ಭಾನುವಾರ, ಜೂನ್ 13, 2021
22 °C

ವೊಡಾಫೋನ್: ತೀರ್ಪು ಪರಾಮರ್ಶೆ ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ದೂರಸಂಪರ್ಕ ಸಂಸ್ಥೆ ವೊಡಾಫೋನ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್ ಪರ ನೀಡಿದ್ದ ತೀರ್ಪಿನ ಪರಾಮರ್ಶೆಗೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಸಾಗರೋತ್ತರ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವು ದೇಶಿ ತೆರಿಗೆ ಪ್ರಾಧಿಕಾರಗಳಿಗೆ ಇಲ್ಲ. ವೊಡಾಫೋನ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್ ಮತ್ತು ಹಚಿಸನ್ ಗ್ರೂಪ್ ಮಧ್ಯೆ ನಡೆದ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೂ.11 ಸಾವಿರ ಕೋಟಿಗಳಷ್ಟು ಆದಾಯ ತೆರಿಗೆ ಪಾವತಿಸುವ ಅಗತ್ಯ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್‌ನ ಮೂವರು ಸದಸ್ಯರ  ಪೀಠವು ಜನವರಿ 20ರಂದು ಮಹತ್ವದ ತೀರ್ಪು ನೀಡಿತ್ತು.ದೂರಗಾಮಿ ಪರಿಣಾಮ ಬೀರುವ ಈ ತೀರ್ಪಿನ ವಿರುದ್ಧ, ಕೇಂದ್ರ ಸರ್ಕಾರವು ಫೆಬ್ರುವರಿ 17ರಂದು ಪುನರ್ ಪರಿಶೀಲನಾ ಅರ್ಜಿ ದಾಖಲಿಸಿತ್ತು.ಈ ಪ್ರಕರಣದಲ್ಲಿ ಕಾನೂನನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ. ತೀರ್ಪಿನಲ್ಲಿ ಹಲವಾರು ದೋಷಗಳಿವೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ದೇಶಿ ಉದ್ದಿಮೆ ಸಂಸ್ಥೆಗಳ ಸ್ವಾಧೀನ ಅಥವಾ ವಿಲೀನ ಪ್ರಕ್ರಿಯೆಯಲ್ಲಿ ವಿದೇಶಿ ಸಂಸ್ಥೆಗಳು ಭಾಗಿಯಾಗಿರುವ ಪ್ರಕರಣಗಳಲ್ಲಿ ಬಂಡವಾಳ ಗಳಿಕೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

 

ಇದಕ್ಕೆ ಪೂರಕವಾಗಿ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಈ ತಿಂಗಳ 16ರಂದು ಮಂಡಿಸಲಾಗಿರುವ ಕೇಂದ್ರ ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ. ಈ ತಿದ್ದುಪಡಿಯನ್ನು ಪೂರ್ವಾನ್ವಯಗೊಳಿಸಲೂ ನಿರ್ಧರಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.