ವ್ಯಕ್ತಿತ್ವ ರೂಪಿಸುವುದೇ ಆರ್‌ಎಸ್‌ಎಸ್ ಧ್ಯೇಯ

7

ವ್ಯಕ್ತಿತ್ವ ರೂಪಿಸುವುದೇ ಆರ್‌ಎಸ್‌ಎಸ್ ಧ್ಯೇಯ

Published:
Updated:

ಕಾರವಾರ: ರಾಜಕೀಯವಾಗಿ ಪ್ರಭಾವ ಹೊಂದಬೇಕು. ರಾಮ ಮಂದಿರ ಕಟ್ಟಬೇಕು. ವ್ಯಾಯಾಮ ಶಾಲೆ ನಿರ್ಮಾಣ ಮಾಡಬೇಕು ಎನ್ನುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ದೇಶವಲ್ಲ. ವ್ಯಕಿತ್ವ ರೂಪಿಸುವುದೇ ಸಂಘದ ಗುರಿ ಎಂದು ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಚಂದ್ರಶೇಖರ ಮೋತಿಗುಡ್ಡ ಹೇಳಿದರು.ನಗರದ ಹಿಂದು ಹೈಸ್ಕೂಲ್‌ನಲ್ಲಿ ಭಾನುವಾರ ಸಂಜೆ ನಡೆದ ಆರ್‌ಎಸ್‌ಎಸ್‌ನ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.ಸೇವಾ ಮನೋಭಾವ, ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎನ್ನುವ ಅರಿವು ಮತ್ತು ಜವಾಬ್ದಾರಿಯ ಪಾಠವನ್ನು ಸಂಘ ಶಿಕ್ಷಾರ್ಥಿಗಳಿಗೆ ನೀಡುತ್ತದೆ. ಸಂಘದ ಧ್ಯೇರ್ಯಗಳನ್ನು ಸಂಕುಚಿತ ದೃಷ್ಟಿಯಿಂದ ನೋಡದೆ ವಿಶಾಲ ಮನೋಭಾನೆಯಿಂದ ಅನುಭವಿಸಬೇಕು ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ.ರಾಯ್ಕರ ಮಾತನಾಡಿ, ದೇಶಭಕ್ತಿ ಕಡಿಮೆಯಾಗುತ್ತಿದ್ದು, ಆ ದಿಸೆಯಲ್ಲಿ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ. ಪ್ರತಿಯೊಬ್ಬರೂ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿಶಾಲ ಮನೋ ಭಾವವನ್ನು ಹೊಂದಬೇಕು. ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ವಿಚಾರ ಮಾಡಬೇಕು. ಅಂದಾಗ ಮಾತ್ರ ಈ ನಾಡಿನಲ್ಲಿ ನಾವು ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು.ಜಪಾನ್, ಇಸ್ರೇಲ್‌ನಂತಹ ದೇಶಗಳು ಜಾಗತಿಕ ಮಟ್ಟದಲ್ಲಿ ಇಂದು ಪ್ರಭಾವ ಹೆಚ್ಚಿಸಿಕೊಳ್ಳುತ್ತಿವೆ. ಆ ದೇಶಗಳ ಜನರು ದೇಶದ ಬಗ್ಗೆ ಹೊಂದಿರುವ ಅಭಿಮಾನವೇ ಇದಕ್ಕೆ ಕಾರಣ. ಅದನ್ನು ನಾವು ಮನಗಾಣಬೇಕು ಎಂದು ರಾಯ್ಕರ ನುಡಿದರು.ಜಗತ್ತಿನ ಶೇ 43ರಷ್ಟು ಯುವ ಜನಾಂಗ ಭಾರತದಲ್ಲಿದೆ. ಭಾರತಕ್ಕೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಜಗತ್ತೇ ಈಗ ಭಾರತದ ಕಡೆ ನೋಡುತ್ತಿದೆ. ನಮ್ಮ ದೇಶ ಜಗತ್ತಿನಲ್ಲೇ ನಂ.1 ದೇಶ ಆಗಲಿದೆ ಎಂದು ಅವರು ಭವಿಷ್ಯ ನುಡಿದರು.ನನ್ನ ಊರು, ನನ್ನ ಮನೆ, ನನ್ನ ಶಾಲೆ ಎನ್ನುವ ಅಭಿಮಾನ ಎಲ್ಲರಿಗೂ ಇರಬೇಕು. ಶಾಲೆಯ ಶೌಚಾಲಯ ಸರಿಯಿಲ್ಲದಿದ್ದರೆ ಅದು ನನ್ನದು ಎಂದು ತಿಳಿದು ಸರಿ ಮಾಡಬೇಕು. ಸಕರಾತ್ಮಕ ಚಿಂತನೆ ಮಾಡಬೇಕು ಎಂದು ರಾಯ್ಕರ ಕಿವಿಮಾತು ಹೇಳಿದರು.ದೇಶದಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರಲ್ಲಿ ಶೇ 12 ರಷ್ಟು ಯುವಕರು ಶಿಕ್ಷಣ ಮುಂದುವರಿಸುವ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಜ್ಞಾನ ಆಯೋಗ ಹೇಳಿದೆ. ಈ ಮನಸ್ಥಿತಿ ಬದಲಾಗಬೇಕಿದೆ ಎಂದು ಅವರು ನುಡಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಶಿಕ್ಷಣಾರ್ಥಿಗಳಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಣವೇಷಧಾರಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ನೂರಾರು ಜನರು ರಸ್ತೆ ಬದಿಗೆ ನಿಂತು ಪಥ ಸಂಚಲನ ವೀಕ್ಷಿಸಿದರು.

ಜಿ.ಪಿ.ಕಾಮತ್ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry