ವ್ಯವಸಾಯ: ಯಂತ್ರಗಳ ಸಹಾಯ

7

ವ್ಯವಸಾಯ: ಯಂತ್ರಗಳ ಸಹಾಯ

Published:
Updated:
ವ್ಯವಸಾಯ: ಯಂತ್ರಗಳ ಸಹಾಯ

ಕೃಷಿ ಜಮೀನಿನಲ್ಲಿ ಇದೀಗ ಬದಲಾವಣೆ ಗಾಳಿ ಬೀಸುತ್ತಿದೆ. ವ್ಯವಸಾಯದ ವಿಧಾನವೇ ಬದಲಾಗುತ್ತಿದೆ. ರೈತರ ಮನೆ ಅಂಗಳದಲ್ಲಿ ಬಗೆಬಗೆಯ ಯಂತ್ರಗಳು ದಾಂಗುಡಿ ಇಟ್ಟಿವೆ.ಹಿಂದೆಲ್ಲಾ ಎತ್ತು ಮತ್ತು ನೇಗಿಲು ಹಿಡಿದು ಹತ್ತಾರು ಎಕರೆ ಹೊಲವನ್ನು ಉಳುಮೆ ಮಾಡಬೇಕಿತ್ತು. ಬೆಳಿಗ್ಗೆ 6 ಗಂಟೆಗೆ ಹೊಲಕ್ಕೆ ಹೋದರೆ  ಬಿಸಿಲು ನೆತ್ತಿ ಸುಡುವವರೆಗೂ ರೆಂಟೆ ಹೊಡೆಯುವುದು, ಕುಂಟೆಯಿಂದ ಹರಗುವುದು, ಕೊರಡಿನಿಂದ ಸಮತಟ್ಟು ಮಾಡುವುದು ಇತ್ಯಾದಿ ಕೆಲಸ ಪುರುಸೊತ್ತಿಲ್ಲದೆ ನಡೆಸಬೇಕಿತ್ತು.

 

ಒಂದು ಅಥವಾ ಎರಡು ಎಕರೆ ಜಮೀನಿನ ರೈತರಂತೂ ಗುದ್ದಲಿಯಲ್ಲೇ ಭೂಮಿ ಹದ ಮಾಡುವುದನ್ನು ಕಾಣಬಹುದಾಗಿತ್ತು. ಯಾಕೆಂದರೆ ಒಂದು ಜೋಡಿ ಎತ್ತಿನ ಕಿಮ್ಮತ್ತು 30-40 ಸಾವಿರ ರೂಪಾಯಿಗಿಂತ ಕಮ್ಮಿಯೇನಿಲ್ಲ.ಜಾಸ್ತಿ ಜಮೀನಿರುವ ದೊಡ್ಡ ರೈತರು ಟ್ರಾಕ್ಟರ್ ಬಳಸುವುದು ರೂಢಿಗೆ ಬಂದ ಮೇಲೆ ಕೃಷಿ ಕಾರ್ಯದಲ್ಲಿ ಸ್ವಲ್ಪ ವೇಗ ಕಂಡು ಬಂತು. ಆದರೆ ಆರಂಭದ ದಿನಗಳಲ್ಲಿ ಯಾಂತ್ರೀಕರಣ ಟ್ರಾಕ್ಟರ್, ಪವರ್ ಟಿಲ್ಲರ್‌ಗೆ ಸೀಮಿತವಾಗಿತ್ತು.ಹಿಂದೆಲ್ಲ ರೈತರು ಹೊಲದಲ್ಲಿನ ಒಂದು ಮರದ ದಿಮ್ಮಿ ಕತ್ತರಿಸಲಿಕ್ಕೂ ಕೊಡಲಿ, ಕತ್ತಿ ಅಥವಾ ಗರಗಸ ಹಿಡಿದು ದಿನಗಟ್ಟಲೇ ಪ್ರಯಾಸಪಡಬೇಕಿತ್ತು. ದನಗಳಿಗೆ ಮೇವು ಕೊಯ್ಯಲು, ಕತ್ತರಿಸಲು 3-4 ಕೂಲಿಗಳಾದರೂ ಬೇಕಿತ್ತು. ಹೊಲದಲ್ಲಿ, ತೋಟದಲ್ಲಿ ಕಳೆ ಕೀಳುವ ಕಷ್ಟ ಮಾತ್ರ ಹೇಳತೀರದ್ದಾಗಿತ್ತು. ಒಂದು ಕಡೆ ಕಿತ್ತು ಮುಂದೆ ಸಾಗಿದಂತೆ ಮರು ಹುಟ್ಟು ಪಡೆಯುವ ಕಳೆಯ ದೈತ್ಯ ಸ್ವರೂಪ ರೈತರನ್ನು ಹೈರಾಣು ಮಾಡುತ್ತಿತ್ತು.

 

ಸಕಾಲಕ್ಕೆ ಕೂಲಿ ಆಳುಗಳು ಸಿಗದಿದ್ದರಂತೂ ಕಳೆಯಿಂದ ಆಗುತ್ತಿದ್ದ ಲುಕ್ಸಾನು ಅಷ್ಟಿಷ್ಟಲ್ಲ. ಮಧ್ಯಮ ಮತ್ತು ಸಣ್ಣ ರೈತರಷ್ಟೇ ಅಲ್ಲ, ಕೂಲಿಯಾಳುಗಳನ್ನೆ ನೆಚ್ಚಿಕೊಳ್ಳಬೇಕಿದ್ದ ದೊಡ್ಡ ರೈತರೂ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು.

ಇನ್ನು ಮಲೆನಾಡಿನ ತೋಟಗಳಲ್ಲಿ ಅಡಿಕೆ ಕೊಳೆ ರೋಗಕ್ಕೆ ಮದ್ದು ಸಿಂಪರಣೆ ಮಾಡಲು, ತೆಂಗಿನ ಕಾಯಿ ಇಳಿಸಲು ಮರ ಏರಲೇ ಬೇಕು.ದಿನ ಕಳೆದಂತೆ ಮರ ಏರುವ ಕೌಶಲ್ಯದ ವ್ಯಕ್ತಿಗಳೂ ಸಿಗುತ್ತಿಲ್ಲ ಎಂಬುದು ರೈತರ ಅಳಲು. ಹೀಗಾಗಿಯೇ ವ್ಯವಸಾಯ ಎಂದರೆ ಸಾಕು ಅನಿಸಿಬಿಟ್ಟಿತ್ತು. ವ್ಯವಸಾಯದಲ್ಲಿ ಕೃಷಿ ಕಾರ್ಮಿಕರ ಕೊರತೆಯೇ ದೊಡ್ಡ ತಲೆನೋವು. ಹೀಗಾಗಿ ರೈತ ಕುಟುಂಬದ ಯುವಕರು ಕೃಷಿಯ ಉಸಾಬರಿಯೇ ಬೇಡ ಎಂದು ನಗರಗಳ ಕಡೆ ಮುಖ ಮಾಡತೊಡಗಿದ್ದರು.ಆದರೆ ಈಗ ಕಾಲ ನಿಧಾನವಾಗಿ ಬದಲಾಗುತ್ತಿದೆ. ಯುವಕರು ಮತ್ತೆ ಹಳ್ಳಿಯತ್ತ, ಹೊಲದತ್ತ ಮನಸ್ಸು ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗುತ್ತಿರುವುದು ಹೊಸ ತಲೆಮಾರಿನ ಕೃಷಿ ಯಂತ್ರಗಳು. ಇವು ಕೂಲಿಯಾಳುಗಳ ಅವಲಂಬನೆ ಕಡಿಮೆ ಮಾಡುತ್ತಿವೆ.ಉಳುವುದು, ನಾಟಿ ಮಾಡುವುದು ಕಳೆ ಕೀಳುವುದು, ಎತ್ತರದ ಮರಗಳ ತುದಿಯನ್ನೂ ತಲುಪುವಂತೆ ಔಷಧ, ಕೀಟನಾಶಕ ಸಿಂಪರಣೆ ಮಾಡುವುದು, ಗಿಡ ನೆಡಲು ಗುಂಡಿ ತೋಡುವುದು, ಕಟಾವು, ಒಕ್ಕುವುದು ಹೀಗೆ ಹೊಲದ ಬಹುತೇಕ ಕೆಲಸಗಳನ್ನು ಮಾಡುವ ಯಂತ್ರಗಳಿವೆ. ದನಗಳಿಗೆ ಮೇವು ಕತ್ತರಿಸುವುದು, ಗೊಬ್ಬರ ತಯಾರಿಸಲು ಸೊಪ್ಪು ಕತ್ತರಿಸುವುದು, ತೋಟದಲ್ಲಿ ಅಗತೆ ಕೊಚ್ಚುವುದು ಮುಂತಾಗಿ ರೈತರ ನಿತ್ಯ ಕಾರ್ಯಗಳು ಸುಲಭವಾಗುತ್ತಿದೆ.ಇಂಥ ಬಹುಪಾಲು ಯಂತ್ರಗಳು ಏಕ ವ್ಯಕ್ತಿ ಚಾಲಿತ ಎಂಬುದು ಇನ್ನೊಂದು ವಿಶೇಷ. ಇವುಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಸುಲಭವಾಗಿ ಪೂರೈಸುವ ಮಳಿಗೆಗಳು ಸಣ್ಣ ಊರುಗಳಲ್ಲೂ ತಲೆಯೆತ್ತುತ್ತಿವೆ.

ಕೆಲ ಮಳಿಗೆಗಳಲ್ಲಿ ರೈತರಿಗೆ ಉಪಯೋಗವಾಗುವ 200 ಕ್ಕೂ ಹೆಚ್ಚು ಮಾದರಿಯ ಕೃಷಿ ಯಂತ್ರಗಳನ್ನು ಕಾಣಬಹುದು.ಗಾತ್ರದಲ್ಲಿ ಸಣ್ಣದು ಎನ್ನುವುದನ್ನು ಬಿಟ್ಟರೆ ಈ ಮಳಿಗೆಗಳಿಗೂ ಮತ್ತು ಪಟ್ಟಣಗಳ ಆಕರ್ಷಕ ಮಾಲ್‌ಗಳಿಗೂ ಏನೂ ವ್ಯತ್ಯಾಸ ಇಲ್ಲ. ಅಚ್ಚುಕಟ್ಟಾಗಿ ಇಡಲಾದ ವೈವಿಧ್ಯಮಯ ಕೃಷಿ ಯಂತ್ರೋಪಕರಣಗಳು ಗಮನ ಸೆಳೆಯುತ್ತವೆ.

 

ಹಚ್ಚ ಹಸುರಿನ ನೆಲಹಾಸಿನ ಮೇಲೆ ನಡೆಯುತ್ತ ಅಕ್ಕ-ಪಕ್ಕದ ಯಂತ್ರಗಳನ್ನು ನೋಡುವುದೇ ಚಂದ. ಕಳೆಕೊಚ್ಚುವ ಯಂತ್ರಗಳ ವಿವಿಧ ಮಾದರಿಗಳು, ಬಗೆಬಗೆಯ ಸ್ಪ್ರೇಯರ್‌ಗಳು, ರೋಟರಿ ಟಿಲ್ಲರ್‌ಗಳು, ಮರಕೊಯ್ಯುವ ಯಂತ್ರಗಳು, ನೆಲದ ಗುಂಡಿ ತೊಡುವ ಆಗರ್‌ಗಳು. ಒಂದೇ ಎರಡೇ.ವಿಶೇಷ ಎಂದರೆ ಇವನ್ನೆಲ್ಲ ಕೊಳ್ಳಲು ಮಹಾನಗರಗಳಿಗೇ ಹೋಗಬೇಕೆಂದಿಲ್ಲ. ಜಿಲ್ಲಾ ಕೇಂದ್ರಗಳು, ದೊಡ್ಡ ಪಟ್ಟಣಗಳಲ್ಲೂ ಕೃಷಿ ಮಳಿಗೆ ಸಂಸ್ಕೃತಿ ಕಾಲಿಟ್ಟಿದೆ. ರೈತರಿಗೆ ಮನೆ ಬಾಗಿಲಲ್ಲೇ ಸೇವೆ ಸಲ್ಲಿಸುತ್ತಿದೆ.

 

ಮಾರ್ಗದರ್ಶನ, ತರಬೇತಿ

ಉಪಕರಣಗಳನ್ನು ಪೂರೈಸುವುದಷ್ಟೇ ಅಲ್ಲ, ಸೂಕ್ತ ಉಪಕರಣಗಳ ಆಯ್ಕೆಯಲ್ಲಿ ಮಾರ್ಗದರ್ಶನ, ಮಾರಾಟ ನಂತರದ ಸೇವೆ ಒದಗಿಸುವುದು, ದುರಸ್ತಿ, ಉಪಕರಣಗಳ ಸರಿಯಾದ ಬಳಕೆ ಬಗ್ಗೆ ತರಬೇತಿ, ಗುಣಮಟ್ಟದ ಬಿಡಿಭಾಗಗಳ ಪೂರೈಕೆ, ಉಚಿತ ಪ್ರಾತ್ಯಕ್ಷಿಕೆ... ಹೀಗೆ ಕೃಷಿಕರ ಅವಶ್ಯಕತೆಗಳನ್ನು ಒಂದೇ ಸೂರಿನಡಿ ಪೂರೈಸುತ್ತಿದ್ದೇವೆ.

ರೈತರ ಪ್ರತಿಕ್ರಿಯೆ ಕೂಡ ಚೆನ್ನಾಗಿದೆ ಎನ್ನುತ್ತಾರೆ ರಾಜ್ಯದ 24 ಕಡೆ ಅಗ್ರಿಮಾರ್ಟ್ ಹೆಸರಿನಲ್ಲಿ ಕೃಷಿ ಯಂತ್ರೋಪಕರಣಗಳ ಮಳಿಗೆ ತೆರೆದಿರುವ ರತ್ನಗಿರಿ ಇಂಪೆಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎ. ವಾಸುದೇವಮೂರ್ತಿ.`ಕೈತೋಟ, ವನ ಅಭಿವೃದ್ಧಿ, ಕೈಗಾರಿಕಾ ಶುದ್ಧೀಕರಣ, ಕೃಷಿ ಚಟುವಟಿಕೆಗಳಿಗೆ ಬೇಕಾದ ಯಂತ್ರಗಳು ಇಲ್ಲಿ ಲಭ್ಯ. ರಿಟೇಲ್ ಮಾದರಿ ಮಾರುಕಟ್ಟೆ ಇದು. ಹೀಗಾಗಿ ಮಳಿಗೆಯನ್ನು ತೆರೆಯಲು ಬಯಸುವ ಉತ್ಸಾಹಿ ಗ್ರಾಮೀಣ ಪಾಲುದಾರರಿಗೆ ಕೂಡಾ ಪ್ರೋತ್ಸಾಹಿಸುತ್ತಿದ್ದೇವೆ. 24 ಜಿಲ್ಲೆಗಳಲ್ಲಿ ಅಗ್ರಿಮಾರ್ಟ್ ತೆರೆದಿರುವ ಪಾಲುದಾರರೆಲ್ಲಾ ಗ್ರಾಮೀಣ ಭಾಗದವರು ಮತ್ತು ಸ್ವಂತ ಉದ್ಯೋಗದ ಹಂಬಲ ಉಳ್ಳವರು~ ಎಂದು ಅವರು ವಿವರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry