ವ್ಯರ್ಥವಾದ ಸರ್ಕಾರದ ಅನುದಾನ

7

ವ್ಯರ್ಥವಾದ ಸರ್ಕಾರದ ಅನುದಾನ

Published:
Updated:

ಲಕ್ಷ್ಮೇಶ್ವರ: ಎಲ್ಲರೂ ಉತ್ತಮ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಸರ್ಕಾರ ಪ್ರತಿ ವರ್ಷ ಶಾಲೆ, ಕಾಲೇಜು ನಿರ್ಮಾಣಕ್ಕೆ ಸಾವಿರಾರು ಕೋಟಿ ಅನುದಾನ ನೀಡುತ್ತಿದೆ. ಆದರೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅದೆಷ್ಟೋ ಶಾಲಾ-ಕಾಲೇಜು ಕಟ್ಟಡಗಳು ಅಪೂರ್ಣವಾಗಿ ಉಳಿದುಕೊಂಡಿವೆ. ಅದಕ್ಕೊಂದು ತಾಜಾ ಉದಾಹರಣೆ ಲಕ್ಷ್ಮೇಶ್ವರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಕಟ್ಟಡ.2001-2002ರಲ್ಲಿ ಆಗಿನ ಶಾಸಕ ಜಿ.ಎಸ್. ಗಡ್ಡದೇವರಮಠ ಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ನಿರ್ಮಾಣಕ್ಕೆ 12.40 ಲಕ್ಷ ರೂಪಾಯಿ ಅನುದಾನ ತಂದಿದ್ದರು. ಕಾಲೇಜು ಕಟ್ಟಲು ಮಾನ್ವಿ ಬಂಧುಗಳು ಜಾಗವನ್ನೂ ಸಹ ನೀಡಿದ್ದರು. ಆದರೆ  ಅಂದು ಆರಂಭವಾದ ಕಾಲೇಜು ನಿರ್ಮಾಣ ಕಾಮಗಾರಿ ಬರೋಬ್ಬರಿ ಹತ್ತು ವರ್ಷ ಕಳೆದರೂ ಇನ್ನೂ ಮುಗಿದಿಲ್ಲ! ಮತ್ತೊಂದು ಅಚ್ಚರಿ ಸಂಗತಿ ಎಂದರೆ ಇದಕ್ಕಿಂತಲೂ ಎರಡು ವರ್ಷ ತಡವಾಗಿ ಆರಂಭವಾದ ಶಿಗ್ಲಿಯ ಪದವಿ ಪೂರ್ವ ಕಾಲೇಜಿನ ಕಟ್ಟಡ ಪೂರ್ಣಗೊಂಡು ಅದಾಗಲೇ ಎರಡ್ಮೂರು ಬ್ಯಾಚ್‌ಗಳು ಮುಗಿದಿವೆ.ಆದರೆ, ಲಕ್ಷ್ಮೇಶ್ವರ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ ಮಾತ್ರ ಆಮೆಗತಿಯಲ್ಲಿ ಸಾಗಿದ್ದು ಈಗ ವಿದ್ಯಾರ್ಥಿಗಳು ಪುರಸಭೆಯ ವಾಣಿಜ್ಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜು ಅಪೂರ್ಣಗೊಂಡಿರುವುದಕ್ಕೆ `ಇದಕ್ಕೆ ಹೊಣೆ ಯಾರು?~ ಎನ್ನುವ ಪ್ರಶ್ನೆ ಉದ್ಭವಿಸಿದೆ.ಅಪೂರ್ಣಗೊಂಡ ಕಟ್ಟಡ ಈಗ ಅನಾಥವಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಮಳೆಗಾಲದಲ್ಲಿ ಕುರಿದೊಡ್ಡಿಯಾಗಿ ಕುರಿಗಳಿಗೆ ಆಶ್ರಯ ನೀಡುತ್ತಿದೆ. ಪೋಲಿಗಳಿಗೆ ಮಜಾ ಉಡಾಯಿಸುವ ಕೇಂದ್ರವೂ ಆಗಿದ್ದು ಕಾಲೇಜಿನಲ್ಲಿ ಇಸ್ಪೀಟು ಎಲೆಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.ಅಲ್ಲದೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಬೇಕಾಗಿದ್ದ ಪವಿತ್ರ ಕಟ್ಟಡದ ಅಕ್ರಮ ಚಟುವಟಿಕೆಗಳ ತಾಣವಾಗಿದೆ.  ಕಾಲೇಜು ಕಟ್ಟಡ ಗೋಡನ್ ಆಗಿಯೂ ಉಪಯೋಗಕ್ಕೆ ಬರುತ್ತಿದ್ದು ಇಲ್ಲಿನ ಕೊಠಡಿಗಳಲ್ಲಿ ಉಳ್ಳಾಗಡ್ಡಿ ಒಣಗಿಸಲಾಗುತ್ತಿದೆ. ಮಕ್ಕಳಿಗೆ ವಿದ್ಯೆ ನೀಡಬೇಕಾದ ಶಿಕ್ಷಣ ದೇಗುಲದ ಗತಿ ಹೀಗಾಗಲು ಯಾರು ಜವಾಬ್ದಾರರು. ಶಿಕ್ಷಣ ಇಲಾಖೆಯೋ ಅಥವಾ ಜನಪ್ರತಿನಿಧಿಗಳೋ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry