ಮಂಗಳವಾರ, ನವೆಂಬರ್ 19, 2019
28 °C

ವೋಟಿಗಾಗಿ ನಾಟಕ ಆಡ್ತಾರೆ ನೋಡಾ...

Published:
Updated:

ತುಮಕೂರು: `ಚುನಾವಣೆ ಬಂತ್ರಪ್ಪೋ.. ಅಲ್ಲಿ ಸೀರೆ ಕೊಟ್ರು... ಹೆಂಡ, ದುಡ್ಡುನೂ ಕೊಟ್ರು. ನಾಳೇನೂ ಕೊಡ್ತಾರಂತೆ'... ಹೀಗೆ ಸಾಗುವ ಜನರ ಮಾತಿನ ಲಹರಿ ಕಡೆ ಗಳಿಗೆಯಲ್ಲಿ ಬದಲಾಗಿ ಬಿಟ್ಟರೆ?-ಹೀಗೆ ಜನರ ಮನಸ್ಸು ಬದಲಿಸಲು ಇವರೆಲ್ಲರೂ ವೋಟಿಗಾಗಿ ನಾಟಕ ಮಾಡ್ಯಾರಾ. ಜಿಲ್ಲೆಯ 90 ಗ್ರಾಮ ಪಂಚಾಯಿತಿಗಳಲ್ಲಿ ನಾಟಕ ನಡೆದಿದೆ. ಆದರೆ ಸ್ವಲ್ಪ ನಿಲ್ಲಿ. ಈ ನಾಟಕ ಅಭ್ಯರ್ಥಿ ಅಥವಾ ಪಕ್ಷವೊಂದರ ನಾಟಕವಲ್ಲ. ಅಭ್ಯರ್ಥಿಗಳು, ಪಕ್ಷಗಳು ಮತ ಪಡೆಯಲು ನಾನಾ ರೀತಿ ನಾಟಕ ಆಡುವುದು ಹೊಸದೇನಲ್ಲ... ಆದರೆ ಊರೂರು ಸುತ್ತುತ್ತಿರುವ ಈ ನಾಲ್ಕು ತಂಡಗಳ ನಾಟಕ ಮಾತ್ರ ವಿಭಿನ್ನ.ಊರ ನಡುವೆ ತಮಟೆ ಬಡಿದು, ಡ್ಯಾನ್ಸ್ ಆಡುತ್ತಾ ಹನ್ನೆರಡು ಜನರ ತಂಡ ನಿಂತಿದ್ದೆಂದರೆ ಜನರಿಗೆಲ್ಲ ಅಚ್ಚರಿ. ಡ್ಯಾನ್ಸ್ ನೋಡುತ್ತಾ ಜನ ಗುಂಪುಗೂಡಿದ ತಕ್ಷಣವೇ ತಂಡದಿಂದ ಹಾಡು ಶುರು.`ಚುನಾವಣೆ... ಇದು ಚುನಾವಣೆ... ಮತದಾನ ಮಾಡುವ ಚುನಾವಣೆ'... ಹೀಗೆ ಹಾಡಿನ ಮೂಲಕವೇ ಬೀದಿ ನಾಟಕ ಆರಂಭಗೊಳ್ಳುತ್ತದೆ. ಮಧ್ಯದಲ್ಲಿ ಕಚಗುಳಿ ಇಡುವ ಚುನಾವಣಾ ಸಂಭಾಷಣೆ, ಜತೆಗೆ ಪ್ರಾಮಾಣಿಕ ಮತದಾನದ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ.`ಕೆಲ ಊರುಗಳಲ್ಲಿ ನಾಟಕ ಮುಗಿಯುವಾಗ ಸರಿರಾತ್ರಿಯಾಗಿರುತ್ತದೆ. ಗೋಣಿ ತುಮಕೂರಿನಲ್ಲಿ ಐದು ನೂರಕ್ಕೂ ಹೆಚ್ಚು ಜನರು ಸೇರಿದ್ದರು. ಬೀದಿ ನಾಟಕದೆಡೆಗೆ ಈ ಪಾಟಿ ಜನ ಆಕರ್ಷಿತರಾಗುತ್ತಾರೆ ಎಂಬುದು ಗೊತ್ತೇ ಇರಲಿಲ್ಲ. ನಾಟಕ ಸಾಗಿದ ಊರಲೆಲ್ಲ ಈ ಸಲ ಮತದಾನದ ಪ್ರಮಾಣ ಶೇ 70ಕ್ಕಿಂತ ಹೆಚ್ಚಲಿದೆ ನೋಡಿ' ಎಂದವರು ಸಾಲುಮರದ ತಿಮ್ಮಕ್ಕ ಕಲಾ ತಂಡದ ಮುಖ್ಯಸ್ಥ ಡಿ.ಸಿ.ಕುಮಾರ್.ಕುಮಾರ್ ತಂಡ ಮಾತ್ರವಲ್ಲ  ಇಂಥ ಇನ್ನೂ ಮೂರು ತಂಡ ಜಿಲ್ಲೆಯಲ್ಲಿ ಊರೂರು ತಿರುಗುತ್ತಿದೆ. ಜನರಲ್ಲಿ ಕಡ್ಡಾಯ ಮತದಾನದ ಅರಿವು ಮೂಡಿಸುವುದು ಮತ್ತು ಮತದಾನದ ಆಮಿಷಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸುವುದು ಈ ತಂಡಗಳ ಕಾಯಕ. ಏ. 5ರ ವರೆಗೂ ಈ ಬೀದಿ ನಾಟಕ ಯಾನ ಮುಂದುವರೆಯಲಿದೆ.ಜಿಲ್ಲೆಯ 321 ಗ್ರಾ.ಪಂ.ಗಳಲ್ಲಿ 90 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರಾಸರಿ ಮತದಾನ ಪ್ರಮಾಣ ಶೇ 45 ಮೀರಿಲ್ಲ ಎಂಬ ಅಂಶದಿಂದ ಕಂಗೆಟ್ಟ ಚುನಾವಣಾ ಆಯೋಗ ಜಿಲ್ಲೆಯಲ್ಲಿ ಮತದಾನ ಹೆಚ್ಚಳಕ್ಕೆ ಬೀದಿ ನಾಟಕದ ಮೊರೆ ಹೋದ ಪರಿಣಾಮ ಜಿಲ್ಲೆಯ ಊರೂರಿನ ಮೇಲೆ ಬೀದಿ ನಾಟಕ ಯಾನ ಸಾಗುತ್ತಿದೆ.ಮೂರು ಅವಧಿಯ ಮತದಾನದ ಅಂಕಿ ಅಂಶ ತಾಳೆ ಹಾಕಿದಾಗ ಜಿಲ್ಲೆಯ 90 ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ಶೇ 50 ಮೀರಿಲ್ಲ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹಳಷ್ಟು ಮತಗಟ್ಟೆಗಳಲ್ಲಿ ಶೇ 45ಕ್ಕಿಂತ ಕಡಿಮೆ ಮತದಾನವಾಗಿದೆ. ಮತದಾನದ ಅರಿವು ಅಷ್ಟೇ ಅಲ್ಲ, ಮತದಾರರಾಗಿ ನೋಂದಣೆ ಮಾಡಿಕೊಳ್ಳುವುದು, ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ಕುರಿತು ನಾಟಕ ಬೆಳಕು ಚೆಲ್ಲಲಿದೆ.ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮತದಾನದ ಅರಿವು ಮೂಡಿಸುವ ಸಲುವಾಗಿ ವಿಶೇಷ ನಾಟಕ ರಚಿಸಿದೆ. ಈ ನಾಟಕ ಆಧರಿಸಿ ತಂಡಗಳು ನಾಟಕ ಪ್ರದರ್ಶನ ಮಾಡುತ್ತಿವೆ. ಒಂದೊಂದು ಊರಿನಲ್ಲಿ ಒಂದು ಗಂಟೆ ಕಾಲ ನಾಟಕ ಪ್ರದರ್ಶನ ನಡೆಯುತ್ತಿದೆ. ಜಾತ್ರೆ, ಸಂತೆ, ಜನ ಜಂಗುಳಿ ಸೇರುವ ಪ್ರದೇಶ ಆಯ್ಕೆ ಮಾಡಿಕೊಂಡು ನಾಟಕ ಆಡಲಾಗುತ್ತಿದೆ.ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ನೆಹರೂ ಯುವ ಕೇಂದ್ರ, ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ, ಸರ್ವ ಶಿಕ್ಷ ಅಭಿಯಾನದಡಿ ಬೀದಿ ನಾಟಕಕ್ಕೆ ಸಂಪನ್ಮೂಲ ಒದಗಿಸಲಾಗಿದೆ. ಸುಮಾರು ರೂ. 8ರಿಂದ 10 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.`ಹಳ್ಳಿಗಳಲ್ಲಿ ಮತದಾನ ಪ್ರಮಾಣ ಹೆಚ್ಚಬೇಕು. ಆದರೆ ಗುರುತಿಸಲಾಗಿರುವ ಜಿಲ್ಲೆಯ 90 ಗ್ರಾ.ಪಂ.ಗಳಲ್ಲಿ ಸರಾಸರಿ ಮತದಾನದ ಪ್ರಮಾಣ ಶೇ 45ಕ್ಕಿಂತಲೂ ಕಡಿಮೆ. ಹೀಗಾಗಿ ಈ ಗ್ರಾಮಗಳಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು' ಎಂದು ಚುನಾವಣಾ ಆಯೋಗದ ಮತದಾರರ ಜಾಗೃತಿ ಹಾಗೂ ಪಾಲ್ಗೊಳ್ಳುವಿಕೆ (ಸೀಪ್) ಸಮಿತಿ ಅಧ್ಯಕ್ಷ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ಗೋವಿಂದರಾಜು `ಪ್ರಜಾವಾಣಿ'ಗೆ ತಿಳಿಸಿದರು.ಜಿಲ್ಲೆಯಲ್ಲಿ ಇದೇ ಮೊದಲ ಸಲ ಶೇ 45 ಹಾಗೂ ಅದಕ್ಕಿಂತ ಕಡಿಮೆ ಮತದಾನವಾಗಿರುವ ಗ್ರಾಮ ಪಂಚಾಯಿತಿ ಗುರುತಿಸಿದಂತಾಗಿದೆ. ಬೀದಿ ನಾಟಕ ಮತದಾನದ ಮೇಲೆ ಪ್ರಭಾವ ಬೀರಲಿದೆಯೇ ಎಂಬ ಕುತೂಹಲ ಮೂಡಿಸಿದೆ.

ಪ್ರತಿಕ್ರಿಯಿಸಿ (+)