ಗುರುವಾರ , ಮೇ 13, 2021
34 °C

ವ್ಯಾಪಾರದಲ್ಲಿ ನಷ್ಟ; ವ್ಯವಸಾಯ ಇಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಾಕಷ್ಟು ಬೆಳಿತೀವಿ. ಬೆಳೆದಿದ್ದನ್ನು ತೃಪ್ತಿಯಾಗಿ ಊಟ ಮಾಡ್ತಿವಿ. ನೆಮ್ಮದಿಯಾಗಿ ಇದ್ದೀವಿ~  ಎನ್ನುವ ಚಿದಾನಂದ ಮೂರ್ತಿ ಪೇಟೆಯಿಂದ ಹಳ್ಳಿಗೆ ಬಂದು ಕೃಷಿಯನ್ನು ಅಪ್ಪಿಕೊಂಡು  ಬದುಕು ಕಟ್ಟಿಕೊಂಡವರು.ಇವರ ಹಾಲಿ ಕಾರ್ಯಭೂಮಿ ತುಮಕೂರು ಜಿಲ್ಲೆ ಕೆ ಬಿ ಕ್ರಾಸ್ ಬಳಿಯ ಹಾಲುಗೊಣ. ವ್ಯವಸಾಯಕ್ಕೆ ಇಳಿಯುವ ಮುನ್ನ 35 ವರ್ಷ ತಿಪಟೂರಿನಲ್ಲಿ ಕೊಬ್ಬರಿ ಮಂಡಿ ನಡೆಸಿದವರು.ವ್ಯಾಪಾರ ಚೆನ್ನಾಗಿದ್ದರಿಂದ ಸಾಕಷ್ಟು ಸ್ಥಿತಿವಂತರಾಗಿದ್ದರು. ಒಂದು ಸಲ ನಂಬಿಕೆಯ ಆಧಾರದ ಮೇಲೆ ಮುಂಗಡ ಹಣವಿಲ್ಲದೆ ಲಾರಿಗಟ್ಟಲೆ ಕೊಬ್ಬರಿಯನ್ನು ರವಾನೆ ಕೊಟ್ಟರು. ಕೊಬ್ಬರಿ ಹೋಯಿತೆ ವಿನಃ ಹಣ ಇವರ ಕೈ ಸೇರಲಿಲ್ಲ. ಕಷ್ಟವೆಂದು ಹಣ ಪಡೆದ ಜನ ಹಿಂದಿರುಗಿಸಲಿಲ್ಲ.  ಪರಿಣಾಮ ವ್ಯಾಪಾರ ಏರುಪೇರಾಗಿ ನಷ್ಟ ಹೆಚ್ಚಾಗುತ್ತಾ ಹೋಯಿತು. `ತಿಪಟೂರಲ್ಲೆ ಬೇರೆ ವ್ಯಾಪಾರ ಮಾಡೋಣಾಂದ್ರೆ ಸಿಕ್ಕಾಪಟ್ಟೆ ಪೈಪೋಟಿ. ಹಾಕಿದ ದುಡ್ಡು ವಾಪಸ್ ಬರುವ ಗ್ಯಾರಂಟಿ ಇಲ್ಲ.  ಅದ್ಕೆ ಸೀದಾ ಊರಿಗೆ ಬರೋ ಮನಸ್ಸು ಮಾಡ್ಬಿಟ್ಟೆ.ನನ್ನ ಈ ನಿರ್ಧಾರಕ್ಕೆ ಮಕ್ಕಳಿಬ್ರೂ ಒಪ್ಪಿದರು~ ಎನ್ನುವ ಅವರು ತಿಪಟೂರಿನಲ್ಲಿ ಜೀವನ ಅಸಾಧ್ಯವೆಂದಾದಾಗ ಆಯ್ದುಕೊಂಡದ್ದು ಕೃಷಿ. 2003 ರಲ್ಲಿ  ಹುಟ್ಟೂರಿಗೆ ಮರಳಿದರು. ಪಿತ್ರಾರ್ಜಿತ ಎಂಟು ಎಕರೆ ಭೂಮಿಯೊಂದಿಗೆ ಬಾಲ್ಯದ ಕೃಷಿ ಅನುಭವ ಇದ್ದದ್ದು ಅವರಿಗೆ ಹಾಗೂ ಸ್ವಲ್ಪ ಮಟ್ಟಿಗೆ ಮಡದಿ ಗೌರಮ್ಮನವರಿಗೆ ಮಾತ್ರ.

 

ಮಕ್ಕಳಿಬ್ಬರಿಗೆ ನಗರ ಜೀವನದ ಪರಿಚಯವಷ್ಟೇ ಇತ್ತು.  ಅಲ್ಲಿಯವರೆಗೂ ಆಳುಗಳಿಂದ ತೋಟದ ನಿರ್ವಹಣೆ ನಡೆಯುತ್ತಿತ್ತು.ಹಳ್ಳಿಗೆ ಬಂದಾಗ ವಾಸಕ್ಕೂ ಮನೆ ಇರಲಿಲ್ಲ. ಊರೊಳಗಿದ್ದ  ತಮ್ಮನ ಮನೆಯಲ್ಲೇ ಹಳ್ಳಿ ಜೀವನ ಪ್ರಾರಂಭಿಸಿದರು. ಮೊದಲು ಹೈನುಗಾರಿಕೆಗೆ ಒಂದು ಎಮ್ಮೆ ತಂದರು.ಸಾವಯವದ ಒಲವಿದ್ದರೂ ಸಗಣಿ, ಗಂಜಲವನ್ನು ದೂರದ ತೋಟಕ್ಕೆ ಹೊತ್ತೂ ಹೊತ್ತೂ ಒಂದೇ ವರ್ಷಕ್ಕೇ ಸುಸ್ತಾಯಿತು.  ನಂತರ ಆಳುಗಳಿಗೆಂದು ಕಟ್ಟಿಸಿದ್ದ ತೋಟದ ಮನೆಗೇ ವಾಸ್ತವ್ಯ ಬದಲಾಯಿಸಿದರು.ಆರಂಭದ ದಿನಗಳಲ್ಲಿ ನಿತ್ಯ ಬಳಕೆಯ ಆಹಾರ ಸಾಮಗ್ರಿ ಕೊಳ್ಳುವುದಕ್ಕೂ ಯೋಚಿಸಬೇಕಿತ್ತು ಈ ಕುಟುಂಬ. ಆದರೂ ಯಾರಲ್ಲೂ ಕೈ ಚಾಚದೆ ಮೊದಲೆರಡು ವರ್ಷ ತರಕಾರಿ ಬೆಳೆದು ಸಂತೆಯಲ್ಲಿ ಸ್ವತಃ ಮೂರ್ತಿಯವರ ಮಕ್ಕಳೇ ಮಾರಿದರು. ನಂತರದ ಒಂದು ವರ್ಷ ಎಮ್ಮೆಯೊಂದಿಗೆ ಎರಡು ಸೀಮೆ ಹಸುವನ್ನು ಸಾಕಿದರು. ಅಷ್ಟರಲ್ಲಾಗಲೆ ಆಹಾರ ಧಾನ್ಯಗಳನ್ನು ಸಾಧ್ಯವಾದಷ್ಟು ಬೆಳೆಯುವ ಮೂಲಕ ನಿತ್ಯದ ಅಗತ್ಯಗಳಿಗೆ  ಪರಿಹಾರ ಕಂಡು ಕೊಂಡರು. ಇದರಿಂದ ಆರ್ಥಿಕ ಸ್ಥಿತಿ ಸ್ವಲ್ಪ ಸುಧಾರಿಸಿತು.ಇವರ ಹೊಲದಲ್ಲಿ ನೀರಿನ ತೀವ್ರ ಕೊರತೆಯಿತ್ತು. ರಾಸುಗಳಿಗಾಗಿ ಮೇವನ್ನು ಬೆಳೆಯೋದು ಕೂಡ ಕಷ್ಟ ಆಗುತ್ತಿತ್ತು. ಮಳೆ ನೀರನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತೋಟದ ಒಳಗೆ ಹಾಯುವ ವ್ಯವಸ್ಥೆ ಮಾಡುವಂತೆ ಸಾವಯವ ಕೃಷಿಕರಾದ ಸಂಬಂಧಿ ಮಹೇಶ್ ಸಲಹೆಯಿತ್ತರು.  ಇದನ್ನು ಕಾರ್ಯರೂಪಕ್ಕೆ ತಂದ ಮೂರು ವರ್ಷದ ನಂತರ ನೀರಿನ ಬವಣೆ ನೀಗಿತು.  ಈಗಿರುವ ನಾಲ್ಕು ಅಡಿ ಆಳದ ಕೊಳವೆ ಬಾವಿಯ ಎರಡೂವರೆ ಇಂಚು ನೀರಿನಿಂದ ತಿಂಗಳಿಗೊಂದು ಹದ ಹಾಯಿ ನೀರು ಕೊಡಲು ಸಾಧ್ಯವಾಗುತ್ತಿದೆ.ಕೈ ಹಿಡಿದ ಹೈನು


`ಹೈನುಗಾರಿಕೆಗಾಗಿ ಒಂದು ಎಮ್ಮೆ ತಂದ್ವಿ. ಈ 9 ವರ್ಷದಲ್ಲಿ ಅದರ ಸಂತತಿ ಮಾರಿ ಒಂದ್ ಲಕ್ಷ ರೂಪಾಯಿ ದುಡ್ದಿದ್ದೀವಿ.  ತೋಟ ಕಾಯೋರಿಗೆ ವರ್ಷಕ್ಕೆ ಮಾಡ್ತಿದ್ದ 50 ಸಾವಿರ ಖರ್ಚೂ ಈಗ ಉಳಿತಾಯ ಆಗಿದೆ~ ಎನ್ನುತ್ತಾ ಗಳಿಕೆಯೊಂದಿಗೆ ಉಳಿಕೆಯನ್ನೂ ವಿವರಿಸುತ್ತಾರೆ ಗೌರಮ್ಮ.ಆರಂಭದ ನೀರಿನ ಸಮಸ್ಯೆಯಿಂದಾಗಿ ಸೀಮೆ ಹಸುವನ್ನು ವರ್ಷಕ್ಕೇ ಮಾರಿ ಎಮ್ಮೆ ಮಾತ್ರ ಇಟ್ಟುಕೊಂಡರು. ನಂತರದ ದಿನಗಳಲ್ಲಿ ಉಳುಮೆ ಹಾಗು ಹಾಲಿನ ಉದ್ದೇಶದಿಂದ ನಾಟಿ ಹಸುಗಳನ್ನು ತಂದರು. ಈಗ ಇವರ ಬಳಿ ಎತ್ತು, ಹಸು, ಎಮ್ಮೆ, ಕರು ಎಲ್ಲಾ ಸೇರಿ ಹತ್ತು ರಾಸುಗಳಿವೆ. ಮೊದಲ ಮೂರು ವರ್ಷ ಮಾತ್ರ ಹಾಲನ್ನು ಡೇರಿಗೆ ಹಾಕಿದ್ದಾರೆ. ನಂತರದಲ್ಲಿ ಮನೆ ಬಳಕೆಗಾಗುವಷ್ಟನ್ನು ಮಾತ್ರ ಕರೆದು, ಮಿಕ್ಕಿದ್ದನ್ನು ಕರುವಿಗೇ ಬಿಡುತ್ತಾರೆ.  ಕರುವಿಗೂ ಹೆಚ್ಚಾದ್ದನ್ನು ಹಿಂಡಿ ಹೋರಿಗಳಿಗೆ ನೀಡುತ್ತಾರೆ. `ತಾಯಿ ಹಾಲು ಯಥೇಚ್ಛವಾಗಿ ಕುಡಿಯೋ ಕರುಗಳು ಆರೋಗ್ಯದಿಂದ ದಷ್ಟಪುಷ್ಟವಾಗಿರುತ್ತೆ. ಡೇರಿಗೆ ಹಾಲು ಮಾರುವದರಿಂದ ಬರೋ ಆದಾಯ ನಮ್ಗೆ ಕರು ಮಾರೋದ್ರಿಂದಲೇ ಬರುತ್ತೆ. ಹಾಲು ಕರೆಯೋ, ಡೇರಿಗೆ ಹಾಕೋ ರಿಸ್ಕ್ ಇಲ್ಲ~ ಅನ್ನೋದು ಕಿರಿಯ ಮಗ ರವಿಯ ಅಭಿಪ್ರಾಯ. `ನಾವು ಊರಿಗ್ ಬಂದ್ ಮೇಲೆ ಮನೆಲ್ಲೇ ಹುಟ್ಟಿ ಬೆಳೆದ 14 ರಾಸುಗಲ್ನ ಮಾರಿದೀವಿ~ ಎಂದು ಹಿರಿಯ ಮಗ ಸಿದ್ಧಲಿಂಗಣ್ಣ ವಿವರ ನೀಡುತ್ತಾರೆ.ಮೂರ್ತಿಯವರಿಗೆ 5 ಎಕರೆ ತೆಂಗು ಇದೆ. ಮಳೆಗಾಲದಲ್ಲಿ ಸಗಣಿಯನ್ನು ನೀರಿನಲ್ಲಿ ಕದಡಿ ಮರದ ಬುಡಕ್ಕೆ ಹಾಕಿದರೆ, ಬೇಸಿಗೆಯಲ್ಲಿ ತಿಪ್ಪೆಯಲ್ಲಿ ಸಂಗ್ರಹಿಸುತ್ತಾರೆ. ಆಹಾರಧಾನ್ಯ ಬೆಳೆಯಲು ತಿಪ್ಪೆಗೊಬ್ಬರ ಬಳಕೆಯಾಗುತ್ತದೆ. ರಸಗೊಬ್ಬರ ಬಳಸದೆ ಮರವೊಂದರಿಂದ ಸರಾಸರಿ ನೂರು ಕಾಯಿಗಳನ್ನು ಪಡೆಯುತ್ತಿದ್ದಾರೆ.  ಕೊಟ್ಟಿಗೆಯ ಗಂಜಲದ ತೊಟ್ಟಿಯಲ್ಲೆೀ ಮೂರು ವರ್ಷ  ಜೀವಾಮೃತವನ್ನೂ ತಯಾರಿಸಿದ್ದರು.  ಬೆಲ್ಲ, ಹಿಟ್ಟು ತುಟ್ಟಿಯಾದ್ದರಿಂದ ಈಗ ಜೀವಾಮೃತ ಕೈಬಿಟ್ಟು ಬರೀ ಸ್ಲರಿ ನೀಡುತ್ತಿದ್ದಾರೆ. ಅರ್ಧ ಎಕರೆಯಲ್ಲಿ ತೆಂಗು ಬಾಳೆಯ ಮಿಶ್ರ ತೋಟವಿದೆ.ಆಹಾರ ಧಾನ್ಯ ಬೆಳೆಯಲು ಮೂರು ಎಕರೆ ಜಮೀನನ್ನು ಮೀಸಲಿರಿಸಿದ್ದಾರೆ. ತಲಾ ಒಂದು ಎಕರೆಯಲ್ಲಿ ದೇಸಿ ದೊಡ್ಡಿ ಭತ್ತ, ರಾಗಿ, ಬೇಳೆ ಕಾಳು ಬೆಳೆಯುತ್ತಾರೆ. ಆಹಾರ ಧಾನ್ಯಕ್ಕೆ ಅಲ್ಪ ಪ್ರಮಾಣದ ರಸಗೊಬ್ಬರ ಬಳಸುತ್ತಾರೆ.

 

ಮುಂದಿನ ದಿನಗಳಲ್ಲಿ ರಸಗೊಬ್ಬರಕ್ಕೆ ಪೂರ್ಣ ವಿದಾಯ ಹೇಳುವ  ಯೋಚನೆಯಲ್ಲಿದ್ದಾರೆ.  ಸದ್ಯಕ್ಕೆ ಕಾಡು ಹಂದಿಗಳದ್ದೇ ಇವರಿಗೆ ಬಹು ದೊಡ್ಡ ಸಮಸ್ಯೆ. ಇವರದು ಸಂಪೂರ್ಣ ನೇಗಿಲ ಬೇಸಾಯ. ರಾಗಿ ಮತ್ತು ಕಾಳುಗಳನ್ನು ಮಳೆ ನೀರಿನ ಆಶ್ರಯದಲ್ಲೆೀ ಬೆಳೆಯುತ್ತಾರೆ. ಭತ್ತವನ್ನು ಒಣ ಬಿತ್ತನೆ ಮಾಡಿ ಅವಶ್ಯಕ ಅನ್ನಿಸಿದ್ರೆ ಮಾತ್ರ ಬೋರ್‌ವೆಲ್ ನೀರು ಪೂರೈಸುತ್ತಾರೆ.  ಹಂದಿಯ ದಾಳಿಯ ನಂತರ ಈ ವರ್ಷ ಬೆಳೆಯಾದದ್ದು ಐದು ಚೀಲ ರಾಗಿ, ಹನ್ನೆರಡು ಚೀಲ ಭತ್ತ.ಮೂರ್ತಿಯವರ  ದೂರವಾಣಿ 99454 08487.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.