ವ್ಯಂಗ್ಯಚಿತ್ರ ವಿವಾದ: ತಮಾಷೆಗೆ ಸೇರಿಸಿಲ್ಲ

7

ವ್ಯಂಗ್ಯಚಿತ್ರ ವಿವಾದ: ತಮಾಷೆಗೆ ಸೇರಿಸಿಲ್ಲ

Published:
Updated:

ಭಾರತದ ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ ಎಂದರೆ ಕೂಡಲೇ ನೆನಪಾಗುವ ಹೆಸರು ಪ್ರೊ.ಯೋಗೇಂದ್ರ ಯಾದವ್ ಅವರದ್ದು. ಅವರೊಬ್ಬ ಚುನಾವಣಾ ಶಾಸ್ತ್ರಜ್ಞ ಮಾತ್ರ ಅಲ್ಲ,  ವಿದ್ವತ್ ಲೋಕದಲ್ಲಿಯೂ ಅವರ ಹೆಸರು ದೊಡ್ಡದು.ರಾಜ್ಯಶಾಸ್ತ್ರವೆಂಬುದು ಅವರ ಮಟ್ಟಿಗೆ ಉಸಿರಾಟದಷ್ಟೇ ಸಹಜವಾಗಿರುವ ಒಂದು ಅಧ್ಯಯನ ವಿಧಾನ. ಆದ್ದರಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಅವರನ್ನು ರಾಜ್ಯಶಾಸ್ತ್ರ ಸಲಹೆಗಾರನನ್ನಾಗಿ ನೇಮಿಸಿಕೊಂಡದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.ಆದರೆ ಅಂಬೇಡ್ಕರ್ ವ್ಯಂಗ್ಯಚಿತ್ರ ವಿವಾದದಿಂದಾಗಿ ಯೋಗೇಂದ್ರ ಮತ್ತು ಸುಹಾಸ್ ಪಲ್ಶೀಕರ್  ರಾಜ್ಯಶಾಸ್ತ್ರ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡಿದರು.  ಈ ಹಿನ್ನೆಲೆಯಲ್ಲಿ `ದ ಹೂಟ್~ (thehoot.org)  ಅಂತರ್ಜಾಲ ಪತ್ರಿಕೆಗಾಗಿ ರಾಧಿಕಾ ಸಚ್‌ದೇವ್ ಅವರು ನಡೆಸಿದ  ಸಂದರ್ಶನದಲ್ಲಿ ಯೋಗೇಂದ್ರ ಯಾದವ್ ಈ ವಿವಾದದ ಹಿಂದಿನ ನಿಗೂಢತೆಯನ್ನು ಅನಾವರಣಗೊಳಿಸಿದ್ದಾರೆ. ಅದರ ಆಯ್ದಭಾಗಗಳನ್ನು ಇಲ್ಲಿ  ನೀಡಲಾಗಿದೆ.

 

ವಿವಾದಕ್ಕೀಡಾಗಿರುವ ನೆಹರು-ಅಂಬೇಡ್ಕರ್ ವ್ಯಂಗ್ಯಚಿತ್ರ

ಪಠ್ಯಪುಸ್ತಕ ರಚನೆಯ ಸಮಾಲೋಚನಾ ಪ್ರಕ್ರಿಯೆಯಲ್ಲಿ ಯಾವಾಗಲಾದರೂ ಸಂಸದರಿಂದ ಈಗ ಬಂದಂಥ ಪ್ರತಿಕ್ರಿಯೆಯೊಂದನ್ನು ನಿರೀಕ್ಷಿಸಿದ್ದಿರಾ?

ಇಲ್ಲ... ಈ ಬಗೆಯ ಈ ತೀವ್ರತೆಯ ಮತ್ತು ಈಗ ವಿವಾದವಾಗಿರುವ ವಿಚಾರವನ್ನಂತೂ ನಾವು ನಿರೀಕ್ಷಿಸಿರಲಿಲ್ಲ. ನಮ್ಮ ದುಃಸ್ವಪ್ನಗಳಲ್ಲಿಯೂ ನಾವು ಅಂಬೇಡ್ಕರ್‌ಗೆ ಸಂಬಂಧಿಸಿದ ಭಾವನೆಗಳನ್ನು ಪ್ರಚೋದಿಸಿದೆವು ಆರೋಪಕ್ಕೆ ಗುರಿಯಾಗುತ್ತೇವೆಂದು ಊಹಿಸಿರಲಿಲ್ಲ. ಸುಹಾಸ್ ಭಾಯಿ ಮತ್ತು ನಾನು ತಮಾಷೆಯಾಗಿ ಹಲವು ವಿಚಾರಗಳ ಬಗ್ಗೆ ಇವು ವಿವಾದವಾಗಬಹುದು ಎಂದು ಮಾತನಾಡಿಕೊಂಡಿದ್ದೆವು. ವಿವಾದ ಸೃಷ್ಟಿಸಬಹುದಾದ ಹತ್ತಾರು ವಿಷಯಗಳನ್ನು ಆರಿಸಿಕೊಡಿ ಎಂದು ನನ್ನಲ್ಲಿ ಕೇಳಿದರೆ ಈಗಲೂ ನಾನು ಈಗ ವಿವಾದವಾಗಿರುವ ವಿಷಯವನ್ನು ಆರಿಸುವ ಸಾಧ್ಯತೆ ಇಲ್ಲ.ಪಠ್ಯ ಪುಸ್ತಕದ ಕರಡು ಸಿದ್ಧವಾದ ಮೇಲೆ ಅದನ್ನು ಸಚಿವಾಲಯದ ರಾಷ್ಟ್ರೀಯ ಮೇಲ್ವಿಚಾರಣಾ ಸಮಿತಿಯ (Nation Monitoring Committee) ಎದುರು ಮಂಡಿಸಿದೆವು. ಇದರಲ್ಲಿ ಪ್ರೊ. ಮೃಣಾಲ್ ಮಿರಿ, ಜಿ.ಪಿ. ದೇಶಪಾಂಡೆ, ಜೋಯಾ ಹಸನ್ ಮತ್ತು ಗೋಪಾಲ್ ಗುರು ಅವರಂಥ ಹಲವು ವಿದ್ವಾಂಸರಿದ್ದರು.

 

ಅವರು ಹಲವು ಸಲಹೆಗಳನ್ನು ಕೊಟ್ಟರು ಹಾಗೆಯೇ ಹಲವಾರು ಪರಿಷ್ಕರಣೆಗಳನ್ನು ಸೂಚಿಸಿದರು. ಒಂದು ಸಂದರ್ಭದಲ್ಲಂತೂ ಬಹಮುಖ್ಯವಾದ ಹಾಗೆಯೇ ವಿವಾದ ಸೃಷ್ಟಿಸಬಹುದಾದ ಅಧ್ಯಾಯವೊಂದನ್ನು ಸಭೆಯಲ್ಲಿಯೇ ಹಲವು ಬಾರಿ ಓದಿ ಪದ ಪದಗಳನ್ನೂ ಗಮನಿಸಿದೆವು.ಪುಸ್ತಕದಲ್ಲಿ ವ್ಯಂಗ್ಯ ಚಿತ್ರಗಳನ್ನು ಸೇರಿಸುವುದು ಯಾರ ಕಲ್ಪನೆಯಾಗಿತ್ತು?

-ಇದು ರಾಷ್ಟ್ರೀಯ ಪಠ್ಯ ಕ್ರಮ ಅನುಸರಿಸುತ್ತಿರುವ ವಿಧಾನದ ಭಾಗ. ವ್ಯಂಗ್ಯ ಚಿತ್ರಗಳು ಮತ್ತು ಇತರ ದೃಶ್ಯಾತ್ಮಕ ಅಂಶಗಳು ಹೊಸ ಮಾದರಿ ಪಠ್ಯ ಬರೆವಣಿಗೆಯ ಅವಿಭಾಜ್ಯ ಅಂಗ. ಇವುಗಳನ್ನು ಕೇವಲ ತಮಾಷೆ ಎಂಬ ಕಾರಣಕ್ಕಾಗಿ ಸೇರಿಸಿಲ್ಲ.

 

ರಾಜಕೀಯ ವ್ಯಂಗ್ಯಚಿತ್ರಗಳು ಇತಿಹಾಸದೊಂದಿಗೆ ಸಂಬಂಧ ಹೊಂದಿರುವಂತಹದ್ದು. ಪಠ್ಯದಲ್ಲಿ ಹೇಳಲಾಗದ ಅನೇಕ ವಿಚಾರಗಳನ್ನು ಒಂದು ವ್ಯಂಗ್ಯಚಿತ್ರದ ಮೂಲಕ ಹೇಳಲೂ ಸಾಧ್ಯವಿದೆ. ಸಾಲದ್ದಕ್ಕೆ ಭಾರತಕ್ಕೊಂದು ಉಜ್ವಲ ರಾಜಕೀಯ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್‌ಗಳ ಪರಂಪರೆಯೂ ಇದೆ.  ಬಿ.ಆರ್. ಅಂಬೇಡ್ಕರ್, ಮತ್ತು ಜವಹರಲಾಲ್ ನೆಹರು ಬದುಕಿದ್ದಾಗಲೇ  ಕೇಶವ ಶಂಕರ ಪಿಳ್ಳೈ ರಚಿಸಿದ್ದರು. ಆಗ ಯಾರೂ ಅವಮಾನಕರವೆಂದು ಭಾವಿಸದ ಈ ಚಿತ್ರ ಈಗ ಯಾಕೆ ಗದ್ದಲ ಸೃಷ್ಟಿಸುತ್ತಿದೆ?

 

ಪ್ರತಿಭಟನೆಗೆ ಇಳಿದಿರುವ ರಿಪಬ್ಲಿಕನ್ ಪ್ಯಾಂಥರ್ ಆಫ್ ಇಂಡಿಯಾದ ಸ್ಥಾಪಕ ಅಧ್ಯಕ್ಷ ಸಚಿನ್ ಖಾರಾಟ್ ತಮ್ಮ ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಇಂಥದ್ದೊಂದು ವ್ಯಂಗ್ಯಚಿತ್ರವಿರುವುದು ತಮಗೆ ತಿಳಿದದ್ದೇ ಸಂಸತ್ತಿನಲ್ಲಿ ಗದ್ದಲವಾದ ಮೇಲೆ ಎಂದಿದ್ದಾರೆ.ಇದು ಏನನ್ನು ಸೂಚಿಸುತ್ತಿದೆ?  ಈಗ ಪ್ರತಿಭಟನೆಯಲ್ಲಿ ನಿರತರಾಗಿರುವವರು ನಿಜಕ್ಕೂ ಸಮುದಾಯದ ಪ್ರತಿನಿಧಿಗಳೇ?  ಸಂವಿಧಾನ ರಚನೆಯ ಹಿಂದಿದ್ದ ಬಹುಮುಖ್ಯ ಶಕ್ತಿ ಅಂಬೇಡ್ಕರ್ ಎಂಬುದನ್ನು ಸೂಚಿಸುತ್ತಿರುವ ಈ ವ್ಯಂಗ್ಯಚಿತ್ರವನ್ನು ಸಂಸದರೇ `ಅಂಬೇಡ್ಕರ್ ಅವರ ಮೇಲೆ ಕೆಸರೆರಚುತ್ತಿದೆ~ ಎಂದು ಭಾವಿಸಿ ಪ್ರತಿಕ್ರಿಯಿಸಿದಾಗ ನಾವು ನಿಜಕ್ಕೂ ಕಂಗಾಲಾದೆವು. ಇಲ್ಲಿ ನಾಯಕರು ಸಮುದಾಯದ ಸಿಟ್ಟನ್ನು ಪ್ರತಿನಿಧಿಸುವ ಬದಲಿಗೆ ನಾಯಕರು ಕೊಂಡೊಯ್ಯುತ್ತಿರುವ ಸಂದೇಶವನ್ನು ಸಮುದಾಯ ಪ್ರತಿಬಿಂಬಿಸುವ ಅಪಾಯ ನನಗೆ ಕಾಣಿಸುತ್ತಿದೆ.ಕಪಿಲ್ ಸಿಬಲ್ ಅವರ ನಿರ್ಧಾರ ಸರ್ಕಾರಕ್ಕೆ ತಾನೇ ನೇಮಿಸಿರುವ ಸಲಹಾ ಸಮಿತಿಯ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಸೂಚಿಸುತ್ತಿಲ್ಲವೇ? ಹಾಗಿರುವಾಗ ಈ ಸಮಿತಿಯನ್ನು `ಸ್ವತಂತ್ರ ಸಮಿತಿ~ ಎಂದೇಕೆ ಕರೆಯಬೇಕು?

-ಇದು ಸರ್ಕಾರ ಚಿಂತಿಸಬೇಕಾದ ವಿಚಾರ. ಪಠ್ಯ ಪುಸ್ತಕವೊಂದನ್ನು ರಚಿಸುವುದಕ್ಕೆ ಒಂದು ನಿಯಮಬದ್ಧ ವಿಧಾನವಿದೆಯೆಂದಾದರೆ ಅದನ್ನು ಹಿಂದೆಗೆತುಕೊಳ್ಳುವುದಕ್ಕೆ, ಪರಿಷ್ಕರಿಸುವುದಕ್ಕೆ, ಅದರಲ್ಲಿರುವ ಅಂಶಗಳನ್ನು ತೆಗೆದು ಹಾಕುವುದಕ್ಕೂ ಒಂದು ನಿಯಮಬದ್ಧ ವಿಧಾನವಿರಬೇಕು. ಬಹುಶಃ ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಬೇಕಿದೆ.ಈ ಪ್ರಕರಣ ನಾವೊಂದು ಸಮಾಜವಾಗಿ ಹೆಚ್ಚು ಅಸಹನೆಯುಳ್ಳವರಾಗಿ ಬದಲಾಗಿದ್ದೇವೆಂಬುದನ್ನು ಸೂಚಿಸುತ್ತಿದೆಯೇ?

- `ನಮ್ಮ ಅಸಹನೆಯ ಪ್ರಮಾಣ ಹೆಚ್ಚಿದೆ...~ ಎಂದು ನನಗನಿಸುವುದಿಲ್ಲ. ಏಕೆಂದರೆ ನಾವು ಯಾವತ್ತಾದರೂ ಒಂದು ಸಮಾಜವಾಗಿ ಸಹನಶೀಲರಾಗಿದ್ದೇವೆಯೇ ಎಂಬ ಪ್ರಶ್ನೆ ಇಲ್ಲಿದೆ. ಅದೂ ಸಾಂಸ್ಥಿಕ ಸ್ವಾಯತ್ತೆಯ ವಿಷಯ ಬಂದಾಗ ಈ ಪ್ರಶ್ನೆ ಹೆಚ್ಚು ಕಾಡುತ್ತದೆ. ಅದು ನಮ್ಮ ವ್ಯವಸ್ಥೆಯೊಳಗಿನ ದೊಡ್ಡ ಕೊರತೆ. ನಾವು ಯಾವ ಸಾಂಸ್ಥಿಕ ವ್ಯವಸ್ಥೆಗೂ ಸುಲಭದಲ್ಲಿ ಸ್ವಾಯತ್ತತೆಯನ್ನು ನೀಡುವುದಿಲ್ಲ. ಅಷ್ಟೇಕೆ ನಮ್ಮ ನಂಬಿಕೆಗಳಿಗೆ ಹೊರತಾದ ನಂಬಿಕೆಗಳಿಗೆ ಸಂಬಂಧಿಸಿದಂತೆ ನಾವೆಷ್ಟು ಸಹನಶೀಲರಾಗಿದ್ದೇವೆ?ತಪ್ಪು ಮಾಹಿತಿಯ ಹರಿವು ಅಥವಾ ಎಲ್ಲಾ ಬಗೆಯ ಮಾಹಿತಿಯ ಹರಿವನ್ನು ತಡೆಯುವುದು ಈ ಎರಡರಲ್ಲಿ ಯಾವುದು ಹೆಚ್ಚು ಅಪಾಯಕಾರಿ? ಹನ್ನೊಂದನೇ ತರಗತಿಯ ವಿದ್ಯಾರ್ಥಿಗಳನ್ನು ಸರಿ-ತಪ್ಪಿನ ಕುರಿತಂತೆ ಅವರೇ ನಿರ್ಧಾರ ಕೈಗೊಳ್ಳುವುದನ್ನು ತಡೆಯುವುದು ತಪ್ಪೇ ಸರಿಯೇ? ನಮ್ಮ ಮಕ್ಕಳಿಗೆ ಕೇವಲ ಕಣ್ಗಾಪು ಕಟ್ಟಿದ `ಶುದ್ಧೀಕರಣ~ಕ್ಕೆ ಒಳಪಟ್ಟ ಇತಿಹಾಸವನ್ನಷ್ಟೇ ನೀಡಬೇಕೇ?

-ಇದಕ್ಕೆ ಉತ್ತರ ನಿಮಗೇ ಗೊತ್ತಿದೆ. ಮಗು ಏನನ್ನಾದರೂ ಓದಿದ ಮೇಲೆ ಅದರ ಮನಸ್ಸಿನಲ್ಲಿ ಗೊಂದಲಕ್ಕೊಳಗಾಯಿತೆಂದರೆ ನೀವು ಮಗುವಿನ ಮನಸ್ಸಿನಲ್ಲಿ ಪ್ರಶ್ನೆಗಳ ಬೀಜಗಳನ್ನು ಬಿತ್ತುವಲ್ಲಿ ಯಶಸ್ವಿಯಾದಿರಿ ಎಂದರ್ಥ. ಶಿಕ್ಷಣದ ಗುರಿಯೇ ವೈವಿಧ್ಯಮಯ ಆಲೋಚನೆಗಳು, ಪರಿಕಲ್ಪನೆಗಳು ಮತ್ತು ನಂಬಿಕೆಗಳ ಕುರಿತು ಚಿಂತಿಸುವಂತೆ ಮಾಡುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry