ಗುರುವಾರ , ಮೇ 13, 2021
34 °C

ವೊಡಾಫೋನ್ ತೆರಿಗೆ ವಿವಾದದಲ್ಲಿ ಒತ್ತಡ ಹೇರುವಂತಿಲ್ಲ : ಕೇಂದ್ರ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವೊಡಾಫೋನ್‌ಗೆ ಸಂಬಂಧಿಸಿದ 11,000 ಕೋಟಿ ರೂಪಾಯಿ ತೆರಿಗೆ ವಿವಾದ ಪ್ರಕರಣದಲ್ಲಿ ವಿಶ್ವ ವ್ಯಾಪಾರ ಮಂಡಳಿಗಳು ಒತ್ತಡ ಹೇರುವಂತಿಲ್ಲ ಎಂದು ಗುರುವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಕೇಮನ್ ದ್ವೀಪಗಳಲ್ಲಿ 11.2 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ವೊಡಾಫೋನ್ ಈ ಪ್ರಕರಣದಲ್ಲಿ ಭಾರತ- ನೆದರ್‌ಲೆಂಡ್ ನಡುವಿನ ಹೂಡಿಕೆ ಒಪ್ಪಂದದ ಮೊರೆ ಹೋಗಲು ಸಾಧ್ಯವಿಲ್ಲ ಎಂದೂ ಅದು ಹೇಳಿದೆ.`ಯಾವುದು ತೆರಿಗೆ, ಯಾವುದು ತೆರಿಗೆಯಲ್ಲ ಎಂಬ ವಿಷಯದಲ್ಲಿ ವ್ಯಾಪಾರ ಮಂಡಳಿಗಳಿಗೆ ಸರ್ಕಾರದ ಮೇಲೆ ಒತ್ತಡ ಹೇರುವ ಅಧಿಕಾರವಿಲ್ಲ. ಇಂಥದ್ದೇ ಪೂರ್ವಾನ್ವಯ ತಿದ್ದುಪಡಿಯನ್ನು ಕಳೆದ ತಿಂಗಳು ಬ್ರಿಟನ್‌ನಲ್ಲಿ ಮಾಡಿಕೊಳ್ಳಲಾಗಿದೆ. ವೊಡಾಫೋನ್ ಅಲ್ಲಿ ತೆರಿಗೆ ಕಟ್ಟುತ್ತದೆ. ಹಾಗಾದರೆ ಭಾರತದಲ್ಲಿ ಅದಕ್ಕಿರುವ ಸಮಸ್ಯೆ ಏನು~ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.ವೊಡಾಫೋನ್‌ನಂಥ ವಿದೇಶಿ ಕಂಪೆನಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಮುಂದಿಟ್ಟಿರುವುದು ವಿದೇಶಿ ಹೂಡಿಕೆಗೆ ಧಕ್ಕೆ ತರುತ್ತದೆ ಎಂದು ವಿವಿಧ ವಿದೇಶಿ ಕಂಪೆನಿಗಳು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿವೆ.ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಅಂತರ ರಾಷ್ಟ್ರೀಯ ಹಣಕಾಸು ನಿಧಿ- ವಿಶ್ವ ಬ್ಯಾಂಕ್ ಸಭೆಯಲ್ಲಿ ಹಾಗೂ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ವಿವಾದಿತ ವಿಷಯವನ್ನು ಪ್ರಸ್ತಾಪಿಸುವಂತೆ  ಅಮೆರಿಕದ ಖಜಾನೆ ಕಾರ್ಯದರ್ಶಿ ಟಿಮತಿ ಗಿತ್ನರ್ ಅವರನ್ನು ಆಗ್ರಹಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.