ಭಾನುವಾರ, ಏಪ್ರಿಲ್ 11, 2021
22 °C

ವ್ಯಂಗ್ಯದಲ್ಲಿ ರಾಜಕೀಯ ಮರ್ಮ

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ನಮ್ಮ ವ್ಯವಸ್ಥೆಯ ವೈರುಧ್ಯ ಮತ್ತು ಲೋಪ, ದೋಷಗಳನ್ನು ಸೃಜನಶೀಲ ಕಲಾವಿದ ಸಮರ್ಥವಾಗಿ ತನ್ನ ಕಲಾ ಕೌಶಲ್ಯಕ್ಕೆ ಬಳಸಿಕೊಳ್ಳುತ್ತಾನೆ  ಎಂಬುದಕ್ಕೆ ದಿ ಹಿಂದು ಪತ್ರಿಕೆಯ ವ್ಯಂಗ್ಯಚಿತ್ರಕಾರರಾದ ಸುರೇಂದ್ರ ಅವರೇ ಸಾಕ್ಷಿ.ರಾಜಕೀಯ ವ್ಯಂಗ್ಯಚಿತ್ರಕಾರರಾದ ಸುರೇಂದ್ರ ಅವರು ನಮ್ಮ ಪ್ರಜಾ ನಾಯಕರ ನಡವಳಿಕೆ, ‘ತತ್ವ ಸಿದ್ಧಾಂತ ಬೇಕಾದರೆ ಬಿಟ್ಟೇವು ಅಧಿಕಾರ ಬಿಡಲ್ಲ’ ಎಂಬ ನೀತಿಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಇವರ ವ್ಯಂಗ್ಯ ಚಿತ್ರಗಳಲ್ಲಿ ರಾಜಕೀಯ ವಿಡಂಬನೆಯೇ ಪ್ರಧಾನ ವಸ್ತು. ಕಾಂಗ್ರೆಸ್ ಪಕ್ಷದ ವಂಶಾಡಳಿತ, ‘ಹೈಕಮಾಂಡ್‌ಗೆ ತಲೆ ಬಾಗುವೆವೆ ಹೊರತು ಜನರಿಗಲ್ಲ’ ಎಂಬ ನೀತಿ.ಅಧಿಕಾರಕ್ಕಾಗಿ ಗಣಿ ರೆಡ್ಡಿಗೆ ಯಡ್ಡಿಯ ಶರಣು, ಪ್ರಜಾಪ್ರಭುತ್ವ ಮುಖ ಹೊತ್ತ ಪಾಕಿಸ್ತಾನದ ಮಿಲಿಟರಿ ಆಡಳಿತ. ಭಾರತ ಪ್ರಜಾಪ್ರಭುತ್ವದ ರಾಜ ಪ್ರಭುತ್ವ ಮುಖವಾಡ, ಮಂದಿರಕ್ಕಾಗಿ ಬಿಜೆಪಿ ನಾಯಕರ ಆರ್‌ಎಸ್‌ಎಸ್ ತುತ್ತೂರಿ, ನರೇಂದ್ರ ಮೋದಿಯವರ ಹಿಂದುತ್ವ, ಮತ್ತೊಂದೆಡೆ ಅದೇ ರಾಜ್ಯದ ಗಾಂಧಿ ತತ್ವ. ಮೂರು ಕೊಟ್ಟರೆ ಅತ್ತೆ ಕಡೆ ಆರು ಕೊಟ್ಟರೆ ಮತ್ತೊಂದೆಡೆ ಎನ್ನುವ ಪ್ರಾದೇಶಿಕ ಪಕ್ಷಗಳ ಬದ್ಧತೆ ಇಲ್ಲದ ರಾಜಕೀಯ. ಕಪ್ಪು ಹಣ ದಂಧೆ ತಡೆಗಟ್ಟುವೆವು ಎನ್ನುವ ರಾಜಕೀಯ ನಾಯಕರ ಕಪ್ಪಿಟ್ಟ ಮುಖಗಳು ಗಮನ ಸೆಳೆಯುತ್ತವೆ.ಅಷ್ಟೇ ಅಲ್ಲದೆ ಮಮತಾ ಬ್ಯಾನರ್ಜಿಯ ರೈಲ್ವೆ ಪುರಾಣ, ಹೆಮ್ಮರವಾಗಿ ಬೆಳೆದ ನಿತೀಶ್ ಕುಮಾರ್ ಅವರನ್ನು ಅಲುಗಾಡಿಸಲು ಆರ್‌ಜೆಡಿ, ಕಾಂಗ್ರೆಸ್ ಪ್ರಯಾಸದ ಯತ್ನ. ಪೆಟ್ರೋಲ್ ಬೆಲೆ ಹೆಚ್ಚಳದಿಂದ ಜನ ಜೀವನದ ಮೇಲೆ ಉಂಟಾದ ಪರಿಣಾಮಗಳು, ಜನ ಸಾಮಾನ್ಯರಿಗೆ ಹೊರೆಯಾದ ಬೆಲೆ ಏರಿಕೆ.ವೀರಪ್ಪನ್ ಅಟ್ಟಹಾಸಕ್ಕೆ ನಲುಗಿದ ಪೊಲೀಸರು ಮತ್ತು ಬಡ ಜನರು, ಬಿಜೆಪಿ ರಥಯಾತ್ರೆಗಳು, ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಅಡೆತಡೆಯಾಗಿರುವ ಪುರುಷ ಸಂಸದರು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಅಧಿಕಾರದ ಮೋಹಕ ಭಂಗಿಗಳು, 2ಜಿ ಹಗರಣದ ಸರಮಾಲೆ, ಹಣದ ಹೊಳೆಯಲ್ಲಿ ಮುಳುಗಿದ ಐಪಿಎಲ್ ಕ್ರಿಕೆಟ್, ಒಂದೆಡೆ ಆಹಾರಕ್ಕೆ ಹಾಹಾಕಾರ, ಮತ್ತೊಂದೆಡೆ ಕಾಳ ಸಂತೆಯಲ್ಲಿ ಪಡಿತರ. ಹೀಗೆ ಸುರೇಂದ್ರ ಅವರ ವ್ಯಂಗ್ಯದ ಮೊನಚು ಎಲ್ಲರನ್ನೂ ಚುಚ್ಚಿ, ಎಲ್ಲವನ್ನೂ ಸ್ಪರ್ಶಿಸಿದೆ.ರೇಖೆಗಳ ಏರಿಳಿತಗಳಲ್ಲಿ ಅರಳಿರುವ ವ್ಯಂಗ್ಯ ಚಿತ್ರಗಳಲ್ಲಿ, ಕೆಲವಕ್ಕೆ ವರ್ಣತೆಯ ಲೇಪವೂ ಉಂಟು. ಜನ ಸಾಮಾನ್ಯರೂ ಅರ್ಥೈಸಿಕೊಳ್ಳಬಹುದಾದ ತಿಳಿ ಹಾಸ್ಯ, ಮನಕ್ಕೆ ಮುದ ನೀಡುವ ಸಿರಿವಂತಿಕೆ ಸುರೇಂದ್ರ ಅವರ ವ್ಯಂಗ್ಯಚಿತ್ರಗಳಲ್ಲಿ ನಿಮಿರಿ ನಿಂತಿದೆ. ಏ.2 ರವರೆಗೆ ನಡೆಯುವ ಪ್ರದರ್ಶನದಲ್ಲಿ ಈ ವ್ಯಂಗ್ಯಚಿತ್ರಗಳ ಸೊಬಗನ್ನು ಕಣ್ ತುಂಬಿಕೊಳ್ಳಬಹುದು.  ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಮಿಡ್‌ಫೋರ್ಡ್ ಗಾರ್ಡನ್, ಎಂ ಜಿ ರಸ್ತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.