ವ್ಯಾಲೆಂಟ್ಯೆನ್ಸ್ ಡೇ ಹಬ್ಬದಂತೆ ಆಚರಿಸಬಹುದಲ್ಲವೇ?

7

ವ್ಯಾಲೆಂಟ್ಯೆನ್ಸ್ ಡೇ ಹಬ್ಬದಂತೆ ಆಚರಿಸಬಹುದಲ್ಲವೇ?

Published:
Updated:

ಕ್ರಿ.ಶ.270. ರೋಮ್ ದೇಶವನ್ನು ಕ್ಲಾಡಿಯಸ್-2 ಎಂಬ ಚಕ್ರವರ್ತಿ ಆಳುತ್ತಿದ್ದ . ದೇಶದ ಸೇನೆಗೆ ಯುವಕರು ಅತ್ಯುತ್ತಮ ಸೇವೆ ಸಲ್ಲಿಸಬಲ್ಲರು ಎಂದು ನಂಬಿಕೊಂಡು ದೇಶದಲ್ಲಿ ಮದುವೆಯನ್ನೇ ನಿಷೇಧಿಸಿ ಆಜ್ಞೆ ಹೊರಡಿಸಿದ್ದ. ಪ್ರಕೃತಿ ನಿಯಮಕ್ಕೆ ವಿರುದ್ದವಾದ ಈ ಆಜ್ಞೆಯಿಂದ ಮುಂದೆ ಎಂತಹ ಅನಾಹುತವಾಗಬಹುದು ಎನ್ನುವುದನ್ನು ಅರಿತಿದ್ದ ವ್ಯಾಲೆಂಟ್ಯೆನ್ ಎಂಬ ಪಾದ್ರಿ. ರಾಜಾಜ್ಞೆಯ ವಿರುದ್ದವಾಗಿ ರಹಸ್ಯವಾಗಿ ಯುವಕ-ಯುವತಿಯರಿಗೆ ಮದುವೆ ಮಾಡಿಸುತ್ತಿದ್ದ.ಇದು ಬೆಳಕಿಗೆ ಬಂದು, ಪಾದ್ರಿಯನ್ನು ಬಂಧಿಸಲಾಯಿತು. ಅವನು ಬಂಧನದಲ್ಲಿದ್ದ ವೇಳೆ, ಕಾರಾಗೃಹಕ್ಕೆ ಬಂದ ಚಕ್ರವರ್ತಿ, ಪಾದ್ರಿಯನ್ನು ಕ್ರೈಸ್ತ ಧರ್ಮವನ್ನು ತ್ಯಜಿಸಿದರೆ ಪ್ರಾಣಭಿಕ್ಷೆ ನೀಡುವುದಾಗಿ ಆಮಿಷ ಒಡ್ಡಿದ. ಆದರೆ, ಪಾದ್ರಿ ಒಪ್ಪಲಿಲ್ಲ. ಮದುವೆಯ ಅವಶ್ಯಕತೆಯ ಬಗೆಗೆ ಬೋಧಿಸಿದ. ಇದರಿಂದ ಕುಪಿತಗೊಂಡ ಚಕ್ರವರ್ತಿ, ಅವನಿಗೆ ಮರಣದಂಡನೆ ವಿಧಿಸಿದ. ಅಷ್ಟೊತ್ತಿಗಾಗಲೇ ತನ್ನನ್ನು ಬಂಧಿಸಲಾಗಿದ್ದ ಕಾರಾಗೃಹದ ಜೈಲರ್ ಮಗಳೊಡನೆ ಪಾದ್ರಿ ಪ್ರೇಮಬಂಧನದಲ್ಲಿದ್ದ!ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ಪಾದ್ರಿ. ತನ್ನ ಪ್ರಿಯತಮೆಗೆ ಕೊನೆಗೆ ಪತ್ರ ಬರೆದು. ಜೊತೆಗೆ ಈ ವಿಶ್ವದ ಮೊದಲ ಗ್ರೀಟಿಂಗ್ ತಯಾರಿಸಿ ಕಳುಹಿಸಿದ. ಅದರ ಕೊನೆಯಲ್ಲಿ  ‘From your valentine’ ಎಂದು ಬರೆದು ಸಹಿ ಮಾಡಿದ. ಅಂದು ಫೆಬ್ರುವರಿ 14. ಕಾಲಾ ನಂತರದಲ್ಲಿ ಈ ದಿನವನ್ನು ಪ್ರೇಮಿಗಳ ದಿನವಾಗಿ ಆಚರಿಸಲ್ಪಡುತ್ತಿದ್ದು, ಅಂದು ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಗ್ರೀಟಿಂಗ್ ಕಾರ್ಡ್‌ಗಳು ವಿನಿಮಯವಾಗುತ್ತವೆ     ಎಂದು ನಂಬಲಾಗಿದೆ.ನಮ್ಮ ಹಬ್ಬ ಬಂತು. ಪ್ರೀತಿಯ ಹಬ್ಬ. ಅದು ಪ್ರೇಮಿಗಳ ದಿನವೆಂದು ಹೆಸರಾಗಿ, ಬರೇ ಹುಡುಗ -ಹುಡುಗಿ ಆಚರಿಸಿಕೊಳ್ಳುವ ಹಬ್ಬದಂತಾಗಿ ಬಿಟ್ಟಿದೆ. ಅದೇ ಕಾರಣವಾಗಿ, ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕರು, ತಮ್ಮ ಸಂಸ್ಕೃತಿಯನ್ನು ಉಳಿಸುವವರಂತೆ ಪೋಸು ಕೊಡುವ ಮಹಾನುಭಾವರು, ಈ ದಿನದ ಆಚರಣೆಯನ್ನೇ ವಿರೋಧಿಸುತ್ತಾ ಸುದ್ದಿ ಮಾಡಲು, ಹವಣಿಸುತ್ತಾರೆ.ಹಾಗಲ್ಲದೆ ಫೆಬ್ರುವರಿ 14ನ್ನು ಮನುಜ ಸಂಬಂಧಗಳ ನಡುವಿನ ‘ಪ್ರೇಮದ ದಿನ’ ವಾಗಿ ಆಚರಿಸಿ, ನಮ್ಮ ಅಹಂ, ದ್ವೇಷವನ್ನು ಕೊಂಚ ಹೊರಗಿಟ್ಟು, ನಿರ್ಮಲ ಭಾವದೊಂದಿಗೆ ಬಂಧು-ಬಾಂಧವರೊಡಗೂಡಿಕೊಳ್ಳುವ, ಸ್ನೇಹ ಪ್ರೀತಿಯಿಂದ ಮುಂದಿನ ಜೀವನ ಸಾಗಿಸುವ ಮಹಾನ್ ಉದ್ದೇಶ ಹೊಂದಿದ್ದರೆ, ಪ್ರೇಮಿಗಳ ದಿನದ ಆಚರಣೆ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು.ಉದಾತ್ತವಾದ ಆಲೋಚನೆಗಳು ವಿಶ್ವದ ಎಲ್ಲಿಂದಲೇ ಬರಲಿ, ಅದನ್ನು ನಮ್ಮ ಸಂಸ್ಕೃತಿಗೆ ತಕ್ಕಂತೆ ಒಗ್ಗಿಸಿಕೊಂಡು, ಹಿಗ್ಗಿಸಿಕೊಂಡು ಆಚರಣೆಗೆ ತರುವಲ್ಲಿ ನಮ್ಮ ಬುದ್ದಿವಂತಿಕೆ ಅಡಗಿರುತ್ತದೆ ಅಲ್ಲವೇ? ಪ್ರೇಮಿಗಳ ದಿನವನ್ನು ವಿರೋಧಿಸುವ ಯಾರೂ. ಪಾಶ್ಚಾತ್ಯ ವೇಷವಾದ ಪ್ಯಾಂಟ್ ತೊಡುವುದಿಲ್ಲವೇ? ಅವರೆಲ್ಲಾ ದಿನ ನಿತ್ಯ ಧೋತಿ, ಕಚ್ಚೆ ಹಾಕಿಕೊಂಡು ಓಡುತ್ತಾ ಇರುವುದನ್ನು ನಾವು ನೋಡಿಲ್ಲ. ನಾವು ಅನುಕರಣೆ ಮಾಡಬಾರದು ನಿಜ. ಆದರೆ, ನಮ್ಮ ಭಾರತೀಯತೆಯ ಚೌಕಟ್ಟಿನೊಳಗೆ, ಮರ್ಯಾದೆಯೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸುವುದರಲ್ಲಿ ತಪ್ಪೇನಿದೆ ?!                       ನಮ್ಮ ಭಾರತೀಯ ಸಂಸ್ಕೃತಿ ಎಷ್ಟು ಪರಿಪೂರ್ಣವಾಗಿ ಬೆಳೆದು ಬಂದಿದೆಯೆಂದರೆ, ಪ್ರತಿ ಹಬ್ಬವೂ ಪ್ರೀತಿಯ ನೆಲೆಗಟ್ಟಿನಲ್ಲೇ ಇರುತ್ತದೆ. ಕಾಗೆಯೊಂದು ಅಗುಳ ಅನ್ನ ಕಂಡು ತನ್ನ ಬಳಗವನ್ನೆಲ್ಲಾ ಕೂಗಿ ಕರೆಯುವಂತೆ, ನಮ್ಮ ಹಳ್ಳಿಗಳಲ್ಲಿ ತಿಂಗಳಿಗೊಂದು ಹಬ್ಬ ಮಾಡಿ ಬಂಧುಗಳನ್ನೆಲ್ಲಾ ಕರೆದು ಪ್ರೀತ್ಯಾದರಗಳಿಂದ ನೋಡಿಕೊಂಡು, ಒಳ್ಳೆ ಊಟ ಹಾಕಿ, ಬೀಳ್ಕೊಡುವಲ್ಲಿ  ಪ್ರೀತಿ-ಸಂಬಂಧಗಳನ್ನು ಗಟ್ಟಿಗೊಳಿಸುವ ಆಶಯವೂ ಒಳಗೊಂಡಿರುತ್ತದೆ.ಹಬ್ಬಗಳನ್ನು ಮಾಡುವಾಗ ಅಂದಿನ ದಿನ ಬಿಡುವು  ಮಾಡಿಕೊಂಡು, ನಿತ್ಯದ ಮಾಮೂಲಿ ಊಟದ ಬದಲಿಗೆ ವಿಶೇಷ ಅಡುಗೆ ಮಾಡಿಕೊಂಡು, ಪ್ರೀತಿಯಿಂದ ಬಂಧುಗಳೊಂದಿಗೆ ಸೇರಿ ಊಟ ಮಾಡಿ ಕೊಂಚ ಮಾತನಾಡುತ್ತೇವೆ. ಒಟ್ಟಾರೆ, ದೈನಂದಿನ ಜಂಜಡದಿಂದ ಕೊಂಚ ವಿರಾಮ ಸಿಕ್ಕಂತಾಗಿ, ಮನಸ್ಸು ಪ್ರಫುಲ್ಲವಾಗಿ ಮುಂದಿನ ಬದುಕು ಸುಗಮವಾಗಲು ಬಯಸುತ್ತೇವೆ.ಪ್ರೀತಿಯ ಹಬ್ಬವನ್ನೂ ಹೀಗೇ.. ಯಾವುದೇ ಕೆಟ್ಟ ಭಾವನೆಗಳಿಗೆ ಆಸ್ಪದ ಕೊಡದೇ, ಪ್ರೀತಿಸುವ ಜೀವಗಳು ಯಾರೇ ಇರಲಿ, ಪ್ರಿಯಕರ/ಪ್ರಿಯತಮೆ, ಅಮ್ಮ, ಅಪ್ಪ, ಅಣ್ಣ, ತಂಗಿ, ತಮ್ಮ, ಗೆಳೆಯ, ಗೆಳತಿ... ಹೀಗೇ ಎಲ್ಲರನ್ನೂ ಆ ದಿನ ಪ್ರೀತಿಯಿಂದ ನೋಡಿಕೊಂಡು, ಹಳೇ ಜಗಳಗಳನ್ನು ಮರೆತು, ಹೊಸ ಭಾವನೆಗಳೊಂದಿಗೆ  ‘ಪ್ರೇಮದ ಹಬ್ಬ’ವನ್ನು ಆಚರಿಸೋಣ.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry