ಶುಕ್ರವಾರ, ಏಪ್ರಿಲ್ 16, 2021
25 °C

ವ್ಯರ್ಥ ಪ್ರಲಾಪಕ್ಕೆ ಕಲಾಪ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ವಿಕಿಲೀಕ್ಸ್ ಬಹಿರಂಗಪಡಿಸಿರುವ ಮಾಹಿತಿಗಳಲ್ಲಿ ದೇಶದ ಜನತೆಯನ್ನು ಬೆಚ್ಚಿಬೀಳಿಸುವಂತಹ ಹೊಸ ಸಂಗತಿಗಳೇನೂ ಇಲ್ಲ. ಆ ಕಾಲದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್ ಅವರನ್ನು ಕಾನೂನಿನ ಬಲೆಯಲ್ಲಿ ಕೆಡವಿ ಹಾಕುವಂತಹ ಹೊಸ ಪುರಾವೆಗಳನ್ನೂ ಅದು ಬಯಲುಗೊಳಿಸಿಲ್ಲ.ಹೀಗಿದ್ದರೂ ವಿರೋಧಪಕ್ಷಗಳು ಗದ್ದಲ ನಡೆಸಿ ಸಂಸತ್‌ನ ಅಮೂಲ್ಯ ಸಮಯ ಮತ್ತು ತೆರಿಗೆದಾರರ ಹಣ-ಎರಡನ್ನೂ ಯಾಕೆ ಪೋಲು ಮಾಡುತ್ತಿವೆ ಎಂಬುದು ಅರ್ಥವಾಗದ ಸಂಗತಿ.  ಮತ ಚಲಾಯಿಸಲು ಕಾಂಗ್ರೆಸ್ ನಾಯಕರು ಹಣದ ಆಮಿಷವೊಡ್ಡಿದ್ದರು ಎನ್ನುವುದನ್ನು ವಿಶ್ವಾಸಮತ ಯಾಚನೆಯ ದಿನವೇ ಲೋಕಸಭೆಯಲ್ಲಿ ಹಣದ ಚೀಲಗಳನ್ನು ಪ್ರದರ್ಶಿಸಿ ಬಿಜೆಪಿ ಸದಸ್ಯರು ಆರೋಪ ಮಾಡಿದ್ದರು. ಒಂದು ಖಾಸಗಿ ಟಿವಿ ಚಾನೆಲ್ ಕುಟುಕು ಕಾರ್ಯಾಚರಣೆ ನಡೆಸಿ ವಿರೋಧಪಕ್ಷಗಳ ಆರೋಪಕ್ಕೆ ವಿಶ್ವಾಸಾರ್ಹತೆಯನ್ನು ತಂದುಕೊಡಲು ಪ್ರಯತ್ನಿಸಿತ್ತು.ಆರೋಪದಲ್ಲಿ ನಿಜಾಂಶ ಇದ್ದಿರಲೂ ಬಹುದು, ಆದರೆ ಅದನ್ನು  ಸಾಬೀತುಪಡಿಸುವಂತಹ ಗಟ್ಟಿ ಪುರಾವೆಗಳನ್ನು ಯಾರೂ ನೀಡಿಲ್ಲ. ಹಗರಣದ ಬಗ್ಗೆ ತನಿಖೆ ನಡೆಸಿದ ಸಂಸದೀಯ ಸಮಿತಿ ಕೂಡಾ ತಪ್ಪಿತಸ್ಥರನ್ನು ಸ್ಪಷ್ಟವಾಗಿ ಗುರುತಿಸಲು ವಿಫಲವಾಗಿತ್ತು. ಇದರ ಜತೆಗೆ ಕುಟುಕು ಕಾರ್ಯಾಚರಣೆಯೂ ಸೇರಿದಂತೆ ಇಡೀ ಹಗರಣದ ಹಿನ್ನೆಲೆಯಲ್ಲಿ ಸೂತ್ರಧಾರರಾಗಿ ಬಿಜೆಪಿಯ ಕೆಲವು ನಾಯಕರಿದ್ದರು ಎಂಬ ಆರೋಪವೂ ಆ ಕಾಲದಲ್ಲಿ ಕೇಳಿಬಂದಿತ್ತು. ಈ ಹಗರಣದ ಬಗ್ಗೆ ಒಂದಷ್ಟು ದಿನ ಒಳಗೆ ಸದನದಲ್ಲಿ ಮತ್ತು ಹೊರಗೆ ಬೀದಿಗಳಲ್ಲಿ ವಿರೋಧಪಕ್ಷಗಳ ಸದಸ್ಯರ ಕಂಠಶೋಷಣೆಯೂ ನಡೆಯಿತು. ಅಲ್ಲಿಗೆ ಎಲ್ಲರೂ ಅದನ್ನು ಮರೆತುಬಿಟ್ಟರು.ಸಾಮಾನ್ಯವಾಗಿ ಆರೋಪಗಳು ಎದುರಾದಾಗ ಜನತಾ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ ಎಂದು ರಾಜಕೀಯ ನಾಯಕರು ಸವಾಲು ಹಾಕುವುದುಂಟು. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಸವಾಲು ಎಸೆಯುತ್ತಲೇ ಇದ್ದಾರೆ. ಈ ತರ್ಕವನ್ನೇ  ಒಪ್ಪುವುದಾದರೆ ಓಟಿಗಾಗಿ ನೋಟು ಹಗರಣದ ಬಗ್ಗೆ ಜನತೆ ತೀರ್ಪು ನೀಡಿ ಆಗಿದೆ. ದೇಶದ ಮತದಾರರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಬಲವನ್ನು 141ರಿಂದ 206ಕ್ಕೆ ಹೆಚ್ಚಿಸಿ ಆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಿದ್ದಾರೆ, ಬಿಜೆಪಿ ಬಲವನ್ನು 138ರಿಂದ 118ಕ್ಕೆ ಇಳಿಸಿ ವಿರೋಧ ಪಕ್ಷದಲ್ಲಿಯೇ ಕೂರಿಸಿದ್ದಾರೆ. ಅಮೆರಿಕದ ರಾಯಭಾರಿ ಕಚೇರಿಯಲ್ಲಿನ ರಾಜತಾಂತ್ರಿಕರು ಕಳುಹಿಸಿರುವ ಕೆಲವು ಸಂದೇಶಗಳನ್ನಷ್ಟೇ ವಿಕಿಲೀಕ್ಸ್ ಬಹಿರಂಗಪಡಿಸಿದೆ.ಈ ಮಾಹಿತಿಯ ವಿಶ್ವಾಸಾರ್ಹತೆಯನ್ನು ಯಾರೂ ಇನ್ನೂ ದೃಢಪಡಿಸಿಲ್ಲ. ಹೀಗಿರುವಾಗ ಯಾವುದೇ ರೀತಿಯಲ್ಲಿಯೂ ಪ್ರಸ್ತುತವಲ್ಲದ ಈ ಹಗರಣವನ್ನೆತ್ತಿಕೊಂಡು ವಿರೋಧಪಕ್ಷಗಳು ಗದ್ದಲ ಎಬ್ಬಿಸಿರುವುದು ಅವುಗಳ ಬೇಜವಾಬ್ದಾರಿತನವನ್ನಷ್ಟೇ ಸೂಚಿಸುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ನೋಡಿದಾಗ ಮುಖಕ್ಕೆ ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅದನ್ನು ಮುಚ್ಚಿಕೊಳ್ಳಲು ಪರಸ್ಪರ ಷಾಮೀಲಾಗಿ ಜನರ ಗಮನ ಬೇರೆಡೆ ಸೆಳೆಯಲು ನಡೆಸುತ್ತಿರುವ ಪ್ರಹಸನದಂತೆಯೂ ಕಾಣುತ್ತಿದೆ. ಜನಹಿತದ ವಿಷಯಗಳ ಚರ್ಚೆ ಮತ್ತು ಶಾಸನ ರಚನೆಗೆ  ಬಳಕೆಯಾಗಬೇಕಾದ ಸಂಸತ್‌ನ ಕಲಾಪ ಮತ್ತೆಮತ್ತೆ ಇಂತಹ ವ್ಯರ್ಥ ಪ್ರಲಾಪಕ್ಕೆ ಬಲಿಯಾಗುತ್ತಿರುವುದು ಅಕ್ಷಮ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.