ವ್ಯವಸ್ಥಿತ ಮಾರುಕಟ್ಟೆಗೆ ಆಗ್ರಹ

7
ಮಾರಾಟದಲ್ಲಿ ಅಕ್ರಮ, ಹೂವು ಬೆಳೆಗಾರರ ಪ್ರತಿಭಟನೆ

ವ್ಯವಸ್ಥಿತ ಮಾರುಕಟ್ಟೆಗೆ ಆಗ್ರಹ

Published:
Updated:

ಚಿತ್ರದುರ್ಗ: ‘ಹೂವನ್ನು ಸಮರ್ಪಕವಾಗಿ ಅಳತೆ ಹಾಕಿ ಖರೀದಿಸಬೇಕು. ಪರವಾನಗಿ ಸಹಿತ ದಲ್ಲಾಳಿಗಳೇ ಯಾವುದೇ ಕಮಿಷನ್ ಇಲ್ಲದೇ ಹೂವು ಖರೀದಿಸಬೇಕು. ತರಕಾರಿ ಮಾರುಕಟ್ಟೆಗಳಲ್ಲೇ ಹೂವನ್ನು ಇಟ್ಟು ಮಾರಾಟ ಮಾಡುವುದನ್ನು ತಪ್ಪಿಸಿ, ಹೂವಿನ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸ ಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಪುಷ್ಪ ಬೆಳೆಗಾರರು, ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಮಾರುಕಟ್ಟೆಯಲ್ಲಿ ಶುಕ್ರವಾರ ಹೂವಿನ ಗಂಟುಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.‘ಹೂವನ್ನು ಮಾರು ಹಾಕುವುದರಲ್ಲಿ ವ್ಯತ್ಯಾಸ ಮಾಡುತ್ತಾರೆ. ₨ 100ಕ್ಕೆ ಹೂವು ಖರೀದಿಸಿದರೆ ₨ 10 ಕಮಿಷನ್ ಕೇಳುತ್ತಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದೆವು.  ಗುರುವಾರ ಸಂಜೆ ತಹಶೀಲ್ದಾರ್ ಅವರು ಹೂವು ಮಾರುಕಟ್ಟೆಗೆ ಬಂದಾಗ ಅನಧಿಕೃತವಾಗಿ ಹೂವು  ಮಾರಾಟ ಮಾಡದಂತೆ ಎಚ್ಚರಿಸಿದ್ದರು. ಇಲ್ಲಿನ ಎಲ್ಲ ವಹಿವಾಟನ್ನು ಎಪಿಎಂಸಿ ಮಾರಕಟ್ಟೆಗೆ ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದ್ದರು.

ಆದರೆ, ಇಂದು ಹೂವು  ಖರೀದಿ ಮಾಡಲು ವರ್ತಕರೇ ಇಲ್ಲದಿರುವುದು ಆತಂಕ ಮೂಡಿಸಿದೆ. ಈಗ ನಾವು ದಾವಣಗೆರೆ ಹೋಗಿ ಹೂವು  ಮಾರಾಟ ಮಾಡಬೇಕಿದೆ’ ಎಂದು ಹುಣಸೆಕಟ್ಟೆಯ ಹೂವು ಬೆಳೆಗಾರ ಕಾಂತರಾಜು ಬೇಸರ ವ್ಯಕ್ತಪಡಿಸಿದರು. ‘ದಲ್ಲಾಳಿಗಳ  ಮೇಲೆ ಕ್ರಮ ಕೈಗೊಂಡು, ಹೂವಿನ ಮಾರುಕಟ್ಟೆಯನ್ನು ಎಪಿಎಂಸಿಗೆ ವರ್ಗಾಯಿಸಬೇಕೆಂದು ಬಹಳ ದಿನಗಳಿಂದ ಜಿಲ್ಲಾಧಿಕಾರಿಗೆ ಮತ್ತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ದಲ್ಲಾಳಿಗಳು  ಮಾಡುತ್ತಿರುವ ಅನ್ಯಾಯದ ವಿರುದ್ಧ ಸಾಕಷ್ಟು ಹೋರಾಟ ಮಾಡಿದ್ದೇವೆ. ಆದರೆ, ಏನೂ  ಪ್ರಯೋಜನವಾಗಿಲ್ಲ’ ಎಂದು ಮಾಡನಾಯಕನಹಳ್ಳಿಯ ಬೆಳೆಗಾರ ಡಿ.ಕೆ.ಮಂಜುನಾಥ್ ದೂರಿದರು.ಅನಧಿಕೃತ ವ್ಯಾಪಾರ: ‘ಈ ಮಾರುಕಟ್ಟೆಯಲ್ಲಿ 13 ದಲ್ಲಾಳಿ ಅಂಗಡಿಗಳಿವೆ. ಯಾರಿಗೂ  ಹೂವು ಮಾರಾಟಕ್ಕೆ ಪರವಾನಗಿ ಇಲ್ಲ. ಎಲ್ಲರೂ ತರಕಾರಿ ಅಂಗಡಿಯ ಒಂದು ಭಾಗದಲ್ಲಿ ಹೂವಿನ ವ್ಯಾಪಾರ ಮಾಡುತ್ತಾರೆ. ಇದೆಲ್ಲ ವಿಚಾರ ಅಧಿಕಾರಿಗಳಿಗೆ ಗೊತ್ತಿದೆ. ಆದರೂ ಕ್ರಮ ಕೈಗೊಳ್ಳದೇ ಸುಮ್ಮನಿರುತ್ತಾರೆ ಎಂದು ಮಾಡನಾಯಕನಹಳ್ಳಿ ಹೂವಿನ ಬೆಳೆಗಾರರ ಆರೋಪಿಸುತ್ತಾರೆ.‘ಅಧಿಕಾರಿಗಳು ಹೂವಿನ ಮಾರುಕಟ್ಟೆಯನ್ನು ಸಹ ರಾಜಕೀಯ ಒತ್ತಡದಿಂದ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುತ್ತಿಲ್ಲ. ಜಿಲ್ಲಾಧಿಕಾರಿ ಕೇವಲ ಆಶ್ವಾಸನೆ ನೀಡುತ್ತಿದ್ದಾರೆ ಎಂದು ದೂರಿದರು. ನಿತ್ಯ ೨೫-೩೦ ಕ್ವಿಂಟಲ್ ಕನಕಾಂಬರ ಹೂವು  ಮಾರುಕಟ್ಟೆಗೆ ಬರುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂವಿನ ಉದ್ಯಮವಿದ್ದರೂ ನಮ್ಮ ಜಿಲ್ಲಾ ಕೇಂದ್ರದಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ರೈತರನ್ನು ಶೋಷಿಸಲಾಗುತ್ತಿದೆ ಎಂದು ಬೆಳೆಗಾರರು ಆರೋಪಿಸಿದರು.ಸೂಕ್ತ ಮಾರುಕಟ್ಟೆ ಬೇಕು: ಖರೀದಿದಾರ ದಲ್ಲಾಳಿಗಳಿಂದ ಶೋಷಣೆ ತಪ್ಪಿಸಿಬೇಕು, ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು. ಹೂವು  ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸ ಬೇಕು. ಇಲ್ಲವೇ ಪುಷ್ಪ ಮಾರಾಟಕ್ಕೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕು ಎಂದು  ಎಂ.ರಮೇಶ್, ಚಿಕ್ಕಗೊಂಡನಹಳ್ಳಿ ಬಿ.ಜಿ.ಲೋಕೇಶ್, ಸುಮನ್, ಕುಂಚಿಗನಾಳ್ ಆರ್.ಪರಮೇಶ್ವರಪ್ಪ, ತಿಪ್ಪೇಸ್ವಾಮಿ,   ಬೊಮ್ಮನ ಹಳ್ಳಿ ಮಂಜುನಾಥ್ ಸೇರಿದಂತೆ ಪ್ರತಿಭಟನೆ ವೇಳೆ ಮಾರುಕಟ್ಟೆಯಲ್ಲಿ ಜಮಾಯಿಸಿದ್ದ ನೂರಾರು ಹೂವಿನ ಬೆಳೆಗಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry