ಮಂಗಳವಾರ, ನವೆಂಬರ್ 12, 2019
28 °C

ವೈವಿಧ್ಯ ಬೆಳೆಗಳ ನೋಟ

Published:
Updated:

ಎರಡೂವರೆ ಎಕರೆಯ ಬಹುಮಹಡಿ ತೋಟ. ತೋಟದ ತುಂಬಾ ಹತ್ತಾರು ಬೆಳೆಗಳು. ವಿಶೇಷವೆಂದರೆ, ಇಲ್ಲಿ ಎಲ್ಲ ಬೆಳೆಗಳೂ ತೋಟದಿಂದಲೇ ಬಿಕರಿಯಾಗುತ್ತವೆ...!ಅದು ಪಾದ್ರಹಳ್ಳಿ ನರಸಿಂಹಯ್ಯನವರ ತೋಟ. ರಾಮನಗರ-ಮಾಗಡಿ ರಸ್ತೆಯಲ್ಲಿರುವ ಪಾದ್ರಹಳ್ಳಿ ಎಂಬ ಗ್ರಾಮದ ಸಮೀಪದಲ್ಲಿ ಈ ತೋಟವಿದೆ. ತೋಟದಲ್ಲಿ ಮಾವು, ಹೈಬ್ರಿಡ್ ಮೇವು, ಹಿಪ್ಪು ನೇರಳೆ, ಬಾಳೆ ಗಿಡಗಳು, ಕಾಕಡ ಹೂಗಳು.. ಹೀಗೆ ಬೆಳೆಯ ವೈವಿಧ್ಯವೇ ಇದೆ.ಇಡೀ ತೋಟದಲ್ಲಿ ಎದ್ದು ಕಾಣಿಸುವುದು ಪಪ್ಪಾಯ ಮತ್ತು ಮಾವು. ತೋಟದ ನಡು ನಡುವೆ ಮಾವಿನ ಗಿಡಗಳಿದ್ದರೆ, ಜಮೀನಿನ ಗಡಿ ರೇಖೆಯ ಗುಂಟ ಪಪ್ಪಾಯ ಗಿಡಗಳಿವೆ. ಪ್ರತಿ ಗಿಡದಲ್ಲೂ ಕಾಯಿಗಳು ನೇತಾಡುತ್ತಿರುತ್ತವೆ !ತೋಟದಲ್ಲಿರುವುದರಲ್ಲಿ ಬಹುತೇಕ ವಾಣಿಜ್ಯ ಬೆಳೆಗಳು. ತೋಟದ ನಡುವೆ ಬಿಸಿಲು ಬೀಳುವ ಜಾಗದಲ್ಲಿ ಮಾತ್ರ ಕಾಲಕಾಲಕ್ಕೆ ರಾಗಿ, ಜೋಳ, ಕಡಲೆ ಕಾಯಿ ಬಿತ್ತನೆ ಮಾಡುತ್ತಾರೆ. ಇಷ್ಟೆಲ್ಲ ಬೆಳೆ ವೈವಿಧ್ಯವಿದ್ದರೂ, ರೆಡ್‌ಲೇಡಿ ಪಪ್ಪಾಯ ತಳಿಗಳ ಮೇಲೆ ನರಸಿಂಹಯ್ಯನವರಿಗೆ ಅಪಾರ ಪ್ರೀತಿ.ಬೆಳೆ ವಿನ್ಯಾಸ

ಇಡೀ ಜಮೀನು ಸ್ವಾಭಾವಿಕವಾಗಿ ಬಹುಮಹಡಿ ಶೈಲಿಯಲ್ಲಿ ವಿನ್ಯಾಸಗೊಂಡಿದೆ. ಇಳಿಜಾರು ಪ್ರದೇಶದ ಎರಡು ಗುಂಟೆಯಲ್ಲಿ ಸೀಮೆಹುಲ್ಲು, ಪಕ್ಕದಲ್ಲೇ ಹಿಪ್ಪು ನೇರಳೆ ಬೆಳೆಯಿದೆ. ಪಕ್ಕದ ಸಾಲಿನಲ್ಲಿ ಬಾಳೆ ಗಿಡಗಳ ಜೊತೆಗೆ ನಡು ನಡುವೆ ಪಪ್ಪಾಯ ಗಿಡಗಳನ್ನು ನೆಟ್ಟಿದ್ದಾರೆ.ಹಿಪ್ಪುನೇರಳೆ ಪಟ್ಟೆಯ ಮೇಲ್ಭಾಗದಲ್ಲಿ ಮಾವಿನ ಗಿಡಗಳಿವೆ. ಎರಡು ಮಾವು ಗಿಡಗಳ ನಡುವಿನ 30 ಅಡಿ ಅಂತರದಲ್ಲಿ ಒಂದು ಪಪ್ಪಾಯಿ ಗಿಡ ಹಾಕಿದ್ದಾರೆ. `ಮೂರು ವರ್ಷಗಳ ಪಪ್ಪಾಯ ಗಿಡಗಳು, ಜಮೀನು ಖರೀದಿಸಿದಾಗ ನೆಟ್ಟ ನೂರು ಮಾವಿನ ಗಿಡಗಳು ಫಲ ಬಿಡುತ್ತಿವೆ. ಒಂದು ಪಪ್ಪಾಯ ಗಿಡಕ್ಕೆ ಸಾಮಾನ್ಯ ಐದು ವರ್ಷ ಆಯಸ್ಸು. ಗಿಡ ಹೋದ ಕೂಡಲೇ ಹೊಸ ಗಿಡ ನಾಟಿ ಮಾಡುತ್ತೇವೆ. ಭೂಮಿ ಚೆನ್ನಾಗಿದ್ದರೆ ಫಸಲು ಬೊಂಬಾಟ್' - ನರಸಿಂಹಯ್ಯನವರ ಅನುಭವದ ಮಾತು.ಪಪ್ಪಾಯ ಗಿಡಗಳಿಗೆ ಆರೈಕೆ ಕಡಿಮೆ. ಪ್ರತಿ ಗಿಡಗಳಿಗೆ ವರ್ಷಕ್ಕೆ ಎರಡು ಬಾರಿ ಒಂದೊಂದು ಬುಟ್ಟಿ ಕೊಟ್ಟಿಗೆ ಗೊಬ್ಬರ ಕೊಡುತ್ತಾರೆ. ಹನಿ ನೀರಾವರಿ ಮೂಲಕ ನೀರು ಉಣಿಸುತ್ತಾರೆ. ಮಾವಿನ ಮರಗಳ ಸುತ್ತ ಮಣ್ಣು ಸಡಿಲ ಮಾಡಿಸುತ್ತಾರೆ. ಸುತ್ತಲು ಬಿದ್ದಿರುವ ಗಿಡ ಮರಗಳ ತರಗಲೆಗಳನ್ನೇ ಗೊಬ್ಬರವಾಗಿಸುತ್ತಾರೆ. ಇಷ್ಟೇ ಬಂಡವಾಳ, ಶ್ರಮ. ಇಷ್ಟು ಬಿಟ್ಟರೆ ಹಣ್ಣಿನ ಗಿಡಗಳಿಗೆ ಇನ್ನಾವ ಆರೈಕೆಯೂ ಇಲ್ಲ.ಸರ್ಕಾರದ ಯೋಜನೆಯೊಂದರಿಂದ ತೋಟದಲ್ಲಿ ಬಯೋಡೈಜೆಸ್ಟರ್ ಘಟಕ ಸ್ಥಾಪಿಸಿಕೊಂಡಿದ್ದಾರೆ. ತೋಟದ ಎತ್ತರದ ಪ್ರದೇಶದಲ್ಲಿ ತೊಟ್ಟಿ ಕಟ್ಟಿಸಿದ್ದಾರೆ. ತೋಟದಲ್ಲಿ ಸಿಗುವ ತರಗೆಲೆ, ಕರಗುವ ಕೃಷಿ ತ್ಯಾಜ್ಯಗಳನ್ನು ತುಂಬಿಸಿ, ನೀರು ಹರಿಸುತ್ತಾರೆ. ತೊಟ್ಟಿಯಲ್ಲಿ ಕಸವೆಲ್ಲ ಕರಗಿ ಉತ್ಕೃಷ್ಟ ದ್ರವರೂಪಿ ಸಾವಯವ ಗೊಬ್ಬರವಾಗುತ್ತದೆ. ಇದನ್ನು ಹನಿ ಹನಿಯಂತೆ ಎಲ್ಲ ಬೆಳೆಗಳಿಗೂ ನೀಡುತ್ತಾರೆ.ವಿದ್ಯುತ್ ಅವಲಂಬಿಸದೇ ಗುರುತ್ವಾಕರ್ಷಣ ಬಲದಿಂದಲೇ ದ್ರವರೂಪಿ ಗೊಬ್ಬರ ತೋಟದ ಬೆಳೆಗಳಿಗೆ ರವಾನೆಯಾಗುತ್ತದೆ. `ಬಯೋಡೈಜೆಸ್ಟರ್ ನಮ್ಮ ಬೆಳೆಗಳಿಗೆ ಚೈತನ್ಯ ಶಕ್ತಿ ನೀಡುತ್ತದೆ. ಮಾತ್ರವಲ್ಲ, ಕೂಲಿ ಕಾರ್ಮಿಕರ ಕೊರತೆಯನ್ನು ನೀಗಿಸಿದೆ' ಎನ್ನುತ್ತಾರೆ ನರಸಿಂಹಯ್ಯ.ತೋಟದಲ್ಲೇ ಮಾರುಕಟ್ಟೆ

ತೋಟದಲ್ಲಿ ಬೆಳೆಯುವ ಬಹುತೇಕ ಬೆಳೆಗಳನ್ನು ತೋಟದಿಂದಲೇ ಖರೀದಿಸುತ್ತಾರೆ. ವೈಟ್‌ಫೀಲ್, ನೇಪಿಯರ್ ತಳಿಯ ಮೇವಿನ ಬೆಳೆಗಳು, ರೇಷ್ಮೆ ಸೊಪ್ಪನ್ನು ತೋಟಕ್ಕೇ ಬಂದು ಕೊಯ್ದುಕೊಂಡು ಹೋಗುತ್ತಾರೆ. ಕಾಕಡ ಹೂವಿಗೂ ಸ್ಥಳೀಯವಾಗಿಯೇ ಮಾರುಕಟ್ಟೆ ಇದೆ. ಮಾವಿನ ಹಣ್ಣನ್ನು ವರ್ಷಕ್ಕೊಮ್ಮೆ ಗುತ್ತಿಗೆ ಕೊಡುತ್ತಾರೆ. ಹಾಗಾಗಿ ಎಲ್ಲ ತೋಟದಲ್ಲೇ ವ್ಯಾಪಾರ. ಪಪ್ಪಾಯಿ ಮಾತ್ರ ರಾಮನಗರದ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಇದು ವರ್ಷಪೂರ್ತಿ ಬೇಡಿಕೆ ಬೆಳೆಯಾದ್ದರಿಂದ, ಇದನ್ನು ಬಹಳ ಮುತುವರ್ಜಿಯಿಂದ ಬೆಳೆಯುತ್ತಿದ್ದಾರೆ.ಬೆಳೆ ಇಳುವರಿ ಬಗ್ಗೆ ನರಸಿಂಹಯ್ಯನವರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆಯಾ ಕಾಲಕ್ಕೆ ಎಷ್ಟು ಬರುತ್ತದೋ ಅಷ್ಟೇ ಮಾರಾಟ ಮಾಡುತ್ತಾರೆ. ಮಾವಿನ ಬೆಳೆ ಗುತ್ತಿಗೆಯಿಂದ ವರ್ಷಕ್ಕೆ 50 ಸಾವಿರ ರೂ. ಗ್ಯಾರಂಟಿ ಇದೆ. `ಕಾಕಡ, ಸೀಮೆಹುಲ್ಲಿಗೆ ಆರೇಳು ಮಂದಿ ಕಾಯಂ ಗ್ರಾಹಕರಿದ್ದಾರೆ. ಮನೆಯಲ್ಲಿ ನಾಲ್ಕು ರೆಡ್ಡೇನ್ ಸೇರಿದಂತೆ ಆರು ಸೀಮೆ ಹಸುಗಳಿವೆ. ಅವುಗಳಿಗೂ ಇದೇ ಮೇವನ್ನು ಆಹಾರವಾಗಿ ನೀಡುತ್ತಾರೆ. ಜಾನುವಾರುಗಳ ಸಗಣಿ ತೋಟದ ಬೆಳೆಗೆ ಗೊಬ್ಬರವಾಗುತ್ತದೆ. ಹೀಗೆ ಪ್ರತ್ಯಕ್ಷ- ಪರೋಕ್ಷ ಲಾಭಗಳಿವೆ' - ಲೆಕ್ಕಾಚಾರ ತೆರೆದಿಡುತ್ತಾರೆ ನರಸಿಂಹಯ್ಯ.`ಮಳೆ ಉತ್ತಮವಾಗಿದ್ದು, ಕೊಳವೆ ಬಾವಿಯಲ್ಲಿ ನೀರಿದ್ದಾಗ ಒಂದು ದಿನಕ್ಕೆ 50 ರಿಂದ 70 ಕೆ.ಜಿ ಪಪ್ಪಾಯ ಮಾರಾಟ ಮಾಡುತ್ತಿದ್ದೆವು. ಈ ಬಾರಿ ಮಳೆ ಕಡಿಮೆಯಾಗಿದೆ. ಕೊಳವೆ ಬಾವಿಯಲ್ಲಿ ನೀರಿಲ್ಲ. ಕಾಯಿಯ ಗಾತ್ರವೂ ಕಡಿಮೆ. ದಿನಕ್ಕೆ 20 ರಿಂದ 25 ಕೆ.ಜಿ ಪಪ್ಪಾಯಿ ಸಿಗುತ್ತಿದೆ' - ನರಸಿಂಹ್ಯನವರಿಂದ ಹವಾಮಾನ ವೈಪರೀತ್ಯ ಸಮಸ್ಯೆಯಿಂದಾಗುವ ನಷ್ಟದ ವಿವರಣೆ. ಈ ಬಾರಿ ಮಾವು ಬಂಪರ್ ಬೆಳೆಯಿದೆ. ಒಂದೊಂದು ಮರದಿಂದ ಕನಿಷ್ಠ 500 ಕೆ.ಜಿ ಹಣ್ಣು ಸಿಗುವುದು ಗ್ಯಾರಂಟಿ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಅವರು. ತೋಟದಲ್ಲಿ ಪಪ್ಪಾಯ ಬೆಳೆ ಚೆನ್ನಾಗಿದ್ದಾಗ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ರೈತರನ್ನು ಅಧ್ಯಯನ ಪ್ರವಾಸಕ್ಕಾಗಿ ಇಲ್ಲಿಗೆ ಕರೆತರುತ್ತಿದ್ದರಂತೆ. ಕಳೆದ ವರ್ಷದಿಂದ ಮಳೆ ಕಡಿಮೆಯಾಗಿದೆ. ಕೊಳವೆ ಬಾವಿಯೂ ಬರಿದಾಗಿದೆ. ತೋಟದಲ್ಲಿ ಕೂಲಿ ಕಾರ್ಮಿಕರ ಕೊರತೆ. ಹಾಗಾಗಿ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ ಸ್ವಲ್ಪ ಮಂಕಾಗಿದೆ. `ಒಂದು ಹದ ಮಳೆ ಬಂದರೆ ಎಲ್ಲವೂ ಸರಿ ಹೋಗುತ್ತದೆ. ತೋಟ ಮತ್ತೆ ಹಸಿರಾಗುತ್ತದೆ. ಆಗ ತೋಟ ನೋಡೋಕೆ ಬನ್ನಿ' ಅಂತ ಆಹ್ವಾನಿಸುತ್ತಾರೆ ನರಸಿಂಹಯ್ಯ. ದೂರವಾಣಿ ಸಂಖ್ಯೆ : 9900514669

 

ಪ್ರತಿಕ್ರಿಯಿಸಿ (+)