ಬುಧವಾರ, ಮೇ 12, 2021
26 °C

ವ್ಯವಸಾಯೋತ್ಪನ್ನ ಸಹಕಾರ ಸಂಘ: ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಲಿದ್ದು, ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.15 ವರ್ಷಗಳಿಂದಲೂ ಕಾಂಗ್ರೆಸ್ ಕೈಲಿದ್ದ ಆಡಳಿತ ಈಗ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿನೊಂದಿಗೆ ಜೆಡಿಎಸ್‌ಗೆ ಒಲಿದಿದ್ದು, ಜೆಡಿಎಸ್‌ನಲ್ಲೇ ಇಬ್ಬರು ಆಕಾಂಕ್ಷಿಗಳು ಸ್ಪರ್ಧೆಗಿಳಿಯಲು ತಯಾರಿ ನಡೆಸಿರುವುದರಿಂದ ಚುನಾವಣೆ ಕುತೂಹಲ ಕೆರಳಿಸಿದೆ.ಒಟ್ಟು 14 ಸದಸ್ಯ ಬಲದಲ್ಲಿ 9 ಮಂದಿ ಜೆಡಿಎಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದು, 15 ವರ್ಷಗಳಿಂದ ಇಲ್ಲದ ಅಧಿಕಾರ ಈಗ ದೊರೆತಿರುವುದರಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಧ್ಯಕ್ಷಸ್ಥಾನ ಗಿಟ್ಟಿಸಲು ಜೆಡಿಎಸ್ ಮುಖಂಡರು ಕಸರತ್ತು ನಡೆಸಿದ್ದಾರೆ.ವಿಎಸ್‌ಎಸ್‌ಎನ್‌ಬಿ ಕ್ಷೇತ್ರದ 7, ಸಾಮಾನ್ಯ ಸದಸ್ಯ ಕ್ಷೇತ್ರದ ಇಬ್ಬರು, ಸರ್ಕಾರಿ ನಾಮನಿರ್ದೇಶಿತ 3 ಸದಸ್ಯರು, ಡಿಸಿಸಿ ಬ್ಯಾಂಕ್‌ನ ಒಬ್ಬರು ನಿರ್ದೇಶಕರು, ಒಬ್ಬರು ಸಹಕಾರ ಇಲಾಖೆ ಪ್ರತಿನಿಧಿ ಸೇರಿ ಒಟ್ಟು 14 ಮಂದಿ ಸದಸ್ಯರು ಮತಚಲಾಯಿಸಬೇಕಿದೆ.ಇವರಲ್ಲಿ 8 ಮಂದಿ ಜೆಡಿಎಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದು, ಡಿಸಿಸಿ ಬ್ಯಾಂಕ್‌ನ ನಿರ್ದೇಶಕರು ಸಹ ಜೆಡಿಎಸ್‌ನವರೇ ಆಗಿರುವುದರಿಂದ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಒಲಿಯುವುದರಲ್ಲಿ ಅನುಮಾನವಿಲ್ಲ. ಆದರೂ ಜೆಡಿಎಸ್‌ನ ಇಬ್ಬರು ಪ್ರಬಲ ಆಕಾಂಕ್ಷಿಗಳಾದ ಜಿ.ಕೃಷ್ಣೇಗೌಡ, ಬೈರಾಪಟ್ಟಣ ರವಿಕುಮಾರ್ ನಡುವೆ ಒಮ್ಮತ ಮೂಡಿಸಲು ಪ್ರಯತ್ನ ನಡೆಸಲಾಗಿದೆ.ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ನೇತೃತ್ವ ವಹಿಸಿದ್ದು ಎಲ್ಲಾ ಸ್ಥಾನಗಳು ಅವಿರೋಧ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು. ಅವರು ಕೃಷ್ಣೇಗೌಡರಿಗೆ ಬೆಂಬಲ ನೀಡಿರುವುದರಿಂದ ಅಂತಿಮ ಗಳಿಗೆಯಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಜೊತೆಯೂ ಕೃಷ್ಣೇಗೌಡ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಸಹ ಕೃಷ್ಣೇಗೌಡರಿಗೆ ಸಹಮತ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದ್ದು, ಗೌಡರು ಅಧ್ಯಕ್ಷರಾಗುವುದು ಖಚಿತ ಎಂದೇ ಹೇಳಲಾಗುತ್ತಿದೆ.ಈ ನಡುವೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಪಟ್ಟಣದ ಪ್ರವಾಸಿಮಂದಿರದಲ್ಲಿ ಸಭೆ ಸೇರಿ ಇಬ್ಬರು ಆಕಾಂಕ್ಷಿಗಳ ನಡುವೆ ಒಮ್ಮತ ಮೂಡಿಸಲು ಪ್ರಯತ್ನ ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.