ಭಾನುವಾರ, ಮೇ 22, 2022
23 °C

ವ್ಯಾಘ್ರ ಸಂತತಿ ಸಂರಕ್ಷಣೆ ನಿಷ್ಕಾಳಜಿ: ಎಲ್ಲಿ ಹೋದವು ಎಲ್ಲಾ ಹುಲಿಗಳು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸರ್ಕಾರದ ನಿಷ್ಕಾಳಜಿ ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿರುವ ತರಬೇತಿ ಕೊರತೆಯಿಂದ ಹುಲಿ ಸಂತತಿ ಕ್ಷೀಣಿಸುತ್ತಿದೆ’ ಎಂದು ಖ್ಯಾತ ವನ್ಯಜೀವಿ ತಜ್ಞ ಹಾಗೂ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನ ಸಂಸ್ಥಾಪಕ ನಿರ್ದೇಶಕ ಡಾ.ಉಲ್ಲಾಸ್ ಕಾರಂತ ಅವರು ವಿಷಾದಿಸಿದರು.ನಗರದಲ್ಲಿ ಶುಕ್ರವಾರ ‘ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ’ವು ಏರ್ಪಡಿಸಿದ್ದ ‘ಎಲ್ಲಿ ಹೋದವು ಎಲ್ಲಾ ಹುಲಿಗಳು’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ‘ಹುಲಿಗಳನ್ನು ಸಂರಕ್ಷಿಸುವ ಕುರಿತಂತೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ.ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿದರೆ ಅದು ವಿಳಂಬವಾಗಿ ಕಾರ್ಯಗತವಾಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿಗೆ ವನ್ಯಜೀವಿಗಳನ್ನು ಸಂರಕ್ಷಿಸುವಲ್ಲಿ ಸೂಕ್ತ ತರಬೇತಿಯೇ ಇಲ್ಲ. ಹುಲಿಗಳ ಅವ್ಯಾಹತ ಬೇಟೆ ಮತ್ತು ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹುಲಿಗಳ ವಿನಾಶಕ್ಕೆ ಕಾರಣವಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.ಹುಲಿಗಳ ಓಡಾಟಕ್ಕೆ ಭಾರತದಲ್ಲಿ ದಟ್ಟ ಅರಣ್ಯ ಪ್ರದೇಶ ಲಭ್ಯವಿಲ್ಲ. ಉದಾಹರಣೆಗೆ ರಷ್ಯಾದಲ್ಲಿ ಪ್ರತಿ ಹುಲಿಗೆ 600 ಚದರ ಕಿ.ಮೀ. ಪ್ರದೇಶ ಲಭ್ಯವಿದ್ದರೆ ದೇಶದಲ್ಲಿ ಇದರ  ಪ್ರಮಾಣ 16.89 ಚ.ಕಿ.ಮೀ. ಇದೆ. ಚರ್ಮ ಮತ್ತಿತರ ಉಪಯುಕ್ತ ಅಂಗಗಳಿಗೆ ಹುಲಿಯನ್ನು ಬೇಟೆಯಾಡುವುದು. ವಿದ್ಯುತ್ ಯೋಜನೆ, ಕಬ್ಬಿಣದ ಅದಿರು ತೆಗೆಯಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡುವುದರಿಂದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಹುಲಿ ಸಂತತಿಯ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ಅವರು ನುಡಿದರು.ವಾರಕ್ಕೊಂದರಂತೆ ವರ್ಷಕ್ಕೆ 50 ಹಸು ಅಥವಾ ಎಮ್ಮೆಗಳು ಹುಲಿಗೆ ಆಹಾರವಾಗಬೇಕು. ಆದರೆ ಅರಣ್ಯ ಒತ್ತುವರಿಯಿಂದ ಆಹಾರವೇ ದೊರಕುತ್ತಿಲ್ಲ. ಅಲ್ಲದೇ ಯೋಜನಾ ನಿರಾಶ್ರಿತರಿಗೆ ಅರಣ್ಯದ ಮಧ್ಯಭಾಗದಲ್ಲೇ ಜಮೀನು ನೀಡುವುದು, ಆದಿವಾಸಿಗಳು ಈ ಪ್ರದೇಶದಲ್ಲೇ ನೆಲೆಸಿರುವುದು ಮತ್ತು ಪರಿಸರ ಪ್ರವಾಸೋದ್ಯಮವು ಕೇವಲ ತಾತ್ಕಾಲಿಕ ಲಾಭದ ದೃಷ್ಟಿಕೋನದಲ್ಲೇ ನಡೆಯುತ್ತಿರುವುದು ವನ್ಯಜೀವಿಗಳ ಅವನತಿಗೆ ಕಾರಣವಾಗಿದೆ ಎಂದು ನುಡಿದರು.‘ಇದರಿಂದ ಚಿಂತಿತರಾಗಬೇಕಿಲ್ಲ. ಸತತ ಪ್ರಯತ್ನದ ಫಲವಾಗಿ ಕೆಲ ಪರಿಹಾರ ಕ್ರಮಗಳನ್ನೂ ಕೈಗೊಂಡಿದ್ದರ ಫಲವಾಗಿ ವನ್ಯಜೀವಿಗಳ ರಕ್ಷಣೆ ಸಾಧ್ಯವಾಗುತ್ತಿದೆ. ಉದಾಹರಣೆಗೆ ಆದಿವಾಸಿ ಸಮುದಾಯದವರ ಮನವೊಲಿಸಿ ಅವರ ವಾಸಸ್ಥಳವನ್ನು ವನ್ಯಜೀವಿಗಳಿರುವ ಪ್ರದೇಶದಿಂದ ಮತ್ತೊಂದೆಡೆ ಸ್ಥಳಾಂತರಿಸುವುದು, ಅರಣ್ಯ ಸಿಬ್ಬಂದಿಗೆ ವೈಜ್ಞಾನಿಕ ತರಬೇತಿ ನೀಡುವುದು ಹಾಗೂ ಅಭಿವೃದ್ಧಿ ಹೆಸರಲ್ಲಿ ವನ್ಯಜೀವಿಗಳಿಗೆ ಧಕ್ಕೆ ತರುವ ಕಾಮಗಾರಿಗಳಿಗೆ ತಡೆ ನೀಡಿರುವುದರಿಂದ ಹುಲಿಗಳ ಸಂತತಿ ಈಗ ಏರುಗತಿಯಲ್ಲಿದೆ’ ಎಂದರು.ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಮಾತನಾಡಿ, ‘ಯಾವ ಸರ್ಕಾರವೂ ಕೂಡ ವನ್ಯಜೀವಿಗಳ ಸಂರಕ್ಷಣೆಗೆ ‘ನೈಜ’ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಅಲ್ಲದೇ ಅಭಿವೃದ್ಧಿ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ’ ಎಂದು ಹೇಳಿದರು.ಸಂಸ್ಥೆಯ ನಿರ್ದೇಶಕ ಪಿ.ಆರ್.ದಾಸ್‌ಗುಪ್ತಾ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.