ಸೋಮವಾರ, ಆಗಸ್ಟ್ 3, 2020
23 °C
ಸಿದ್ಧಾಂತ ಮಂದಿರದಿಂದ ವಿಗ್ರಹ ಕಳವು ಪ್ರಕರಣ

ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ

ಮೂಡುಬಿದಿರೆ: ಇಲ್ಲಿನ ಜೈನಮಠ ಅಧೀನದ ಸಿದ್ಧಾಂತ ಮಂದಿರದಲ್ಲಿ ಶುಕ್ರವಾರ ರಾತ್ರಿ ನಡೆದ ಕೋಟ್ಯಂತರ ರೂಪಾಯಿ ಮೌಲ್ಯದ ಪುರಾತನ ವಿಗ್ರಹಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯ ರೇಖಾಚಿತ್ರವನ್ನು  ಪೊಲೀಸರು ಭಾನುವಾರ  ಬಿಡುಗಡೆ ಮಾಡಿದ್ದಾರೆ.ಶಂಕಿತನು ಸುಮಾರು 30 ವರ್ಷ ಪ್ರಾಯದವನಾಗಿದ್ದು ಬಿಳಿಬಣ್ಣ, ದೃಢಕಾಯ ಹೊಂದಿದ್ದಾನೆ. ಕುರುಚಲು ಗಡ್ಡ, ಮೀಸೆ ಹಾಗೂ ತಲೆಯಲ್ಲಿ ಗಿಡ್ಡ ಕೂದಲುಗಳಿವೆ. ಮೇಲ್ನೋಟಕ್ಕೆ ಉತ್ತರ ಪ್ರದೇಶದ ನಾಗರಿಕನಂತಿದ್ದಾನೆ. ಕಳ್ಳತನ ನಡೆದ ದಿನ ಮತ್ತು ಅದರ ಹಿಂದಿನ ದಿನ ಶಂಕಿತ ವ್ಯಕ್ತಿಯೊಬ್ಬ ಜೈನ್‌ಪೇಟೆ ಪರಿಸರದಲ್ಲಿ ಸುತ್ತಾಡುತ್ತಿದ್ದುದನ್ನು ಕಂಡವರಿದ್ದಾರೆ.`ಧರ್ಮಸ್ಥಳ ಜಾನಾ ಹೈ ಕಿದರ್ ರಾಸ್ತಾ' ಎಂದು ವ್ಯಕ್ತಿಯೊಬ್ಬರಲ್ಲಿ ಹಿಂದಿಯಲ್ಲಿ ಕೇಳಿದ್ದಾನೆ ಎನ್ನಲಾಗಿದೆ. ಆತ ಶನಿವಾರದಿಂದ ಕಾಣಿಸಿಲ್ಲ. ಶನಿವಾರ ಮುಂಜಾನೆ ಹಿಂದಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಮೂಡುಬಿದಿರೆಯಿಂದ ಬಾಡಿಗೆ ರಿಕ್ಷಾದಲ್ಲಿ ಬೆಳ್ತಂಗಡಿಗೆ ಹೋಗಿದ್ದು, ಆತ ಜೈನ್ ಪೇಟೆಯಲ್ಲಿ ಸುತ್ತಾಡುತ್ತಿದ್ದವನೇ ಎಂಬುದು ದೃಢಪಟ್ಟಿಲ್ಲ. ಸಾರ್ವಜನಿಕರು ಕೊಟ್ಟ ಮಾಹಿತಿಯಂತೆ ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆಗೊಳಿಸಲಾಗಿದೆ.ಉಳಿಕೆ ವಿಗ್ರಹಗಳು ಬ್ಯಾಂಕ್ ಲಾಕರ್‌ಗೆ: ಜೈನ ಮಠದ ಶ್ರಿಗಳು ಅಮೆರಿಕ ಪ್ರವಾಸದಲ್ಲಿದ್ದಾರೆ. ಸಿದ್ಧಾಂತ ಮಂದಿರದಲ್ಲಿ ಎಷ್ಟು ವಿಗ್ರಹಗಳಿದ್ದವು ಎನ್ನುವುದು ಗೊತ್ತಾಗಿಲ್ಲ. ಮೂಲವೊಂದರ ಪ್ರಕಾರ ಅಲ್ಲಿ 50 ವಿಗ್ರಹಗಳಿದ್ದು ಈ ಪೈಕಿ 15 ಕಳವಾಗಿವೆ. ಉಳಿದ ವಿಗ್ರಹಗಳನ್ನು ಬ್ಯಾಂಕ್ ಲಾಕರ್‌ನಲ್ಲಿಡಲು ನಿರ್ಧರಿಸಲಾಗಿದೆ.

ಮಂದಿರದ ಸಿಬ್ಬಂದಿ ಪ್ರತಿ ದಿನ ಹೆಬ್ಬೆಟ್ಟು ಗುರುತು ಹಾಕಿ ಸೈರನ್ ಚಾಲನೆ ಮಾಡುತ್ತಿದ್ದ. ಆದರೆ ಶುಕ್ರವಾರ ಈ ವಿಷಯವನ್ನು ಮರೆತಿದ್ದ ಎನ್ನಲಾಗಿದ್ದು ಅದೇ ರಾತ್ರಿ ಮಂದಿರದಲ್ಲಿ ಕಳ್ಳತನ ನಡೆದಿದೆ. ಮಂದಿರದ ಒಳಗಡೆ ಮತ್ತು ಪ್ರವೇಶ ದ್ವಾರದಲ್ಲಿ ಸಿ.ಸಿ ಟಿ.ವಿಗಳನ್ನು ಅಳವಡಿಸಲಾಗಿದ್ದು ಹೊರಬದಿಯಲ್ಲಿ ಈ ವ್ಯವಸ್ಥೆ ಇಲ್ಲದ್ದ್ದಿದುದು  ಕಳ್ಳನಿಗೆ ಅನುಕೂಲವಾಗಿದೆ.ಮಂದಿರದ ಸುರಕ್ಷತೆ ದೃಷ್ಟಿಯಿಂದ ಹಳೆಯ ಕಾಲದ ಕಿಟಕಿ, ಬಾಗಿಲುಗಳನ್ನು ಭದ್ರಪಡಿಸುವ ಕಾರ್ಯ ಆರಂಭವಾಗಿದೆ. ಮಂದಿರಕ್ಕೆ ಬೀಗ ಮುದ್ರೆ ಹಾಕಲಾಗಿದ್ದು ಶನಿವಾರದಿಂದ ಯಾತ್ರಿಕರ ಭೇಟಿ ನಿಷೇಧಿಸಲಾಗಿದೆ.  5 ಪೊಲೀಸ್ ತಂಡಗಳು ಬೇರೆ ಬೇರೆ ಮಗ್ಗುಲಲ್ಲಿ ಆರೋಪಿ ಶೋಧಕ್ಕೆ ತೊಡಗಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಸಿದ್ಧಾಂತ ಮಂದಿರಕ್ಕೆ ಮತ್ತೆ ಶನಿವಾರ ಭೇಟಿ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಮೂಡುಬಿದಿರೆಯ ಎಲ್ಲಾ ಬಸದಿಗಳಿಗೆ ಸೂಕ್ತ ಭದ್ರತಾ ಸಿಬ್ಬಂದಿ ನೇಮಿಸುವಂತೆ ಬಸದಿ ಮೊಕ್ತೇಸರರಿಗೆ ಸೂಚಿಸಿದರು. ವಿಗ್ರಹಗಳ ಕಳವಿನ ಹಿನ್ನೆಲೆಯಲ್ಲಿ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಮೆರಿಕ ಪ್ರವಾಸ ಮೊಟಕುಗೊಳಿಸಿ ಸೋಮವಾರ ಮೂಡುಬಿದಿರೆಗೆ ಹಿಂದಿರುಗಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.