ವ್ಯಕ್ತಿ ಸಾವು: ಪೊಲೀಸ್ ಅಧಿಕಾರಿಗಳ ಅಮಾನತು

7

ವ್ಯಕ್ತಿ ಸಾವು: ಪೊಲೀಸ್ ಅಧಿಕಾರಿಗಳ ಅಮಾನತು

Published:
Updated:

ಬಳ್ಳಾರಿ: ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ  ಪೊಲೀಸರ ವಶದಲ್ಲಿದ್ದಾಗಲೇ ತಾಲ್ಲೂಕಿನ ಕುರುಗೋಡು ಪೊಲೀಸ್ ಠಾಣೆಯ್ಲ್ಲಲಿ  ಶನಿವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ನಗರದ ವಿಮ್ಸನಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.ನಗರದ ಬಂಡಿಹಟ್ಟಿ ನಿವಾಸಿ ಶಿವಪ್ಪ ಅಲಿಯಾಸ್ ಶಿವರಾಜ್ ತಂದೆ ಎರ‌್ರೆಪ್ಪ (30) ಎಂಬುವವನೇ ಮೃತ ವ್ಯಕ್ತಿ. ಆತನ ಸಾವಿಗೆ ಪೊಲೀಸರ ನಿರ್ಲಕ್ಷ್ಯ ಮತ್ತು ದಬ್ಬಾಳಿಕೆ ಕಾರಣ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಆತನ ಸಂಬಂಧಿಗಳು ಹಾಗೂ ಕೆಲವು ಸಾರ್ವಜನಿಕರು ವಿಮ್ಸನ ಶವಾಗಾರದೆದುರು ಜಮಾಯಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು, ಮೃತನ ಕುಟುಂಬ ಸದಸ್ಯರಿಗೆ ಸೂಕ್ತ ಪರಿಹಾರ ನೀಡಬೇಕು, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ  ಕ್ರಮ ಕೈಗೊಳ್ಳಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ. ಸೋಮಶೇಖರರೆಡ್ಡಿ  ಕೋರಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿರುವ ಕುರುಗೋಡು ಠಾಣೆಯ ಪಿಎಸ್‌ಐ ಅಂಬಾರಾಯ, ಎಎಸ್‌ಐ ನಾಗರಾಜ ಅವರನ್ನು ಶನಿವಾರವೇ ಅಮಾನತಿನಲ್ಲಿ ಇರಿಸಿ, ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಪರಿಹಾರ ನೀಡುವಂತೆ ಕೋರಿರುವ ಮನವಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ, ನ್ಯಾಯಾಧೀಶರೊಬ್ಬರ ಸಮ್ಮುಖದಲ್ಲಿ ಶವ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಸುದ್ದಿಗಾರರಿಗೆ ತಿಳಿಸಿದರು.ಘಟನೆಯ ಹಿನ್ನೆಲೆ: ಕೆಲವು ದಿನಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಬಳ್ಳಾರಿಯ ಮಲ್ಲಿಕಾರ್ಜುನ ನಾಯ್ಕ, ಹೇಮಂತ, ರಮೇಶ ಎಂಬುವವರೊಂದಿಗೆ ಶಿವಪ್ಪನೂ ಒಬ್ಬನಾಗಿದ್ದ.ಬಳ್ಳಾರಿ ಪೊಲೀಸರ ಕೋರಿಕೆಯ ಮೇರೆಗೆ ಮಲ್ಲಿಕಾರ್ಜುನ ನಾಯ್ಕನ ಪತ್ನಿ ಹಾಗೂ ಪಕ್ಕದ ಮನೆಯ ಇಬ್ಬರು ಯುವಕರನ್ನು ಬಂಧಿಸಿದ್ದ ಬಳ್ಳಾರಿಯ ಕೌಲ್‌ಬಝಾರ್ ಠಾಣೆ ಪೊಲೀಸರು ಅವರ ಮನೆಯಲ್ಲಿದ್ದ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳು, ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದರು. ಗಂಗಾವತಿಯಲ್ಲಿ ಜಾಮೀನು ಪಡೆದು ಹೊರಬಂದಿದ್ದ ಈ ನಾಲ್ವರನ್ನು ಕಳ್ಳತನದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆಯೇ ಕುರುಗೋಡು ಠಾಣೆಯ ಸಿಬ್ಬಂದಿ 5 ದಿನಗಳ ಹಿಂದೆ ಬಂಧಿಸಿದ್ದರು.ಆದರೆ, ಬಂಧಿಸಿದ 24 ಗಂಟೆಯಲ್ಲಿ ನ್ಯಾಯಾಂಗ ವಶಕ್ಕೆ ಸಲ್ಲಿಸಿರಲಿಲ್ಲ. ಕಳವಾದ ಕೆಲ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವುದಕ್ಕಾಗಿ ಇವರ ವಿರುದ್ಧ ಎಫ್‌ಐಆರ್ ಸಿದ್ಧಪಡಿಸಿರಲಿಲ್ಲ.ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರಿಂದ ದೂರು ಪಡೆದಿದ್ದ ಪೊಲೀಸರು, ಆ ಮಹಿಳೆಯ ಬಳಿಯಿದ್ದ ವಿಷದ ಬಾಟಲು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿರಿಸಿದ್ದರು. ವಿಚಾರಣೆ ವೇಳೆ ಆರೋಪಿ ಶಿವಪ್ಪ ಠಾಣೆಯಲ್ಲಿ ಕುಳಿತಾಗ ಪೊಲೀಸ್ ಸಿಬ್ಬಂದಿಯ ಕಣ್ತಪ್ಪಿಸಿ, ಅದೇ ಬಾಟಲು ತೆಗೆದುಕೊಂಡು ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥನಾದ ಈತನನ್ನು ಚಿಕಿತ್ಸೆಗಾಗಿ ವಿಮ್ಸಗೆ ದಾಖಲಿಸಲಾಗಿತ್ತು ಎಂದು ಎಎಸ್‌ಪಿ ಚಂದ್ರಶೇಖರ ಕ್ಯಾತನ್ ತಿಳಿಸಿದ್ದಾರೆ.

 

ಶಿವಪ್ಪ ಅನೇಕ ಕಳ್ಳತನ ಪ್ರಕರಣಗಳಲ್ಲಿ  ಬೇಕಾಗಿದ್ದ. ಗಂಗಾವತಿಯಲ್ಲೂ ಈತ ಬಂಧನಕ್ಕೆ ಒಳಗಾಗಿದ್ದ. ಇದೀಗ ಕುರುಗೋಡು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ ವೇಳೆ ಘಟನೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry