ವ್ಯವಸಾಯದ ವ್ಯಾಮೋಹ...

7

ವ್ಯವಸಾಯದ ವ್ಯಾಮೋಹ...

Published:
Updated:
ವ್ಯವಸಾಯದ ವ್ಯಾಮೋಹ...

ಬಹಳಷ್ಟು ಜನ ಗ್ರಾಮದಿಂದ ಪಟ್ಟಣದ ಕಡೆ ಮುಖ ಮಾಡುತ್ತಿದ್ದರೆ, ಇಲ್ಲೊಬ್ಬ ಯುವಕ ಪಟ್ಟಣದ ಆಕರ್ಷಣೆಗಳನ್ನು ಮೆಟ್ಟಿ ನಿಂತು ಹಳ್ಳಿಗೆ ವಲಸೆ ಬಂದಿದ್ದಾರೆ. ಅಷ್ಟೇ ಅಲ್ಲದೆ ವ್ಯವಸಾಯವನ್ನು ಅಪ್ಪಿಕೊಂಡಿದ್ದಾರೆ.ಆಧುನೀಕರಣದತ್ತ ಸಾಗುತ್ತಿರುವ ಪ್ರಪಂಚದಲ್ಲಿ ಕೃಷಿ ಪರ ಒಲವು ದಿನೇ ದಿನೇ ಕಡಿಮೆಯಾಗುತ್ತಿದೆ. ಕೃಷಿ ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದ ಗ್ರಾಮೀಣರು, ನಗರಗಳತ್ತ ಮುಖ ಮಾಡಿದ್ದಾರೆ. ಅನೇಕರು ತಮ್ಮ ಭೂಮಿಗಳನ್ನು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಒಪ್ಪಿಸಿ ಆರಾಮಾಗಿರಲು ಬಯಸುತ್ತಿದ್ದಾರೆ.ಇದರ ನಡುವೆಯೂ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿ ರಾಮೇನಹಳ್ಳಿಯ ಯುವಕ ವಿ.ಮಹೇಶ್ ನಗರ ವಾಸಕ್ಕೆ ಗುಡ್‌ಬೈ ಹೇಳಿದ್ದಾರೆ. ಕೃಷಿಯೇ ಜೀವಾಳವೆಂದು ನಂಬಿ ಗ್ರಾಮಕ್ಕೆ ವಾಪಸ್ ಬಂದು ಶೂನ್ಯ ಕೃಷಿ ಮತ್ತು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದಾರೆ.ತಂದೆ ವೀರಭದ್ರನಾಯ್ಕ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದು ಒಟ್ಟು18 ಎಕರೆ. ಇದರಲ್ಲಿ 6 ಎಕರೆ ಕೆಂಪು ಮಣ್ಣು. ಉಳಿದದ್ದು ಕಪ್ಪು ಮರಳು ಮಿಶ್ರಿತ ಭೂಮಿ. 

ವಿ.ಮಹೇಶ್‌ಗೆ ಬಾಲ್ಯದಿಂದಲೂ ವೈದ್ಯನಾಗಬೇಕೆಂಬ ಬಯಕೆ.ಆದರೆ ಕಾರಣಾಂತರದಿಂದ ಅದು ಈಡೇರಲಿಲ್ಲ. ಆದರೂ ಪರಿಶ್ರಮದಿಂದ ಓದಿ  ಮೈಸೂರಿನ ಶ್ರೀಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ವಿಭಾಗ ಸೇರಿದರು. ಮೂರು ವರ್ಷ ಓದನ್ನೂ ಪೂರ್ಣಗೊಳಿಸಿದರು. ಆದರೆ ಅದೇಕೋ ಹಳ್ಳಿಯ ಸೆಳೆತ ಅವರನ್ನು ಬಿಡಲಿಲ್ಲ. ಎಂಜಿನಿಯರಿಂಗ್ ಓದು ಸಾಕು ಎಂದು ಮರಳಿ ರಾಮೇನಹಳ್ಳಿಗೆ ಬಂದು ಕೃಷಿಗೆ ಇಳಿದರು.ಎಲ್ಲರಂತೆ ರಾಸಾಯನಿಕ ಬಳಕೆ ಮಾಡುತ್ತಿದ್ದ ತಂದೆಯ ಕೃಷಿ ಪದ್ಧತಿ ಮಹೇಶ್‌ಗೆ ಒಪ್ಪಲಿಲ್ಲ. ಬಾಲ್ಯದಲ್ಲಿಯೇ ಪರಿಸರದಂತಹ ಕಾಳಜಿ ಬೆಳೆಸಿಕೊಂಡಿದ್ದ ಅವರು ಶೂನ್ಯ, ನೈಸರ್ಗಿಕ, ಸಾವಯವದಂತಹ ಕೃಷಿ ಪದ್ಧತಿಗೆ ಮಾರು ಹೋದರು. ಈಗ ಅವರ ಭೂಮಿಯಲ್ಲಿ ಮೂರು ಪದ್ಧತಿಗಳಿವೆ.ಬೆಳೆ ವಿಭಜನೆ

ಸ್ಥಳೀಯ ಸಕ್ಕರೆ ಕಾರ್ಖಾನೆ ಕೊಡುವ 8608 ತಳಿ (ಕಬ್ಬಿನ ವಿಧ) ಕಬ್ಬನ್ನು ನಾಲ್ಕು ಎಕರೆಯಲ್ಲಿ ನಾಟಿ ಮಾಡಿದ್ದಾರೆ. ತದ ನಂತರದಲ್ಲಿ ಅದಕ್ಕೆ ಯಾವುದೇ ಮಾರ್ಪಾಡು ಮಾಡದೇ ಬಿಟ್ಟಿದ್ದಾರೆ. ಯಾವುದೇ ಉಳುಮೆ ಮಾಡದೆ, ಕಳೆ ಕೀಳದೆ, ರಾಸಾಯನಿಕ ಅಥವಾ ಕೊಟ್ಟಿಗೆ ಗೊಬ್ಬರಗಳನ್ನು ಹಾಕದೆ, ಸುಮ್ಮನೆ ಬಿಟ್ಟು 15 ದಿನಕ್ಕೊಮ್ಮೆ ಸ್ಪ್ರಿಂಕ್ಲರ್ ಪದ್ಧತಿ ಮೂಲಕ ನೀರುಣಿಸುತ್ತಾರೆ. ಆದರೂ ಹುಲುಸಾಗಿ ಬೆಳೆ ಬಂದಿದೆ.ಒಂದು ಎಕರೆಗೆ 68 ಟನ್‌ನಂತೆ ಒಟ್ಟು 272 ಟನ್ ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಆಲೆಮನೆ ಸ್ಥಾಪಿಸಿ ಸ್ವತಃ ಬೆಲ್ಲ ತಯಾರು ಮಾಡಬೇಕೆಂಬ ಆಲೋಚನೆ ಇಟ್ಟುಕೊಂಡಿದ್ದಾರೆ. ಶುಂಠಿ (6 ತಿಂಗಳ ಬೆಳೆ)ಯನ್ನು ಮೂರು ಎಕರೆಯಲ್ಲಿ ಸಾವಯವ ಪದ್ಧತಿ ಅನುಸರಿಸಿ ಬೆಳೆಯುತ್ತಿದ್ದಾರೆ. ಹಿಮಾಚಲ, ಮಾಕಲ್ ಮತ್ತು ರಿಗೋಡಿ ತಳಿಗಳು ಇಲ್ಲಿವೆ. ಮಡಿಗಳ ಮೂಲಕ ಬೆಡ್ ಕಟ್ಟಿ, ಸಣ್ಣ ಸಣ್ಣ ಪಾತಿಗಳಲ್ಲಿ ನಾಟಿ ಮಾಡುತ್ತಾರೆ.ಅಂತರ ಬೆಳೆಗಳಾಗಿ ಬೀನ್ಸ್, ಮೆಣಸಿನಕಾಯಿ, ಚೆಂಡು ಹೂ ಮತ್ತು ಇತರೆ ಬೆಳೆ ತೆಗೆದಿದ್ದಾರೆ. ಒಂದು ಎಕರೆಗೆ 6 ಸಾವಿರ ಕಿಲೊ ಇಳುವರಿ ಸಿಕ್ಕಿದೆ. ಒಟ್ಟು ಮೂರು ಎಕರೆ ಬೆಳೆಯಲ್ಲಿ ಖರ್ಚು ಕಳೆದು 1 ಲಕ್ಷ ರೂಪಾಯಿ ಮಾಡಿದ್ದಾರೆ. ಬೆಳೆದ ಶುಂಠಿಯನ್ನು ಔಷಧಿ ಕಂಪೆನಿಯವರು ಹಳ್ಳಿಗೆ ಬಂದು ಖರೀದಿಸುತ್ತಾರೆ.  ಮೂರು ಎಕರೆಯಲ್ಲಿ ಏಲಕ್ಕಿ (ಹೇಮ), ನೇಂದ್ರ ಹಾಗೂ ಕೆಂಪು ಬಾಳೆ ಹಾಕಿದ್ದಾರೆ. ಇಲ್ಲೂ ಅವರದು ಸಾವಯವ ಪದ್ಧತಿ. ಎಕರೆಗೆ ಸಾವಿರ ಸಸಿ ನಾಟಿ ಮಾಡಿದ್ದಾರೆ. ಅಂತರ ಬೆಳೆಯಾಗಿ ಹುರುಳಿ, ತೊಗರಿ, ಅಲಸಂದೆ ಮತ್ತು ಚೆಂಡು ಹೂ ಬೆಳೆಯುತ್ತಾರೆ. ಒಂದೊಂದು ಗೊನೆ 10 ರಿಂದ 18 ಕಿಲೊ ತೂಗುತ್ತಿದೆ.ಮೂರು ಎಕರೆಯಲ್ಲಿ ಕರಿಮುದ್ಗ, ಬಿಳಿಮುದ್ಗ ಮತ್ತು ಅಯ್ಯನ್ ರಾಗಿ ಬೆಳೆದು ಎಕರೆಗೆ 12 ರಿಂದ 18 ಕ್ವಿಂಟಲ್ ಇಳುವರಿ ಪಡೆದಿದ್ದಾರೆ. ಅಂತರ ಬೆಳೆಗಳಾಗಿ ತೊಗರಿ, ಅಲಸಂದೆ, ನವಣೆ, ಸಜ್ಜೆ ಬೆಳೆಯುತ್ತಾರೆ. ಪ್ರಸ್ತುತ ನಾಗಮುತ್ತಿಗೆ, ಮಜ್ಜಿಗೆ, ಕೊಣ್‌ಕುಂಡ ಎಂಬ ರಾಗಿ ತಳಿಗಳನ್ನು ಸ್ವಲ್ಪ ಬೆಳೆದು ಪ್ರಯೋಗ ಮಾಡುತ್ತ್ದ್ದಿದಾರೆ.ಜಯ, ಜ್ಯೋತಿ, ಗೌರಿಸಣ್ಣ, ದೊಡ್ಡ ಭತ್ತದ ತಳಿಗಳನ್ನು ಒಂದು ಎಕರೆಯಲ್ಲಿ ಕಡಿಮೆ ನೀರು ಕೊಟ್ಟು ಬೆಳೆಯುತ್ತಾ ಬಂದಿದ್ದಾರೆ. ಸಾವಯವ ಪದ್ಧತಿಯಲ್ಲಿ `ಶ್ರೀ~ ಭತ್ತದ ತಳಿಯನ್ನು ಉತ್ಕೃಷ್ಟವಾಗಿ ಬೆಳೆದು ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಒಂದು ಎಕರೆಯಲ್ಲಿ ಕಡ್ಲೆಕಾಯಿ (ಶೇಂಗಾ) ಮತ್ತು ಅಂತರ ಬೆಳೆಯಾಗಿ ತೊಗರಿ, ಉ್ದ್ದದು, ಹೆಸರು, ಅವರೆ, ಜೋಳ ಬೆಳೆದಿದ್ದಾರೆ.ತೆಂಗಿನ ತೋಟದಲ್ಲಿ ಸಪೋಟ, ಅಡಿಕೆ, ತೇಗ ಹಾಗೂ ಇತರೆ ಮರಗಳನ್ನು ನೆಟ್ಟು ಯಾವುದೇ ಮಾರ್ಪಾಡು ಇಲ್ಲದೆ ಶೂನ್ಯ ಕೃಷಿಗೆ ಒಳಪಡಿಸಿದ್ದಾರೆ.ಉಪ ಕಸುಬು

ಹೈನುಗಾರಿಕೆಯಲ್ಲೂ ಅವರಿಗೆ ಆಸಕ್ತಿ. ಅವರ ಹತ್ತಿರ 18 ನಾಟಿ ಹಸುಗಳಿವೆ. ಅವುಗಳ ಸೆಗಣಿ ಗೋಬರ್ ಗ್ಯಾಸ್ ಉತ್ಪಾದನೆಗೆ ಬಳಕೆಯಾಗುತ್ತದೆ. ಜೇನು ಸಾಕಣೆ ಮಾಡುತ್ತಿದ್ದು, ವರ್ಷಕ್ಕೆ 20 ಲೀಟರ್‌ನಷ್ಟು ತುಪ್ಪ ಪಡೆಯುತ್ತಿದ್ದಾರೆ.  ಸುಮಾರು 200 ನಾಟಿ ಕೋಳಿ, 10 ಮೇಕೆಗಳಿವೆ.`ಎಂಜಿನಿಯರಿಂಗ್ ವ್ಯಾಸಂಗ ಪೂರೈಸಿ ದೊಡ್ಡ ಕಂಪೆನಿಯಲ್ಲಿ ಕೈತುಂಬ ಸಂಬಳ ಪಡೆಯಬೇಕಾದ ನೀವು ಕೃಷಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ~ ಎಂಬ ಪ್ರಶ್ನೆಗೆ ಅವರ ಉತ್ತರ `ಕೃಷಿಯಲ್ಲಿ ನೆಮ್ಮದಿಯಿದೆ. ಸ್ವಾವಲಂಬಿ ಬದುಕು ನಡೆಯುತ್ತಿದೆ. ಹಲವು ಕೃಷಿ ಪದ್ಧತಿಗಳನ್ನು ಅನುಸರಿಸಿ ಭೂಮಿಯ ಆರೋಗ್ಯ ಕಾಪಾಡುವುದೇ ನನ್ನ ಉದ್ದೇಶವಾಗಿದೆ~.ಮೈಸೂರಿನ ಪರಿಸರ ತಜ್ಞ ಡಾ. ಖಾದರ್ ಅವರಿಂದ ಆಗಾಗ ಮಾರ್ಗದರ್ಶನ ಪಡೆಯುತ್ತಾರೆ.  ಮಹೇಶ್ ಅವರ ಸಂಪರ್ಕ ಸಂಖ್ಯೆ 98457 48514.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry