ಶನಿವಾರ, ನವೆಂಬರ್ 23, 2019
18 °C

ವ್ಯಾಪಾರಿ ಹತ್ಯೆಗೆ ಯತ್ನ: ಆರೋಪಿ ಬಂಧನ

Published:
Updated:

ಮುದ್ದೇಬಿಹಾಳ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹಾಡಹಗಲೇ ಇಲ್ಲಿನ ಸರಾಫ ಬಜಾರ್‌ನಲ್ಲಿರುವ ಬಂಗಾರದ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನನ್ನು ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.ಆರೋಪಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಹಲ್ಲೆಗೀಡಾಗಿದ್ದ ವ್ಯಾಪಾರಿ  ಪ್ರಸಿದ್ಧ ಬಂಗಾರ ಅಂಗಡಿ ಮಾಲಿಕ ಶಹಾ ಭೋರಮಲ್ ಪೀರಾಜಿ ಓಸ್ವಾಲ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿ ಲಕ್ಷ್ಮಣ ಮಹಾದೇವ ಜಾಧವ.ಘಟನೆಯ ವಿವರ: ಮಂಗಳವಾರ ಮಧ್ಯಾಹ್ನ ಕೈಯಲ್ಲಿ ಮಚ್ಚು ಹಿಡಿದು ಸರಾಫ ಬಜಾರ ಪ್ರವೇಶಿಸಿದ ಲಕ್ಷ್ಮಣ ಬಂಗಾರದ ಅಂಗಡಿಯವರಿಗೆ ಅಂಗಡಿ ಮುಚ್ಚುವಂತೆ ಸೂಚಿಸಿದ್ದಾರೆ. ಈತನ ರೌದ್ರಾವತಾರ ಕಂಡು ಬೆದರಿ ಅಂಗಡಿ ಬಾಗಿಲು ಹಾಕಿಕೊಂಡಿದ್ದಾರೆ. ಭೋರಮಲ್ ಅಂಗಡಿಗೂ ಬಂದು ಅಂಗಡಿ ಮುಚ್ಚುವಂತೆ ಸೂಚಿಸಿದಾಗ ಅವರು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಲಕ್ಷ್ಮಣ ಕೂಡಲೇ ಮಚ್ಚಿನಿಂದ ಭೋರಮಲ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಮಯ ಭೋರಮಲ್ ಅವರು ಚಾಣಾಕ್ಷತನದಿಂದ ತಪ್ಪಿಸಿಕೊಂಡಿದ್ದ ರಿಂದ ಮಚ್ಚಿನ ಹೊಡೆತ ತಲೆಯ ಒಂದು ಭಾಗಕ್ಕೆ ಸವರಿಕೊಂಡು ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಆಗಮಿಸಿದ ಎಎಸ್‌ಐ ಜಿ.ಬಿ.ಕಬಾಡೆ ನೇತೃತ್ವದ ಪೊಲೀಸರ ತಂಡ ನೇರವಾಗಿ ಆರೋಪಿ ಮನೆಗೆ ದಾಳಿ ಮಾಡಿದರು. ಆಗಲೂ ಪೊಲೀಸರ ಮೇಲೆಯೇ ದಾಳಿ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾರೆ. ನಂತರ ಮನವೊಲಿಸಿ, ಆತ ಮನೆಯಿಂದ ಹೊರಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸರು, ಆತ ಹೊರ ಬರುತ್ತಿದ್ದಂತೆಯೇ ಬಂಧಿಸುವಲ್ಲಿ ಯಶಸ್ವಿಯಾದರು.

ಪ್ರತಿಕ್ರಿಯಿಸಿ (+)