ವೈವಿಧ್ಯಮಯ ರಾಗಸಂಭ್ರಮ

7

ವೈವಿಧ್ಯಮಯ ರಾಗಸಂಭ್ರಮ

Published:
Updated:

ಭಾರತೀಯ ಸಾಮಗಾನ ಸಭಾ ವಾರ್ಷಿಕೋತ್ಸವದ ಪ್ರಯುಕ್ತ ಐದು ದಿನಗಳ ಸಂಗೀತೋತ್ಸವ ಏರ್ಪಡಿಸಿತ್ತು. ಒಂದು ಗಂಟೆಯ ಅವಧಿಯಲ್ಲಿ ಒಂದು ರಾಗವನ್ನು ಸಂಗೀತ ಕಲಾವಿದ ಪ್ರಸ್ತುತಪಡಿಸಲು ಕೋರಲಾಗಿತ್ತು.ಹೀಗೆ ಗಾಯಕರಲ್ಲದೆ ವೇಣು, ವೀಣೆ, ಪಿಟೀಲು, ವಿದ್ವಾಂಸರು 12 ರಾಗಗಳನ್ನು ಪ್ರಖರವಾಗಿ ಪ್ರಸ್ತುತ ಪಡಿಸಿದರು. ಕೇಳುಗರಿಗೆ ಭಿನ್ನ ರಾಗಗಳನ್ನು ಕೇಳುವ ಸದವಕಾಶ ದೊರಕಿತು. ಉತ್ಸವ ಒಂದು ವಿಭಿನ್ನ ಅನುಭವ ನೀಡಿತು.ಶೃಂಗೇರಿಯ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರೀಶಂಕರ್ ರಾಗ ಸಂಭ್ರಮದ ಮೊದಲ ಕಛೇರಿಯನ್ನು ಉದ್ಘಾಟಿಸಿದರು. ಅಭಿಷೇಕ್ ರಘುರಾಂ ಷಣ್ಮುಖಪ್ರಿಯ ರಾಗದಲ್ಲಿ  `ಸಿದ್ಧಿವಿನಾಯಕಂ~ನಿಂದ ಪ್ರಾರಂಭಿಸಿದರು. ರಾಗಾಲಾಪನೆ ಸುದೀರ್ಘವಾಗಿದ್ದರೂ ತಾನ ಮಿತವಾಗಿತ್ತು. ಖಂಡ ತ್ರಿಪುಟ ತಾಳದ ಪಲ್ಲವಿಗೆ ಹಾಕಿದ ಸ್ವರಪ್ರಸ್ತಾರ ದಿಢೀರನೆ ಮುಕ್ತಾಯವಾದಂತೆ ಭಾಸವಾಯಿತು!

 

ಜೊತೆಗೆ ವಿಠಲ ರಾಮಮೂರ್ತಿ ಪಿಟೀಲಿನಲ್ಲಿ ಆಲಾಪನೆಯನ್ನು ಚೆನ್ನಾಗಿ ಪ್ರಾರಂಭಿಸಿದರು. ಆದರೆ ಮಧ್ಯದಲ್ಲೇ ತಾನವನ್ನು ಪ್ರಾರಂಭಿಸಬೇಕಾಗಿ ಬಂತು. ಈ ನಡೆಯಿಂದಾಗಿ ರಾಗ ಅಪೂರ್ಣಗೊಂಡಂತೆ ಎನಿಸಿತು! ಅನಂತ ಕೃಷ್ಣನ್ ಮೃದಂಗ ಪಕ್ಕವಾದ್ಯ ನುಡಿಸಿದರು.ಸುಂದರ ಸರಸಾಂಗಿ

ಶಶಾಂಕ್ ಸುಬ್ರಹ್ಮಣ್ಯಂ ಕೊಳಲಿನಲ್ಲಿ ಸರಸಾಂಗಿ ರಾಗವನ್ನು ತೆಗೆದುಕೊಂಡರು. ರಾಗವನ್ನು ಕ್ರಮೇಣ ಬೆಳೆಸುತ್ತಾ ಒಂದು ಉತ್ತಮ ಚಿತ್ರ ಬಿಡಿಸಿದರು.  ಪಿಟೀಲಿನಲ್ಲಿ ಅಕ್ಕರೈ ಸುಬ್ಬುಲಕ್ಷ್ಮೀ ಹಾಗೂ ಮೃದಂಗದಲ್ಲಿ ಅರ್ಜುನ್ ಕುಮಾರ್ ನೆರವಾದರು.

 

ದಾಸರ  `ಸರ್ವಾಪರಾಧವ ಕ್ಷಮಿಸಯ್ಯ~ದೊಂದಿಗೆ ಆರಂಭಿಸಿದ ಪಿ.ಉನ್ನಿಕಷ್ಣನ್ ಕೀರವಾಣಿ ರಾಗವನ್ನು ನಿರೂಪಿಸಿದರು. ರಾಗದ ವಿಸ್ತೃತ ಆಲಾಪನೆಯನ್ನು ಮಾಡಿ, ಮೃದಂಗದ ನೆರವಿನೊಂದಿಗೆ ಹಾಡಿದ ತಾನವೂ ಬಿಗಿದಂದರದಲ್ಲಿ ಹೊಮ್ಮಿತು. ಖಂಡ ತ್ರಿಪುಟದ ಪಲ್ಲವಿ ಗಾಯಕರ ಅನುಭವಕ್ಕೆ ಸಾಕ್ಷಿಯಾಗಿ ಮೂಡಿತು. ಅಕ್ಕರೈ ಸುಬ್ಬುಲಕ್ಷ್ಮೀ ಮತ್ತು ಅನಂತ ಕೃಷ್ಣನ್ ಪಕ್ಕವಾದ್ಯಗಳಲ್ಲಿ ಸಹಕರಿಸಿದರು.ನಾದ ಮಾಧುರ್ಯ

ಬೆಂಗಳೂರು ಲಲಿತಕಲಾ ಪರಿಷತ್ತಿನಲ್ಲಿ ವೇಣುವಾದನ ಮಾಡಿದ ಸಿಕ್ಕಿಲ್ ಮಾಲಾ ಚಂದ್ರಶೇಖರ್ ಸಂಗೀತಾಭಿಮಾನಿಗಳಿಗೆ ಪರಿಚಿತರು. ಅವರೊಂದಿಗೆ ಬಿ.ಕೆ. ರಘು (ಪಿಟೀಲು), ಕೆ.ಯು. ಜಯಚೇಂದ್ರರಾವ್ (ಮೃದಂಗ) ಹಾಗೂ ಎಸ್. ಶ್ರೀಶೈಲ (ಘಟ) - ಪಕ್ಕವಾದ್ಯಗಳ ಹೊಣೆ ಹೊತ್ತಿದ್ದರು.~

 ಸಿಕ್ಕಿಲ್ ಮಾಲಾ ಅವರ ವಿನಿಕೆಗೆ ರೀತಿಗೌಳ ವರ್ಣ ಭದ್ರ ಬುನಾದಿ ಹಾಕಿತು. ಸ್ವಲ್ಪ ಸ್ವರದೊಂದಿಗೆ  ಗಜವದನ ನುಡಿಸಿ, ವಿಳಂಬದಲ್ಲಿ `ಮಾಯಮ್ಮ~ ಭಾವಪೂರ್ಣವಾಗಿ ಹೊಮ್ಮಿತು. ಧರ್ಮವತಿ ರಾಗವನ್ನು ಹಿತಮಿತವಾಗಿ ಅರಳಿಸಿ, `ತರಮುಗಾದುರ~ ಕೃತಿಗೆ ಹಾಕಿದ ಸ್ವರ ಆಹ್ಲಾದಕರವಾಗಿತ್ತು.

 

ನಂತರ ಎರಡು ರಚನೆಗಳು ಧೃತ ಗತಿಯಲ್ಲಿ ರಂಜಿಸಿದವು: ತ್ಯಾಗರಾಜರ `ಶೋಬಿಲ್ಲು ಸಪ್ತಸ್ವರ~ ಹಾಗೂ ಮುತ್ತಯ ಭಾಗವತರ ಒಂದು ರಚನೆ. ಕಾಂಬೋಧಿ ರಾಗವನ್ನು ಸುಂದರವಾಗಿ ಅರಳಿಸಿ, `ಮರಕತವಲ್ಲಿ~ ಕೃತಿಯ ವಿಸ್ತಾರದಲ್ಲಿ ಮಾಲಾ ಅವರ ಪ್ರತಿಭೆ ಹೊರಚೆಲ್ಲಿತು.

 

ರಾಗ - ನೆರವಲ್ - ಸ್ವರ ಎಲ್ಲವನ್ನೂ ಮಾಧುರ್ಯವಾಗಿ, ಅತಿರೇಕ-ಅಡಾವುಡಿಗಳಿಲ್ಲದೆ ನಿರೂಪಿಸಿದರು. ಕೊನೆಯಲ್ಲಿ ನುಡಿಸಿದ ದೇವರನಾಮ (ಜಗದೋದ್ಧಾರನ) ಮತ್ತು ತಿಲ್ಲಾನ (ವೀಣೆ ಶೇಷಣ್ಣ)ಗಳೂ ಕೇಳುಗರಿಗೆ ಪ್ರಿಯವಾಯಿತು.ಹಿರಿಯ ಲಯವಾದಗಾರರಿಗೆ ಅಭಿನಂದನೆ

ಹಿರಿಯ ಲಯವಾದ್ಯಗಾರ ಬಿ.ಕೆ. ಚಂದ್ರಮೌಳಿ ಅವರ ಅಭಿನಂದನಾ ಸಮಾರಂಭವು ಎಚ್.ಎನ್. ಮೀರಾ ಅವರ ಗಾಯನದೊಂದಿಗೆ ಪ್ರಾರಂಭವಾಯಿತು. ವಾದಿರಾಜರ ಗಜಮುಖ ವಂದಿಸುವೆ- ಸ್ವಾಗತಾರ್ಹವಾಗಿತ್ತು.

 

ಹಾಗೆಯೇ ನರಸಿಂಹನ ಮೇಲೆ ಅಷ್ಟಾಗಿ ಚಾಲ್ತಿಯಲ್ಲಿಲ್ಲದ  `ನರಸಿಂಹನ ಪಾದ ಭಜನೆ ಮಾಡೊ~ ಆಯ್ದುಕೊಂಡಿದ್ದೂ ಅಭಿನಂದನಾರ್ಹ. `ಯಾರಿದ್ದರೇನಯ~ವಿಳಂಬದಲ್ಲಿ ಮೂಡಿದರೆ `ನಾರಾಯಣತೆ ನಮೊನಮೊ~ ಧೃತಗತಿಯಲ್ಲಿ ಸಾಗಿತು.

 

ಹಾಗೆಯೇ `ಭೋ ಶಂಭೊ ಶಿವಶಂಭೊ~ ಇನ್ನೊಂದು ಉತ್ತಮ ಆಯ್ಕೆ. ಮಧುಸೂಧನ್, ಬಿ.ಸಿ. ಮಂಜುನಾಥ್, ಭಾಸ್ಕರ್, ಶ್ರೀಧರ್ ಮತ್ತು ಪುರುಷೋತ್ತಮ- ಪಕ್ಕವಾದ್ಯಗಳಲ್ಲಿ ಸಹಾಯ ಮಾಡಿದರು.ಲಾಸ್ಯ ನೃತ್ಯ ತಂಡದ ರಾಧಿಕಾ ರಾಮಾನುಜನ್, ಸಂಗೀತ ಪುಣೇಕರ್ ಮತ್ತು ಹರಿಣಿ ಶ್ರೀಕಾಂತ್ ಸಾದರಪಡಿಸಿದ ಭರತನಾಟ್ಯದಲ್ಲಿ ಪ್ರಮುಖವಾಗಿ ಎರಡು ರಚನೆಗಳಿದ್ದವು. ಗಂಭೀರನಾಟ ರಾಗ ಖಂಡ ತ್ರಿಪುಟದಲ್ಲಿ `ಮಲ್ಹಾರಿ~ ಸಾಂಪ್ರದಾಯಿಕವಾಗಿ ಮಾಡಿ, ಗಣೇಶಸ್ತುತಿಗೆ ಸರಿದರು.

 

ವಿಟಪಿ ರಾಗದಲ್ಲಿ `ಇಕ್ಷುದಂಡಧರ~ ಸುಂದರವಾಗಿ ಹೊಮ್ಮಿತು. ಸುಪ್ರಸಿದ್ಧ `ಶ್ರೀಮನ್ ನಾರಾಯಣ~ ಕೃತಿಯು ಚುರುಕು ನಡೆ ಹಾಗೂ ಉತ್ತಮ ಅಭಿನಯಗಳಿಂದ ಪ್ರಶಂಸೆಗೆ ಪಾತ್ರವಾಯಿತು.

ಅಭಿಮಾನಿ ಬಳಗದ ಪರವಾಗಿ ಬಿ.ಕೆ. ಚಂದ್ರಮೌಳಿ ಅವರಿಗೆ ಬೆಳ್ಳಿಯ ಮೃದಂಗ ಪ್ರದಾನ ಮಾಡಿ, ಸತ್ಕರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry