ಗುರುವಾರ , ನವೆಂಬರ್ 21, 2019
22 °C

ಶಂಕರಲಿಂಗೇಶ್ವರ ರಥೋತ್ಸವ: ಜಾನುವಾರು ಸಂತೆ

Published:
Updated:

ಯಾದಗಿರಿ: ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ತಾಲ್ಲೂಕಿನ ಗಡಿಭಾಗದ ಈಡ್ಲೂರಿನ ಶಂಕರಲಿಂಗೇಶ್ವರ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ನಡೆಯಿತು.ಸೂರ್ಯ ಇಳಿಹೊತ್ತಿನಲ್ಲಿ ತನ್ನ ಕರ್ತವ್ಯ ಮುಗಿಸಿ ಜಾರುವ ತವಕಲ್ಲಿದ್ದ. ಕರ್ನಾಟಕ, ಆಂಧ್ರಪ್ರದೇಶದಿಂದ ಆಗಮಿಸಿದ ಸಾವಿರಾರು ಭಕ್ತರು ಶಂಕರಲಿಂಗನ ರಥ ಎಳೆಯುವ ಉತ್ಸುಕತೆಯಲ್ಲಿದ್ದರು. ದೇವರ ಮೂರ್ತಿ ರಥದಲ್ಲಿ ಕುಳ್ಳಿರಿಸುತ್ತಲೇ ನೆರೆದ ಜನ ಶಂಕರಲಿಂಗೇಶ್ವರ ಮಹಾರಾಜ ಕೀ ಜೈ ಎಂದು ಜೈಕಾರವನ್ನು ಹಾಕುತ್ತ ರಥವನ್ನು ಎಳೆದು ಸಂಭ್ರಮಿಸಿದರು.ಡೊಳ್ಳು, ನಂದಿ ಕೋಲು, ಭಜನಾ ತಂಡಗಳು, ವಿವಿಧ ಸಂಗೀತ ವಾದ್ಯಗಳ ಮೇಳ ರಥೋತ್ಸವಕ್ಕೆ ಮೆರಗು ನೀಡಿದವು. ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿದ ರಥ ಭಕ್ತರ ಕಣ್ಮನ ಸೆಳೆಯಿತು. ಜಾತ್ರೆಗೆ ಆಗಮಿಸಿದ ಜನ ಫಳಾರಿನ ಅಂಗಡಿಗಳಿಗೆ ಮುಗಿಬಿದ್ದು ಖರೀದಿಸಿದರು. ಜೋರಾದ ವ್ಯಾಪಾರದಿಂದ ಮಾಲೀಕರು ಫುಲ್ ಖುಷಿಯಾಗಿದ್ದರು. ಮಕ್ಕಳು ಆಟಿಕೆಯ ಸಾಮಾನು ಕೊಳ್ಳುತ್ತ, ಪೀಪಿಗಳನ್ನು ಊದಿ ಸಂಭ್ರಮಿಸಿದರು.

ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ವೆಂಕಟ ರಾಯಗೌಡ ಜೇಗರಕಲ್, ಕೆಪಿಸಿಸಿ ಸದಸ್ಯ ಬುಚ್ಚಣ್ಣ ಜೈಗ್ರಾಮ, ವಿಶ್ವನಾಥ ನೀಲಹಳ್ಳಿ, ಭೀಮರಡ್ಡಿ ಶೆಟ್ಟಿಹಳ್ಳಿ, ಎಪಿಎಂಸಿ ಸದಸ್ಯ ಮಲ್ಲಣ್ಣ ಜೈಗ್ರಾಮ್, ಜೈಗ್ರಾಂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ಭಾಸ್ಕರಡ್ಡಿ ಈಡ್ಲೂರ್, ಗುರುನಾಥರಡ್ಡಿ ವಡವಟ್, ಬಸವರಾಜ ಸ್ವಾಮಿ ಈಡ್ಲೂರ, ಬಸವರಾಜ ಸ್ವಾಮಿ ಬದ್ದೇಪಲ್ಲಿ, ಬಸವರಾಜಪ್ಪ ದೇಸಾಯಿ ಕರಣಗಿ, ಜಗನಾಥರಡ್ಡಿ, ತಾಯಪ್ಪ, ಚಂದ್ರಶೇಖರ ವಾರದ, ನಾಗಪ್ಪ ಹಳ್ಳಿ, ಲಕ್ಷ್ಮರಡ್ಡಿ ಈಡ್ಲೂರ, ಭೀಮರಾಯ ತುರಕನದೊಡ್ಡಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.ಗಮನ ಸೆಳೆದ ಜಾನುವಾರು ಸಂತೆ: ಈಡ್ಲೂರಿನ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಾನುವಾರುಗಳ ಸಂತೆ. ಇಲ್ಲಿ ಪ್ರತಿ ವರ್ಷ ಆಂಧ್ರಪ್ರದೇಶ, ಕರ್ನಾಟಕದ ವಿವಿಧೆಡೆಗಳಿಂದ ಆಗಮಿಸುವ ವಿವಿಧ ತಳಿಯ ಜಾನುವಾರುಗಳನ್ನು ನೋಡಲೆಂದೇ ಅನೇಕ ರೈತರು ಜಾತ್ರೆಗೆ ಆಗಮಿಸುತ್ತಾರೆ.ಭಾನುವಾರ ಸಂಜೆ ನಡೆದ ಜಾನುವಾರುಗಳ ಸಂತೆಯಲ್ಲಿ ವಿವಿಧ ತಳಿಯ ಎತ್ತುಗಳು, ಹೋರಿಗಳು, ಎಮ್ಮೆ, ಆಕಳು ಸೇರಿದಂತೆ ವಿವಿಧ ಬಗೆಯ ಜಾನುವಾರುಗಳು ಗಮನ ಸೆಳೆದವು. ಸಹಸ್ರಾರು ರೈತರು ರಥೋತ್ಸವ ಮುಗಿಯುತ್ತಿದ್ದಂತೆಯೇ ಜಾನುವಾರುಗಳು ಸಂತೆಗೆ ಆಗಮಿಸಿ, ಜಾನುವಾರುಗಳ ವೀಕ್ಷಣೆ ಮಾಡುತ್ತಿದ್ದರು.

ಪ್ರತಿಕ್ರಿಯಿಸಿ (+)