ವ್ಯವಕಲನದ ನೆಪದಲ್ಲಿ ಸಂಕಲನ

7
ಗೋಧಿ ಬಣ್ಣ ಸಾಧಾರಣ ಮೈಕಟ್ಟು

ವ್ಯವಕಲನದ ನೆಪದಲ್ಲಿ ಸಂಕಲನ

Published:
Updated:
ವ್ಯವಕಲನದ ನೆಪದಲ್ಲಿ ಸಂಕಲನ

ಗೋಧಿ ಬಣ್ಣ ಸಾಧಾರಣ ಮೈಕಟ್ಟು

ನಿರ್ಮಾಣ: ಪುಷ್ಕರ ಎಂ., ನಿರ್ದೇಶನ: ಹೇಮಂತ್ ಎಂ. ರಾವ್, ತಾರಾಗಣ: ಅನಂತನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್, ಅಚ್ಯುತಕುಮಾರ್

ಕನ್ನಡ ಚಿತ್ರರಂಗದ ಜಡ್ಡನ್ನು ಹೋಗಲಾಡಿಸುವಂತೆ ಒಂದಷ್ಟು ತರುಣ ಪ್ರತಿಭೆಗಳು ಸಿನಿಮಾ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲೊಂದು ಗಮನಾರ್ಹ ಪ್ರಯತ್ನ– ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಹೇಮಂತ್ ಎಂ. ರಾವ್ ಚೊಚ್ಚಿಲ ನಿರ್ದೇಶನದ ಈ ಚಿತ್ರಕ್ಕೆ ನೋಡಿಸಿಕೊಳ್ಳುವುದರ ಜೊತೆಗೆ ಕಾಡುವ ಗುಣವೂ ತಕ್ಕಮಟ್ಟಿಗಿದೆ.‘ಗೋಧಿ ಬಣ್ಣ...’ ಎರಡು ಕಾರಣಗಳಿಗಾಗಿ ನೋಡಬೇಕಾದ ಸಿನಿಮಾ. ಮಗುವಿನ ಅಮಾಯಕತೆಯಲ್ಲಿ ಇಷ್ಟವಾಗುವ ಅನಂತನಾಗ್‌ ಚಿತ್ರದ ಮೊದಲ ಆಕರ್ಷಣೆ. ಹೊಸ ನಿರ್ದೇಶಕನೊಬ್ಬ ಮನುಷ್ಯ ಸಂಬಂಧಗಳಲ್ಲಿನ ಆರ್ದ್ರತೆ ತೆಳುವಾಗುತ್ತಿರುವ ಬಗ್ಗೆ ವಿಪರೀತಿ ಕಾಳಜಿಯಿಂದ ಸಿನಿಮಾ ಮಾಡಿರುವುದು ಮತ್ತೊಂದು ಕಾರಣ.ಅಲ್ಜಮೈರ್‌ ಕಾಯಿಲೆಯಿಂದಾಗಿ ಮರೆಗುಳಿಯಾದ ಹಿರಿಯ ನಾಗರಿಕರೊಬ್ಬರು ನಾಪತ್ತೆಯಾಗುವುದು ಚಿತ್ರಕಥೆಯ ಕೇಂದ್ರಬಿಂದು. ಕಳೆದುಹೋಗುವ  ಅಥವಾ ಕಳೆದುಕೊಳ್ಳುವ ಕಥೆಯನ್ನು ನಿರೂಪಿಸುವಲ್ಲಿ ನಿರ್ದೇಶಕರು ಕೆಲವು ಕುತೂಹಲಕಾರಿ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಕೆಲಸದ ಒತ್ತಡ ಮತ್ತು ಮಹತ್ವಾಕಾಂಕ್ಷೆಯಲ್ಲಿ ಅಪ್ಪನನ್ನು ನಿರ್ಲಕ್ಷಿಸುವ ಮಗ ಒಂದೆಡೆಯಿದ್ದರೆ, ಮನುಷ್ಯ ಸಂಬಂಧಗಳ ಬಗ್ಗೆ ಅಪಾರ ಆಸ್ಥೆಯಿರುವ ವೈದ್ಯೆಯಿದ್ದಾಳೆ. ಸಮಯಕ್ಕೆ ತಕ್ಕಂತೆ ಮಾನವೀಯತೆಯನ್ನೂ ಕ್ರೌರ್ಯವನ್ನೂ ಅಭಿವ್ಯಕ್ತಿಸುವ ಮಧ್ಯಮವರ್ಗದ ಗೃಹಸ್ಥನಿದ್ದಾನೆ. ಒಳಿತು – ಕೆಡುಕಿನ ನಡುವೆ ಜೀಕುವ ಭೂಗತಲೋಕದ ವ್ಯಕ್ತಿಗಳಿದ್ದಾರೆ. ಈ ಎಲ್ಲ ಪಾತ್ರಗಳನ್ನು ನಿರ್ದೇಶಕರು ಸಶಕ್ತವಾಗಿ ಚಿತ್ರಿಸಿರುವುದು ಸಿನಿಮಾದ ಅಗ್ಗಳಿಕೆ. ಯಾವ ಪಾತ್ರವೂ ನಗಣ್ಯವಲ್ಲ ಎನ್ನುವ ಎಚ್ಚರಿಕೆ ಸಿನಿಮಾವನ್ನು ಪೊರೆದಿದೆ.ಅನಂತನಾಗ್‌ ಹೆಚ್ಚೇನೂ ಕಾಣಿಸಿಕೊಳ್ಳದ ಸಿನಿಮಾದ ಮೊದಲ ಭಾಗಕ್ಕೆ ಪ್ರೇಕ್ಷಕರನ್ನು ಹಿಡಿದಿಡುವ ಗುಣ ಕಡಿಮೆ. ಆದರೆ, ವಿರಾಮದ ನಂತರ ಅನಂತನಾಗ್‌ ತೆರೆಯ ಜೊತೆಗೆ ಪ್ರೇಕ್ಷಕರನ್ನೂ ಆವರಿಸಿಕೊಳ್ಳುತ್ತಾರೆ. ತನ್ನ ಎದುರಿನವರು ಮರೆತ ಬದುಕಿನ ಸೂಕ್ಷ್ಮಗಳನ್ನು ನೆನಪಿಸುವ ಮರೆಗುಳಿ ವ್ಯಕ್ತಿಯ ಪಾತ್ರದಲ್ಲಿ ಅವರು ಥೇಟ್‌ ಮಗುವಾಗಿದ್ದಾರೆ. ಮೌನವಾಗಿದ್ದಾಗ ಕೂಡ ಅವರ ಕಣ್ಣು, ಗಲ್ಲಗಳು ಮಾತನಾಡುತ್ತವೆ. ಉಳಿದಂತೆ, ಅಪ್ಪನನ್ನು ‘ಬೋರಿಂಗ್ ಹಾಗೂ ಆರ್ಡಿನರಿ’ ಎನ್ನುವ ನಾಯಕನ ಕಣ್ಣು ತೆರೆಸುವ ಹೆಣ್ಣಿನ ಪಾತ್ರದಲ್ಲಿ ಶ್ರುತಿ ಹರಿಹರನ್ ಹಾಗೂ ಪೊಳ್ಳು ವ್ಯಕ್ತಿತ್ವದ ಗೃಹಸ್ಥನಾಗಿ ಅಚ್ಯುತಕುಮಾರ್ ಇಷ್ಟವಾಗುತ್ತಾರೆ.ತನ್ನ ಜೊತೆಗಿರುವಾಗ ಅಪ್ಪನನ್ನು ಮಾನಸಿಕವಾಗಿ ಕಳೆದುಕೊಂಡಿರುವ ನಾಯಕ, ಅಪ್ಪನ ಗೈರುಹಾಜರಿಯಲ್ಲಿ ಆವರೆಗೆ ತನಗೆ ಗೊತ್ತಿಲ್ಲದ ಅಪ್ಪನನ್ನು ಪಡೆದುಕೊಳ್ಳುವ ಕಥೆಯನ್ನು ಹೇಮಂತ್‌ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅಪ್ಪನ ಕಳೆದುಹೋದ ನೆನಪುಗಳನ್ನು ಚಿತ್ರಿಸುವ ಮಗ, ಆ ನೆನಪುಗಳ ಮೂಲಕ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುವ ಚಿತ್ರದ ಕ್ಲೈಮ್ಯಾಕ್ಸ್‌ ಆಪ್ತವಾಗಿದೆ.ಹೇಮಂತ್‌ರ ಸಿನಿಮಾ ನೋಡುವಾಗ ಸುಮಿತ್ರಾಭಾವೆ – ಸುನಿಲ್ ಸುಖ್ತಂಕರ್ ನಿರ್ದೇಶನದ ‘ಅಸ್ತು’ ಮರಾಠಿ ಚಿತ್ರವನ್ನು ನೆನಪಿಸುತ್ತದೆ. ಅಲ್ಲಿನ ಅಲ್ಜಮೈರ್‌  ಬಾಧಿತ ಅಜ್ಜ ಆನೆಯೊಂದನ್ನು ಕಂಡು ಅದರ ಹಿಂದೆ ಹೋಗಿ ಬಯಲಿನಲ್ಲಿ ಅಪೂರ್ವ ಮನುಷ್ಯಲೋಕವನ್ನು ಕಾಣುತ್ತಾನೆ. ಆದರೆ, ಇಲ್ಲಿನ ನಾಯಕ ಬಯಲಿನಿಂದ ಮನೆಯ ಚೌಕಟ್ಟಿನೊಳಗೆ ಸಿಕ್ಕಿಕೊಳ್ಳುತ್ತಾನೆ. ಆ ಮಟ್ಟಿಗೆ ‘ಗೋಧಿ ಬಣ್ಣ...’ ಚಿತ್ರದ ಪರಿಧಿ ಸಣ್ಣದು. ‘ಕಳೆದುಹೋಗುವ’ ಪರಿಕಲ್ಪನೆಯನ್ನು ಹಲವು ರೂಪಗಳಲ್ಲಿ ಹೇಳುವ ನಿರ್ದೇಶಕರ ಪ್ರಯತ್ನ ಕೂಡ ಚಿತ್ರಕ್ಕೊಂದು ಚೌಕಟ್ಟು ಹಾಕಿಬಿಟ್ಟಿದೆ.ಕಥೆ, ನಿರೂಪಣೆ ಹಾಗೂ ಆಶಯದ ಮೂಲಕ ಗಮನಸೆಳೆಯುವ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ತಾಂತ್ರಿಕವಾಗಿ ಅಷ್ಟೇನೂ ಗಟ್ಟಿಯಾಗಿಲ್ಲ. ರೆಕಾರ್ಡಿಂಗ್ ಸಮಸ್ಯೆಯಿಂದಲೋ ಏನೋ ಸಂಭಾಷಣೆಗಳು ಸ್ಫುಟವಾಗಿ ಕೇಳಿಸುವುದಿಲ್ಲ. ಹಾಡುಗಳು ಕೂಡ ಚಿತ್ರಕಥೆಗೆ ಹೊಸತೇನನ್ನೂ ಸೇರಿಸುವುದಿಲ್ಲ. ಚರಣ್‌ರಾಜ್‌ರ ಸಂಗೀತ ಹಾಗೂ ನಂದಕಿಶೋರ್ ಛಾಯಾಗ್ರಹಣ ಕೂಡ ‘ಸಾಧಾರಣ’ ಮಟ್ಟದಿಂದ ಮೇಲೇರಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry