ವ್ಯಾಪಾರವಾದ ವಕೀಲಿ ವೃತ್ತಿ: ಸಚಿವ ಕಪಿಲ್ ಸಿಬಲ್ ವಿಷಾದ

7

ವ್ಯಾಪಾರವಾದ ವಕೀಲಿ ವೃತ್ತಿ: ಸಚಿವ ಕಪಿಲ್ ಸಿಬಲ್ ವಿಷಾದ

Published:
Updated:
ವ್ಯಾಪಾರವಾದ ವಕೀಲಿ ವೃತ್ತಿ: ಸಚಿವ ಕಪಿಲ್ ಸಿಬಲ್ ವಿಷಾದ

ಬೆಂಗಳೂರು: `ವಕೀಲಿ ವೃತ್ತಿಯನ್ನು ಬಹು ಹಿಂದಿನಿಂದಲೂ ಸೇವೆ ಎಂದೇ ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಕೀಲಿಕೆ ವ್ಯಾಪಾರವಾಗಿ ಪರಿವರ್ತನೆ ಕಂಡಿದೆ' ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದರು.ಭಾನುವಾರ ಬೆಂಗಳೂರಿನಲ್ಲಿ ನಡೆದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ 21ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, `ಹಣ ಕೂಡಿಹಾಕುವುದೇ ವೃತ್ತಿ ಎಂಬ ಕೂಪಕ್ಕೆ ಎಂದಿಗೂ ಬೀಳಬೇಡಿ. ವ್ಯವಹಾರದಲ್ಲಿ ವೈಯಕ್ತಿಕ ವಿಶ್ವಾಸ ಇರಲೇಬೇಕು ಎಂಬುದಿಲ್ಲ. ಆದರೆ, ಕಕ್ಷಿದಾರ ಮತ್ತು ವಕೀಲರ ನಡುವೆ ವೈಯಕ್ತಿಕ ವಿಶ್ವಾಸ ಇರಬೇಕು' ಎಂದು ಅವರು ಹೇಳಿದರು.`ನೀವು (ವಕೀಲರು) ಒದಗಿಸುವ ಗುಣಮಟ್ಟದ ಸೇವೆಗೆ ತಕ್ಕ ಶುಲ್ಕ ನೀಡುವ ಸಾಮರ್ಥ್ಯ ದೇಶದಲ್ಲಿ ಎಲ್ಲರಿಗೂ ಇಲ್ಲ ಎಂಬುದನ್ನು ಮರೆಯಬೇಡಿ. ಸಮಾಜದ ಒಳಿತಿಗಾಗಿ ವಕೀಲಿಕೆ ನಡೆಸುವ ಅಗತ್ಯವನ್ನು ಎಲ್ಲ ಕಾನೂನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು. ಇದರಿಂದ ಶೋಷಿತ ಸಮುದಾಯ ಕೂಡ ಕಾನೂನು ಸೇವೆಗಳನ್ನು ಪಡೆದುಕೊಳ್ಳಲು ಅವಕಾಶ ದೊರೆಯುತ್ತದೆ' ಎಂದರು.`ಅಸ್ಪಷ್ಟ ಅರ್ಥ ನೀಡುವ ಕಾನೂನುಗಳು ದುರ್ಬಳಕೆ ಆಗಬಹುದು, ನ್ಯಾಯದಾನದ ಆಶಯಕ್ಕೇ ಭಂಗ ತರಬಹುದು. ಕಾನೂನು ಅಸ್ಪಷ್ಟವಾಗಿ ಇರಬಾರದು. ಸ್ಪಷ್ಟ ಅರ್ಥ ನೀಡುವ ಪದಗಳನ್ನೇ ಬಳಸಿ ಕಾನೂನು ರೂಪಿಸಬೇಕು. ಕಾನೂನಿನ ವ್ಯಾಖ್ಯಾನ ಕೂಡ ಸರಿಯಾದ ರೀತಿಯಲ್ಲಿ ಆಗಬೇಕು. ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸಿದರೆ ಅನ್ಯಾಯಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ' ಎಂದು ಅವರು ಎಚ್ಚರಿಸಿದರು.`ಕಾನೂನುಗಳನ್ನು ಯಾವ ಸಂದರ್ಭದಲ್ಲಿ, ಯಾವ ಉದ್ದೇಶಕ್ಕೆ ರೂಪಿಸಲಾಯಿತು ಎಂಬುದನ್ನು ನ್ಯಾಯ ತೀರ್ಮಾನಿಸುವ ಸ್ಥಾನದಲ್ಲಿರುವವರು ಗಮನಿಸಬೇಕು. ಕಾನೂನಿನ ವ್ಯಾಪ್ತಿಯನ್ನೇ ಮೀರಿ ಅದರ ಬಗ್ಗೆ ವ್ಯಾಖ್ಯಾನ ನೀಡುವುದು ಸರಿಯಲ್ಲ' ಎಂದರು.ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರು ವಿದ್ಯಾರ್ಥಿಗಳಿಗೆ ಪದವಿ ಮತ್ತು ಪದ ಪ್ರದಾನ ಮಾಡಿದರು. ವಿದ್ಯಾರ್ಥಿನಿ ನಮ್ರತಾ ಷಾ ಒಟ್ಟು 16 ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಇವರ ಸಾಧನೆಗೆ ಸಿಬಲ್ ಕೂಡ ಪ್ರಶಂಸೆ ವ್ಯಕ್ತಪಡಿಸಿದರು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ, ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಸಚಿವರಾದ ಟಿ.ಬಿ. ಜಯಚಂದ್ರ, ಆರ್.ವಿ. ದೇಶಪಾಂಡೆ, ವಿಶ್ವವಿದ್ಯಾಲಯದ ಕುಲಪತಿ ಪ್ರೊ ಆರ್.ವೆಂಕಟರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ನಿವೃತ್ತ ಕೆಎಎಸ್ ಅಧಿಕಾರಿಗೂ ಪದವಿ

ಘಟಿಕೋತ್ಸವದಲ್ಲಿ, 66 ವರ್ಷ ವಯಸ್ಸಿನ ಎಸ್.ಜಿ. ಬಿರಾದಾರ ಅವರು ವಾಣಿಜ್ಯ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದರು. ಅವರು ದೂರಶಿಕ್ಷಣದ ಮೂಲಕ ಈ ಪದವಿ ಪಡೆದಿದ್ದಾರೆ.

 

ನಿವೃತ್ತ ಕೆ.ಎ.ಎಸ್ ಅಧಿಕಾರಿಯಾಗಿರುವ ಅವರು ಆಹಾರ ಮತ್ತು ನಾಗರಿಕ ಪೂರೈಕೆ, ನೀರಾವರಿ, ವಸತಿ ಮತ್ತಿತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. `ಕರ್ತವ್ಯದಿಂದ ನಿವೃತ್ತಿ ಹೊಂದಿದ ನಂತರ ನಾನು ಇಲ್ಲಿ ದೂರಶಿಕ್ಷಣ ಕೋರ್ಸ್‌ಗೆ ಸೇರಿಕೊಂಡೆ. ನಿವೃತ್ತಿಯ ನಂತರ ಸುಮ್ಮನೆ ಕೂರುವುದು ನನಗೆ ಸರಿಬರಲಿಲ್ಲ' ಎಂದರು.`ನಾನು ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಆದರೂ ಕಾನೂನಿನ ಬಗ್ಗೆ ನನ್ನ ತಿಳಿವಳಿಕೆ ಸಾಲದು ಅನಿಸಿತು. ಹಾಗಾಗಿ ವಾಣಿಜ್ಯ ಕಾನೂನು ಸ್ನಾತಕೋತ್ತರ ಪದವಿಗೆ ಸೇರಿದೆ' ಎಂದು ಅವರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry