೆಲೆಯಲ್ಲೇ ಇದ್ದು ಅತ್ಯುತ್ತಮವಾದ ದುಭಾಷಿಗಳ ಮೂಲಕ ಭಿನ್ನ ವಾದಗಳನ್ನು ಆಲಿಸುತ್ತಿದ್ದೆ.ಭಾರತದಲ್ಲಿ ಜನಾಂಗೀಯ, ಭಾಷಿಕ ಮತ್ತು ಧಾರ್ಮಿಕ ವೈವಿಧ್ಯ ಎಂಬುದು ಹಿನ್ನೆಲೆ ಸದ್ದಿನ ಭಾಗ. ಇದು ಇರಬೇಕಾದುದೇ ಹೀಗೆ ಎನ್ನುವಷ್ಟರ ಮಟ್ಟಿಗೆ ನಾವದನ್ನು ಸ್ವೀಕರಿಸಿದ್ದೇವೆ. ಜನರು ಅವರದ್ದೇ ಭಾಷೆಯಲ್ಲಿ ಮಾತನಾಡುವುದು, ಅದೇ ಭಾಷೆಯಲ್ಲಿ ಶಿಕ್ಷಣ ಬೇಕೆಂದು ಒತ್ತಾಯಿಸುವುದು, ಭಿನ್ನ ಭಿನ್ನ ಬಗೆಯ ಉಡುಪುಗಳನ್ನು ಧರಿಸುವುದು, ಬಹು ಬಗೆಯ ಆಹಾರ, ಬೇರೆ ಬೇರೆ ದೇವರ ಆರಾಧನೆ, ಇವನ್ನೆಲ್ಲಾ ನೋಡಲು ಅಥವಾ ಒಪ್ಪಿಕೊಳ್ಳಲು ಭಾರತೀಯರಿಗೆ ಯಾವುದೇ ಕಲಿಕೆಯ ಅಗತ್ಯವಿಲ್ಲ. ಏಕೆಂದರೆ ನಮ್ಮದು ಏಕ ತತ್ವದ ರಾಷ್ಟ್ರವಲ್ಲ.ಸೋನಿಯಾ ಗಾಂಧಿಯ ಇಟಾಲಿಯನ್ ಮೂಲ ಹಾಗೆಯೇ ಕ್ಯಾಥೊಲಿಕ್ ಧರ್ಮಗಳೆರಡೂ ಆಕೆಯನ್ನು ದೇಶದ ಅತ್ಯಂತ ಬಲಶಾಲಿ ಮಹಿಳೆಯಾಗುವುದಕ್ಕೆ ತಡೆಯಾಗಲಿಲ್ಲ. ಇದೇನೂ ಸೋನಿಯಾಗಾಂಧಿಗೆ ಮಾತ್ರ ಸೀಮಿತವಾದ ಸ್ಥಿತಿಯೂ ಅಲ್ಲ. 1960ರಷ್ಟು ಹಿಂದೆಯೇ ಭಾರತದ ಪ್ರಬಲ ರಾಜಕಾರಣಿಯಾಗಿದ್ದ ವ್ಯಕ್ತಿಗೆ ಹಿಂದಿಯ ಒಂದು ಶಬ್ದವೂ ಗೊತ್ತಿರಲಿಲ್ಲ. ಅಲ್ಪ ಸ್ವಲ್ಪ ಇಂಗ್ಲಿಷ್ ಕೂಡಾ ಬರುತ್ತಿರಲಿಲ್ಲ. ಆತ ತಮಿಳ, ಹೆಸರು ಕೆ. ಕಾಮರಾಜ್.`ವೈವಿಧ್ಯ' ಎಂಬುದು ಒಂದು ಸಾಮಾಜಿಕ ಸ್ಥಿತಿ, `ಬಹುತ್ವ' ಎಂಬುದು ಒಂದು ರಾಜಕೀಯ ಕಾರ್ಯಕ್ರಮ. ಚೀನಾ ಕೂಡಾ ಭಾರತದಷ್ಟೇ ವೈವಿಧ್ಯಮಯ ದೇಶ. ಬಹುತ್ವದ ವಿಷಯಕ್ಕೆ ಬಂದರೆ ಅದು ಅಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಚೀನಾಕ್ಕಿಂತ ಭಿನ್ನವಾಗಿ ಭಾರತ ಎಂಬ ರಾಷ್ಟ್ರ ಹುಟ್ಟಿದಂದಿನಿಂದಲೂ ಭಾಷಾ ವೈವಿಧ್ಯ, ಮತ ವೈವಿಧ್ಯ ಮತ್ತು ಬಹುಬಗೆಯ ರಾಜಕೀಯ ಐಡಿಯಾಲಜಿಗಳನ್ನು ಪ್ರೋತ್ಸಾಹಿಸಲಾಗಿದೆ.ಎಲ್ಲಾ ವಯಸ್ಕರಿಗೂ ಮತದಾನದ ಹಕ್ಕಿರುವ ಬಹು ಪಕ್ಷಗಳ ಪ್ರಜಾಪ್ರಭುತ್ವ ಭಾರತದ್ದು. ಭಾರತೀಯ ಸಂವಿಧಾನ ಯಾವುದೇ ಒಂದು ಧರ್ಮಕ್ಕೆ ವಿಶೇಷ ಹಕ್ಕುಗಳನ್ನು ನೀಡಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರತೀ ರಾಜ್ಯಕ್ಕೂ ತನ್ನ ಆಯ್ಕೆಯ ಭಾಷೆಯಲ್ಲಿ ಆಡಳಿತ ನಡೆಸುವ ಸ್ವಾತಂತ್ರ್ಯವಿದೆ.

ಭಾರತದ ಬಹುತ್ವದ ಬೇರುಗಳು ಎಲ್ಲಿ ಅಡಗಿವೆ? ಈ ಪ್ರಶ್ನೆಗೆ ಇರುವ ಒಂದು ಉತ್ತರ ಈ ದೇಶದ ಬಹುಸಂಖ್ಯಾತರ ಧಾರ್ಮಿಕ ಪರಂಪರೆಯತ್ತ ಬೊಟ್ಟು ಮಾಡುತ್ತದೆ. ಪ್ರಾಚೀನ ಕಾಲದಿಂದಲೂ ಹಿಂದೂಗಳು ಸಹಿಷ್ಣುಗಳು. ಪ್ರತಿಯೊಂದು ಕುಟುಂಬವೂ- ಬೇಕಿದ್ದರೆ ಪ್ರತಿಯೊಬ್ಬ ವ್ಯಕ್ತಿಯೂ- ತನ್ನದೇ ಆದ ದೇವರನ್ನು ಆರಾಧಿಸುವ ಅವಕಾಶ ಹಿಂದೂಗಳಲ್ಲಿದೆ. ಭಾರತ ಒಂದು ಆಧುನಿಕ ರಾಷ್ಟ್ರವಾದಾಗ ಅದರ ಪ್ರಜೆಗಳು ತಮ್ಮ ಆಯ್ಕೆಯ ಭಾಷೆ, ಧರ್ಮ, ಉಡುಪು, ಆಹಾರ ಮತ್ತು ರಾಜಕೀಯ ಸಿದ್ಧಾಂತಗಳನ್ನು ಆಯ್ದುಕೊಳ್ಳುವ ಅವಕಾಶ ಕಲ್ಪಿಸುವುದು ಸುಲಭವಾಯಿತು.ಎರಡನೇ ಉತ್ತರ ಭಾರತ ಗಣರಾಜ್ಯದ ಬಹುತ್ವ ಪ್ರಾಚೀನ ಹಿಂದೂ ಸಂಸ್ಕೃತಿಯಲ್ಲಿಲ್ಲ ಎನ್ನುತ್ತದೆ. ಈ ಉತ್ತರದಂತೆ 12 ಮತ್ತು 17ನೇ ಶತಮಾನದ ನಡುವಣ ಅವಧಿಯಲ್ಲಿ ಉತ್ತರ ಭಾರತದ ಹೃದಯ ಭಾಗದಲ್ಲಿ ಈ ಬಹು ಸಂಸ್ಕೃತಿ ಜನ್ಮ ತಳೆಯಿತು. ಈ ಗಂಗಾ-ಜಮ್ನಿ ತೆಹಝೀಬ್ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರರ ಆಚರಣೆಗಳು ಮತ್ತು ಪವಿತ್ರಗ್ರಂಥಗಳನ್ನು ಗೌರವಿಸುವಂತೆ ನೋಡಿಕೊಂಡಿತು. ಇದೇ ವೇಳೆ ಅವರಾಡುವ ಭಾಷೆ, ಅವರು ಧರಿಸುವ ಬಟ್ಟೆ, ಅವರು ಉಣ್ಣುವ ಊಟ, ಅವರು ರಚಿಸುವ ಕಾವ್ಯ, ಅವರು ಹಾಡುವ ಕಾವ್ಯಗಳಲ್ಲಿ ಎರಡೂ ಸಮುದಾಯಗಳನ್ನು ಒಂದಾಗಿಸಿತು.ಮೇಲಿನ ಎರಡೂ ಉತ್ತರಗಳೂ ತಪ್ಪು. ಹಿಂದೂ ಧರ್ಮದೊಳಗೇ ಕ್ರೌರ್ಯದ ಪರಾಕಾಷ್ಠೆಗೆ ತಲುಪಿದ ಯುದ್ಧಗಳು ನಡೆದಿದ್ದವು (ಉದಾಹರಣೆಗೆ ದಕ್ಷಿಣ ಭಾರತದಲ್ಲಿ ಶೈವರು ಮತ್ತು ವೈಷ್ಣವರ ನಡುವಣ ಸಂಘರ್ಷ). ಹಿಂದೂ ಸಮಾಜ ದಲಿತರು ಮತ್ತು ಮಹಿಳೆಯರನ್ನು ನಡೆಸಿಕೊಳ್ಳುವ ಬಗೆಯಂತೂ ಅಸಹಿಷ್ಣುತೆಯನ್ನೇ ನೆಲೆಗಟ್ಟಾಗಿಸಿಕೊಂಡಿದೆಯಷ್ಟೇ ಅಲ್ಲದೆ ಪ್ರಜಾಪ್ರಭುತ್ವ ಮತ್ತು ಬಹುತ್ವದಂಥ ಆಧುನಿಕ ಪರಿಕಲ್ಪನೆಗಳಿಗೆ ಸಂಪೂರ್ಣ ವಿರುದ್ಧವಾದುದು. ಇನ್ನು `ಸಂಯುಕ್ತ ಸಂಸ್ಕೃತಿ' ಎಂಬುದು ಒಂದು ಇದ್ದಿದ್ದರೆ ಅದು ಮುಖ್ಯವಾಹಿನಿಯಿಂದ ಹೊರತಾಗಿ ಫಕೀರರು, ಸಂತರು, ಭೈರಾಗಿಗಳಂಥವರ ಸಣ್ಣ ಸಣ್ಣ ಸಮುದಾಯಗಳಲ್ಲಿ ಮಾತ್ರ. ಮಧ್ಯಕಾಲೀನ ಭಾರತದ ನಗರಗಳು ಮತ್ತು ಹಳ್ಳಿಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಊಟ ಮಾಡುತ್ತಿರಲಿಲ್ಲ. ಅವರ ಮನೆಗಳು ನಿರ್ದಿಷ್ಟ ಕೇರಿಗಳಿಗೆ ಸೀಮಿತವಾಗಿರುತ್ತಿದ್ದವು. ಇದೊಂದು ಬಗೆಯಲ್ಲಿ ಮುಜುಗರದ ಕೂಡು ಬಾಳ್ವೆಯೇ ಹೊರತು ಪರಸ್ಪರರ ಒಳಿತಿಗಾಗಿ ಮುಕ್ತ ಮನಸ್ಸಿನ ಸಕ್ರಿಯ ಪ್ರಯತ್ನವೊಂದರ ಮೂಲಕ ಒಟ್ಟಾಗಿ ಬದುಕುವ ವಿಧಾನವಾಗಿರಲಿಲ್ಲ. ಎರಡೂ ಸಮುದಾಯಗಳೂ ಪರಸ್ಪರರ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳನ್ನು ಕೀಳಾಗಿ ಮಾತನಾಡುವುದಂತೂ ಬಹಳ ಸಾಮಾನ್ಯವಾಗಿತ್ತು. ಹಿಂಸಾತ್ಮಕ ಸಂಘರ್ಷಗಳ ಸಂಖ್ಯೆಯೂ ದೊಡ್ಡದೇ ಇತ್ತು.ಭಾರತೀಯ ಬಹುತ್ವ ಎಂಬುದು ಒಂದು ಆಧುನಿಕ ವಿದ್ಯಮಾನ. ಇದು ರೂಪುಗೊಂಡದ್ದು ವಸಾಹತುಶಾಹಿಯ ಕುಲುಮೆಯಲ್ಲಿ. ಬ್ರಿಟಿಷರು ಬರುವ ತನಕವೂ ಭಾರತವೆಂಬ ರಾಷ್ಟ್ರವಿರಲಿಲ್ಲ. ಈಗ ನಾವು ದೇಶ ಎಂದುಕೊಳ್ಳುತ್ತಿರುವ ಭೂಭಾಗವನ್ನು ಒಂದುಗೂಡಿಸಿದ್ದು ಬ್ರಿಟಿಷರು. ವಸಾಹತು ಶಾಹಿಯ ಆಡಳಿತಾತ್ಮಕ ನಿರ್ಧಾರದ ಆಕಸ್ಮಿಕತೆಯಲ್ಲಿ ಹುಟ್ಟಿದ ಕೃತಕ ಏಕತೆಯ ಸೃಷ್ಟಿಯಾದ `ಬ್ರಿಟಿಷ್ ಇಂಡಿಯಾ'ದ ಪ್ರಜೆಗಳಿಗೆ ಏಕ ರಾಜಕೀಯ ಮತ್ತು ನೈತಿಕ ಉದ್ದೇಶವನ್ನು ಒದಗಿಸಿದ್ದು ಸ್ವಾತಂತ್ರ್ಯ ಸಂಗ್ರಾಮ.ಭಾರತೀಯ ಬಹುತ್ವ ಎಂಬುದು ಹಲವು ವ್ಯಕ್ತಿಗಳು ಮತ್ತು ಹಲವು ಸಂಸ್ಥೆಗಳ ಪ್ರಜ್ಞಾಪೂರ್ವಕ ಕಠಿಣ ಪರಿಶ್ರಮ ಮತ್ತು ಪ್ರಜ್ಞಾಪೂರ್ವಕ ಆಯ್ಕೆಯ ಫಲ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸಂಸ್ಥೆ ಹಾಗೂ ವ್ಯಕ್ತಿಯನ್ನು ಪ್ರತ್ಯೇಕಿಸಿ ನೋಡಬೇಕೆಂದಿದ್ದರೆ ನನ್ನ ಆಯ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ. ಗಾಂಧಿ ಬಹಳ ಸಣ್ಣ ವಯಸ್ಸಿನಲ್ಲೇ ತಮ್ಮ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುವ ಕ್ರಿಯೆಯಲ್ಲಿ ತೊಡಗಿದ್ದವರು. ಶಾಲೆಯಲ್ಲಿದ್ದಾಗ ಅವರ ಹತ್ತಿರದ ಗೆಳೆಯನಾಗಿದ್ದಾತ ಒಬ್ಬ ಮುಸ್ಲಿಂ. ಕಾನೂನು ವಿದ್ಯಾರ್ಥಿಯಾಗಿ ಲಂಡನ್‌ನಲ್ಲಿದ್ದಾಗ ಗಾಂಧಿ ಹೆಚ್ಚು ಒಡನಾಡುತ್ತಿದ್ದುದು ಕ್ರೈಸ್ತರೊಡನೆ. ಭಾರತಕ್ಕೆ ಹಿಂದಿರುಗಿದ ಮೇಲೆ ತಮ್ಮ ಮಾರ್ಗದರ್ಶಕನನ್ನಾಗಿ ಅವರು ನೇಮಿಸಿಕೊಂಡದ್ದು ಒಬ್ಬ ಜೈನ ವಿದ್ವಾಂಸರನ್ನು.ವೈವಿಧ್ಯವೆಂಬುದು ಎಲ್ಲಾ ಬೃಹತ್ ರಾಷ್ಟ್ರಗಳಲ್ಲಿ ಕಾಣಸಿಗುವ ಸಹಜ ಸಾಮಾಜಿಕ ಸ್ಥಿತಿ. ಆದರೆ ಅದು `ಬಹುತ್ವ'ವಾಗಬೇಕಾದರೆ ಪ್ರಜ್ಞಾಪೂರ್ವಕ ರಾಜಕೀಯ ಕಾರ್ಯಕ್ರಮದ ಅಗತ್ಯವಿದೆ. ರಾಜ ಪ್ರಭುತ್ವ, ವಸಾಹತುಶಾಹಿ, ಜಪಾನೀ ಆಕ್ರಮಣ ಮತ್ತು ಕಮ್ಯುನಿಸ್ಟ್ ಕ್ರಾಂತಿಯ ಹಾದಿಯಲ್ಲಿ ವೈವಿಧ್ಯವಿದ್ದರೂ ಅದನ್ನು ಉಳಿಸಿಕೊಳ್ಳಲು ಅಗತ್ಯವಾಗಿದ್ದ `ಬಹುತ್ವ'ಕ್ಕಾಗಿ ಚೀನಾ ಈಗಲೂ ತುಡಿಯುತ್ತಿದೆ. ಸ್ವತಂತ್ರ ಗಣರಾಜ್ಯವಾಗುವಾಗಲೇ `ಬಹುತ್ವ'ವನ್ನು ಸಂವಿಧಾನದೊಳಕ್ಕೇ ಸೇರಿಸಿಕೊಂಡ ಭಾರತ ತನ್ನೆಲ್ಲ ಮಿತಿಗಳ ಮಧ್ಯೆಯೂ ವೈವಿಧ್ಯವನ್ನು ಉಳಿಸಿಕೊಂಡೇ ಜಾಗತೀಕರಣಕ್ಕೊಳಗಾಗುತ್ತಿದೆ. ಚೀನಾ ಪ್ರವಾಸದ ನೆಪದಲ್ಲಿ ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ವೈವಿಧ್ಯ ಮತ್ತು ಬಹುತ್ವದ ತಳಮಳಗಳ ಕುರಿತು ಸಮಕಾಲೀನ ಭಾರತದ ಇತಿಹಾಸಕಾರರೂ ಆಗಿರುವ ಲೇಖಕರಿಂದ ಒಂದು ತೌಲನಿಕ ವಿಶ್ಲೇಷಣೆಯ ಮಾಲಿಕೆ.  ಮುಂದುವರೆಯುವುದು...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.