ವ್ರತಧಾರಿಯ ಶುದ್ಧೀಕರಣ!

7

ವ್ರತಧಾರಿಯ ಶುದ್ಧೀಕರಣ!

Published:
Updated:

ವ್ಯೆದ್ಯ- ಹಾಸ್ಯ

ನಗುವ ಪ್ರಸಂಗಗಳು ಎಲ್ಲ ವೃತ್ತಿಗಳಲ್ಲೂ ಇರುತ್ತವೆ. ಆ ಕ್ಷಣಕ್ಕೆ ಮುಜುಗರವೆನಿಸಿದ ವಿಷಯಗಳನ್ನು ಎಷ್ಟೋ ದಿನಗಳ, ವರ್ಷಗಳ ಬಳಿಕ ಜ್ಞಾಪಿಸಿಕೊಂಡಾಗ ನಗು ತಂತಾನೇ ಉಕ್ಕುತ್ತದೆ. ನಗುವ, ನಗಿಸುವ, ನಗಿಸಿ ನಗುವ ಸಹಜದ ಗುಣವ ಮಿಗೆ ನೀನು ಬೇಡಿಕೊಳೋ ಮಂಕುತಿಮ್ಮ  ಎಂಬ ಡಿ.ವಿ.ಗುಂಡಪ್ಪನವರ ಉಪದೇಶದಂತೆ ಕೆಲವು ಪ್ರಸಂಗಗಳನ್ನು ಓದುಗರಿಗೆ ತಿಳಿಸಲು ಯತ್ನಿಸಿದ್ದೇನೆ.

ಬೆನ್ನು ನೋವು !

1960ರಲ್ಲಿ ನಾನು ಮೈಸೂರು ವೈದ್ಯಕೀಯ ಕಾಲೇಜಿನ 3ನೇ ವರ್ಷದಲ್ಲಿ ಓದುತ್ತಿದ್ದೆ. ಬೆಳಿಗ್ಗೆ ಆಸ್ಪತ್ರೆಯಲ್ಲಿ ರೋಗಿಗಳನ್ನು ಪರೀಕ್ಷಿಸುವುದು ಹಾಗೂ ಪ್ರಾಧ್ಯಾಪಕರಿಂದ ರೋಗಗಳ ಬಗ್ಗೆ ನೇರವಾಗಿ ಕಲಿಯುವುದು (ಕ್ಲಿನಿಕ್ಸ್) ನಮ್ಮ ಕಾರ್ಯಕ್ರಮ. ಶಸ್ತ್ರಕ್ರಿಯಾ ವಿಭಾಗದ ಪ್ರಾಧ್ಯಾಪಕರ ಕ್ಲಿನಿಕ್ಸ್ ಕೇಳಲು ಅಣಿಯಾಗಿದ್ದೆವು. ಅವರು ತುಸು ಆತುರದ ಸ್ವಭಾವದವರು ಹಾಗೂ ಮುಂಗೋಪಿ.ಒಂದು ದಿನ ಹೀಗೆ ನಾವು ಕುಳಿತಿದ್ದಾಗ ಹತ್ತು ವರ್ಷದ ಹುಡುಗನೊಬ್ಬ ಒಳಗೆ ಬಂದು, ಹೊರ ರೋಗಿ ವಿಭಾಗದಲ್ಲಿ ಪಡೆದಿದ್ದ ಚೀಟಿಯನ್ನು ಪ್ರಾಧ್ಯಾಪಕರ ಕೈಗೆ ನೀಡಿದ. `ಏನು ತೊಂದರೆ?~ ಎಂದಾಗ `ಬೆನ್ನು ನೋವು...~ ಎಂದು ಪ್ರಾರಂಭಿಸಿದ. ಅವನ ವಾಕ್ಯ ಮುಗಿಯುವ ಮೊದಲೇ ಪ್ರೊಫೆಸರ್ `ಮಲಗಿಕೋ~  ಎಂದರು.ಅವನು ಕೊಟ್ಟ ಚೀಟಿಯನ್ನು ಮಡಚಿ ಜೇಬಿನಲ್ಲಿ ಇಟ್ಟುಕೊಂಡರು. ಅವನ ಕತ್ತಿನಿಂದ ಆರಂಭಿಸಿ ಪ್ರತಿಯೊಂದು ಮೂಳೆಯ ಹೆಸರು, ವಿವರ ಎಲ್ಲವನ್ನೂ ನಮಗೆ ತಿಳಿಸುತ್ತಾ, ನೋವನ್ನು ಪರೀಕ್ಷಿಸುವ ರೀತಿಯನ್ನು ವಿವರಿಸುತ್ತಿದ್ದರು ಹಾಗೂ ಅವನನ್ನು `ಎಲ್ಲಿ ನೋವಿದೆ?~ ಎಂದು ಕೇಳುತ್ತಾ ಇದ್ದರು.ಹುಡುಗ ಸುಮ್ಮನೆ ಬಿದ್ದುಕೊಂಡಿದ್ದ. ನಮಗೆ ಕ್ಲಿನಿಕ್ಸ್  ನೀಡಿದ ಬಳಿಕ ಜೇಬಿನಲ್ಲಿ ಇಟ್ಟುಕೊಂಡಿದ್ದ ಚೀಟಿಯನ್ನು ಹೊರತೆಗೆದು, ಹುಡುಗನನ್ನು ಕುರಿತು  `ಇದೇನಯ್ಯ ವನಜಾ ಎಂದು ಹೆಸರು ಬರೆಸಿದ್ದೀಯ? ವಯಸ್ಸು 18 ಎಂದು ಸಹ ಇದೆ?~ ಎಂದು ಕೇಳಿದರು.

 

ಅದಕ್ಕವನು `ಅದು ನನ್ನಕ್ಕನ ಹೆಸರು. ಬೆನ್ನು ನೋವು ಇರುವುದು ಸಹ ಅವಳಿಗೆ. ಮಾತ್ರೆ ತೆಗೆದುಕೊಂಡು ಬರಲು ನನಗೆ ಹೇಳಿ ಕಳಿಸಿದ್ದಾಳೆ~ ಎಂದೆಲ್ಲ ವಿವರ ಹೇಳಲು ಪ್ರಾರಂಭಿಸಿದ. ನಾವೆಲ್ಲಾ ಹರಸಾಹಸ ಮಾಡಿ ನಗುವನ್ನು ತಡೆದುಕೊಂಡೆವು. ಆ ದಿನದ ಕ್ಲಿನಿಕ್ಸ್ ಅಲ್ಲಿಗೇ ಮುಕ್ತಾಯವಾಯಿತು.

ಯಜಮಾನರು ನೋಡಿದ್ದಾಯ್ತು!

ನಾನು ಗೃಹವೈದ್ಯನಾದದ್ದು ಕಾಲೇಜಿಗೆ ಸೇರಿದ ಏಳನೇ ವರ್ಷದಲ್ಲಿ. ನನ್ನ ಜೊತೆಯಲ್ಲೇ ಕಾಲೇಜಿಗೆ ಸೇರಿದ ವಿದ್ಯಾರ್ಥಿನಿಯೊಬ್ಬರು ಒಂದು ವರ್ಷ ಮೊದಲೇ ಪಾಸಾಗಿ ಅರಿವಳಿಕೆ ವಿಭಾಗದಲ್ಲಿ ಅಧ್ಯಾಪಕಿಯಾಗಿದ್ದರು. ತೆಳ್ಳಗೆ, ಬೆಳ್ಳಗೆ ಇದ್ದ ಅವರ ಹಿಂದೆ ರೌಂಡ್ಸ್ ಹೋಗಬೇಕಾದ `ಅದೃಷ್ಟ~ ನನ್ನದು.ಆದರೂ ಸಹಪಾಠಿ ಆಗಿದ್ದವರ ಹಿಂದೆ ವಿದ್ಯಾರ್ಥಿಯಂತೆ ಹೋಗಬೇಕಾದ ಸ್ಥಿತಿಯಿಂದ ನನಗಂತೂ ಮುಜುಗರವಾಗಿತ್ತು. ಅವರು ಬರುವ ಮೊದಲೇ ವಾರ್ಡ್‌ಗಳಿಗೆ ಹೋಗಿ ಮರುದಿನ ಶಸ್ತ್ರಕ್ರಿಯೆಗೆ ಒಳಗಾಗಬೇಕಿದ್ದ ರೋಗಿಗಳನ್ನು ಪರೀಕ್ಷಿಸಿ, ಕೇಸ್‌ಶೀಟಿನಲ್ಲಿ ದಾಖಲಿಸಿ `ಎಲ್ಲ ಕೆಲಸ ಮುಗಿದಿದೆ~ ಎಂದು ಅವರಿಗೆ ವರದಿ ಮಾಡಿ ಹೊರಟುಬಿಡುತ್ತಿದ್ದೆ. 2-3 ದಿನಗಳು ಹೀಗೇ ಆಯಿತು. ಅವರಿಗೆ ಸ್ವಲ್ಪ ಬೇಜಾರಾಗಿರಬಹುದು. ಮರುದಿನ `ನನ್ನ ಜೊತೆ ಇನ್ನೊಂದು ಸಲ ಬನ್ನಿ ನೋಡೋಣ~ ಎಂದರು. ನಾನು ಕಟುಕನ ಹಿಂದೆ ವಿಧೇಯನಾಗಿ ಹೋಗುವ ಕುರಿಯಂತೆ ಅವರನ್ನು ಹಿಂಬಾಲಿಸಿದೆ.ಮೊದಲ ರೋಗಿಯ ಬಳಿ ಅವರು ನಿಂತು `ನಿನ್ನ ಹೆಸರೇನು, ಯಾವ ಆಪರೇಷನ್ ನಾಳೆ ಆಗಬೇಕಾಗಿದೆ~ ಎಂದು ಕೇಳತೊಡಗಿದರು. ಅವನು ನನ್ನನ್ನು ತೋರಿಸಿ `ನಿಮ್ಮ ಯಜಮಾನರು ಆಗಲೇ ಬಂದು ನೋಡಿ ಹೋದರು. ಎಲ್ಲ ವಿವರವಾಗಿ ಹೇಳಿದ್ದೇನೆ. ಈಗ ನಿಮಗೂ ಮತ್ತೊಮ್ಮೆ ಹೇಳಬೇಕಾ?~ ಎಂದುಬಿಟ್ಟ. ನಮ್ಮ ಮೇಡಂ ದಂಗಾದರು, ನಾನು ಹೌಹಾರಿದೆ. ಪುಣ್ಯಕ್ಕೆ ಬೇರೆ ರೋಗಿಗಳು ಯಾವ ಪ್ರಶ್ನೆಯನ್ನೂ ಕೇಳದೆ ಪರೀಕ್ಷೆಗೊಳಗಾದರು.ರೌಂಡ್ಸ್ ಮುಗಿದ ಬಳಿಕ ನಮ್ಮ ಅಧ್ಯಾಪಕಿ `ನಾಳೆಯಿಂದ ನೀವು ಎಂದಿನಂತೆ ಮೊದಲೇ ರೌಂಡ್ಸ್ ಮಾಡಿಬಿಟ್ಟು ಹೋಗಿಬಿಡಿ~ ಎಂದು ಅಪ್ಪಣೆ ಕೊಟ್ಟರು!

ಸ್ವಾಮೀಜಿಗಳ ಶುದ್ಧೀಕರಣ!

 ಉತ್ತರ ಕರ್ನಾಟಕದ ಹಳ್ಳಿಯೊಂದಕ್ಕೆ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದೆ. ಆ ಊರಿನಲ್ಲಿ ಒಂದು ಮಠ. ಮಠದಲ್ಲಿ ಚಿಕ್ಕ ಸ್ವಾಮಿಗಳು ಇರುತ್ತಿದ್ದರು. ದೊಡ್ಡ ಸ್ವಾಮಿಗಳು ಒಂದು ಸಲ ಬಂದಾಗ ವ್ರತ ಕೈಗೊಂಡಿದ್ದರು. ಆ ದಿನ ರಾತ್ರಿ ವ್ರತ ಆರಂಭವಾಗುವುದಿತ್ತು.ರಾತ್ರಿ 8 ಗಂಟೆ ಇರಬಹುದು. ಮನೆಯಲ್ಲಿ ಪುಸ್ತಕ ಓದುತ್ತಾ ಕುಳಿತಿದ್ದೆ. ನಾಲ್ಕಾರು ಹಿರಿಯರು ಮನೆಗೆ ಬಂದರು. `ಏನು ವಿಷಯ?~ ಎಂದು ಕೇಳಿದ್ದಕ್ಕೆ `ಸ್ವಾಮೀಜಿ ಇಂದಿನ ರಾತ್ರಿಯಿಂದ ವ್ರತ ಹಿಡಿಯುತ್ತಾರೆ. ಶುದ್ಧೀಕರಣ ಆಗಬೇಕು~ ಎಂದರು. ನಾನು ನೆಲ ಸ್ವಚ್ಛಗೊಳಿಸಲಿಕ್ಕೆ ಎಂದು ತಿಳಿದುಕೊಂಡು `ನಮ್ಮಲ್ಲಿ ಫಿನಾಯಿಲ್ ಇದೆ ತೆಗೆದುಕೊಂಡು ಹೋಗಿ~ ಎಂದೆ.`ಹಾಗಲ್ಲ, ಸ್ವಾಮೀಜಿಗಳಿಗೆ ಶುದ್ಧಿ ಆಗಬೇಕು. ಅವರು ಬೆಳಗಿನಿಂದ ಬಯಲು ಕಡೆ ಹೋಗಿಲ್ಲ~ ಎಂದರು. ಅವರಿಗೆ ಎನೀಮಾ ಕೊಡಬೇಕು ಎಂದು ಅರ್ಥ ಮಾಡಿಕೊಂಡೆ. ನಸುನಗುತ್ತಾ, `ಹಾಗೇ ಆಗಲಿ, ನರ್ಸ್ ಬಂದು ಕೊಡುತ್ತಾರೆ~ ಎಂದೆ. `ಮಹಿಳೆಯರು ಬೇಡ, ಹಾಗೆ ನಿಮ್ಮ ಜವಾನರೂ ಆಗದು, (ಜಾತಿಯ ಕಾರಣ!) ನೀವೇ  ಬಂದು ಕೊಡಬೇಕು~ ಎಂದರು.

 

ವೈದ್ಯಕೀಯ ಕಾಲೇಜಿನಲ್ಲಿ ಎನೀಮಾ ಕೊಡಿಸುವುದು ಪ್ರತಿನಿತ್ಯ ಎಂಬಂತೆ ಇರುತ್ತಿತ್ತು. ಆದರೆ ದ್ರಾವಣ ತಯಾರಿಸುವುದು ಹೇಗೆ, ಎಷ್ಟನ್ನು ಕೊಡಬೇಕು ಎಂಬ ವಿವರ ನನಗೆ ಗೊತ್ತಿರಲಿಲ್ಲ. ಅಂದಾಜಿನ ಮೇಲೆ ನೀರಿನಲ್ಲಿ ಸೋಪನ್ನು ಕದಡಿ ಎನೀಮಾ ನೀಡಿದೆ. ಕೂಡಲೇ ಅವರು `ಶಿವನೇ ಶಿವನೇ~ ಎನ್ನುತ್ತಾ ಸಂಡಾಸಿನ ಕಡೆ ಓಡಿದರು!ನಾನು ಕಷ್ಟಪಟ್ಟು ನಗುವನ್ನು ತಡೆಹಿಡಿಯಬೇಕಾಯಿತು. ಅಂತೂ ಸ್ವಾಮೀಜಿ ಪರಿಶುದ್ಧರಾಗಿ ತಮ್ಮ ವ್ರತವನ್ನು ಆರಂಭಿಸಿದ್ದಾಯಿತು. ಅಂತಹ ಸಂದರ್ಭಗಳಲ್ಲಿ ನಗುವುದು ತಪ್ಪು ಎಂಬುದು ಬೇರೆ ವಿಷಯ! 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry