ವ್ಯಂಗ್ಯದ ಸೂಜಿಮೊನೆ ಹಾಡಾದಾಗ...

7

ವ್ಯಂಗ್ಯದ ಸೂಜಿಮೊನೆ ಹಾಡಾದಾಗ...

Published:
Updated:

 


ಕವಿ ದೊಡ್ಡರಂಗೇಗೌಡರು `ಯುಗವಾಣಿ' ಎಂಬ ಗೀತ ಕುಂಜವೊಂದನ್ನು ರೂಪಿಸಿದ್ದಾರೆ. ಇದು ಕವಿಮನದ ಭಾವವಾಹಿನಿ. ಸಂಗೀತ ನಿರ್ದೇಶಕ ಮತ್ಯುಂಜಯ ದೊಡ್ಡವಾಡ, ದೊಡ್ಡರಂಗೇಗೌಡರ ಸಾಹಿತ್ಯಕ್ಕೆ ಸ್ವರ ಸ್ಪರ್ಶ ನೀಡಿ ಸಾಹಿತ್ಯಕ್ಕೆ ಹೊಳಪು ನೀಡಿದ್ದಾರೆ. ಈ ಧ್ವನಿ ಸುರುಳಿಯಲ್ಲಿ ಒಂಬತ್ತು ಹಾಡುಗಳಿದ್ದು (ಯುಗವಾಣಿ, ಗುಮ್ಮಣ್ಣಗಳು, ರೈತರ ರ‌್ಯಾಲಿ, ಪಟ್ಟಕ್ಕಾಗಿ ಜನರು, ಕೆಂಪು ದೀಪದ, ಜಾತಿ ಧರ್ಮ, ಕ್ರಾಂತಿ ಗೀತೆ, ಎಲ್ಲೆತನಕ, ಬಾಪೂಜಿಗೆ) ಲಹರಿ ಸಂಸ್ಥೆಯವರು ಈ ಗೀತ ಕುಂಜವನ್ನು ನಿರ್ಮಾಣ ಮಾಡಿದ್ದಾರೆ.

 

ಮೊದಲ `ಗೀತೆ ಯುಗವಾಣಿ'ಯಲ್ಲಿ ಕವಿ `ಇದು ಕವಿತೆಯಷ್ಟೇ ಅಲ್ಲ; ಅನ್ಯಾಯವನ್ನು ಪ್ರತಿಭಟಿಸುವ ಅಸ್ತ್ರ' ಎಂಬ ಸ್ಪಷ್ಟ ಸಂದೇಶವನ್ನು ಭ್ರಷ್ಟರಿಗೆ ರವಾನಿಸಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ಬದ್ರಿ ಪ್ರಸಾದ್ ಅವರ ಕಂಚಿನ ಕಂಠದಲ್ಲಿರುವ ಈ ಗೀತೆಯ ಹಿನ್ನೆಲೆ ಸಂಗೀತದಲ್ಲಿ ಕೇಳಿ ಬರುವ ಕೆಲವೊಂದು ವಾದ್ಯಗಳ ತುಣುಕುಗಳು ಜನರು ಅನುಭವಿಸುತ್ತಿರುವ ನೋವನ್ನು ಬಿಂಬಿಸುತ್ತವೆ. 

 

ಎರಡನೆಯದಾಗಿ `ಗುಮ್ಮಣ್ಣಗಳು' ಎಂಬ ಗೀತೆಯನ್ನು ಮತ್ಯುಂಜಯ ದೊಡ್ಡವಾಡ ಹಾಡ್ದ್ದಿದಾರೆ. ಜನರ ಪರಿಶ್ರಮದಿಂದ ಬಂದ ಅಮೂಲ್ಯ ಹಣವನ್ನು ತಮ್ಮ ಖಾನೆಗಳಿಗೆ ತುಂಬಿಸಿಕೊಳ್ಳುತ್ತಿರುವ ನುಂಗಣ್ಣಂದಿರ ಬಗ್ಗೆ ಹೇಳುವ ಕವಿ, ನಿಶಾಚರ ಹಕ್ಕಿಯಂತೆ ಯಾರಿಗೂ ಕಾಣದಂತೆ ದೇಶವನ್ನು ದೋಚುತ್ತಿರುವವರ ಬಗ್ಗೆ ಹಾಗೂ ಮಾನವೀಯತೆ ಇಲ್ಲದೆ ಜನರ ಕಣ್ಣೀರನ್ನೇ ಯಾವ ರೀತಿಯಲ್ಲಿ ತಮ್ಮ ರಾಜಕೀಯ ಬೆಳವಣಿಗೆಗಳಿಗಾಗಿ ಬಳಸಿಕೊಳ್ಳುತ್ತಾರೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ದೊಡ್ಡವಾಡ ಅವರ ಕಂಠ ಗೀತಶಕ್ತಿಯನ್ನು ಇಮ್ಮಡಿಸಿದೆ. 

 

ಶಂಕರ್ ಶಾನ್‌ಭಾಗ್ ಹಾಡಿರುವ `ರೈತರ ರ‌್ಯಾಲಿ' ಎಂಬ ಗೀತೆಯಲ್ಲಿ ರೈತರು ತಮ್ಮ ಸಹನೆಯನ್ನು ಕಿತ್ತೊಗೆದು, ಸಿಡಿದೆದ್ದು ಬಂದರೆ ಹೇಗಿರುತ್ತದೆ ಎಂಬ ಚಿತ್ರಣವನ್ನು ಕವಿ ಕಟ್ಟಿಕೊಟ್ಟಿದ್ದಾರೆ. 

 

`ಪಟ್ಟಕ್ಕಾಗಿ ಜನರು' ಎಂಬ ಗೀತೆಯನ್ನು ಶಂಕರ್ ಶಾನ್‌ಭಾಗ್ ಹಾಗೂ ಮತ್ಯುಂಜಯ ದೊಡ್ಡವಾಡ ಒಟ್ಟಾಗಿ ಹಾಡಿದ್ದು, ಪಟ್ಟಕ್ಕಾಗಿ ಬಡಿದಾಡುವವರ ದೊಂಬರಾಟವನ್ನು ವಿಡಂಬನೆ ಮಾಡುವಂತಿದೆ. 

 

 `ಕೆಂಪು ದೀಪ' ಎಂಬ ಇನ್ನೊಂದು ಗೀತೆಯಲ್ಲಿ ಪರಿಸ್ಥಿತಿಯ ಕೈಗೊಂಬೆಯಾಗಿ ಪಾಪಕೂಪಕ್ಕೆ ಸೇರಿ ಹಗಲು ರಾತ್ರಿ ನರಳುವ ಹೆಣ್ಣು ಮಕ್ಕಳ ಪರಿಸ್ಥಿತಿ ಕುರಿತು ಕವಿ ವ್ಯಥೆ ಪಟ್ಟಿದ್ದಾರೆ. ಕತ್ತೆ ಕಿರುಬರು ಕುಸುಮವನ್ನು ಹೇಗೆ ಕಿತ್ತು ತಿನ್ನುತ್ತಿದ್ದಾರೆ ಎಂದು ದುಃಖಿಸಿದ್ದಾರೆ. ಕುಲುಮೆಯಲ್ಲಿ ಬೇಯುತ್ತಿರುವವರ ಪರವಾಗಿ ರಂಗಕರ್ಮಿ ಡಾ. ಬಿ. ಜಯಶ್ರೀ ಅವರ ಕಂಠ ಅವರ ಬದುಕಿನ ನಿರೂಪಣೆಯ ಮೂಲಕ ಕೇಳುಗರ ಎದೆ ತಟ್ಟುತ್ತದೆ. 

 

ಚುನಾವಣೆಯ ಸಂದರ್ಭದಲ್ಲಿ ನಡೆಯುವ ಪಕ್ಷಪಾತಗಳ ಬಗ್ಗೆ `ಜಾತಿ ಧರ್ಮ' ಎಂಬ ಗೀತೆ ಬೆಳಕು ಚೆಲ್ಲುತ್ತದೆ. ಈ ಗೀತೆಯನ್ನು ಕೂಡ ಮೃತ್ಯುಂಜಯ ದೊಡ್ಡವಾಡ ಹಾಡಿದ್ದಾರೆ. ಮತ್ತೊಂದು `ಕ್ರಾಂತಿ ಗೀತೆ' ಎಂಬ ಹಾಡಿನಲ್ಲಿ ಕವಿ ಶೋಷಿತ ಜನರನ್ನು ಬಡಿದೆಬ್ಬಿಸಲು ಪ್ರಯತ್ನಿಸಿದ್ದಾರೆ. ವಿಚಾರ ಮಾಡುವ ಸ್ವಾತಂತ್ರ್ಯವಿರುವ ಸಮುದಾಯವೊಂದು ಒಂದಾದರೆ ಏನಾದರೂ ಸಾಧಿಸಬಹುದು ಎಂದು ಹೇಳುವ ಕವಿ `ಎಲ್ಲೆತನಕ ಸಹಿಸ್ಕೊಂಡಿರೋದು' ಎಂಬ ಇನ್ನೊಂದು ಗೀತೆಯಲ್ಲಿ ಕಪ್ಪು ಹಣವನ್ನು ಸಂಪಾದಿಸುತ್ತಿರುವವರ ಮೊಸಳೆ ಕಣ್ಣೀರನ್ನು ನಂಬಬೇಡ ಎಂದಿದ್ದಾರೆ.  

 

ಕೊನೆಯಲ್ಲಿ `ನಿನಗಿಂತ ಆದರ್ಶ ಬೇಕೇನು ಬಾಪು' ಎಂಬ ಹಾಡೊಂದಿದೆ. ಸಂಗೀತಧಾಮ ಮಕ್ಕಳಿಂದ ಹಾಡಿಸಿರುವ ಈ ಹಾಡಿನಲ್ಲಿ ಗಾಂಧೀಜಿಯವರ ತತ್ವಗಳು ಮನದಾಳಕ್ಕೆ ಇಳಿಯುತ್ತವೆ.    

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry