ಭಾನುವಾರ, ಆಗಸ್ಟ್ 25, 2019
21 °C

`ವ್ಯವಸ್ಥೆ ಬದಲಾವಣೆಗೆ ಇಚ್ಛಾಶಕ್ತಿ ಕೊರತೆ'

Published:
Updated:

ದಾವಣಗೆರೆ: `ಅಧಿಕಾರಿ ವರ್ಗ ಮತ್ತು ಆಡಳಿಯ ಯಂತ್ರ ಇಚ್ಛಾಶಕ್ತಿ ಪ್ರದರ್ಶಿಸಿದರೆ ಸಮಾಜದಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬಹುದು' ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.ದಾವಣಗೆರೆಯ ರೇಣುಕ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 18ನೇ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶ ಸಮಾರಂಭದಲ್ಲಿ ಅವರು ಮಾತನಾಡಿದರು.ಸಮಾಜ ಪರಿವರ್ತನೆಗೆ ಕೋಟ್ಯಂತರ ಜನರ ಅಗತ್ಯವಿಲ್ಲ. ಒಬ್ಬರಿಂದಲೂ ಬದಲಾವಣೆ ಸಾಧ್ಯ ಎಂಬುದಕ್ಕೆ ಇತಿಹಾಸದ ಘಟನಗೆಳು ಸಾಕ್ಷಿಯಾಗಿವೆ. ಗಾಂಧೀಜಿ, ವಿವೇಕಾನಂದರಂಥವರು ಎಷ್ಟೆಲ್ಲಾ ಪರಿವರ್ತನೆ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಜನಪ್ರತಿನಿಧಿ ಮತ್ತು ಅಧಿಕಾರಿ ಎನ್ನಿಸಿಕೊಂಡವರು ಸಾಮರಸ್ಯ ಮತ್ತು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಅವರು ವಿಷಾದಿಸಿದರು.

ನಾನು ಜವಾಬ್ದಾರಿ ಹೊತ್ತಿರುವ ಶಿಕ್ಷಣ ಖಾತೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನ್ಯಾಯ ಸಲ್ಲಿಸುತ್ತೇನೆ ಎಂದು ಅವರು ರಂಭಾಪುರಿ ಶ್ರೀ ಅವರಿಗೆ ಸಚಿವರು ಭರವಸೆ ನೀಡಿದರು.ಅನೇಕರು ಧರ್ಮ, ದೇವರು, ಪುರಾಣ, ಶ್ರೀಗಳ ಆರ್ಶೀವಚನ ಅಂತೆಲ್ಲ ಬಡಬಡಿಸುತ್ತಾರೆ. ಆದರೆ, ಹೆತ್ತು ಎದೆಹಾಲುಣಿಸಿ ಸಾಕಿದ ಹೆತ್ತಮ್ಮನಿಗೆ ತುತ್ತು ಅನ್ನ ಹಾಕದೇ ಬೀದಿಗಟ್ಟುತ್ತಾರೆ. ಇಂತಹ ಕೆಲಸ ಮಾಡಿ ದೇವರ ಸುತ್ತ ಸುತ್ತಿದರೆ ಯಾವ ಭಾಗ್ಯವೂ ದೊರೆಯುವುದಿಲ್ಲ. ಹಿಂದೆ ಅಕ್ಷರಸ್ಥರ ಪ್ರಮಾಣ ಕಡಿಮೆ ಇತ್ತು. ಆದರೆ, ಪ್ರಾಮಾಣಿಕತೆ, ನ್ಯಾಯಪರತೆ ಹೆಚ್ಚಿತ್ತು. ಈಗ ಸಾಕ್ಷರತೆಯ ಪ್ರಮಾಣ ಹೆಚ್ಚಿದ್ದರೂ, ಅಧರ್ಮ, ಅನ್ಯಾಯ ತಾಂಡವವಾಡುತ್ತಿದೆ ಎಂದರು.ಸಮಾರಂಭದ ನೇತೃತ್ವ ವಹಿಸಿದ್ದ ರಂಭಾಪುರಿ ಶ್ರೀ ಮಾತನಾಡಿ, `ಸಮುದಾಯದ ಎಲ್ಲ ರಂಗಗಳಲ್ಲಿ ಆದರ್ಶ, ಮೌಲ್ಯಗಳು ಕುಸಿಯುತ್ತಿವೆ. ಪರಸ್ಪರ ಪ್ರೀತಿ-ವಿಶ್ವಾಸ, ಶ್ರದ್ಧೆ ಕಣ್ಮರೆಯಾಗುತ್ತಿವೆ. ಮನಸ್ಸು ಮಲಿನಗೊಂಡಿದೆ. ಧರ್ಮದ ಮಾರ್ಗಗಳನ್ನು ಅನುಸರಿಸುವ ಮೂಲಕ ಮನಸ್ಸು ಶುದ್ಧೀಕರಿಸುವ ಕಾರ್ಯವನ್ನು ಎಲ್ಲ ಧಾರ್ಮಿಕ ಮುಖಂಡರು ಮಾಡಬೇಕು ಎಂದರು.ಕೇದಾರ ಜಗದ್ಗುರು ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, `ವೀರಶೈವ ಧರ್ಮ ಅತ್ಯಂತ ಪ್ರಾಚೀನವಾಗಿದೆ. ಇಂದು ಜೀವನ ಉತ್ಕರ್ಷತೆಗೆ ಧರ್ಮಜ್ಞಾನ ಅವಶ್ಯ. ಜಾತಿ ಜಂಜಡಗಳನ್ನು ಮೀರಿ ಭಾವೈಕ್ಯ ಬಿತ್ತಬೇಕು ಎಂದು ಹೇಳಿದರು.ಜಗಳೂರು ಕಣ್ವಕುಪ್ಪೆ ಗವಿಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಕೆ. ಮಲ್ಲಪ್ಪ, ಜಿ. ಶಿವಯೋಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Post Comments (+)