ವ್ಯಂಗ್ಯಚಿತ್ರ ವಿವಾದ: ದಯವಿಟ್ಟು ನಮ್ಮನ್ನು ಕ್ಷಮಿಸಿ ಶಂಕರ್

7

ವ್ಯಂಗ್ಯಚಿತ್ರ ವಿವಾದ: ದಯವಿಟ್ಟು ನಮ್ಮನ್ನು ಕ್ಷಮಿಸಿ ಶಂಕರ್

Published:
Updated:
ವ್ಯಂಗ್ಯಚಿತ್ರ ವಿವಾದ: ದಯವಿಟ್ಟು ನಮ್ಮನ್ನು ಕ್ಷಮಿಸಿ ಶಂಕರ್

`ಪ್ರಿಯ ಶಂಕರ್, ತಾವು ರಚಿಸಿದ ಜಿನ್ನಾ ಕುರಿತ ಕಾರ್ಟೂನು ಕೀಳು ಅಭಿರುಚಿಯದ್ದು ಮತ್ತು ವಸ್ತುಸ್ಥಿತಿಯಿಂದ ಹೊರತಾಗಿದೆ. ನಿಮ್ಮ ವ್ಯಂಗ್ಯಚಿತ್ರ ಪ್ರಥಮ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರಬಹುದು. ಒಂದು ಕಲಾಕೃತಿಯೂ ಆಗಿರಬಹುದು. ಆದರೆ, ಅದು ಸತ್ಯನಿಷ್ಠವಾಗಿ ಇರದಿದ್ದರೆ ಮತ್ತು ಮನಸ್ಸಿಗೆ ನೋವುಂಟುಮಾಡದಂತೆ ತಮಾಷೆ ಮಾಡದಿದ್ದರೆ ನೀವು ನಿಮ್ಮ ವೃತ್ತಿಯಲ್ಲಿ ಮೇಲೆ ಏರಲಾರಿರಿ. ನೀವು ಸನ್ನಿವೇಶ, ಸಂದರ್ಭಗಳನ್ನು ಚೆನ್ನಾಗಿ ಅಧ್ಯಯನ ಮಾಡಬೇಕು.  

ನಿಮಗೆ ಅವುಗಳ ಸರಿಯಾದ ತಿಳಿವಳಿಕೆ ಇದೆ ಎಂದು ನಾನು ಬಲ್ಲೆ. ನಿಮ್ಮ ವ್ಯಂಗ್ಯ ಘಾಸಿಗೊಳಿಸುವಂತಿರಬಾರದು. ನೀವು ನನ್ನ ಈ ಸಂದೇಶವನ್ನು ಅನ್ಯಥಾ ಭಾವಿಸುವುದಿಲ್ಲ ಎಂದು ಬಲ್ಲೆ.

ಇತೀ ನಿಮ್ಮ 

ಬಾಪು- ಇದು ಮಹಾತ್ಮ ಗಾಂಧೀಜಿಯವರು ಭಾರತದ `ರಾಜಕೀಯ ವ್ಯಂಗ್ಯಚಿತ್ರಕಲೆಯ ಪಿತಾಮಹ~ ಎಂದು ಪರಿಗಣಿಸಲ್ಪಟ್ಟ ಶಂಕರ್ ಪಿಳ್ಳೈ ಅವರಿಗೆ ಬರೆದ ಚುಟುಕು ಸಂದೇಶ.ವಿವಾದಗಳು ಶಂಕರ್ ಅವರಿಗೆ ಅಪರೂಪವೇನೂ ಆಗಿರಲಿಲ್ಲ. ಕಾರ್ಟೂನಿನಲ್ಲಿ ಮೊನಚು ಇದ್ದರೆ ವಿವಾದಗಳೂ ಇದ್ದೇ ಇರುತ್ತವೆ. ಸ್ವಭಾವತಃ ರಾಜಕೀಯ ವ್ಯಂಗ್ಯಚಿತ್ರಗಳು ಅಲ್ಪಾಯುಷಿಗಳು. ಪ್ರಕಟವಾಗುವುದು ಒಂದೇ ಒಂದು ದಿನ ತಡವಾಗಿಬಿಟ್ಟರೂ `ಸ್ಟೇಲ್ (ಹಳಸಲು)~ ಆಗಿಬಿಡುತ್ತವೆ. ಅಂಥದ್ದರಲ್ಲಿ ರಚಿಸಿ 63 ವರ್ಷಗಳ ಬಳಿಕ ದೇಶದ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗುತ್ತದೆ ಎಂದರೆ ಅದು ಪರಿಸ್ಥಿತಿಯ ವ್ಯಂಗ್ಯವೇ ಸರಿ!ಇಷ್ಟಕ್ಕೂ ವ್ಯಂಗ್ಯಚಿತ್ರಕಲೆ ಅರ್ಥಾತ್ ಕಾರ್ಟೂನ್ ಕಲೆ ಭೂಮಿ ಮೇಲೆ ಏಕೆ ಬಂತು? ಚಿತ್ರಕಲೆಯ ಜೊತೆಗೆ ಪ್ರತಿಭಟನೆ, ಆಕ್ರೋಶ ಸೇರಿಕೊಂಡಾಗ ವ್ಯಂಗ್ಯಚಿತ್ರಕಲೆ ಹುಟ್ಟಿಕೊಂಡಿರಬೇಕು.

 

ಇತಿಹಾಸದ ಪುಟಗಳಲ್ಲಿ ಹುಡುಕಿದರೆ 16ನೇ ಶತಮಾನದಲ್ಲಿ ಜರ್ಮನಿಯ ಮಾರ್ಟಿನ್ ಲೂಥರ್ ಎಂಬ ಧಾರ್ಮಿಕ ಬಂಡಾಯಗಾರ ಪಟ್ಟಭದ್ರ ಧಾರ್ಮಿಕ ಶಕ್ತಿಗಳ ವಿರುದ್ಧದ ತನ್ನ ಹೋರಾಟಕ್ಕೆ ವ್ಯಂಗ್ಯಚಿತ್ರಕಲೆಯನ್ನು ಬಳಸಿಕೊಂಡಿದ್ದು ತಿಳಿದುಬರುತ್ತದೆ.

 

ಬಂಡಾಯ ಅಥವಾ ಸ್ಥಾಪಿತ ಹಿತಾಸಕ್ತಿಗಳನ್ನು ಪ್ರಶ್ನಿಸುವ ಮತ್ತು ಅದರ ವಿರುದ್ಧ ಪ್ರತಿಭಟಿಸುವ ಗುಣ ರಾಜಕೀಯ ವ್ಯಂಗ್ಯಚಿತ್ರಗಳ ಮೂಲಸತ್ವ.ಆಧುನಿಕ ಯುಗದಲ್ಲಿ ಒಬ್ಬ ರಾಜಕೀಯ ವ್ಯಂಗ್ಯಚಿತ್ರಕಾರ ತನ್ನ ಕೃತಿಗಳ ಮೂಲಕ ಸಾಮಾನ್ಯ ಜನರಿಗೆ ಒಂದು ಕ್ಲಿಷ್ಟ ರಾಜಕೀಯ ಸನ್ನಿವೇಶವನ್ನು ಸರಳವಾಗಿ ಅರ್ಥಮಾಡಿಸುವ ಜೊತೆಜೊತೆಗೇ ಆಳುವವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನೂ ಮಾಡುತ್ತಾನೆ.

 

ಒಬ್ಬ ಯಶಸ್ವಿ ವ್ಯಂಗ್ಯಚಿತ್ರಕಾರ ಎನ್ನಿಸಿಕೊಳ್ಳಬೇಕಾದರೆ ಚಿತ್ರರಚನಾ ಸಾಮರ್ಥ್ಯ, ಹಾಸ್ಯಪ್ರಜ್ಞೆ ಮತ್ತು ವಿಶ್ಲೇಷಣಾ ಶಕ್ತಿ ಇರಲೇಬೇಕು. ದುರದೃಷ್ಟವಶಾತ್ ಒಬ್ಬನೇ ವ್ಯಕ್ತಿಯಲ್ಲಿ ಈ ಮೂರು ಅಂಶಗಳು ಇರುವುದು ಅತಿವಿರಳವಾದುದರಿಂದ ಸಹಜವಾಗಿಯೇ ರಾಜಕೀಯ ವ್ಯಂಗ್ಯಚಿತ್ರಕಾರರ ಸಂಖ್ಯೆ ಅತ್ಯಂತ ಕಡಿಮೆ ಇದೆ.ಭಾರತಕ್ಕೆ ಆಧುನಿಕ ವ್ಯಂಗ್ಯಚಿತ್ರಕಲೆಯನ್ನು ದೊಡ್ಡ ರೀತಿಯಲ್ಲಿ ಪರಿಚಯಿಸಿದ್ದು ಬ್ರಿಟಿಷರು. ತಿಳಿಹಾಸ್ಯ, ಸ್ವವಿಮರ್ಶೆ ಬ್ರಿಟಿಷ್ ಸಭ್ಯತೆಯ ಮುಖ್ಯ ಲಕ್ಷಣಗಳು. ಹಾಗಾಗಿ ಸಹಜವಾಗಿಯೇ ವ್ಯಂಗ್ಯಚಿತ್ರಕಲೆ ಅವರಲ್ಲಿ ಗಟ್ಟಿಯಾಗಿ ನೆಲೆಯೂರಿದೆ.

 

ಭಾರತ ಕಂಡ ಅತ್ಯಂತ ಪ್ರತಿಭಾವಂತ ರಾಜಕೀಯ ಕಾರ್ಟೂನಿಷ್ಟರಾದ ಶಂಕರ್ ಮತ್ತು ಆರ್.ಕೆ.ಲಕ್ಷ್ಮಣ್ ತಮ್ಮ ವೃತ್ತಿ ಜೀವನವನ್ನು ಬ್ರಿಟಿಷರ ಕಾಲದಲ್ಲಿ ಆರಂಭಿಸಿದರು ಎನ್ನುವುದು ಕೇವಲ ಕಾಕತಾಳೀಯ ಇರಲಿಕ್ಕಿಲ್ಲ.

 

ಇನ್ನು ಉಳಿದ ಕಾರ್ಟೂನ್ ಲೋಕದ ದಿಗ್ಗಜರಾದ ಅಬು, ಕುಟ್ಟಿ, ಅಹಮದ್, ವಿಜಯನ್, ರಂಗಾ, ಕೇವಿ, ಸಾಮ್ಯುವೆಲ್ ಮುಂತಾದವರೆಲ್ಲ ಶಂಕರ್ ಮಾರ್ಗದರ್ಶನದಲ್ಲಿ `ಶಂಕರ್ ವೀಕ್ಲಿ~ಯಲ್ಲಿ ಪಳಗಿದವರು. ಈಚಿನ ದಿನಗಳಲ್ಲಿ ಭಾರತದಲ್ಲಿ ಈ ಕಲೆ ಸೊರಗುತ್ತಿದೆ.

 

ಹೊಸ ತಲೆಮಾರಿನ ರಾಜಕೀಯ ವ್ಯಂಗ್ಯಚಿತ್ರಕಾರರ ಹೆಸರುಗಳನ್ನು ನೆನಪಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಸುಲಭದಲ್ಲಿ ಹೊಳೆಯುವುದಿಲ್ಲ. ಇದಕ್ಕೆ ಪ್ರತಿಭೆಯ ಕೊರತೆಯೊಂದೇ ಕಾರಣವಿರಲಿಕ್ಕಿಲ್ಲ. ರಾಜಕೀಯ ವ್ಯಂಗ್ಯಚಿತ್ರಕಲೆಯು ಸೂಕ್ಷ್ಮವಾದ ಕಲೆಯಾಗಿದ್ದು ಸಮಾಜ ಮತ್ತು ಮಾಧ್ಯಮಗಳಿಂದ ನಿರಂತರವಾದ ಪ್ರೋತ್ಸಾಹ ಮತ್ತು ಪೋಷಣೆ ಬೇಕಾಗುತ್ತದೆ.ಇನ್ನು ಈ ವಿವಾದಿತ ಕಾರ್ಟೂನನ್ನು ನೋಡೋಣ. ಶಂಕರ್ ಈ ಕಾರ್ಟೂನ್ ರಚಿಸಿದ್ದು 1949ರಲ್ಲಿ. ಡಾ.ಅಂಬೇಡ್ಕರ್ ಅಧ್ಯಕ್ಷರಾಗಿದ್ದ ಸಂವಿಧಾನ ರಚನಾ ಸಮಿತಿಯು ಬಹಳ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆಯೆಂದೂ, ಅದರಿಂದ ಆಗಿನ ಪ್ರಧಾನಿ ನೆಹರೂ ಅವರಿಗೆ ಅಸಮಾಧಾನ ಉಂಟಾಗಿದೆಯೆಂದೂ ಕಾರ್ಟೂನಿನಲ್ಲಿ ತೋರಿಸಬೇಕಿತ್ತು.

 

ಶಂಕರ್ ರಚಿಸಿದ ವ್ಯಂಗ್ಯಚಿತ್ರದಲ್ಲಿ `ಸಂವಿಧಾನ~ ಎಂದು ಬರೆಯಲ್ಪಟ್ಟ ಬಸವನಹುಳದ ಮೇಲೆ ಅಂಬೇಡ್ಕರ್ ಕೂತಿದ್ದಾರೆ. ಬಸವನ ಹುಳಕ್ಕೆ ಮೂಗುದಾರವನ್ನು ತೊಡಿಸಲಾಗಿದ್ದು, ಅದನ್ನು ಅಂಬೇಡ್ಕರ್ ಹಿಡಿದುಕೊಂಡಿದ್ದಾರೆ. ಇನ್ನೊಂದು ಕೈಯಲ್ಲಿ ಚಾಟಿಯೂ ಇದೆ. ಹಿಂದೆ ಅಸಮಾಧಾನ ಮುಖಭಾವದ ನೆಹರೂ ನಿಂತಿದ್ದಾರೆ. ಅವರ ಕೈಯಲ್ಲೂ ಚಾಟಿ ಇದೆ.ಅದನ್ನು ಬಸವನ ಹುಳಕ್ಕೆ ಹೊಡೆಯುವಂತೆ ಹಿಡಿದೆತ್ತಿದ್ದಾರೆ. ಹಿನ್ನೆಲೆಯಲ್ಲಿ ಇದನ್ನು ಸುಮ್ಮನೆ ನೋಡುತ್ತಿರುವ ಜನಸಮೂಹವಿದೆ. ಇದೊಂದು ಸಾಂದರ್ಭಿಕ ಚಿತ್ರ (ಇಲಸ್ಟ್ರೇಷನ್) ಮಾದರಿಯ ಸಾಧಾರಣ ಮಟ್ಟದ ಒಂದು ರಾಜಕೀಯ ಕಾರ್ಟೂನು.1949ರ ಕಾಲಮಾನದಲ್ಲಿ ಇಂಗ್ಲಿಷ್ ಪತ್ರಿಕಾ ಓದುಗರಿಗಾಗಿ ರಚಿಸಿದ ಈ ಕಾರ್ಟೂನು ಅಂದಿನ ಮುಖ್ಯ ವಿಷಯವೊಂದರ ಬಗ್ಗೆ ಸರಳವಾಗಿ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿರಬಹುದು.ಆದರೆ ವಿವಾದ ಹುಟ್ಟಿಕೊಂಡಿರುವುದಕ್ಕೆ ನಮ್ಮ ಕೆಲವು ಶಿಕ್ಷಣ ತಜ್ಞರು ಈ ಕಾರ್ಟೂನ್ ಜೊತೆಯಲ್ಲಿ ಇನ್ನೂ ಕೆಲವು ಕಾರ್ಟೂನುಗಳನ್ನು ಸೇರಿಸಿ ಹನ್ನೊಂದನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕವೊಂದನ್ನು ರಚನೆ ಮಾಡಿರುವುದು ಕಾರಣ. ಬೇರೆ ಬೇರೆ ವ್ಯಂಗ್ಯಚಿತ್ರಕಾರರು ಬೇರೆ ಬೇರೆ ಸಂದರ್ಭಗಳಲ್ಲಿ ರಚಿಸಿದ ವ್ಯಂಗ್ಯಚಿತ್ರಗಳು ಪಠ್ಯಪುಸ್ತಕದಲ್ಲಿವೆ. ವ್ಯಂಗ್ಯಚಿತ್ರಗಳ ಪಕ್ಕದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿವೆ.ವಿದ್ಯಾರ್ಥಿಗಳಲ್ಲಿ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವುದು ಮತ್ತು ಅವರಲ್ಲಿ ವಿಶ್ಲೇಷಣಾ ಸಾಮರ್ಥ್ಯ ಬೆಳೆಸುವುದು ಈ ಪ್ರಯತ್ನದ ಉದ್ದೇಶ ಎಂದು ಪುಸ್ತಕ ರೂಪಿಸಿದ ಶಿಕ್ಷಣ ತಜ್ಞರು ಹೇಳುತ್ತಾರೆ. ಆದರೆ, ಈ ಎರಡೂ ಉದ್ದೇಶಗಳು ಸಫಲಗೊಳ್ಳುವ ಸಾಧ್ಯತೆ ಕಡಿಮೆ ಎಂದೇ ಹೇಳಬೇಕು.

 

ಏಕೆಂದರೆ ಮೊದಲೇ ರಾಜಕೀಯ ನಾಯಕರೆಂದರೆ ಕೋಡಂಗಿಗಳು ಎಂಬ ಮನೋಭಾವ ಹೆಚ್ಚಿನ ಜನರಲ್ಲಿ ಮನೆಮಾಡಿದೆ. ಅದು ಮಕ್ಕಳಲ್ಲೂ ಮುಂದುವರಿದಿದೆ. ವಸ್ತುಸ್ಥಿತಿ ಹೀಗಿರುವಾಗ ರಾಜಕಾರಣಿಗಳ ವ್ಯಂಗ್ಯಚಿತ್ರಗಳ `ಪಾಠ ಪುಸ್ತಕ~ವನ್ನು ಮಕ್ಕಳ ಕೈಗಿತ್ತರೆ ಪರಿಣಾಮ ಹೇಗಿರಬಹುದು ಎಂಬುದನ್ನು ನಾವು ಊಹಿಸಿಕೊಳ್ಳಬಹುದು.ಪತ್ರಿಕಾ ಬರಹಗಳು ಹೇಗೆ ಅವಸರದ ಸಾಹಿತ್ಯವೋ ಹಾಗೆಯೇ ಪತ್ರಿಕೆಗಳಿಗಾಗಿ ರಚಿಸಲ್ಪಡುವ ರಾಜಕೀಯ ವ್ಯಂಗ್ಯಚಿತ್ರವೂ ಅವಸರದ ಕಲೆಯೇ ಆಗಿವೆ. ಪ್ರತಿದಿನ ವ್ಯಂಗ್ಯಚಿತ್ರ ರಚಿಸಬೇಕಾದ ಅನಿವಾರ್ಯತೆ ಇರುವ ಒಬ್ಬ ವೃತ್ತಿಪರ ಕಾರ್ಟೂನಿಷ್ಟನಿಗೆ ಕಾಲಮಿತಿ (ಡೆಡ್‌ಲೈನ್) ಒಂದು ದೊಡ್ಡ ಸವಾಲು.

 

ಅಂದಿನ ಪ್ರಮುಖ ಸುದ್ದಿಗಳನ್ನು ಓದಿಕೊಂಡು ಸಂಜೆಯೊಳಗೆ ಒಂದು ವ್ಯಂಗ್ಯಚಿತ್ರವನ್ನು ರಚಿಸಿಕೊಡಲೇಬೇಕು. ಇಂಥ ಒತ್ತಡದಲ್ಲಿ ಸಿದ್ಧಗೊಂಡ ಒಂದು ಕೃತಿಗೆ `ಸಾರ್ವಕಾಲಿಕ ಮೌಲ್ಯ~ ಇರಲು ಸಾಧ್ಯವೇ? ಹೆಚ್ಚೆಂದರೆ ಅದೊಂದು ಒಂದು ನಿರ್ದಿಷ್ಟ ಕಾಲದಲ್ಲಿ ನಡೆದ ಒಂದು ನಿರ್ದಿಷ್ಟ ಘಟನೆಗೆ ಆ ವ್ಯಂಗ್ಯಚಿತ್ರಕಾರ ಹೇಗೆ ಪ್ರತಿಕ್ರಿಯಿಸಿದ ಎಂಬುದರ ದಾಖಲೆಯಾದೀತು ಅಷ್ಟೆ.

 

ಅದಕ್ಕಿಂತ ಹೆಚ್ಚಿನ ಮಹತ್ವವನ್ನು ಒಂದು ರಾಜಕೀಯ ವ್ಯಂಗ್ಯಚಿತ್ರಕ್ಕೆ ನೀಡುವುದು ಸರಿಯಲ್ಲ. ಸದ್ಯದ ವಿವಾದ ಉಂಟಾಗಲು ನಮ್ಮ ಕೆಲವು ಶಿಕ್ಷಣ ತಜ್ಞರು ಹಳೆಯ ವ್ಯಂಗ್ಯಚಿತ್ರಗಳಿಗೆ ಅತಿಯಾದ ಮಹತ್ವ ಕೊಟ್ಟಿರುವುದೇ ಕಾರಣ ಎಂದು ಈ ಲೇಖಕನ ವಿನಮ್ರ ಅಭಿಪ್ರಾಯ.ಮತ್ತೊಮ್ಮೆ ಈ ವಿವಾದಿತ ಕಾರ್ಟೂನಿಗೆ ಬರೋಣ. ಈ 63 ವರ್ಷಗಳಲ್ಲಿ ದೇಶದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಅಂದಿನ ನೇತಾರರು ಊಹಿಸಿಯೂ ಇರದಿದ್ದ ಬದಲಾವಣೆಗಳು ದೇಶದೊಳಗೆ ಸಂಭವಿಸಿವೆ.

 

ಅಂದು ದೇಶದ `ನೀಲಿ ಕಣ್ಣಿನ ಹುಡುಗ~ ಆಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರ ಇಮೇಜ್ ಇಂದು ಮಂಕಾಗಿಬಿಟ್ಟಿದೆ. ಆದರೆ, ಅಂದು ಬರೀ `ಸಂವಿಧಾನ ಶಿಲ್ಪಿ~ ಮಾತ್ರ ಆಗಿದ್ದ ಡಾ.ಅಂಬೇಡ್ಕರ್ ಅವರ ಆಕಾಶದೆತ್ತರ ಮೂರ್ತಿಯನ್ನು ತಮ್ಮೆದೆಗಳಲ್ಲಿ ಸ್ಥಾಪನೆ ಮಾಡಿಕೊಂಡಿರುವ ದೊಡ್ಡ ಸಮುದಾಯವೊಂದು ಕಾರ್ಟೂನುಗಳನ್ನು ಅರ್ಥಮಾಡಿಕೊಳ್ಳಲು ಕಲಿತಿದೆ; ಗಟ್ಟಿ ಧ್ವನಿಯಲ್ಲಿ ಮಾತಾಡತೊಡಗಿದೆ.ಈ ಹಿನ್ನೆಲೆಯಲ್ಲಿ ಈ ಅನಗತ್ಯ ವಿವಾದವನ್ನು ನೋಡಿದಾಗ ಈ ಪಠ್ಯವನ್ನು ಸಿದ್ಧಪಡಿಸಿದ `ಶಿಕ್ಷಣ ತಜ್ಞ~ರ ಬಗ್ಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಇಲ್ಲಿ ಅನ್ಯಾಯ ಯಾರಿಗಾದರೂ ಆಗಿದ್ದರೆ ಅದು ವ್ಯಂಗ್ಯಚಿತ್ರಕಾರ ಶಂಕರ್ ಅವರಿಗೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಶಂಕರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry