ಶಂಕ್ರುಬಾಯಿ ರಾಜಕೀಯ ಭವಿಷ್ಯ ನಿರ್ಧಾರ ಇಂದು

7

ಶಂಕ್ರುಬಾಯಿ ರಾಜಕೀಯ ಭವಿಷ್ಯ ನಿರ್ಧಾರ ಇಂದು

Published:
Updated:

ವಿಜಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಇದೇ 4ರಂದು ಕರೆದಿರುವ ಜಿಲ್ಲಾ ಪಂಚಾಯಿತಿ ವಿಶೇಷ ಸಭೆ ತೀವ್ರ ಕುತೂಹಲ ಕೆರಳಿಸಿದೆ.

ಶಂಕ್ರುಬಾಯಿ ಚಲವಾದಿ ಅವರು `ಈಗಾಗಲೆ ಸಲ್ಲಿಸಿರುವ~ ರಾಜೀನಾಮೆ ಅಂಗೀಕಾರವಾಗುತ್ತದೆಯೇ? ಅವರನ್ನು ಪದಚ್ಯುತಗೊಳಿಸಲಾಗುವುದೋ? ಅಥವಾ `ರಾಜೀನಾಮೆ ಪ್ರಹಸನ~ ಕೊನೆಗೊಂಡು ಅವಿಶ್ವಾಸ ನಿರ್ಣಯ ಸಭೆಯೇ ರದ್ದಾಗುತ್ತದೆಯೋ? ಎಂಬ ಜಿಜ್ಞಾಸೆ ಶುರುವಾಗಿದೆ.`ನಾನು ಈಗಾಗಲೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ರಾಜೀನಾವೆು ಸಲ್ಲಿಸಿದ್ದೇನೆ. ಆದರೂ, ಅವಿಶ್ವಾಸ ನಿರ್ಣಯ ಮಂಡನೆ ಏಕೆ~ ಎಂಬುದು ಶಂಕ್ರುಬಾಯಿ ಚಲವಾದಿ ಪ್ರಶ್ನೆ.`ಜನವರಿ 24ರಂದೇ ನಾನು ಜಿ.ಪಂ. ಸಿಇಒ ಹಾಗೂ ನಮ್ಮ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೆ. ಅದರ ಒಂದು ಪ್ರತಿಯನ್ನು ಆರ್‌ಡಿಪಿಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ಫ್ಯಾಕ್ಸ್ ಮಾಡಿದ್ದೆ. ಜನವರಿ 31ರಂದು ಬೆಂಗಳೂರಿಗೆ ಖುದ್ದಾಗಿ ತೆರಳಿ ರಾಜೀನಾಮೆ ಸಲ್ಲಿಸಿದ್ದು, ಅದು ಅಂಗೀಕಾರದ ಹಂತದಲ್ಲಿದೆ~ ಎಂಬುದು ಅವರ ವಿವರಣೆ.`ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸರ್ಕಾರಕ್ಕೆ ರಾಜೀನಾಮೆ ನೀಡಿರುವ ವಿಷಯ ನಮಗೆ ಗೊತ್ತಿಲ್ಲ. ಈ ವರೆಗೂ ಅವರ ರಾಜೀನಾಮೆ ಕುರಿತು ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಶನಿವಾರ ಬೆಳಿಗ್ಗೆ 11ಕ್ಕೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಶೇಷ ಸಭೆ ಕರೆಯಲಾಗಿದೆ~ ಎಂದು ಜಿ.ಪಂ. ಸಿಇಒ ಎ.ಎನ್. ಪಾಟೀಲ ಹೇಳಿದರು.`ಬೆಳಿಗ್ಗೆ 11ಕ್ಕೆ ಸಭೆ ನಿಗದಿಯಾಗಿದೆ. ಅಗತ್ಯ ಕೋರಂ ಇದ್ದರೆ ಮಾತ್ರ ಸಭೆ ನಡೆಯಲಿದೆ. ನಿಯಮದಂತೆ ಅರ್ಧ ಗಂಟೆಯ ಒಳಗಾಗಿ ಅಗತ್ಯ ಕೋರಂ ಭರ್ತಿಯಾಗದಿದ್ದರೆ ವಿಶೇಷ ಸಭೆ ರದ್ದಾಗಲಿದೆ~ ಎಂಬುದು ಅವರ ಹೇಳಿಕೆ.`ಕಾಂಗ್ರೆಸ್‌ನ 19 ಜನ ಸದಸ್ಯರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಸೇರಿ ನಮ್ಮ ಬಲ 20 ಇದೆ. ಜೆಡಿಎಸ್‌ನ ಮತ್ತೊಬ್ಬ ಸದಸ್ಯರೂ ನಮಗೆ ಬೆಂಬಲ ನೀಡಲಿದ್ದಾರೆ. ಹೀಗಾಗಿ ಜಿ.ಪಂ. ಅಧ್ಯಕ್ಷರ ಅವಿಶ್ವಾಸ ಗೊತ್ತುವಳಿಗೆ ಜಯ ದೊರೆಯುವುದು ಶತಸಿದ್ಧ~ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಸಾರವಾಡ ಕ್ಷೇತ್ರದ ಜಿ.ಪಂ. ಸದಸ್ಯ ಉಮೇಶ ಕೋಳಕೂರ.ಒಟ್ಟು 38 ಸದಸ್ಯ ಬಲದ ವಿಜಾಪುರ ಜಿಲ್ಲಾ ಪಂಚಾಯಿತಿಯಲ್ಲಿಕಾಂಗ್ರೆಸ್ 19 ಸದಸ್ಯರನ್ನು ಹೊಂದಿದೆ. ಬಿಜೆಪಿ 16, ಜೆಡಿಎಸ್ ಇಬ್ಬರು ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಸದ್ಯ ಬಿಜೆಪಿಯ ಶಂಕ್ರುಬಾಯಿ ಚಲವಾದಿ ಅಧ್ಯಕ್ಷರಾಗಿದ್ದು, ಪಕ್ಷೇತರರಾಗಿ ಆಯ್ಕೆಯಾಗಿದ್ದ ಶ್ರೀಶೈಲಗೌಡ ಬಿರಾದಾರ ಉಪಾಧ್ಯಕ್ಷರಾಗಿದ್ದರು.ಕಾಂಗ್ರೆಸ್‌ನ 19 ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಸೇರಿ ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯುವಂತೆ ಮೊದಲು ಅಧ್ಯಕ್ಷರಿಗೆ, ನಂತರ ಜಿ.ಪಂ. ಸಿಇಒಗೆ ನೋಟೀಸ್ ನೀಡಿದ್ದರು.ಬಿಜೆಪಿ ಕೋರ್ ಕಮಿಟಿಯ ಸೂಚನೆಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಶೈಲಗೌಡ ಬಿರಾದಾರ ರಾಜೀನಾಮೆ ಸಲ್ಲಿಸಿದ್ದು, ಅವರ ರಾಜೀನಾವೆು ಈಗಾಗಲೆ ಅಂಗೀಕಾರಗೊಂಡಿದೆ. ಹೀಗಾಗಿ ಅಧ್ಯಕ್ಷರ ವಿರುದ್ಧ ಮಾತ್ರ ಈಗ ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯಲಾಗಿದೆ.ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯೇ ಇಲ್ಲ!:

`ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಈ ಮೀಸಲಾತಿ ಅಡಿ ಆಯ್ಕೆಯಾದ ಯಾವೊಬ್ಬ ಸದಸ್ಯೆಯೂ ಕಾಂಗ್ರೆಸ್‌ನಲ್ಲಿ ಇಲ್ಲ. ಬಿಜೆಪಿಯ ಶಂಕ್ರುಬಾಯಿ ಚಲವಾದಿ ಅವರನ್ನು ಪದಚ್ಯುತಗೊಳಿಸಿದರೂ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ದೊರೆಯುವುದಿಲ್ಲ.ಮತ್ತೆ ಬಿಜೆಪಿಯವರಿಗೇ ಆ ಗಾದಿ ಒಲಿಯಲಿದೆ. ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದು ಖಚಿತವಾಗಿದೆ. ಹೀಗಾದರೆ ವಿಜಾಪುರ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ-ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಆಡಳಿತ ಬರಲಿದೆ~ ಎಂಬುದು ಕೆಲ ಸದಸ್ಯರು ಹೇಳುತ್ತಿರುವ ಮಾತು.ಅದೃಷ್ಟ: ವಿಜಾಪುರ ಜಿಲ್ಲಾ ಪಂಚಾಯಿತಿಯಲ್ಲಿ ಈಗ ಉಪಾಧ್ಯಕ್ಷ ಸ್ಥಾನ ಖಾಲಿ ಇದೆ. ಒಂದು ವೇಳೆ ರಾಜೀನಾಮೆ ಅಥವಾ ಅವಿಶ್ವಾಸ ಗೊತ್ತುವಳಿ ಅಂಗೀಕಾರದಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಖಾಲಿಯಾದರೆ ಹೊಸ ಅಧ್ಯಕ್ಷರ ಆಯ್ಕೆಯವರೆಗೆ ನಿಯಮದಂತೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಲಿದ್ದಾರೆ.ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ನಾಲತವಾಡ ಕ್ಷೇತ್ರದ ಸದಸ್ಯ ಗಂಗಾಧರ ನಾಡಗೌಡರಿಗೆ ಈ ಹಂಗಾಮಿ ಅಧ್ಯಕ್ಷ ಪಟ್ಟ ಒಲಿದು ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry