ಭಾನುವಾರ, ಜೂನ್ 13, 2021
25 °C

ಶಂಕರಿ ಬಿದರಿ ನೇಮಕ ರದ್ದು:ಇನ್ಫೆಂಟ್ ಹಂಗಾಮಿ ಡಿಜಿಪಿ:ಸಿಎಟಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ಶಂಕರ ಬಿದರಿ ಅವರನ್ನು ನೇಮಕ ಮಾಡಿರುವ ಆದೇಶವನ್ನು ಕೇಂದ್ರ ಆಡಳಿತ ನ್ಯಾಯಮಂಡಳಿಯ ಬೆಂಗಳೂರು ಘಟಕ ಶುಕ್ರವಾರ ರದ್ದುಗೊಳಿಸಿದೆ.ಈ ಹುದ್ದೆಗೆ ಅರ್ಹ ವ್ಯಕ್ತಿಗಳ ನೇಮಕ ನಡೆಯುವವರೆಗೆ ತಾತ್ಕಾಲಿಕವಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿಯಾಗಿರುವ ಎ.ಆರ್. ಇನ್ಫೆಂಟ್ ಅವರನ್ನು ನೇಮಕ ಮಾಡುವಂತೆ ಸಿಎಟಿ ನ್ಯಾಯಾಂಗ ಸದಸ್ಯರಾದ ಡಾ. ಸುರೇಶ್ ಹಾಗೂ ಆಡಳಿತಾತ್ಮಕ ಸದಸ್ಯೆ ಲೀಲಾ ಮೆಹಂದಳೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.ಕಳೆದ ಡಿಸೆಂಬರ್ 1ರಂದು ಬಿದರಿ ಅವರನ್ನು ನೇಮಕ ಮಾಡಿರುವ ಆದೇಶವನ್ನು ಪ್ರಶ್ನಿಸಿ ಇನ್ಫೆಂಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮಂಡಳಿ ನಡೆಸಿತು.ಈ ಆದೇಶದಿಂದ ಡಿಜಿಪಿ ನೇಮಕಾತಿಗೆ ಸಂಬಂಧಿಸಿದಂತೆ ಒಂದು ವರ್ಷ ಕಾಲ ನಡೆದಿದ್ದ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಸಿಎಟಿ ಆದೇಶವನ್ನು ಪ್ರಶ್ನಿಸಿ ಬಿದರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.ಸಿಎಟಿ ಹೇಳಿದ್ದೇನು?: `ಪೊಲೀಸ್ ಇಲಾಖೆಯಲ್ಲಿನ ಮೂವರು ಹಿರಿಯ ಅಧಿಕಾರಿಗಳ ಪೈಕಿ ಸೇವೆಯಲ್ಲಿ ಹಿರಿಯರು, ಉತ್ತಮ ನಡತೆ ಉಳ್ಳವರು ಹಾಗೂ ಸೇವೆಯ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ಅಧಿಕಾರಿಗಳನ್ನು ಡಿಜಿಪಿ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು `ಪ್ರಕಾಶ್ ಸಿಂಗ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ~  ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ಬಿದರಿ ಅವರ ನೇಮಕಕ್ಕೆ ಸಂಬಂಧಿಸಿದಂತೆ ಈ ಆದೇಶದ ಉಲ್ಲಂಘನೆಯಾಗಿದೆ.`ನರಹಂತಕ ವೀರಪ್ಪನ್ ಬೇಟೆಗೆಂದು ಬಿದರಿ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿತ್ತು. ಆ ಸಂದರ್ಭದಲ್ಲಿ ವೀರಪ್ಪನ್ ಶೋಧ ಕಾರ್ಯದ ನೆಪದಲ್ಲಿ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಅಷ್ಟೇ ಅಲ್ಲದೇ, ಕೆಲವು ಮಹಿಳೆಯರ ಮೇಲೆ ಅತ್ಯಾಚಾರವೂ ನಡೆದಿದೆ.

 

ಇವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ವರದಿಯಲ್ಲಿ ಉಲ್ಲೇಖಗೊಂಡಿತ್ತು. ಇದು ಬಿದರಿ ಅವರ ಸೇವೆಯಲ್ಲಿನ ಕಪ್ಪು ಚುಕ್ಕೆ. ಆದರೆ ಡಿಜಿಪಿ ಸ್ಥಾನಕ್ಕೆ ಹೆಸರುಗಳನ್ನು ಶಿಫಾರಸು ಮಾಡುವ ಸಂದರ್ಭದಲ್ಲಿ  ಈ ಕುರಿತು ರಾಜ್ಯ ಸರ್ಕಾರವು ಕೇಂದ್ರ ಲೋಕಸೇವಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಿರಲಿಲ್ಲ.ಇದು ಕಾನೂನುಬಾಹಿರ~ ಎಂದು ಪೀಠ ತಿಳಿಸಿದೆ.ಸೇವಾ ಹಿರಿತನವನ್ನು ಕಡೆಗಣಿಸಿ ಬಿದರಿ ಅವರನ್ನು ನೇಮಕ ಮಾಡಲಾಗಿದೆ ಎನ್ನುವ ಇನ್ಫೆಂಟ್  ಅವರ ವಾದವನ್ನೂ ನ್ಯಾಯಮಂಡಳಿ ಒಪ್ಪಿಕೊಂಡಿದೆ. `ನಾನು 1977ನೇ ಗುಂಪಿನ ಅಧಿಕಾರಿ. ಆದರೆ ಬಿದರಿಯವರು 1978ರ ಗುಂಪಿಗೆ ಸೇರಿದವರು. ಸೇವಾ ಹಿರಿತನದ ಪಟ್ಟಿಯಲ್ಲಿ ನನ್ನ ಹೆಸರು ಮೊದಲ ಸ್ಥಾನದಲ್ಲಿ ಇತ್ತು. ಬಿದರಿ ಅವರ ಹೆಸರು ಮೂರನೆಯ ಸ್ಥಾನದಲ್ಲಿ ಇತ್ತು. ಆದರೆ ಇದಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ~ ಎಂದು ಇನ್ಫೆಂಟ್ ದೂರ್ದ್ದಿದರು. ಈ ವಾದ ಮಾನ್ಯಗೊಂಡಿದೆ.ಮುಂದೇನು?: ಸಿಎಟಿ ನೀಡಿರುವ ಆದೇಶದ ಪ್ರತಿ ಸರ್ಕಾರದ ಕೈಸೇರಿದ ತಕ್ಷಣ, ಬಿದರಿ ಅವರನ್ನು ಡಿಜಿಪಿ ಸ್ಥಾನದಿಂದ ಕೆಳಕ್ಕೆ ಇಳಿಸಬಹುದು. ಆದೇಶವನ್ನು ಬಿದರಿಯವರು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಇದೆ. ಒಂದು ವೇಳೆ ಸಿಎಟಿ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದರೆ, ತಡೆಯಾಜ್ಞೆ ಚಾಲ್ತಿಯಲ್ಲಿ ಇರುವವರೆಗೆ ಬಿದರಿ ಅವರು ಡಿಜಿಪಿ ಸ್ಥಾನದಲ್ಲಿ ಮುಂದುವರಿಯಬಹುದು.ಒಂದು ವೇಳೆ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದರೆ ಈ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡುವವರೆಗೆ ಇನ್ಫೆಂಟ್ ಅವರು ಹಂಗಾಮಿ ಡಿಜಿಪಿಯಾಗಿ ಮುಂದುವರಿಯಲಿದ್ದಾರೆ. ಬಿದರಿ ಹಾಗೂ ಇನ್ಫೆಂಟ್ ಇಬ್ಬರೂ ಮೇ  ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ.`ಬಿದರಿ ಸ್ಥಾನಪಲ್ಲಟ: ಸರ್ಕಾರ ನಿಯಮ ಉಲ್ಲಂಘಿಸಿಲ್ಲ~ಮಂಗಳೂರು: ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಅವರ ನೇಮಕಾತಿಯಲ್ಲಿ ಸರ್ಕಾರ ನಿಯಮಗಳನ್ನು ಉಲ್ಲಂಘಿಸಿಲ್ಲ. ಸಿಎಟಿ ಆದೇಶದ ಪ್ರತಿ ಪರಿಶೀಲಿಸಿದ ನಂತರ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಆರ್.ಅಶೋಕ್ ಹೇಳಿದ್ದಾರೆ. `ಬೆಂಗಳೂರಿಗೆ ಹೋಗಿ ಸಿಎಟಿ ಪ್ರತಿ ನೋಡಬೇಕು.ಬಳಿಕವಷ್ಟೇ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯ. ಬಿದರಿ ನೇಮಕದಲ್ಲಿ ಸರ್ಕಾರ ನಿಯಮವನ್ನಂತೂ ಉಲ್ಲಂಘಿಸಿಲ್ಲ~ ಎಂದು ಅವರು ಶುಕ್ರವಾರ ಸಂಜೆ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.