ವ್ಯಾಪಕ ಮಾನವ ಹಕ್ಕು ಉಲ್ಲಂಘನೆ: ಆತಂಕ

7

ವ್ಯಾಪಕ ಮಾನವ ಹಕ್ಕು ಉಲ್ಲಂಘನೆ: ಆತಂಕ

Published:
Updated:

ದೇವನಹಳ್ಳಿ: ಸರ್ಕಾರಿ ಇಲಾಖೆ ಮತ್ತು ಸಾಮಾಜಿಕ ಸಂಘ, ಸಂಸ್ಥೆಗಳಿಂದಲ್ಲೂ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್. ಆರ್. ನಾಯಕ್ ಆತಂಕ ವ್ಯಕ್ತಪಡಿಸಿದರು.ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು, ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಅವರಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದರು.`ನಮ್ಮ  ಗ್ರಾಮ, ನನ್ನ ಕರ್ತವ್ಯ~ ಎಂಬುದನ್ನು ಅರಿತು ಸಾರ್ವಜನಿಕರು ಕಾರ್ಯ ನಿರ್ವಹಿಸಬೇಕು. ಹತ್ತಿ ಬಟ್ಟೆಯ ಚೀಲಗಳನ್ನು ಬಳಸುವುದರಿಂದ ರೈತರ ಹತ್ತಿಗೂ ಬೇಡಿಕೆ ಉಂಟಾಗುತ್ತದೆ. ಅಲ್ಲದೆ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು.ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಎಲ್ಲಾ ಇಲಾಖೆ ಅಧಿಕಾರಿಗಳಿಗೂ ಪ್ರಮಾಣ ವಿಧಿ ಬೋಧಿಸುವಂತೆ ತಹಶೀಲ್ದಾರ್ ಎಲ್.ಸಿ.ನಾಗರಾಜ್ ಅವರಿಗೆ ಸೂಚಿಸಲಾಗಿದೆ. ಅದರಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಂದಲೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದಾಗಿ ಪ್ರಮಾಣ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ದಲಿತ ಸಂಘ ನೀಡಿರುವ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದ ನಾಯಕ್ ಅವರು, ಇಲ್ಲಿನ ಮಿನಿವಿಧಾನ ಸೌಧದಲ್ಲಿ ಈಗಾಗಲೇ ಎಲ್ಲಾ ಇಲಾಖೆಗೆ ಸಂಬಂಧಪಟ್ಟ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದರೂ,  ನೋಂದಣಿ ಕಚೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಿನಿ ವಿಧಾನಸೌಧದಲ್ಲಿ ಅಗತ್ಯ ಕೊಠಡಿ ವ್ಯವಸ್ಥೆ ಇದ್ದರೂ, 40 ಸಾವಿರ  ಮಾಸಿಕ ಬಾಡಿಗೆ ನೀಡಿ ಖಾಸಗಿಯವರ ಕಟ್ಟಡದಲ್ಲಿ ನೋಂದಣೆ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry