ಗುರುವಾರ , ಏಪ್ರಿಲ್ 22, 2021
27 °C

ವ್ಯಾಪಾರ ಮೇಳಕ್ಕೆ ಮಹಾತ್ಮ ಗಾಂಧಿ ರಸ್ತೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಾತ್ಮ ಗಾಂಧಿ (ಎಂ.ಜಿ.) ರಸ್ತೆಯು ಏಪ್ರಿಲ್ 2ರಿಂದ 11ರವರೆಗೆ ನಡೆಯಲಿರುವ ವ್ಯಾಪಾರ ಮೇಳಕ್ಕೆ ಸಜ್ಜಾಗಿದೆ. ‘ಬೆಂಗಳೂರು ಟ್ರೇಡರ್ಸ್‌ ಅಸೋಸಿಯೇಷನ್’ ವತಿಯಿಂದ ಆಯೋಜಿತವಾಗಿರುವ ‘ಎಂ.ಜಿ.ರೋಡ್ ಬಜಾರ್’ನಲ್ಲಿ ವಿವಿಧ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಲು ಅಗತ್ಯ ಸಿದ್ಧತೆ ನಡೆಸಿದೆ.1899ರಲ್ಲಿ ಬ್ರಿಟಿಷರಿಂದ ಸ್ಥಾಪನೆಯಾದ ಸಂಸ್ಥೆಯು, ಮಾಲ್ ಸಂಸ್ಕೃತಿಯಿಂದ ಜನರನ್ನು ಇತ್ತ ಕಡೆ ಸೆಳೆಯಲು ಮೇಳ ಸಂಘಟಿಸಿದ್ದು, ಈ ಸಮಯದಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗಿನ ಎಂ.ಜಿ.ರಸ್ತೆಯ ತುಂಬ ವಿಶೇಷ ದೀಪಗಳ ಅಲಂಕಾರವನ್ನೂ ಕೂಡ ಮಾಡಲಿದೆ.ತೀವ್ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಉಂಟಾದ ವ್ಯವಹಾರ ನಷ್ಟ ಮತ್ತು ನಂತರದ ಮೆಟ್ರೊ ರೈಲು ಕಾಮಗಾರಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಎದುರಾದ ಸವಾಲುಗಳನ್ನು ಎದುರಿಸಿದ ಸಂಸ್ಥೆಯು, ಇದೀಗ ಮೇಳವನ್ನು ಏರ್ಪಡಿಸುವ ಮೂಲಕ ‘ವ್ಯಾಪಾರಿಗಳಿಗೆ ಹೆಚ್ಚಿನ ವಹಿವಾಟು’ ಮತ್ತು ‘ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತು’ಗಳನ್ನು ದೊರೆಯುವಂತೆ ಮಾಡುವ ಉದ್ದೇಶ ಹೊಂದಿದೆ. ಹಿಂದೂಗಳ ನೂತನ ವರ್ಷಾಚರಣೆಯಾದ ಯುಗಾದಿಯ ಅಂಗವಾಗಿ ವಿವಿಧ ವಸ್ತುಗಳನ್ನು ಖರೀದಿಸುವವರಿಗಾಗಿ ವಿಶೇಷ ಬಹುಮಾನಗಳೂ ಲಭ್ಯವಿದ್ದು, ಈ ಮೂಲಕವೂ ಹೆಚ್ಚಿನ ವ್ಯವಹಾರವನ್ನು ನಿರೀಕ್ಷಿಸಲಾಗುತ್ತಿದೆ.ಮನರಂಜನೆ: ‘ಎಂ.ಜಿ.ರೋಡ್ ಬಜಾರ್’ ಬರೀ ವ್ಯಾಪಾರದ ಉದ್ದೇಶವನ್ನಷ್ಟೇ ಹೊಂದದೇ, ಈ ಅವಧಿಯಲ್ಲಿ ನೃತ್ಯ ಪ್ರದರ್ಶನ, ಸಂಗೀತ ಸಮಾರಾಧನೆ, ಜಾದೂ ಪ್ರದರ್ಶನವನ್ನೂ ಏರ್ಪಡಿಸಿದೆ. ಇವುಗಳನ್ನು ವೀಕ್ಷಿಸುವುದರ ಜೊತೆಗೆ ಆಸಕ್ತರು ಭಾಗವಹಿಸಲೂ ಅವಕಾಶವಿದೆ.ನಾಗರಿಕರಿಗೆ ಶಾಪಿಂಗ್ ಮಾಡುವ ನೆಚ್ಚಿನ ತಾಣವೆಂದೇ ಎಂ.ಜಿ.ರಸ್ತೆ ಪ್ರಸಿದ್ಧಿಯಾಗಿದ್ದು, ಇದರ ವೈಭವವನ್ನು ಮರು ಸೃಷ್ಟಿಸಲು ಹಾಗೂ ಗ್ರಾಹಕರನ್ನು ಸೆಳೆಯಲು ಈ ವ್ಯಾಪಾರ ಮೇಳ ನೆರವಾಗುವುದು ಎಂಬ ನಂಬಿಕೆ ಸಂಸ್ಥೆಯದು. ಆ ನಿಟ್ಟಿನಲ್ಲಿ ಅದು ಕಾರ್ಯೋನ್ಮುಖವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.