ವ್ಯಕ್ತಿ: ಸೆನ್ ಮೇಲೆ ತೂಗುಗತ್ತಿ

7

ವ್ಯಕ್ತಿ: ಸೆನ್ ಮೇಲೆ ತೂಗುಗತ್ತಿ

Published:
Updated:
ವ್ಯಕ್ತಿ: ಸೆನ್ ಮೇಲೆ ತೂಗುಗತ್ತಿ

ಕೋಲ್ಕತ್ತ ಹೈಕೋರ್ಟ್ ನ್ಯಾಯಾಧೀಶ ಸೌಮಿತ್ರ ಸೆನ್ ಎಂಬ ಹೆಸರು ಭಾರತದ ಕಾನೂನು ಇತಿಹಾಸದ ಸಾಮಾನ್ಯ ಜ್ಞಾನದ ಭಾಗವಾಗುತ್ತಿದೆ. ಎಳೆಯ ವಯಸ್ಸಿನಲ್ಲೇ ಸಾಂವಿಧಾನಿಕ ವಿಷಯಗಳಲ್ಲಿ ತಜ್ಞ ವಕೀಲರೆಂದು ಹೆಸರು ಮಾಡಿದ್ದ ಸೌಮಿತ್ರ ಸೆನ್ ರಾಜ್ಯಸಭೆಯ ಕಟಕಟೆಯಲ್ಲಿ ನಿಂತು “ನಾನು ನನ್ನ ಬದುಕನ್ನು, ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುತಿದ್ದೇನೆ. ದಯವಿಟ್ಟು ನಿಮ್ಮ ಅಂತಃಸ್ಸಾಕ್ಷಿಗೆ ಅನುಗುಣವಾಗಿ, ಒಳಿತು ಕೆಡುಕನ್ನು ಗುರುತಿಸುವ ವಿವೇಕವನ್ನು ಬಳಸಿ ತೀರ್ಪು ನೀಡಿ” ಎಂದು ವಿನಂತಿಸಿದರು.ಆದರೆ ಅವರ ವಿರುದ್ಧ ಸಾಬೀತಾದ ಆರೋಪಗಳು ಎಷ್ಟು ಬಲವಾಗಿದ್ದವೆಂದರೆ ರಾಜ್ಯಸಭೆಯ 189 ಮಂದಿ ಸದಸ್ಯರು ವಾಗ್ದಂಡನೆಯ ಪರವಾಗಿ ಮತ ಚಲಾಯಿಸಿದರು. ಕೇವಲ 17 ಮಂದಿ ಮಾತ್ರ ವಾಗ್ದಂಡನೆಯನ್ನು ವಿರೋಧಿಸಿದರು. ಈಗ ಸೌಮಿತ್ರ ಸೆನ್ ಲೋಕಸಭೆ ಕೂಡಾ ತನ್ನ ವಿರುದ್ಧ ವಾಗ್ದಂಡನೆಯ ನಿರ್ಣಯ ಕೈಗೊಂಡರೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ ಎನ್ನತೊಡಗಿದ್ದಾರೆ.1958ರ ಜನವರಿ 22ರಂದು ಗುವಾಹಟಿಯಲ್ಲಿ ಹುಟ್ಟಿದ ಸೌಮಿತ್ರ ಸೆನ್‌ರ ತಂದೆ ಕೂಡಾ ವಕೀಲರೇ. ವಾಣಿಜ್ಯ ಶಾಸ್ತ್ರದಲ್ಲಿ ಗುವಾಹಟಿಯ ವಾಣಿಜ್ಯ ಕಾಲೇಜಿನಿಂದ ಪದವಿ ಪಡೆದ ಸೆನ್ ಕಾನೂನು ವ್ಯಾಸಂಗಕ್ಕಾಗಿ ಕೋಲ್ಕತ್ತಕ್ಕೆ ಬಂದರು. ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪಡೆದ ಅವರು ತಮ್ಮ 26ನೇ ವಯಸ್ಸಿನಲ್ಲಿ 1984ರ ಫೆಬ್ರವರಿ 13ರಂದು ವಕೀಲರಾಗಿ ನೋಂದಾಯಿಸಿಕೊಂಡು ವೃತ್ತಿ ಆರಂಭಿಸಿದರು.ಇದಕ್ಕೂ ಒಂದು ವರ್ಷ ಮೊದಲು ಕೋಲ್ಕತ್ತ ಹೈಕೋರ್ಟ್‌ನಲ್ಲಿ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಡುವೆ ಆಮದಿತ ಸರಕುಗಳಿಗೆ ಸಂಬಂಧಿಸಿದ ವಿವಾದವೊಂದಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು. ಈ ಆಮದಿತ ಸರಕುಗಳಿಗೆ ಸಂಬಂಧಿಸಿದ ವ್ಯವಹಾರವನ್ನು ನ್ಯಾಯಾಲಯದ ಮಾರ್ಗದರ್ಶನದಂತೆ ನಡೆಸುವುದಕ್ಕಾಗಿ ವಕೀಲ ಸೌಮಿತ್ರ ಸೆನ್‌ರನ್ನು ನೇಮಿಸಲಾಯಿತು.ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಬೊಕಾರೊ ಸ್ಥಾವರದಲ್ಲಿದ್ದ ಸರಕನ್ನು ಮಾರಾಟ ಮಾಡಿ ಅದರಿಂದ ಬರುವ ಮೊತ್ತವನ್ನು ಬ್ಯಾಂಕ್ ಖಾತೆಯೊಂದರಲ್ಲಿ ಇಡಬೇಕು. ಇದರ ಶೇಕಡಾ ಐದರಷ್ಟು ಮೊತ್ತವನ್ನು ರಿಸೀವರ್ ಆಗಿರುವ ಸೌಮಿತ್ರ ಸೆನ್ ತಮ್ಮ ಸೇವೆಯ ಸಂಭಾವನೆಯಾಗಿ ಮುರಿದುಕೊಳ್ಳಬಹುದೆಂದು ನ್ಯಾಯಾಲಯ ಹೇಳಿತ್ತು. ಸೌಮಿತ್ರ ಸೆನ್ ಅವರು ಎಎನ್‌ಝಡ್ ಗ್ರಿಂಡ್ಲೇಸ್ ಬ್ಯಾಂಕ್‌ನಲ್ಲಿ ಒಂದು ಖಾತೆ ತೆರೆದು ಸರಕುಗಳನ್ನು ಮಾರಾಟ ಮಾಡಿದ ಹಣವನ್ನಿಟ್ಟರು. ಆದರೆ ಈ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರತಿ ಆರು ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಲೆಕ್ಕಪತ್ರಗಳನ್ನು ಸಲ್ಲಿಸಬೇಕೆಂಬ ಷರತ್ತನ್ನು ಪಾಲಿಸಲಿಲ್ಲ. 1993ರಲ್ಲಿ ವ್ಯವಹಾರವನ್ನು ಚುಕ್ತಗೊಳಿಸುವಂತೆ ಹೈಕೋರ್ಟ್ ಆದೇಶಿಸಿತು. ಅದರಂತೆ ಔಪಚಾರಿಕವಾಗಿ ವ್ಯವಹಾರ ಚುಕ್ತ ಆಯಿತಾದರೂ ಲೆಕ್ಕ ಪತ್ರ ಸಲ್ಲಿಸದೇ ಇದ್ದುದರಿಂದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ತನಗೆ ಸೇರಿದ ಕನಿಷ್ಠ 37 ಲಕ್ಷ ರೂಪಾಯಿಗಳು ಸೌಮಿತ್ರ ಸೆನ್ ಅವರ ಬಳಿಯೇ ಇದೆ ಎಂದು ಆರೋಪಿಸಿತು.ಇದೆಲ್ಲ ನಡೆಯುತ್ತಿರುವಾಗಲೇ ಸೌಮಿತ್ರ ಸೆನ್‌ರನ್ನು 2003ರಲ್ಲಿ ಕೋಲ್ಕತ್ತ  ಹೈಕೋರ್ಟ್‌ನ ನ್ಯಾಯಧೀಶ ಹುದ್ದೆಗೆ ನೇಮಿಸಲಾಯಿತು. ಈ ಅವಧಿಯಲ್ಲಿ ಅವರ `ರಿಸೀವರ್~ ವ್ಯವಹಾರ ಮುಗಿದಿರಲಿಲ್ಲ. 2004ರಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸೌಮಿತ್ರ ಸೆನ್ ಅವರ ಬಳಿ ಇರುವ 38 ಲಕ್ಷ ರೂಪಾಯಿಗಳನ್ನು ವಸೂಲು ಮಾಡುವುದಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿತು. 2005ರಲ್ಲಿ ನ್ಯಾಯಮೂರ್ತಿ ಕೆ.ಜೆ. ಸೇನ್‌ಗುಪ್ತ ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡರು. ಅಲ್ಲಿಯತನಕ ಈ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನೂ `ತಾಂತ್ರಿಕ ಲೋಪ~ಗಳಿಂದ ಆಗಿರುವ ತಪ್ಪು ಕಲ್ಪನೆ ಎಂದು ಭಾವಿಸಲಾಗಿತ್ತು. ಈ ಹಂತದಿಂದ ಸೌಮಿತ್ರ ಸೆನ್ ಅವರ `ವ್ಯವಹಾರ ಪ್ರಜ್ಞೆ~ ಬೆಳಕಿಗೆ ಬರಲಾರಂಭಿಸಿತು.ನ್ಯಾಯಾಲಯ ಪದೇ ಪದೇ ಲೆಕ್ಕಪತ್ರಗಳನ್ನು ನೀಡಿ ಎಂದು ಆದೇಶಿಸಿದರೂ ಸ್ವತಃ ನ್ಯಾಯಾಧೀಶರಾಗಿದ್ದ ಸೌಮಿತ್ರ ಸೆನ್ ಅದಕ್ಕೆ ಕಿವಿಗೊಡಲಿಲ್ಲ. `ರಿಸೀವರ್~ ಆಗಿದ್ದಾಗ ಸರಕುಗಳ ಮಾರಾಟದಿಂದ ದೊರೆತಿದ್ದ ಹಣವನ್ನು ಮರು ಪಾವತಿಸಲಿಲ್ಲ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಈ ಕುರಿತಂತೆ ತನಿಖೆಗೆ ಆದೇಶಿಸಿದರು.

 

ಆಗ 1993ರಿಂದ 1995ರ ಅವಧಿಯಲ್ಲಿ ಸೌಮಿತ್ರ ಸೆನ್ ಅವರು ಸರಕುಗಳ ಮಾರಾಟದಿಂದ ಪಡೆದ 22 ಡ್ರಾಫ್ಟ್‌ಗಳ ವಿವರ ಬೆಳಕಿಗೆ ಬಂತು. ಇದರಲ್ಲಿ 28.72 ಲಕ್ಷ ರೂಪಾಯಿಗಳನ್ನು ನ್ಯಾಯಾಲಯದ ಆದೇಶದಂತೆ ತೆರೆದಿದ್ದ ಗ್ರಿಂಡ್ಲೇಸ್ ಬ್ಯಾಂಕ್‌ನ ಖಾತೆಯಲ್ಲಿಟ್ಟಿದ್ದರು. 4.5 ಲಕ್ಷ ರೂಪಾಯಿಗಳನ್ನು ಅಲಹಾಬಾದ್ ಬ್ಯಾಂಕ್‌ನಲ್ಲಿದ್ದ ತಮ್ಮ ಸ್ವಂತ ಖಾತೆಯಲ್ಲಿರಿಸಿದ್ದರು. 1997ರಲ್ಲಿ ಗ್ರಿಂಡ್ಲೇಸ್ ಬ್ಯಾಂಕ್‌ನಲ್ಲಿದ್ದ ಹಣವನ್ನೂ ಅಲಹಾಬಾದ್ ಬ್ಯಾಂಕ್‌ನಲ್ಲಿದ್ದ ತಮ್ಮ ಸ್ವಂತ ಖಾತೆಗೆ ವರ್ಗಾಯಿಸಿದರು. ಹೀಗೆ ಹಣವನ್ನು ವರ್ಗಾಯಿಸಿದ ಒಂದೇ ತಿಂಗಳಲ್ಲಿ ಅದನ್ನು ಪೂರ್ಣವಾಗಿ ಬ್ಯಾಂಕ್‌ನಿಂದ ತೆಗೆದು ಎರಡೂ ಖಾತೆಗಳನ್ನು ಮುಚ್ಚಿಬಿಟ್ಟರು.ಈ ವಿವರಗಳನ್ನು ಪರಿಗಣಿಸಿದ ನ್ಯಾಯಾಲಯ ಸೆನ್ ಈ ಮೊತ್ತವನ್ನು ಬಳಸಿಕೊಂಡಿದ್ದಾರೆ ಇಲ್ಲವೇ ಪರಿವರ್ತಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂತು. ಸೌಮಿತ್ರ ಸೆನ್ ಈ ಮೊತ್ತಕ್ಕೆ ಬಾಧ್ಯಸ್ಥರಾಗಿರುವುದರಿಂದ ಅವರು ಬಡ್ಡಿ ಸಮೇತ ಹಣವನ್ನು ಮರುಪಾವತಿಸಬೇಕೆಂದು 2006ರಲ್ಲಿ ತೀರ್ಪು ನೀಡಿತು. ಅದರಂತೆ 2006 ನವೆಂಬರ್‌ನಲ್ಲಿ ಸೆನ್ 52.46 ಲಕ್ಷ ರೂಪಾಯಿಗಳನ್ನು ಮರುಪಾವತಿಸಿದರು. ಈ ಪ್ರಕ್ರಿಯೆಯಲ್ಲಾಗಲೇ ಸೆನ್ ದುರ್ವರ್ತನೆ ಸಾಬೀತಾಗಿ ಹೋಗಿತ್ತು. 2007ರಲ್ಲಿ ಅಂದಿನ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯೊಂದನ್ನು ನೇಮಿಸಿದರು. ಅಂದಿನ ಕೋಲ್ಕತ್ತ  ಹೈಕೋರ್ಟ್ ಮುಖ್ಯನ್ಯಾಯಾಧೀಶ ಎಸ್. ಎಸ್. ನಿಜ್ಜರ್ ಅವರ ನೇತೃತ್ವದ ಸಮಿತಿ ಪ್ರಕರಣವನ್ನು ಸಂಪೂರ್ಣವಾಗಿ ಪುನರ್ ಪರಿಶೀಲಿಸಿ ಸೆನ್ ಅವರಿಂದ ತಪ್ಪಾಗಿರುವುದನ್ನು ಖಚಿತಪಡಿಸಿತು. ಇಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ತಪ್ಪಿತಸ್ಥ ನ್ಯಾಯಾಧೀಶರನ್ನು ರಾಜೀನಾಮೆ ನೀಡುವಂತೆ ಕೇಳಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಕೆ.ಜಿ. ಬಾಲಕೃಷ್ಣನ್ ಅವರು ಸೌಮಿತ್ರ ಸೆನ್‌ಗೆ ರಾಜೀನಾಮೆ ನೀಡಿ ಇಲ್ಲವೇ ಸ್ವಯಂ ನಿವೃತ್ತಿ ಪಡೆಯಿರಿ ಎಂದು ಸೂಚಿಸಿದರು. ಆದರೆ ಸೌಮಿತ್ರ ಸೆನ್ ತನ್ನಿಂದ ತಪ್ಪಾಗಿಲ್ಲ ಹಾಗಾಗಿ ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ ಎಂಬ ವಾದಕ್ಕೆ ಅಂಟಿಕೊಂಡರು. ಈ ಹೊತ್ತಿಗಾಗಲೇ ಸೌಮಿತ್ರ ಸೆನ್ ಪ್ರಕರಣ ಕಾನೂನು ವಲಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಮಾಧ್ಯಮಗಳಲ್ಲೂ ಸಾಕಷ್ಟು ಕಾಣಿಸಿಕೊಂಡಿತ್ತು.ವಾಗ್ದಂಡನೆಗೆ ಸಲಹೆ ಮಾಡುವುದು ಬಾಲಕೃಷ್ಣನ್ ಅವರ ಮಟ್ಟಿಗೆ ಅನಿವಾರ್ಯವಾಗಿ ಪರಿಣಮಿಸಿತ್ತು ಅವರು ಸೌಮಿತ್ರ ಸೆನ್‌ರನ್ನು ವಜಾಗೊಳಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಿ ಪ್ರಧಾನಮಂತ್ರಿಗೆ ಸಲಹೆ ಮಾಡಿದರು.ಹೈಕೋರ್ಟ್ ನ್ಯಾಯಾಧೀಶರೊಬ್ಬರು ಸೇವೆಯಲ್ಲಿರುವಾಗ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಸಾಧ್ಯವಿಲ್ಲ. ಅವರನ್ನು ವಜಾಗೊಳಿಸಲು ವಾಗ್ದಂಡನೆಯೊಂದೇ ಮಾರ್ಗ. ಅದರಂತೆ ರಾಜ್ಯಸಭೆ 58 ಮಂದಿ ಸದಸ್ಯರಿಂದ ವಾಗ್ದಂಡನೆ ಗೊತ್ತುವಳಿ ಮಂಡನೆಯಾಯಿತು. ರಾಜ್ಯಸಭೆಯೂ ಒಂದು ಸಮಿತಿ ರಚಿಸಿ ಪ್ರಕರಣದ ಪುನರ್ ತನಿಖೆ ನಡೆಸಿತು. ಆ ಸಮಿತಿಯೂ ಸೌಮಿತ್ರ ಸೆನ್ ಅವರ ತಪ್ಪನ್ನು ಎತ್ತಿ ಹಿಡಿಯಿತು. ದಾಖಲೆಗಳೆಲ್ಲವೂ ಅವರು ಸಾರ್ವಜನಿಕ ಹಣವನ್ನು ಬಳಸಿಕೊಂಡಿದ್ದಾರೆ ಎಂಬುದನ್ನೇ ಹೇಳುತ್ತಿವೆ. ಹಣ ಏನಾಯಿತು ಎಂಬುದಕ್ಕೆ ಸೌಮಿತ್ರ ಸೆನ್ ಕೊಡುವ ಕಾರಣವೂ ವಿಚಿತ್ರವಾಗಿದೆ. ನ್ಯಾಯಾಲಯ ಹಣವನ್ನು ನಿರ್ದಿಷ್ಟ ಖಾತೆಯಲ್ಲಿ ಇಟ್ಟುಕೊಳ್ಳಲಷ್ಟೇ ಹೇಳಿತ್ತು. ಆದರೆ ಸೌಮಿತ್ರ ಸೆನ್ ಬಡ್ಡಿಯನ್ನು ಗಳಿಸುವುದಕ್ಕಾಗಿ ಹಣವನ್ನು ಕಂಪೆನಿಯೊಂದರಲ್ಲಿ ಹೂಡಿದ್ದೆ, ಅದು ಮುಳುಗಿ ಹೋಯಿತು ಎಂದಿದ್ದಾರೆ. ಈ ವಿಷಯದ ಕುರಿತಂತೆ ತನಿಖೆ ನಡೆಸಿದ ಸಮಿತಿ ಕಂಪೆನಿಯೊಂದರಲ್ಲಿ ಹಣ ಹೂಡಿರುವುದು `ರಿಸೀವರ್~ ಖಾತೆಯಿಂದಲ್ಲ-ಸೆನ್ ತಮ್ಮ ಸ್ವಂತ ಖಾತೆಯಿಂದ ಹಣ ಹೂಡಿದ್ದಾರೆ ಎಂದು ಸಾಬೀತಾಗಿದೆ.  ಹೀಗೇಕಾಯಿತು ಎಂಬುದಕ್ಕೆ ಸೆನ್ ಅವರಲ್ಲಿ ಉತ್ತರವಿಲ್ಲ.ಮೇಲ್ನೋಟಕ್ಕೆ ಯುವ ವಕೀಲನೊಬ್ಬ ತಕ್ಷಣದ ಲಾಭದ ಆಸೆಯಲ್ಲಿ ಮಾಡಿದ ದುಸ್ಸಾಹಸದಂತೆ ಕಾಣಿಸುವ ಈ ಕ್ರಿಯೆಯನ್ನು ಸರಿಪಡಿಸಿಕೊಳ್ಳಲು ಅವರಿಗೆ ಹಲವು ಅವಕಾಶಗಳಿದ್ದವು. ಆದರೆ ಸೌಮಿತ್ರ ಸೆನ್ ಯಾವ ಕ್ಷಣದಲ್ಲೂ ಎಚ್ಚೆತ್ತುಕೊಳ್ಳಲಿಲ್ಲ. ರಾಜ್ಯಸಭೆಯಲ್ಲಿ ಈಗಾಗಲೇ ವಾಗ್ದಂಡನೆಯ ಕ್ರಿಯೆಗಳು ಮುಗಿದು ಹೋಗಿವೆ.ಲೋಕಸಭೆಯಲ್ಲೂ ಇದಕ್ಕಿಂತ ಭಿನ್ನವಾದದ್ದು ಸಂಭವಿಸುತ್ತದೆ ಎನ್ನಲು ಸಾಧ್ಯವಿಲ್ಲ. ಸ್ವತಂತ್ರ ಭಾರತದಲ್ಲಿ ವಾಗ್ದಂಡನೆಯಿಂದ ಅಧಿಕಾರ ಕಳೆದುಕೊಂಡ ಮೊದಲ ನ್ಯಾಯಾಧೀಶ ಎಂಬ ಕುಖ್ಯಾತಿ ಸೌಮಿತ್ರ ಸೆನ್‌ಗೆ ಗ್ಯಾರಂಟಿ ಎನಿಸುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry