ವ್ಹಾವ್ ಓಟ್ಸ್

7

ವ್ಹಾವ್ ಓಟ್ಸ್

Published:
Updated:

ಪತಿ- ಪತ್ನಿ ಇಬ್ಬರೂ ಹೊರಗೆ ದುಡಿಯುವ ಆಧುನಿಕ ಜೀವನ ವಿಧಾನದಲ್ಲಿ ಸಮಯದ ಅಭಾವ, ಕೆಲಸದ ಧಾವಂತದಿಂದ ಫಾಸ್ಟ್‌ಫುಡ್‌ಗಳಿಗೆ ಮೊರೆಹೋಗುವುದು ಸಾಮಾನ್ಯ. ಇದರಿಂದ ಸಣ್ಣ ವಯಸ್ಸಿನಲ್ಲೇ ಮಧುಮೇಹ, ಕೊಲೆಸ್ಟರಾಲ್, ರಕ್ತದೊತ್ತಡ, ರಕ್ತಹೀನತೆ, ಬೊಜ್ಜಿನಂತಹ ಹಲವು ತೊಂದರೆಗಳಿಂದ ಬಳಲುವುದು ಹೆಚ್ಚಾಗಿದೆ. ಇಂಥವರು ಓಟ್ಸ್ ಸೇವಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದು.ಬಹಳ ಬೇಗನೆ ರುಚಿಕರವಾಗಿ ತಯಾರಿಸಬಹುದಾದ ಓಟ್ಸ್ ಅತ್ಯಂತ ಪೌಷ್ಟಿಕವಾದ ಆಹಾರ. ಗೋಧಿ, ಬಾರ‌್ಲಿ, ಜೋಳ ಮುಂತಾದ ಧಾನ್ಯಗಳಂತೆ ತೆಳು ಸಿಪ್ಪೆಯಿಂದ ಕೂಡಿ, ತೆಳು ಅವಲಕ್ಕಿಯಂತಿರುವ, ಅಧಿಕ ನಾರಿನಂಶ ಇರುವ ಇದರಲ್ಲಿ ವಿಟಮಿನ್ ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ, ಥಯಾಮಿನ್ ಅಂಶ ಅಧಿಕವಾಗಿದೆ. ಕಾರ್ಬೊಹೈಡ್ರೇಟ್ಸ್, ಪ್ರೊಟೀನ್‌ನ ಅಂಶಗಳೂ ಇರುವುದರಿಂದ ಇದರ ಸೇವನೆ ನಮ್ಮ ದೇಹ ಬಲವನ್ನು ವೃದ್ಧಿಸುತ್ತದೆ.ಅಲ್ಪ ಆಹಾರವಾಗಿ ದಿನಕ್ಕೆ ಒಮ್ಮೆ ಸೇವಿಸಿದರೂ ಸಾಕು, ಶರೀರಕ್ಕೆ ಅಗತ್ಯವಾದ ನಾರಿನಂಶದ ಶೇ 25 ಭಾಗ ಇದರಿಂದ ಸಿಗುತ್ತದೆ. ಶರೀರದಲ್ಲಿ ರಕ್ತ ಹೆಪ್ಪುಗಟ್ಟದಂತೆ ಇರಲು, ಹೃದಯದ ಸಮಸ್ಯೆಗಳು ಬಾರದಿರಲು ಇದು ಸಹಕಾರಿ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಆರೋಗ್ಯ ಕಾಪಾಡುತ್ತವೆ. ಓಟ್ಸ್‌ನಲ್ಲಿರುವ ಬೀಟಾಗ್ಲಕಾನ್ಸ್ ಎನ್ನುವ ಹಿಟ್ಟಿನ ಪದಾರ್ಥ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಉತ್ತಮ ನಾರಿನಂಶದಿಂದ ಕೂಡಿದ ಇದನ್ನು ಸ್ವಲ್ಪ ಸೇವಿಸಿದರೂ ಸಾಕು ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಹೀಗಾಗಿ ಇದೊಂದು ಉತ್ತಮ ಡಯಟ್ ಫುಡ್ ಎಂದು ಸಂಶೋಧನೆಗಳು ತಿಳಿಸಿವೆ.ಗರ್ಭಿಣಿಯರಿಗೆ ಓಟ್ಸ್ ಅತ್ಯುತ್ತಮ ಆಹಾರ. ಅವರಿಗೆ ಅಗತ್ಯವಾದ ಖನಿಜಾಂಶ, ನಾರಿನಂಶ ಇದರಲ್ಲಿ ಪೂರ್ಣವಾಗಿ ದೊರಕಬಲ್ಲದು. ಇದರ ಸೇವನೆ ಕೋಲನ್, ಸ್ತನ ಕ್ಯಾನ್ಸರ್‌ನಿಂದ ಕಾಪಾಡುವುದಲ್ಲದೆ, ದೀರ್ಘಕಾಲದ ನರಕಾಯಿಲೆಗಳು ಮತ್ತು ನಿದ್ರಾಹೀನತೆಯನ್ನು ತಡೆಯುತ್ತದೆ. ಒಂದು ಕಪ್ ಬೇಯಿಸಿದ ಓಟ್ಸ್‌ನಲ್ಲಿ ಕೇವಲ 80 ಕ್ಯಾಲೊರಿ ಮಾತ್ರ ಇರುತ್ತದೆ. ಇದರಿಂದ ದೊರಕುವ ಶಕ್ತಿಯಿಂದ ದಿನವಿಡೀ ಉಲ್ಲಾಸದಾಯಕವಾಗಿ ಇರಬಹುದು. ಹೊಳೆಯುವ ಚರ್ಮಕ್ಕೆ, ತೂಕ ಕಡಿಮೆ ಮಾಡಲು ಇದು ಉತ್ತಮ ಆಹಾರ ಎಂದು ಅಧ್ಯಯನಗಳು ತಿಳಿಸಿವೆ.ಬಳಕೆ ಹೇಗೆ?

ಓಟ್ಸ್‌ನ್ನು ಬೇಯಿಸಿ ಅಥವಾ ಬೇಯಿಸದೇ ಸೇವಿಸಬಹುದು. ಬೇಸಿಗೆಯಲ್ಲಿ ತಂಪಾದ ಹಾಲಿಗೆ ಓಟ್ಸ್ ಹಾಕಿ ಅದಕ್ಕೆ ವಿವಿಧ ಹಣ್ಣುಗಳು, ಒಣ ಹಣ್ಣುಗಳು ಇತ್ಯಾದಿ ಸೇರಿಸಿ ಸವಿಯಲು ಕೊಡಬಹುದು. ಇನ್ನು ಓಟ್ಸ್‌ಗೆ ಸ್ವಲ್ಪ ನೀರು ಸೇರಿಸಿ ಬೇಯಿಸಿ, ಅದಕ್ಕೆ ಹಾಲು ಹಾಕಿ ಕುದಿಸಿ ಆರಿದ ಮೇಲೆ ರಾಗಿ ಹುರಿಹಿಟ್ಟು, ಒಣ ಹಣ್ಣು, ಇತರ ಹಣ್ಣುಗಳನ್ನು ಸೇರಿಸಿಯೂ ಸವಿಯಬಹುದು. ಓಟ್ಸ್‌ನಿಂದ ಉಪ್ಪಿಟ್ಟು, ಕಚೋರಿ, ಖೀರು, ಕಿಚಡಿ, ಪಕೋಡ, ಬರ್ಫಿ, ಲಾಡು, ರಾಯತ, ಪಕೋಡ, ಬೋಂಡ ಇತ್ಯಾದಿ ತಯಾರಿಸಬಹುದು. ಮಿಲ್ಕ್‌ಶೇಕ್, ದೋಸೆ, ಚಪಾತಿ, ಇಡ್ಲಿ ಅಂತಹವುಗಳಿಗೂ ಓಟ್ಸ್ ಸೇರಿಸಿ ಆರೋಗ್ಯಕರ ಮಾತ್ರವಲ್ಲ ರುಚಿಕರವಾಗಿಯೂ ಮಾಡಿಕೊಳ್ಳಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry