ಶುಕ್ರವಾರ, ನವೆಂಬರ್ 15, 2019
20 °C

ವ್ಯಕ್ತಿ, ವರ್ಚಸ್ಸಿನ ಮೇಲಾಟ...

Published:
Updated:

ಬೀದರ್:  ಬೀದರ್ ಜಿಲ್ಲಾ ಚುನಾವಣಾ ಕಣದಲ್ಲಿ ಜಾತಿ ಲೆಕ್ಕಾಚಾರದ್ದೇ ಪಾರುಪತ್ಯ. ಅಭಿವೃದ್ಧಿ ದೃಷ್ಟಿಯಲ್ಲಿ ಅಭ್ಯರ್ಥಿಗಳ ಪೈಕಿ `ಯಾರು ಜಾಣರು' ಎಂಬುದಕ್ಕಿಂತಲೂ `ಯಾರು ಹೆಚ್ಚು ಕಾಂಚಾಣ ಉಳ್ಳವರು' ಎಂಬುದೇ ಮಹತ್ವ ಆಗಿದೆಯೇನೊ ಎಂಬ ಸ್ಥಿತಿ.



ಜಾತಿ ಲೆಕ್ಕಾಚಾರ, ಆಡಳಿತ ವಿರೋಧಿ ಅಲೆ, ಬಿಜೆಪಿ ಸರ್ಕಾರದ ವಿರುದ್ಧದ ಆರೋಪಗಳು, ವ್ಯಕ್ತಿಗತ ವರ್ಚಸ್ಸು ಹೀಗೆ ಸ್ಪರ್ಧೆಯ ಹೆದ್ದಾರಿಯಲ್ಲಿ ಗೆಲುವಿನ ಗುರಿಗೆ ತಿರುವು ಸಾಕಷ್ಟಿದ್ದರೂ ಎಲ್ಲ ಅಭ್ಯರ್ಥಿಗಳು ಅಂದುಕೊಂಡದ್ದನ್ನು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಯಾರಿಗೂ ಗೆಲುವಿನ ಹಾದಿ `ನೈಸ್' ಆಗಿಲ್ಲ.

ಅವರವರದೇ ಲೆಕ್ಕಾಚಾರ

ಗಡಿ ಭಾಗದಲ್ಲಿರುವ ಬಸವಕಲ್ಯಾಣದಲ್ಲಿ ಚತುಷ್ಕೋನ ಸ್ಪರ್ಧೆ. ದಾಖಲೆ ಗೆಲುವು ಗಳಿಸಿದ ಬಸವರಾಜ ಪಾಟೀಲ ಅಟ್ಟೂರು ಅನಾರೋಗ್ಯದ ನಿಮಿತ್ತ ಹಿಂದೆ ಸರಿದಿದ್ದಾರೆ. ಬಿಜೆಪಿ ತೊರೆದ ಅವರು ಪತ್ನಿ ಮಲ್ಲಮ್ಮ ಅವರನ್ನು ಕೆಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಮಾಜಿ ಶಾಸಕರಾದ ಎಂ.ಜಿ. ಮುಳೆ (ಬಿಎಸ್‌ಆರ್ ಕಾಂಗ್ರೆಸ್), ಮಲ್ಲಿಕಾರ್ಜುನ ಖೂಬಾ (ಜೆಡಿಎಸ್) ಸ್ಪರ್ಧೆಯಲ್ಲಿದ್ದು, ಕಾಂಗ್ರೆಸ್ ಕೋಲಿ ಸಮುದಾಯದ ನಾರಾಯಣರಾವ್ ಅವರನ್ನು ಕಣಕ್ಕಿಳಿಸಿದೆ.



ಜಾತಿ ಲೆಕ್ಕಾಚಾರ ಜೋರಾಗಿರುವ ಕ್ಷೇತ್ರ ಇದು. ಮುಸಲ್ಮಾನರು, ಮರಾಠರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೆಜೆಪಿ, ಜೆಡಿಎಸ್ ಅಭ್ಯರ್ಥಿಗಳು ಲಿಂಗಾಯತರು. ಎಂ.ಜಿ. ಮುಳೆ ಮರಾಠ ಮತಗಳನ್ನು ನಂಬಿದ್ದಾರೆ. ಬಿಜೆಪಿ ಬ್ರಾಹ್ಮಣ ಸಮುದಾಯದ ಸಂಜಯ ಪಟವಾರಿ ಅವರನ್ನು ಕಣಕ್ಕಿಳಿಸಿದೆ. ಬಸವರಾಜ ಪಾಟೀಲ ಅಟ್ಟೂರು ಕಳೆದ ಬಾರಿ ಬಿಜೆಪಿಯಿಂದ ಜಯಗಳಿಸಿದ್ದರು. ಈಗ ಅವರು ಕೆಜೆಪಿಯಲ್ಲಿದ್ದಾರೆ. ಅವರ ಪತ್ನಿ ಮಲ್ಲಮ್ಮ ಹೆಚ್ಚು ಮತ ಪಡೆದಷ್ಟು ಬಿಜೆಪಿಗೆ ಪೆಟ್ಟು ಖಚಿತ.



ನಾರಾಯಣರಾವ್ ಅವರಿಗೆ ಹಿಂದುಳಿದ ವರ್ಗ, ಕೆಳಹಂತದಿಂದ ಬಂದವರು ಎಂಬ ಮಾತು ವರದಾನ ಆಗಬಹುದು. ಮುಳೆ ಅವರು ಮರಾಠಾ ವೋಟುಗಳ ಜೊತೆ ಕ್ಷೇತ್ರದಲ್ಲಿ ಶ್ರೀರಾಮುಲು ಪರ ಇರುವ ವರ್ಚಸ್ಸಿನಿಂದ ಹಿಂದುಳಿದ ವರ್ಗದ ಮತಗಳು ಬರುತ್ತವೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ.

ವ್ಯಕ್ತಿ ವರ್ಚಸ್ಸೇ ಮುಖ್ಯ

ಹುಮನಾಬಾದ್ ಕ್ಷೇತ್ರದಲ್ಲಿ ನಾಲ್ಕು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಇದ್ದರೂ, ಅಂತಿಮವಾಗಿ ನೇರ ಸ್ಪರ್ಧೆಯೇ ಮೂಡಿದರೆ ಆಶ್ಚರ್ಯವಿಲ್ಲ. ಪುನರಾಯ್ಕೆ ಬಯಸಿರುವ ಶಾಸಕ ರಾಜಶೇಖರ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ. ಇವರ ತಂದೆ ಮಾಜಿ ಸಚಿವ ಬಸವರಾಜ ಪಾಟೀಲ ಹುಮ್ನಾಬಾದ್ ವಿಧಾನಪರಿಷತ್ತಿನ ಹಾಲಿ ಬಿಜೆಪಿ ಸದಸ್ಯ. ಇವರಿಗೆ ಪ್ರಮುಖ ಸ್ಪರ್ಧೆ ಒಡ್ಡುತ್ತಿರುವವರು ಮಾಜಿ ಸಚಿವ ದಿ. ಮೆರಾಜುದ್ದೀನ್ ಪಟೇಲ್ ಅವರ ಸೋದರ ಜೆಡಿಎಸ್‌ನ ನಸಿಮೋದ್ದೀನ್ ಪಟೇಲ್.



2008ರಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಮಾಜಿ ಶಾಸಕ ಸುಭಾಷ ಕಲ್ಲೂರು ಈಗ ಕೆಜೆಪಿ  ಸೇರ್ಪಡೆಯಾಗಿದ್ದಾರೆ. ಕೆಜೆಪಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಬಿಎಸ್‌ಪಿ ಕೂಡಾ ಪ್ರಾಬಲ್ಯ ಹೊಂದಿರುವುದರಿಂದ ಈ ಪಕ್ಷಗಳು ಪಡೆಯುವ ಮತಗಳು ಫಲಿತಾಂಶ ಏರುಪೇರಾಗಿಸಬಹುದು. ಬಿಜೆಪಿಯು ಪದ್ಮಾಕರ ಪಾಟೀಲರನ್ನು ಮತ್ತು ಕೆಜೆಪಿ ಸ್ಥಳೀಯರೇ ಆದ ಅಶ್ರಫ್ ಮಾಲಿ ಪಟೇಲ್‌ರನ್ನು ಕಣಕ್ಕಿಳಿಸಿದೆ. ಶಾಸಕ ರಾಜಶೇಖರ ಪಾಟೀಲ ಮನೆತನ ತನ್ನದೇ ಪ್ರಾಬಲ್ಯ ಹೊಂದಿದ ಕ್ಷೇತ್ರ ಇದು. ಅಂತಿಮವಾಗಿ ವ್ಯಕ್ತಿಗತ ವರ್ಚಸ್ಸೇ ನಿರ್ಣಾಯಕವಾದರೆ ಆಶ್ಚರ್ಯವಿಲ್ಲ.

ಮನೆತನದ ಪ್ರಾಬಲ್ಯ

ಜಿಲ್ಲೆಯ ಮಟ್ಟಿಗೆ ಭಾಲ್ಕಿ ಸೂಕ್ಷ್ಮ  ಕ್ಷೇತ್ರ. ಹಿರಿಯ ರಾಜಕಾರಣಿ ಭೀಮಣ್ಣ ಖಂಡ್ರೆ ಅವರ ಕುಟುಂಬ ಏಳು ಅವಧಿಗೆ ಪ್ರತಿನಿಧಿಸಿರುವ ಕ್ಷೇತ್ರ ಇದು. ಅಲ್ಲದೆ, ಖಂಡ್ರೆ ಮನೆತನದ ಪ್ರಕಾಶ್ ಖಂಡ್ರೆ ಎರಡು ಅವಧಿಗೆ ಪ್ರತಿನಿಧಿಸಿದ್ದಾರೆ. ಹಾಲಿ ಶಾಸಕ, ಭೀಮಣ್ಣ ಖಂಡ್ರೆ ಅವರ ಪುತ್ರ ಈಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿದ್ದಾರೆ. ಪ್ರಕಾಶ್ ಖಂಡ್ರೆ ಬಿಜೆಪಿ ಅಭ್ಯರ್ಥಿ. ಸಾಮಾನ್ಯವಾಗಿ ನೇರ ಸ್ಪರ್ಧೆ ಇರುತ್ತಿದ್ದ ಕ್ಷೇತ್ರದಲ್ಲಿ ಈಗ ತ್ರೀಕೋನ ಸ್ಪರ್ಧೆ ಇದೆ.



ಜೆಡಿಎಸ್ ಕಣದಲ್ಲಿದ್ದರೂ ಆ ಪಕ್ಷ ಪಡೆಯುವ ಮತಗಳು ಫಲಿತಾಂಶದ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವ ಬೀರಬಹುದು ಎಂಬ ಸ್ಥಿತಿ. ಕೆಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಡಿ.ಕೆ. ಸಿದ್ರಾಮ ತೀವ್ರ ಸ್ಪರ್ಧೆ ಒಡ್ಡುವ ಸೂಚನೆ ನೀಡಿದ್ದಾರೆ. ಪಾದಯಾತ್ರೆ ಮೂಲಕ ಎಲ್ಲ ಗ್ರಾಮಗಳಿಗೆ ಒಂದು ಸುತ್ತಿನ ಭೇಟಿ ನೀಡಿದ್ದಾರೆ.  ಕ್ಷೇತ್ರದಲ್ಲಿ ಶಾಸಕ ಈಶ್ವರ ಖಂಡ್ರೆ ಮತ್ತು ಪ್ರಕಾಶ್ ಖಂಡ್ರೆ ಇಬ್ಬರಿಗೂ ತಮ್ಮದೇ ಪ್ರಾಬಲ್ಯದ ಜೊತೆಗೆ, ಸಾಂಪ್ರದಾಯಿಕ ಮತಗಳಿವೆ. ಕೆಜೆಪಿ ಅಭ್ಯರ್ಥಿಗೆ ಇದು ಮೊದಲ ಚುನಾವಣೆ. ಉದ್ಯಮಿ ಜನಾರ್ದನ ಮಾಧವರಾವ್ ಜೆಡಿಎಸ್ ಅಭ್ಯರ್ಥಿ. ಈ ಬಾರಿ ಜಿದ್ದಾಜಿದ್ದಿ ಹೋರಾಟ ಇದೆ.

`ಪ್ರಭು'ವಿನ ಅಧಿಕಾರಕ್ಕಾಗಿ ಸ್ಪರ್ಧೆ

ಔರಾದ್ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ಪ್ರಭು ಚವ್ಹಾಣ್ ಹಾಲಿ ಶಾಸಕ. ಬಿಜೆಪಿ ಈ ಬಾರಿ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದಿರುವ, ಗೆಲುವಿನ ಅತಿ ವಿಶ್ವಾಸ ಹೊಂದಿರುವ ಕ್ಷೇತ್ರವೂ ಹೌದು. ಲಮಾಣಿ ಸಮುದಾಯಕ್ಕೆ ಸೇರಿದ್ದ ಪ್ರಭು ಚವ್ಹಾಣ್ 2008ರ ಚುನಾವಣೆಗೆ ಮುನ್ನ ಅಪರಿಚಿತರು. ಐದು ವರ್ಷಗಳ ಬಳಿಕ ಪ್ರಭು ಚವ್ಹಾಣ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂದು ಇತರೆ ಪಕ್ಷಗಳು ಕಡೆಯವರೆಗೂ ಚಿಂತನೆ ಮಾಡುವಷ್ಟರ ಮಟ್ಟಿಗೆ  ಪರಿಚಿತರಾಗಿದ್ದಾರೆ.



ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂಬುದಕ್ಕಿಂತಲೂ ಪರಿಶಿಷ್ಟರಲ್ಲೇ ಇರುವ ಎಡಗೈ, ಬಲಗೈ ನಡುವಿನ ಗೊಂದಲ, ಭಿನ್ನಾಭಿಪ್ರಾಯ ಪ್ಲಸ್ ಪಾಯಿಂಟ್. ಕೆಜೆಪಿ ಕೂಡಾ ಈಗ ಲಮಾಣಿ ಸಮುದಾಯಕ್ಕೆ ಸೇರಿದ ಧಾನಾಜಿ ಭೀಮ್ ಜಾಧವ್ ಅವರನ್ನು ಕಣಕ್ಕಿಳಿಸಿದೆ. ಬಿಎಸ್‌ಪಿಯಿಂದ ದೇವಿದಾಸ ಕೊರೆಕಲ್ ಮತ್ತು ಕಾಂಗ್ರೆಸ್‌ನಿಂದ ವಿಜಯಕುಮಾರ ಗಾಯಕವಾಡ್ ಕಣದಲ್ಲಿದ್ದಾರೆ. ಪ್ರಭು ಚವ್ಹಾಣ್ ಹೊರತುಪಡಿಸಿ ಎಲ್ಲರಿಗೂ ಮೊದಲ ಚುನಾವಣೆ. ಕಾಂಗ್ರೆಸ್‌ಗೆ ತನ್ನದೇ ಆದ ಮತಬ್ಯಾಂಕ್ ಇದೆ.

ಗೆಲುವಿನ ಹಾದಿ ನೈಸ್ ಅಲ್ಲ

ರಾಜ್ಯವ್ಯಾಪಿ ಕುತೂಹಲ ಸೆಳೆದಿರುವ ಕ್ಷೇತ್ರ ಬೀದರ್ ದಕ್ಷಿಣ .ಕರ್ನಾಟಕ ಮಕ್ಕಳ ಪಕ್ಷದಿಂದ, ನೈಸ್ ಸಂಸ್ಥೆಯ ಮಾಲೀಕ ಅಶೋಕ್ ಖೇಣಿ ಅವರು ಚುನಾವಣಾ ಅಖಾಡಕ್ಕೆ ಇಳಿದ ಬಳಿಕ ಕ್ಷೇತ್ರದಲ್ಲಿನ ಲೆಕ್ಕಾಚಾರವೂ ಏರುಪೇರಾಗಿದೆ. ಜೆಡಿಎಸ್‌ನಿಂದ ಹಾಲಿ ಶಾಸಕ ಬಂಡೆಪ್ಪಾ ಕಾಶೆಂಪುರ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್, ಬಿಜೆಪಿಯು ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷರಾದ ಬಸವರಾಜ ಪಾಟೀಲ ಅಷ್ಟೂರು, ಕೆಜೆಪಿಯು ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಅವರನ್ನು ಕಣಕ್ಕಿಳಿಸಿವೆ.



ಬಿಎಸ್‌ಪಿ ಕೂಡಾ ಪ್ರಬಲವಾಗಿರುವ ಕ್ಷೇತ್ರ ಇದು. ಆ ಪಕ್ಷದಿಂದ ಅಬ್ದುಲ್ ಮನ್ನಾನ್ ಸೇಟ್ ಸ್ಪರ್ಧೆಯಲ್ಲಿ ಇದ್ದಾರೆ. ಬಂಡೆಪ್ಪಾ ಹೊರತುಪಡಿಸಿ ಪ್ರಮುಖ ಪಕ್ಷಗಳಿಗೆ ಸೇರಿದ ಇತರೆ ಅಭ್ಯರ್ಥಿಗಳು ಲಿಂಗಾಯತ ಸಮುದಾಯವರು. ಹೀಗಾಗಿ, ಈ ವರ್ಗದ ಮತಗಳು ವಿಭಜನೆ ಆಗುವ ನಿರೀಕ್ಷೆ. ಕುರುಬ ಸಮುದಾಯ ಬಂಡೆಪ್ಪಾ ಅವರನ್ನು ಬೆಂಬಲಿಸಬಹುದು ಎನ್ನಲಾಗಿದ್ದರೂ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ ಚಿಮಕೋಡೆ ಕೂಡಾ ಕುರುಬರೇ ಆಗಿದ್ದಾರೆ. ಇದು, ಪರಿಣಾಮ ಬೀರಬಹುದು. ಚತುಷ್ಕೋನ ಸ್ಪರ್ಧೆ ಇದೆ. ಜಯದ ಹಾದಿಯಲ್ಲಿ ಎಲ್ಲರಿಗೂ ತೊಡಕುಗಳಿದ್ದರೂ, ಸುಗಮವಾಗಿದೆ ಎಂಬ ಲೆಕ್ಕಾಚಾರ ಎಲ್ಲರದೂ ಆಗಿರುವ ಕ್ಷೇತ್ರ ಇದು.

ಮಾಜಿ ಸಚಿವರಿಗೆ ಪ್ರತಿಷ್ಠೆ

ನಗರ ಕೇಂದ್ರಿತವಾಗಿರುವ ಬೀದರ್ ಕ್ಷೇತ್ರದಲ್ಲಿ  ಶಾಸಕ ರಹೀಂ ಖಾನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿದ್ದಾರೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಹೋಗಿದ್ದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಕಣದಲ್ಲಿದ್ದಾರೆ. ಆದರೆ ಅವರೀಗ ಕೆಜೆಪಿ ಅಭ್ಯರ್ಥಿ. ಬಿಜೆಪಿ ಮಾಜಿ ಶಾಸಕ ರಮೇಶ್‌ಕುಮಾರ ಪಾಂಡೆ ಅವರನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿಯಾಗಿ ವೈದ್ಯ ಡಾ. ಅಮರ್ ಎರೋಳ್‌ಕರ್ ಅವರು ಸ್ಪರ್ಧಿಸಿದ್ದಾರೆ.



ನೇರಸ್ಪರ್ಧೆ ಎಂಬ ಚಿತ್ರಣ ಇದ್ದರೂ ರಜಪೂತ ಸಮುದಾಯದ ರಮೇಶ್ ಕುಮಾರ್ ಪಾಂಡೆ ಕೊನೆಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಳಿಕ ಚಿತ್ರಣ ಬದಲಾಗಿದೆ. ಸಾಂಪ್ರದಾಯಿಕ ಬಿಜೆಪಿ ಮತಗಳ ಜೊತೆಗೆ, ಅವರು ಮುಸಲ್ಮಾನ ಮತಗಳನ್ನು ಪಡೆಯಬಹುದು ಎಂಬ ಅನಿಸಿಕೆಗಳು ಇವೆ. ಆದರೆ, ಮುಸಲ್ಮಾನರೇ ಆದ ರಹೀಂ ಖಾನ್ ಕಣದಲ್ಲಿರುವ ಕಾರಣ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬ ಪ್ರಶ್ನೆಯಂತೂ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾದ ಗುರುಪಾದಪ್ಪ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಏಕೆಂದರೆ ಅವರು ಕ್ಷೇತ್ರ, ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯೂ ಹೌದು.

ಪ್ರತಿಕ್ರಿಯಿಸಿ (+)