ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ತೃಪ್ತಿ

7

ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ತೃಪ್ತಿ

Published:
Updated:

ಬೆಂಗಳೂರು: `ವಿಭಿನ್ನ ಅಭಿರುಚಿಯ ಪ್ರೇಕ್ಷಕರನ್ನು ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ತೃಪ್ತಿ ಇದೆ~ ಎಂದು ನಟ ಅನಂತನಾಗ್ ಹೇಳಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಬೆಳ್ಳಿಹೆಜ್ಜೆ~ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.`ಆಶ್ರಮ, ಮಠಗಳಲ್ಲೇ ಬಾಲ್ಯವನ್ನು ಕಳೆದ ನಾನು ಬಳಿಕ ಮುಂಬೈಗೆ ತೆರಳಿದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳ ಕಾಲ ಹಿಡಿಯಿತು. ಈ ಸಂದರ್ಭದಲ್ಲೇ ರಂಗಭೂಮಿಯ ನಂಟು ಬೆಳೆಯಿತು. ಅಲ್ಲಿ ಮರಾಠಿ, ಕೊಂಕಣಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ನಂತರ ಶ್ಯಾಂ ಬೆನಗಲ್ ಅವರ `ಅಂಕುರ್~ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು~ ಎಂದರು.`ಶ್ಯಾಂ ಬೆನಗಲ್ ಅವರ ಚಿತ್ರಗಳಲ್ಲಿನ ಅಭಿನಯ ಜನಪ್ರಿಯತೆ ತಂದುಕೊಟ್ಟಿತು. ಈ ನಡುವೆ ಕೆಲಕಾಲ ಯೂನಿಯನ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದೆ. ನಂತರ ಕನ್ನಡದಲ್ಲಿ `ಸಂಕಲ್ಪ~ ಎಂಬ ಕಲಾತ್ಮಕ ಚಿತ್ರದಲ್ಲಿ ಅಭಿನಯಿಸಿದೆ. ಆ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದೆ~ ಎಂದು ಸ್ಮರಿಸಿದರು.`ಕಲಾತ್ಮಕ ಚಿತ್ರಗಳಲ್ಲಿಯೇ ನಟಿಸಬೇಕು ಎಂಬುದು ನನ್ನ ಬಯಕೆಯಾಗಿತ್ತು. ಆದರೆ ಕಲಾತ್ಮಕ ಚಿತ್ರಗಳು    ಎರಡು- ಮೂರು ವರ್ಷಕ್ಕೊಂದು ನಿರ್ಮಾಣವಾಗುತ್ತಿದ್ದವು. ಹಾಗಾಗಿ ವಾಣಿಜ್ಯ ಚಿತ್ರಗಳಲ್ಲೂ ಅಭಿನಯಿಸಲು ಆರಂಭಿಸಿದೆ~ ಎಂದರು.`ಚಿತ್ರರಂಗದಲ್ಲಿ ತಳವೂರಲು ನಿರ್ದೇಶಕ ಭಗವಾನ್ (ದೊರೈ) ಸಾಕಷ್ಟು ನೆರವಾದರು. ಕೊಟ್ಟ ಪಾತ್ರಗಳಲ್ಲಿ ಸಲೀಸಾಗಿ ಅಭಿನಯಿಸುತ್ತಿದ್ದೆ. ಆದರೆ ಹಾಡಿನ ದೃಶ್ಯಗಳು ಬಂದಾಗ ನಡುಕ ಹುಟ್ಟುತ್ತಿತ್ತು. ಹಾಡಿಗೆ ಹೆಜ್ಜೆ ಹಾಕುವುದೆಂದರೆ ಮುಜುಗರವಾಗುತ್ತಿತ್ತು~ ಎಂದರು.ರಾಜಕೀಯ ನಂಟು:
`ಜಯಪ್ರಕಾಶ್ ನಾರಾಯಣ್ ಅವರ ಹೋರಾಟದಿಂದ ಪ್ರೇರಿತನಾಗಿ ಚಳವಳಿಯಲ್ಲೂ ಪಾಲ್ಗೊಂಡೆ. ಆಗಲೇ ಜೆ.ಎಚ್. ಪಟೇಲರ ಪರಿಚಯವಾಗಿದ್ದು. ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ ಆಡಳಿತ ನಡೆಸುವ ಪಕ್ಷಗಳು ಬದಲಾಗಬೇಕು ಎಂಬುದು ನನ್ನ ನಂಬಿಕೆ. ಹಾಗಾಗಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. ಪಟೇಲರ ಸೂಚನೆ ಮೇರೆಗೆ ಸಚಿವನಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದೆ~ ಎಂದು ತಮ್ಮ ರಾಜಕೀಯ ಜೀವನ ಕುರಿತು ವಿವರಿಸಿದರು.`ಸಹೋದರ ಶಂಕರ್‌ನಾಗ್ ನನಗಿಂತ 6 ವರ್ಷ ಚಿಕ್ಕವನು. ಅವನಿಗೆ ಚಿತ್ರರಂಗದ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ ಅವನೊಬ್ಬ ಅಪ್ರತಿಮ ನಿರ್ದೇಶಕನಾಗಿದ್ದ. ವಾಣಿಜ್ಯ ಚಿತ್ರಗಳಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದರೂ ಅವನಿಗೆ ತೃಪ್ತಿ ಇರಲಿಲ್ಲ. ಕಲಾತ್ಮಕ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಒಲವು ತೋರಿಸುತ್ತಿದ್ದ. ಅವನ ಕಲಾತ್ಮಕತೆ ಹಾಗೂ ನಿರ್ದೇಶನ ಕಲೆಯ ಸಾಕ್ಷಿಯಾಗಿ `ಮಾಲ್ಗುಡಿ ಡೇಸ್~ ನಿರ್ಮಾಣಗೊಂಡಿತ್ತು. ಆತನ ಅಕಾಲಿಕ ಮರಣ ಭರಿಸಲಾರದ ನೋವುಂಟು ಮಾಡಿದೆ~ ಎಂದು ಭಾವುಕರಾದರು. `ನಿರಂತರ ಅಭ್ಯಾಸ ಹಾಗೂ ಕಲಿಕೆಯಿಂದ ಮಾತ್ರ ಉತ್ತಮ ಅಭಿನಯ ನೀಡಲು ಸಾಧ್ಯ. ಯಾವುದೇ ಪಾತ್ರ ನೀಡಿದರೂ ಅಭಿನಯಿಸಲು ಸಿದ್ಧರಿರಬೇಕು. ಕಾಲ ಬದಲಾದಂತೆ ನಿರ್ಮಾಣವಾಗುವ ಚಿತ್ರಗಳು ಹಾಗೂ ಪ್ರೇಕ್ಷಕರ ಅಭಿರುಚಿಯು ಬದಲಾಗುತ್ತದೆ~ ಎಂದರು.ತಾರಾ ಪತ್ನಿ ಗಾಯಿತ್ರಿ, ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry