ಶಂಕರಲಿಂಗೇಗೌಡರ ಹೇಳಿಕೆಗೆ ಬಿಜೆಪಿ ಖಂಡನೆ

7

ಶಂಕರಲಿಂಗೇಗೌಡರ ಹೇಳಿಕೆಗೆ ಬಿಜೆಪಿ ಖಂಡನೆ

Published:
Updated:
ಶಂಕರಲಿಂಗೇಗೌಡರ ಹೇಳಿಕೆಗೆ ಬಿಜೆಪಿ ಖಂಡನೆ

ಮೈಸೂರು: ‘ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಅನರ್ಹ ಶಾಸಕ ಶಂಕರಲಿಂಗೇಗೌಡ ಸಚಿವ ಎಸ್.ಎ.ರಾಮದಾಸ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿ ನಗರ ಘಟಕ ತೀವ್ರವಾಗಿ ಖಂಡಿಸುತ್ತದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾಮರಾಜ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ 4 ಬಾರಿ ಆಯ್ಕೆಯಾಗಿರುವ ಶಂಕರಲಿಂಗೇಗೌಡ ಅವರಿಗೆ ಮಂತ್ರಿ ಸ್ಥಾನ ದೊರೆಯಲಿಲ್ಲ. ಅದಕ್ಕೆ ಅವರ ಪಕ್ಷ ವಿರೋಧಿ ನಿಲುವು ಕಾರಣ. ಜೆಡಿಎಸ್ ಜೊತೆ ಆಂತರಿಕ ಹೊಂದಾಣಿಕೆ ಮಾಡಿಕೊಂಡು, ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ಜೆಡಿಎಸ್ ಪಕ್ಷದವರೊಂದಿಗೆ ಗೋವಾ, ಚೆನ್ನೈ ರೆಸಾರ್ಟ್‌ಗಳಲ್ಲಿ ಕಾಣಿಸಿಕೊಂಡರು. ರಾಜ್ಯ ಸಭಾ ಚುನಾವಣೆಯಲ್ಲಿ ವಿಜಯಮಲ್ಯ ಪರ ಓಟು ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇಂತಹ ಅನುಮಾನಾಸ್ಪದ ಮತ್ತು ಪಕ್ಷ ವಿರೋಧಿ ನಡವಳಿಕೆಯಿಂದ ಅವರಿಗೆ ಮಂತ್ರಿ ಸ್ಥಾನ ದೊರೆಯಲಿಲ್ಲ ಎಂದು ಆಪಾದಿಸಿದರು.ಜೆಡಿಎಸ್ ಸೇರುವ ಇಷ್ಟವಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆಯಬೇಕಿತ್ತು. ಬಿಜೆಪಿ ತತ್ವ ಸಿದ್ಧಾಂತಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಲ್ಲದೆ, ನಂಬಿಕೆ ಇಟ್ಟ ಮತದಾರ ಪ್ರಭುವಿಗೂ ಮೋಸ ಮಾಡಿದ್ದಾರೆ. ಇವರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ? ಮೈಸೂರಿಗೆ ಯಾವ ಯೋಜನೆ ತಂದಿದ್ದಾರೆ? ಎಂಬುದನ್ನು ನೋಡಿದಾಗ ಯಾವುದೇ ಸಾಧನೆ ಕಂಡುಬರುವುದಿಲ್ಲ ಎಂದು ಟೀಕಿಸಿದರು.ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ.ಪಿ.ಮಂಜುನಾಥ್ ಮಾತನಾಡಿ ಎಲ್ಲಿ? ಯಾವಾಗ? ಏನು? ಮಾತನಾಡಬೇಕು ಎಂಬ ಪ್ರಜ್ಞೆ ಇಲ್ಲದೆ ಮಾತನಾಡುವ ಶಂಕರಲಿಂಗೇಗೌಡರವರು ವಿನಾಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಇಂತಹ ಬಾಲಿಶ ಹೇಳಿಕೆಯನ್ನು ಸಂಘಟನಾ ತ್ಮಕ ಪಕ್ಷ ಬಿಜೆಪಿ ಸಹಿಸುವುದಿಲ್ಲ ಎಂದು ಕಿಡಿಕಾರಿದರು.ಮುಡಾ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಮನಬಂದಂತೆ ಮಾತನಾಡುವ ಇಂತಹ ವ್ಯಕ್ತಿಯನ್ನು ನಾವು 4 ಬಾರಿ ಗೆಲ್ಲಿಸಿದೆವಾ ? ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುವ ಹೇಳಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದು ತಿಳಿಸಿದರು.ಪಾಲಿಕೆ ವಿರೋಧ ಪಕ್ಷದ ನಾಯಕ ನಂದೀಶ್ ಪ್ರೀತಂ ಮಾತನಾಡಿ, ಈಗಾಗಲೇ ನಾನು ಶಂಕರಲಿಂಗೇಗೌಡರ ನಡವಳಿಕೆಯನ್ನು ಖಂಡಿಸಿದ್ದೇನೆ. ಸಾರ್ವಜನಿಕರ ಎದುರು ಸಚಿವರನ್ನು ಟೀಕಿಸುವ ಸಂದರ್ಭ ಮತ್ತು ವೇದಿಕೆ ಅದಾಗಿರಲಿಲ್ಲ. ಸಮಯ, ಸಂದರ್ಭ ಅರಿತು ಮಾತನಾಡಬೇಕು. ಈ ರೀತಿ ಬಹಿರಂಗವಾಗಿ ಸಚಿವರ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ಕೃಷ್ಣರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸೋಮಸುಂದರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry