ಸೋಮವಾರ, ಮೇ 16, 2022
24 °C

ವ್ಯಕ್ತಿ: ಸಂಗೀತ ಶಿಖರ ಆಶಾ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಸಾಧನೆಯ ಹಾದಿ ಅಷ್ಟು ಸರಳವಾದುದಲ್ಲ. ಇಲ್ಲಿ ಪ್ರತಿಭೆ ಇದ್ದರೆ ಸಾಲದು. ಅದೃಷ್ಟವೂ ಬೇಕು. ಪರಿಶ್ರಮಕ್ಕೆ ಪ್ರತಿಫಲ ತಡವಾಗಿ ಸಿಗಬಹುದು. ಕೆಲವರಿಗಂತೂ ಮುಳ್ಳಿನ ಹಾದಿಯನ್ನು ದಾಟಿದ ಮೇಲೆಯೇ ಸಾಧನೆಯ ಶಿಖರ ದಕ್ಕೋದು...ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜೆ ಆಶಾ ಬೋಸ್ಲೆ ಅವರ ವಿಷಯದಲ್ಲೂ ಆದ್ದ್ದದೂ ಇದೇ. ಸಂಗೀತ ಅವರ ರಕ್ತದಲ್ಲಿ ಬೆರೆತು ನರ-ನಾಡಿಗಳಲ್ಲಿ ಹರಿದ ಶಕ್ತಿ. ಅವರ ಪ್ರತಿಭೆಯಲ್ಲಿ ಕುಂದಿರಲಿಲ್ಲ. ಪರಿಶ್ರಮಕ್ಕೆ ಅವರೆಂದೂ ಹಿಂಜರಿದವರಲ್ಲ. ಆದಾಗ್ಯೂ ಆಶಾ ಕಠಿಣ ಹಾದಿಯನ್ನು ಸವೆಸಬೇಕಾಯಿತು.  ಪ್ರಾರಂಭದಲ್ಲಿ ತಿರಸ್ಕಾರ, ಅವಮಾನ, ಟೀಕೆ, ಸಂಶಯಗಳನ್ನೆಲ್ಲ ಅವಡುಗಚ್ಚಿ ಅನುಭವಿಸಿದರು. ಆದರೆ ಅವರು ಸೋಲಲಿಲ್ಲ, ಎದೆಗುಂದಲಿಲ್ಲ. ನಾಳಿನ ಭರವಸೆ ಅವರಲ್ಲಿ ಹೊಸ ಹುಮ್ಮಸ್ಸನ್ನು ತುಂಬುತ್ತಿತ್ತು. ಅಂತೆಯೇ ಇಂದು ಜಗತ್ತೇ ತಮ್ಮತ್ತ ಆಶ್ಚರ್ಯದಿಂದ ನೋಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.ಹೌದು, ಇತ್ತೀಚೆಗಷ್ಟೇ 78ರ ಹರೆಯಕ್ಕೆ ಕಾಲಿಟ್ಟ ಆಶಾ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ದಾಖಲಿಸುವಂತಹ ಸಾಧನೆ ಮಾಡಿದ್ದಾರೆ.  ಸುಮಾರು 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಗೀತೆಗಳಿಗೆ ಕಂಠದಾನ ಮಾಡಿದ ಅವರ ಸಾಧನೆ ಬಹಳ ಎತ್ತರದ್ದು. ಆದರೆ ಅವರ `ಬೆಸ್ಟ್~ ಹಾಡುಗಳನ್ನೆಲ್ಲ ಹುಡುಕಿ ತೆಗೆದು ಹೊಂದಿಸಿ ಗಿನ್ನಿಸ್ ದಾಖಲೆಗೆ ಸ್ಪಷ್ಟ ಮಾಹಿತಿ ನೀಡಿದ ವಿಶ್ವಾಸ್ ನೆರೂಲ್ಕರ್ ಅವರ ಪ್ರಯತ್ನವನ್ನೂ ಇಲ್ಲಿ ಸ್ಮರಿಸಲೇಬೇಕು.ಹಾಗೆ ನೋಡಿದರೆ ಪ್ರಶಸ್ತಿ-ಪುರಸ್ಕಾರಗಳು ಅವರಿಗೇನೂ ಹೊಸದಲ್ಲ. ಫಿಲ್ಮ್‌ಫೇರ್‌ನ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಹಾಗೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಳಗೊಂಡಂತೆ ಅನೇಕ ಗೌರವಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಶ್ರೋತೃಗಳ ಚಪ್ಪಾಳೆಯಿಂದ ಹಿಡಿದು ಗಿನ್ನಿಸ್ ದಾಖಲೆಯಂತಹ ಶ್ರೇಷ್ಠ ಗೌರವಗಳವರೆಗೆ ಎಲ್ಲಕ್ಕೂ ಆಶಾ ಅಷ್ಟೇ ಭಾವುಕರಾಗುತ್ತಾರೆ.ಇಷ್ಟು ಭಾವುಕ ಜೀವಿ ಆಶಾ ಅಷ್ಟೆಲ್ಲ ಕಷ್ಟಗಳನ್ನು ಹೇಗೆ ಸಹಿಸಿಕೊಂಡು ಬಂದರು ಎಂಬುದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. 1947ರಿಂದ ಆರಂಭವಾದ ಅವರ ವೃತ್ತಿ ಬದುಕಿನಲ್ಲಿ ಎದುರಾದ ಏರಿಳಿತಗಳು ಸಾಕಷ್ಟು. ಆದರೆ ವೈಯಕ್ತಿಕ ಬದುಕಿನಲ್ಲಿಯೂ ಅವರು ಅಷ್ಟೇ ನೋವು ಎದುರಿಸಿ ಬಂದರು. ತಮ್ಮ ಬದುಕಿನ ಕೆಟ್ಟ ಗಳಿಗೆಗಳಲ್ಲಿ ಏಕಾಂಗಿಯಾಗಿಯೇ ಹೋರಾಡಿದರು. ತಾವೇ ಮಾಡಿಕೊಂಡ ಅವಾಂತರಗಳನ್ನು ತಾಳ್ಮೆಯಿಂದ ತಾವೇ ಬಗೆ ಹರಿಸಿಕೊಂಡರು.ಬದುಕೇ ಒಂದು ಹೋರಾಟ: 1933ರಲ್ಲಿ ಮಹಾರಾಷ್ಟ್ರದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿದರು ಆಶಾ. ತಂದೆ ದೀನಾನಾಥ್ ಮಂಗೇಶ್ಕರ್ ರಂಗಭೂಮಿ ಕಲಾವಿದರು ಹಾಗೂ ಶಾಸ್ತ್ರೀಯ ಸಂಗೀತಗಾರರು. ಸಹೋದರ ಹೃದಯನಾಥ್, ಸಹೋದರಿಯರಾದ ಲತಾ, ಉಷಾ, ಮೀನಾ ಎಲ್ಲರೂ ಸಂಗೀತದಲ್ಲಿ ಆಸಕ್ತಿ ಹಾಗೂ ಪ್ರೇಮ ಉಳ್ಳವರೇ. ಆದರೆ ಅವರ ಸಂತಸದ ಕ್ಷಣಗಳು ಬಹಳ ಬೇಗ ಬೇಗುದಿಗೆ ತಿರುಗಿದವು. ಮನೆಯ ಊರುಗೋಲಾಗಿದ್ದ ತಂದೆ ಜವಾಬ್ದಾರಿಯನ್ನೆಲ್ಲ ಅರ್ಧಕ್ಕೆ ಬಿಟ್ಟು ಹೋದಾಗ ಈ ಹುಡುಗಿಗೆ ಕೇವಲ ಒಂಬತ್ತು ವರ್ಷ. ಅಕ್ಕ ಲತಾ ಜೊತೆಗೂಡಿ ಕುಟುಂಬದ ತೇರು ಎಳೆಯುವ ಹೊಣೆ ಆ ಎಳೆಯ ಹೆಗಲ ಮೇಲೆ! ಹಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿರದ ಸಾರಸ್ವತ ಬ್ರಾಹ್ಮಣ ಕುಟುಂಬವದು.

ಮನೆಯನ್ನು ಮುಂಬೈಗೆ ವರ್ಗಾಯಿಸಿ ಅಲ್ಲಲ್ಲಿ ಹಾಡುವ ಕೆಲಸಕ್ಕಾಗಿ ಅಲೆದ ಸಹೋದರಿಯರು ಮುಂದೊಂದು ದಿನ ಹೀಗೆ ಜಗತ್ತಿಗೆ ಮಾದರಿಯಾಗಿ ನಿಲ್ಲುತ್ತಾರೆಂದು ಯಾರಿಗೆ ಗೊತ್ತಿತ್ತು?ವೈವಾಹಿಕ ವೈಫಲ್ಯ: ತಮ್ಮ 16ನೇ ವಯಸ್ಸಿನಲ್ಲಿಯೇ ಕುಟುಂಬದ ಇಚ್ಛೆಗೆ ವಿರುದ್ಧವಾಗಿ 31 ವರ್ಷದ ಗಣಪತ್‌ರಾವ್ ಬೋಸ್ಲೆ ಅವರೊಂದಿಗೆ ವಿವಾಹವಾದರು ಆಶಾ. ಕೆಲವೇ ವರ್ಷಗಳಲ್ಲಿ ಈ ವಿವಾಹ ವಿಫಲವಾಯಿತು. ಸಂಶಯ ಸ್ವಭಾವದ ಆ ವ್ಯಕ್ತಿಯೊಂದಿಗೆ ಸಾಗುವುದರಲ್ಲಿ ಅರ್ಥವಿಲ್ಲ ಎನಿಸಿದಾಗ ಏಕಾಂಗಿಯಾಗಿ ಹೊರಗೆ ಬಂದರು. ಆಗ ಅವರ ಮಡಿಲಲ್ಲಿ ಎರಡು ಹಾಗೂ ಗರ್ಭದಲ್ಲಿ ಒಂದು ಕೂಸು...ಬದುಕು ಎರಡನೇ ಬಾರಿಗೆ ಕೈಜಾರಿದ ಅನುಭವ. ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಈಡಾದ ಆಶಾಗೆ ಹಣಕ್ಕಾಗಿ ಹಾಡುವುದು ಅನಿವಾರ್ಯ ಆಯಿತು. ಆ ಹೊತ್ತಿಗೆ ಅವರ ಎದುರು ದೊಡ್ಡ ಅವಕಾಶಗಳೇನೂ ಇರಲಿಲ್ಲ. ಆಗ ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಕೆಲವು ಖ್ಯಾತ ಗಾಯಕ/ಗಾಯಕಿಯರು ಹಾಡಿ ಉಳಿದ ಗೀತೆಗಳು ಅವರ ಪಾಲಿಗೆ ಬರುತ್ತಿದ್ದುವು. ಅದೂ `ಬ್ಯಾಡ್ ಗರ್ಲ್ಸ್~ ತರಹದ ಹಾಡುಗಳು! ಆದರೂ ಎದೆಗುಂದದ ಆಶಾ, ಅಂತಹ ಅವಕಾಶಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡರು.ಹೊಸ ಬೆಳಕು


1950ರ ಹೊತ್ತಿಗೆ ಅವರು ಎಲ್ಲಾ ಗಾಯಕ/ಗಾಯಕಿಯರಿಗಿಂತ ಹೆಚ್ಚಿನ ಹಾಡುಗಳನ್ನು ಹಾಡಿದ್ದರು. ಆದರೆ `ಈ ಹಾಡುಗಳನ್ನೆಲ್ಲ ಕೇವಲ ಹಣಕ್ಕಾಗಿ ಹಾಡಿದ್ದೇನೆ~ ಎಂಬ ಭಾವ ಅವರ ಮನದ ಮೂಲೆಯಲ್ಲಿ ಮಾರ್ದನಿಸುತ್ತಿತ್ತು.1956ನೇ ವರ್ಷ ಅವರ ವೃತ್ತಿ ಬದುಕಿನಲ್ಲಿ ಹೊಸ ತಿರುವು ತಂದು ಕೊಟ್ಟಿತು. ಒ.ಪಿ.ನಯ್ಯರ್ ಅವರ `ಸಿಐಡಿ~ ಚಿತ್ರಕ್ಕೆ ಹಾಡಿದ ನಂತರ ಅವಕಾಶಗಳ ದಿಕ್ಕು ಬದಲಾಯಿತು. `ಸಂಗ್‌ದಿಲ್~ ಹಾಗೂ `ಬೂಟ್ ಪಾಲಿಶ್~ಚಿತ್ರಗಳಿಗಾಗಿ ಹಾಡಿದ ಹಾಡುಗಳು ಜನಮನ್ನಣೆ ತಂದು ಕೊಟ್ಟವು. `ನಯಾ ದೌರ್~ ಚಿತ್ರ. `ಮಾಂಗ್‌ಕೆ ಸಾತ್ ತುಮಾರಾ... ಸಾಥಿ ಹಾಥ್ ಬಡಾನಾ...~ ನಂತಹ ಯುಗಳ ಗೀತೆಗಳಿಂದ ಅವರು ಹೆಚ್ಚಿನ ಮನ್ನಣೆ ಪಡೆದರು.ಆಶಾ ಹಾಗೂ ಒ.ಪಿ.ನಯ್ಯರ್ ನಡುವಿನ ಸಂಬಂಧ ಅವರ ವೃತ್ತಿ ಜೀವನದ ಮಹತ್ವದ ಘಟ್ಟಗಳಲ್ಲಿ ಒಂದು.`ಆಯಿಯೆ ಮೆಹರಬಾನ್...~

`ಆವೋ ಹುಝೂರ್ ತುಮ್ಕ~

`ಏಕ್ ಮುಸಾಫಿರ್ ಏಕ್ ಹಸೀನಾ~`ಯೇ ಹೈ ರೇಶ್ಮಿ ಝುಲ್ಫೋಂ ಕಾ ಅಂಧೇರಾ~ ತರಹದ ಹಾಡುಗಳು ಅವರ ಮಾದಕ ದನಿಯ ಮೋಡಿಯನ್ನು ಪರಿಚಯಿಸಿಕೊಡುವಲ್ಲಿ ಯಶಸ್ವಿಯಾದುವು. ಇಬ್ಬರೂ ಸೇರಿ ಸಾಕಷ್ಟು ಕೆಲಸ ಮಾಡಿದರು. ವೃತ್ತಿ ಸಂಬಂಧ ಅಷ್ಟೇ ಅಲ್ಲ. ವೈಯಕ್ತಿವಾಗಿಯೂ ಸಾಕಷ್ಟು ಹತ್ತಿರವಾದರು. ಅವರಿಬ್ಬರ ಸ್ನೇಹಕ್ಕೆ ಅಪಾರ್ಥ ಕಲ್ಪಿಸಿದ್ದೇ ಕಾರಣವೊ ಏನೋ, 1972ರಲ್ಲಿ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು. ಅವರು ಪರಸ್ಪರ ಬೇರೆಯಾಗಲು ಕಾರಣ ಏನಿತ್ತು ಎನ್ನುವುದು ಬಹಿರಂಗವಾಗಲಿಲ್ಲ. (ಬಹುಶಃ ಆ ಕಾರಣ ಅವರಿಬ್ಬರಿಗೂ ಗೊತ್ತಿರಬಹುದು) ಹೀಗೆ ಕಾರಣ ಹೇಳದೇ ದೂರವಾದರೂ ಪರಸ್ಪರರ ಕುರಿತು ಇಬ್ಬರಲ್ಲೂ ಅದಮ್ಯ ಗೌರವವಿತ್ತು, ಅಭಿಮಾನವಿತ್ತು.ಆನಂತರ ಆಶಾಗೆ ಜತೆಯಾದವರು `ಪಂಚಮ ದಾ~ ಆರ್. ಡಿ. ಬರ್ಮನ್. ಆಶಾ, ಕಿಶೋರ್ ಕಂಠದಲ್ಲಿ ಮೂಡಿಬಂದ `ಪಂಚಮ ದಾ~ ಸಂಗೀತ ಸಂಯೋಜನೆಯ ಗೀತೆಗಳು 70ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ದಾಖಲೆ ಬರೆದವು.ಆಶಾ ಹಾಡಿದ `ಧಮ್ ಮಾರೋ ಧಮ್, `ಪಿಯಾ ತೂ ಅಬ್ ತೊ ಆಜಾ~ದಂತಹ ಗೀತೆಗಳು ಯುವಜನತೆಯನ್ನು ಹುಚ್ಚೆಬ್ಬಿಸಿದವು. ಆಶಾ, ಆರ್.ಡಿ. ಬರ್ಮನ್ ವೃತ್ತಿಜೀವನದ ಗ್ರಾಫ್ ಒಮ್ಮೆಲೇ ಮೇಲಕ್ಕೇರಿತು.1980ರಲ್ಲಿ ಆಶಾ ಆರ್.ಡಿ. ಬರ್ಮನ್ ಅವರನ್ನು ವಿವಾಹವಾದರು. 1994ರಲ್ಲಿ `ಪಂಚಮ ದಾ~ ಸಾಯುವವರೆಗೆ ಅವರ ಜತೆಗಿದ್ದರು.90ರ ದಶಕದಲ್ಲಿ ಅನುರಾಧಾ ಪೋಡ್ವಾಲ್, ಅಲ್ಕಾ ಯಾಜ್ಞಿಕ್ ಸಂಗೀತದ ಮುಂದೆ ಕೊಂಚ ಮಂಕಾಗಿದ್ದ ಆಶಾರನ್ನು 1995ರಲ್ಲಿ `ರಂಗೀಲಾ~ ಚಿತ್ರದ ಮೂಲಕ ಎ. ಆರ್. ರೆಹಮಾನ್ ಮತ್ತೊಮ್ಮೆ ಖ್ಯಾತಿಗೆ ತಂದರು.`ಕಂಬಕ್ತ್‌ಇಷ್ಕ್‌ನಂತಹ ಗೀತೆಯ ಮೂಲಕ ಸಂದೀಪ್ ಚೌಟ ಕಳೆದ ದಶಕದಲ್ಲೂ ಆಶಾರ ಕೀರ್ತಿ ಮತ್ತಷ್ಟು ಹೆಚ್ಚಿಸಿದರು.ಹೊಸ ಪ್ರಯತ್ನಗಳು: ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಇಷ್ಟೆಲ್ಲ ಏಳು-ಬೀಳುಗಳನ್ನು ಕಂಡರೂ ಆಶಾ ಧೃತಿಗೆಡದೇ ಫಿನಿಕ್ಸ್  ಹಕ್ಕಿಯಂತೆ ಆಗಾಗ ಹುಟ್ಟುತ್ತಾರೆ. ಹೊಸ ಹೆಜ್ಜೆ ಇಡುತ್ತಾರೆ. ಹೊಸ ಪ್ರಯತ್ನ ಮಾಡುತ್ತಾರೆ.ಎ.ಆರ್. ರೆಹಮಾನ್, ಸಂದೀಪ್ ಚೌಟ ತರಹದ ಹೊಸ ಪೀಳಿಗೆಯ ಸಂಗೀತ ನಿರ್ದೇಶಕರ ಮನೋಭಾವಕ್ಕೂ ಶ್ರುತಿ ಮೀಟುತ್ತಾರೆ. 90 ದಶಕದಲ್ಲಿ ತಾವೇ ಹಾಡಿದ್ದ ಬರ್ಮನ್  ಹಾಡುಗಳನ್ನು ರಿಮಿಕ್ಸ್ ಮಾಡಿ ಮತ್ತೊಂದು ಪ್ರಯೋಗ ಮಾಡಿದ್ದರು. (ಆದರೆ ಹಳೆಯ ಮಧುರ ಗೀತೆಗಳನ್ನು ತಿದ್ದುಪಡಿ ಮಾಡಿದ್ದಕ್ಕೆ ಆಶಾ ನಿಂದನೆಗೆ ಒಳಗಾದುದು ಬೇರೆ ಮಾತು)ಮಹೇಶ್ ಕೋಡಿಯಾಲ್ ನಿರ್ದೇಶನದ `ಮಾಯಿ~ ಚಿತ್ರದ ಮೂಲಕ  ಹಿರಿತೆರೆಗೂ ಪಾದಾರ್ಪಣೆ ಮಾಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಈ ಪರಿಯ ಹುಮ್ಮಸ್ಸು, ಉತ್ಸಾಹ... ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಹದ್ದೇ.ಬಾಲಿವುಡ್ ಚಿತ್ರಗಳ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧಿ ಪಡೆದರೂ ಅವರ ದನಿಯಿಂದ ಹೊರಗುಳಿದ ಸಂಗೀತ ಭಾಗಗಳೇ ಇಲ್ಲ. ಗಝಲ್‌ನಿಂದ ಹಿಡಿದು ಭಜನೆಗಳವರೆಗೂ, ಪಾಪ್‌ನಿಂದ ಕವ್ವಾಲಿವರೆಗೂ, ಸಾಂಪ್ರದಾಯಿಕ ಭಾರತೀಯ ಸಂಗೀತದಿಂದ ಹಿಡಿದು ನಝ್ರಲ್ ಗೀತೆಗಳವರೆಗೂ ಅವರ ಪ್ರತಿಭೆ ಮೆರೆದಿದೆ. ಅಸ್ಸಾಮಿ, ತೆಲುಗು, ತಮಿಳು, ಮರಾಠಿ, ಹಿಂದಿ, ಗುಜರಾತಿ, ಬೆಂಗಾಲಿ, ಉರ್ದು, ರಷ್ಯನ್, ನೇಪಾಳಿ ಮುಂತಾದ ಭಾಷೆಗಳಿಗೂ ತಮ್ಮ ಸೇವೆ ನೀಡಿದ ಆಶಾ ಕನ್ನಡಕ್ಕೂ ಹಾಡಿದ್ದಾರೆ.ಅವರ ಹಿಂದೆ ಟೀಕಾಕಾರರ ದೊಡ್ಡ ಪಡೆಯೇ ಇದೆ. ಇನ್ನೊಂದು ಮಗ್ಗುಲಲ್ಲಿ ಅವರಿಗೆ ಸ್ನೇಹಿತರ, ಹಿತೈಷಿಗಳ, ಬಂಧುಗಳ, ಅಭಿಮಾನಿಗಳ ದೊಡ್ಡ ಮಟ್ಟದ ಬೆಂಬಲ, ಪ್ರೀತಿ ಹಾಗೂ ಪ್ರೋತ್ಸಾಹವೂ ಇದೆ. ಅಂತೆಯೇ ಅನೇಕ ಹಿರಿಯ ನಟ-ನಟಿಯರಿಗೆ, ಸಂಗೀತ ನಿರ್ದೇಶಕರಿಗೆ, ಚಿತ್ರ ನಿರ್ದೇಶಕರಿಗೆ `ಆಶಾ~ ಎಂದರೆ ಹೆಚ್ಚಿನ ಭರವಸೆ.ಶಮ್ಮಿ ಕಪೂರ್ ಒಂದೆಡೆ ಹೇಳಿಕೊಂಡಿದ್ದರು- `ನನ್ನ ಹಾಡುಗಳನ್ನು ಹಾಡಲು ಮಹಮದ್ ರಫಿ ಇಲ್ಲದೇ ಹೋಗಿದ್ದರೆ ನಾನು ಆಶಾ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ!~

ಆಶಾ ಕಂಠಸಿರಿಗೆ ಇದಕ್ಕಿಂತ ಹೆಚ್ಚಿನ ಪ್ರಶಂಸೆ ಇನ್ನೇನು ಬೇಕು..?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.