ಬುಧವಾರ, ಆಗಸ್ಟ್ 21, 2019
25 °C

ಶಂಕಿತ ಡೆಂಗೆ ಜ್ವರ: ಬಾಲಕ ಸಾವು

Published:
Updated:

ರಾಮನಗರ: ತಾಲ್ಲೂಕಿನ ಚೌಡೇಶ್ವರಿಪುರದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ರಘು (10) ಎಂಬ ಬಾಲಕ ಬುಧವಾರ ಅಸುನೀಗಿರುವ ಘಟನೆ ನಡೆದಿದ್ದು, ಸಂಬಂಧಿಕರು ಶಂಕಿತ ಡೆಂಗೆಯಿಂದಲೇ ಬಾಲಕ ಸಾವನ್ನಪ್ಪಿರಬಹುದು ಎಂದು ಅನುಮಾನಿಸಿದ್ದಾರೆ.ಚಿಕ್ಕಣ್ಣ ಮತ್ತು ಮುನಿಲಕ್ಷ್ಮೀ ಎಂಬುವರ ಪುತ್ರನಾದ ರಘು ಕಲ್ಲಮಂಗಲ ದೊಡ್ಡಿಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ನಾಲ್ಕು ದಿನದಿಂದ ತೀವ್ರ ಜ್ವರ ಕಂಡು ಬಂದ ಕಾರಣ ಪೋಷಕರು ಮಂಗಳವಾರ ಬೆಳಿಗ್ಗೆ ಆತನನ್ನು ರಾಮನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುವ ವೈದ್ಯರು, ಬಾಲಕನ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.ಈ ನಡುವೆ ರಘು ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಭಾವಿಸಿದ ಚಿಕ್ಕಣ್ಣ ಮಗನನ್ನು ಮಂಗಳವಾರ ಸಂಜೆ ಆಸ್ಪತ್ರೆಯಿಂದ ಮನೆಗೆ ಕರೆತಂದಿದ್ದಾರೆ.ಸಂಜೆ ಎಲ್ಲರೊಂದಿಗೆ ಮಾತನಾಡಿಕೊಂಡಿದ್ದ ಮಗ ರಾತ್ರಿಯಾಗುತ್ತಿದ್ದಂತೆ ಚಳಿಯಿಂದ ನಡುಗ ತೊಡಗಿದ. ರಾತ್ರಿ 12 ಗಂಟೆ ವೇಳೆಗೆ ದೇಹದ ಅರ್ಧ ಭಾಗ ತಣ್ಣಗಾಗಿತ್ತು. ನಮ್ಮಡನೆ ಮಾತನಾಡುತ್ತಲೇ ಮಗ ಕೊನೆಯುಸಿರೆಳೆದ ಎಂದು ರಘುವಿನ ತಂದೆ ಚಿಕ್ಕಣ್ಣ ದುಃಖಿತರಾಗಿ ಹೇಳಿದರು.ಚಿಕ್ಕಣ್ಣನವರ ಹುಟ್ಟೂರಾದ ವಡ್ಡರದೊಡ್ಡಿಯಲ್ಲಿ ರಘುವಿನ ಅಂತ್ಯಕ್ರಿಯೆ ನೆರವೇರಿಸಲಾಯಿತು.ತಂದೆ, ತಾಯಿ ಹಾಗೂ ಒಬ್ಬ ಸಹೋದರಿ ಮತ್ತು ಸಹೋದರನನ್ನು ರಘು ಅಗಲಿದ್ದಾನೆ. ಪುಟ್ಟ ಬಾಲಕನನ್ನು ಕಳೆದುಕೊಂಡ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಡಿಎಚ್‌ಒ ಪ್ರತಿಕ್ರಿಯೆ : `ವಾಂತಿ- ಬೇಧಿ ಕಾರಣದಿಂದ ರಘು ಎಂಬ ಬಾಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ. ಸಂಜೆಯಷ್ಟರಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಾಲಕನ ರಕ್ತದ ಮಾದರಿಯ ಪರೀಕ್ಷೆ ಬಂದಿದ್ದು, ಡೆಂಗೆ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ರಕ್ತದಲ್ಲಿ `ಪ್ಲೇಟ್‌ಲೆಟ್ಸ್'ಗಳು ಕಡಿಮೆಯಾಗಿರುವುದು ಗೊತ್ತಾಗಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಘುನಾಥ್ `ಪ್ರಜಾವಾಣಿ'ಗೆ ತಿಳಿಸಿದರು.

Post Comments (+)