`ಶಕ್ತಿಕೇಂದ್ರ'ದಲ್ಲಿ ರಸ್ತೆ ನಿಶ್ಶಕ್ತ !

7
ರಸ್ತೆ ದುರವಸ್ಥೆ

`ಶಕ್ತಿಕೇಂದ್ರ'ದಲ್ಲಿ ರಸ್ತೆ ನಿಶ್ಶಕ್ತ !

Published:
Updated:

ಬೆಂಗಳೂರಿನ ವೈಶಿಷ್ಟ್ಯ ರಾಜಧಾನಿ ಎಂಬುದೊಂದೇ ಅಲ್ಲ. ರಾಜ್ಯದ ಪ್ರತಿಯೊಂದು ಊರಿನ ಒಬ್ಬರಲ್ಲ ಒಬ್ಬರು ಈ ನಗರದಲ್ಲಿದ್ದಾರೆ. ರಾಜ್ಯದ ಪ್ರತಿಯೊಂದು ತಾಲ್ಲೂಕು, ಗ್ರಾಮದ ಜನರ ಪ್ರಾತಿನಿಧ್ಯ ಹೊಂದಿರುವ ಊರು ಬಹುಶಃ ಬೆಂಗಳೂರು ಮಾತ್ರ. ಹಾಗಾಗಿ ಇಲ್ಲಿನ ಆಗುಹೋಗುಗಳು ಇಡೀ ರಾಜ್ಯದ ಕುತೂಹಲದ ವಸ್ತುವಾಗುತ್ತವೆ. ಅಂತೆಯೇ ಇಲ್ಲಿನ ರಸ್ತೆಯ ವ್ಯವಸ್ಥೆ ಮತ್ತು ಅವ್ಯವಸ್ಥೆ ಕೂಡ. ರಾಜ್ಯದ ಆರ್ಥಿಕತೆಯ ಶಕ್ತಿ ಕೇಂದ್ರವಾದ ಬೆಂಗಳೂರಿನ ರಸ್ತೆಗಳು ಹೇಗಿವೆ? ಇಲ್ಲಿನ ಜನಸಂಖ್ಯೆಯ, ವಾಹನ ದಟ್ಟಣೆಯ ಭಾರವನ್ನು ತಾಳುವಷ್ಟು ಸದೃಢವಾಗಿವೆಯೇ?ಬೆಂಗಳೂರೆಂಬ ಈ ಊರು ಹಿಂದೊಮ್ಮೆ ಹಳ್ಳಿಯಾಗಿತ್ತು. ನಂತರ ಒಂದು ಪುಟ್ಟ ಪಟ್ಟಣವಾಯಿತು. ಹಾಗೆಯೇ ಬೆಳೆಯುತ್ತಾ ಮಹಾನಗರವಾಗಿ ಪರಿವರ್ತನೆ ಕಂಡಿತು. ಆದರೆ ಹೀಗೆ ಪರಿವರ್ತನೆ ಕಾಣುವ ಪ್ರಕ್ರಿಯೆಯಲ್ಲಿ ಇಲ್ಲಿನ ಎಲ್ಲ ರಸ್ತೆಗಳೂ ಬದಲಾಗಲಿಲ್ಲ. ಬೆಂಗಳೂರಿನ ರಸ್ತೆಗಳ ಒಟ್ಟು ಉದ್ದ 13 ಸಾವಿರ ಕಿಲೋ ಮೀಟರ್‌ಗಳು. ಇಲ್ಲಿನ ಶೇಕಡ 60ರಷ್ಟು ರಸ್ತೆಗಳು ಅಗತ್ಯಕ್ಕಿಂತ ಕಿರಿದಾಗಿವೆ. ಇದರಿಂದ ಜನರ ಸಂಚಾರಕ್ಕೆ ತೊಂದರೆ.ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ಅಂದಾಜು 1000ದಿಂದ 1,200ರಷ್ಟು ಹೊಸ ವಾಹನಗಳು ನೋಂದಣಿ ಆಗುತ್ತಿವೆ. ಬೆಂಗಳೂರಿನ ರಸ್ತೆಗಳಿಗೆ ಅಂದಾಜು 10ರಿಂದ 12 ಲಕ್ಷ ವಾಹನಗಳನ್ನು ತಾಳಿಕೊಳ್ಳುವ ಶಕ್ತಿ ಇದೆ. ಆದರೆ ಈ ನಗರದಲ್ಲಿ ಈಗ ಸುಮಾರು 50 ಲಕ್ಷ ವಾಹನಗಳಿವೆ. ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳು ಇಲ್ಲಿರುವ ಕಾರಣ, ರಸ್ತೆಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿಲ್ಲ.ರಸ್ತೆಗಳ ಸ್ಥಿತಿ ಹದಗೆಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಜವಾಬ್ದಾರ. ರಸ್ತೆಗಳನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಪಾಲಿಕೆ ವಿಫಲ ಆಗಿದೆ. ಕೆಲವೆಡೆ ಯಾವುದು ರಸ್ತೆ, ಯಾವುದು ಪಾದಚಾರಿ ಮಾರ್ಗ ಎಂಬುದು ಜನರಿಗೆ ತಿಳಿಯದಂಥ ಪರಿಸ್ಥಿತಿ ಇದೆ.ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಸುತ್ತ 5 ಕಿ.ಮೀ. ಸುತ್ತಳತೆಯಲ್ಲಿ ವಾಹನಗಳು ಪ್ರತಿ ಗಂಟೆಗೆ ಸರಾಸರಿ 10ರಿಂದ 12 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸುತ್ತವೆ. ಅದಕ್ಕಿಂತ ಹೆಚ್ಚಿನ ವೇಗ ಪಡೆದುಕೊಳ್ಳಲು ಸಂಚಾರ ದಟ್ಟಣೆಯಿಂದ ಸಾಧ್ಯವಾಗುತ್ತಿಲ್ಲ. ಇದರ ಜೊತೆ ಹೊಂಡಗಳಿಂದ ಕೂಡಿದ ರಸ್ತೆ, ಸಂಚಾರವನ್ನು ದುಸ್ತರಗೊಳಿಸಿದೆ. ನಗರದ ಸುತ್ತ 20 ಕಿ.ಮೀ. ಸುತ್ತಳತೆಯಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 20 ಕಿ.ಮೀ. ಇದೆ. ವರ್ತುಲ ರಸ್ತೆಯ ಹೊರಗೆ ವಾಹನಗಳ ಸರಾಸರಿ ವೇಗ ಪ್ರತೀ ಗಂಟೆಗೆ 40 ಕಿ.ಮೀ. ಇದೆ. ಬೆಂಗಳೂರಿನಲ್ಲಿ ಜನರ ಹೆಚ್ಚಿನ ಚಟುವಟಿಕೆಗಳು ವಿಧಾನಸೌಧದ ಸುತ್ತಮುತ್ತಲೇ ನಡೆಯುತ್ತವೆ. ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆಯೂ ತೀವ್ರವಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಇಲ್ಲಿ ಸಂಚಾರ ದಟ್ಟಣೆ ಇದ್ದಿದ್ದೇ.`ನಮ್ಮ ಮೆಟ್ರೊ' ಮಾದರಿಯ ಸಂಚಾರ ವ್ಯವಸ್ಥೆ ಬೆಂಗಳೂರಿಗೆ ಬಹು ಹಿಂದೆಯೇ ಬರಬೇಕಿತ್ತು. ಇಲ್ಲಿನ ಜನಸಂಖ್ಯೆ 20ರಿಂದ 30 ಲಕ್ಷದ ಆಸುಪಾಸಿನಲ್ಲಿ ಇದ್ದಾಗಲೇ ನಮ್ಮನ್ನು ಆಳುವವರಿಗೆ ಮೆಟ್ರೊ ಮಾದರಿಯ ಸಾರಿಗೆ ವ್ಯವಸ್ಥೆಯ ಅಗತ್ಯ ಗೋಚರಿಸಬೇಕಿತ್ತು. ಆದರೆ ಈಗ ನಮ್ಮಲ್ಲಿ ಮೆಟ್ರೊ ಕಾಮಗಾರಿಗಳು ನಡೆಯುತ್ತಿವೆ. ಅಂದಹಾಗೆ, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇದರ ಕಾಮಗಾರಿ 2010-11ರಲ್ಲೇ ಪೂರ್ಣಗೊಳ್ಳಬೇಕಿತ್ತು. ಅಂದು ಇದರ ಯೋಜನಾ ವೆಚ್ಚ ರೂ 2,750 ಕೋಟಿ ಆಗಿತ್ತು. ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಈಗ ಮೆಟ್ರೊ ಯೋಜನೆಯ ವೆಚ್ಚ ರೂ 15,000 ಕೋಟಿಗೆ ಏರಿದೆ. ಇದಕ್ಕೆ ಯಾರು ಹೊಣೆ? ಮೆಟ್ರೊ ಯೋಜನೆಗೆ ದಿನವೊಂದಕ್ಕೆ ಅಂದಾಜು ರೂ65 ಲಕ್ಷ ವೆಚ್ಚವಾಗುತ್ತಿದೆ. ಇದರ ಹೊರೆ ಜನರಿಗೆ ವರ್ಗವಾಗುತ್ತಿದೆ.ಮೆಟ್ರೊ ಯೋಜನೆ ಪೂರ್ಣವಾದ ನಂತರ ಸಹ ಸಂಚಾರ ದಟ್ಟಣೆ ತಗ್ಗುತ್ತದೆ ಎನ್ನುವಂತಿಲ್ಲ. ಮೆಟ್ರೊ ರೈಲು ಸಾಗುವ ಮಾರ್ಗದಲ್ಲಿ ಮಾತ್ರ ಸಂಚಾರ ಟ್ಟಣೆ ಶೇಕಡ 18ರಿಂದ 22ರಷ್ಟು ಕಡಿಮೆ ಆಗಬಹುದು ಎಂಬ ಅಂದಾಜಿದೆ. ಆದರೆ ಇನ್ನುಳಿದ ಮಾರ್ಗಗಳ ಕತೆ? ಈ ಮಾರ್ಗಗಳಲ್ಲಿ ಮಾನೋ ರೈಲು ಅಥವಾ ಕ್ಷಿಪ್ರ ಸಾರಿಗೆ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ನಗರ ಯೋಜನಾ ಅಧಿಕಾರಿಗಳೂ ಏನೂ ಮಾಡುತ್ತಿಲ್ಲ.ಸಂಚಾರ ವ್ಯವಸ್ಥೆ ಕುರಿತು ಸಿಂಗಪುರದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ 2004ರಲ್ಲಿ  ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿದ್ದೆವು. ರಾಜ್ಯದಲ್ಲಿ ಭೂಸಾರಿಗೆ ಪ್ರಾಧಿಕಾರ ಆರಂಭಿಸಿ, ತಾಂತ್ರಿಕ ಜ್ಞಾನ ಹೊಂದಿರುವವರನ್ನು ಅದಕ್ಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕು ಎಂದು ಶಿಫಾರಸು ಮಾಡಿದ್ದೆವು. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ನಗರ ಭೂಸಾರಿಗೆ ನಿರ್ದೇಶನಾಲಯ ಆರಂಭಿಸಿದರು. ಆದರೆ ಅದಕ್ಕೆ ಐಎಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿದರು. ತಜ್ಞರ ನೇತೃತ್ವ ಅದಕ್ಕೆ ದೊರೆಯಲಿಲ್ಲ. ಕೆಲವು ಸಮಸ್ಯೆಗಳ ಕಾರಣ ನಿರ್ದೇಶನಾಲಯ ಇಂದು ಹೆಚ್ಚಿನ ಕೆಲಸ ಮಾಡುತ್ತಿಲ್ಲ. ನಂತರ ಬಂದ ಸರ್ಕಾರಗಳ ಆದ್ಯತೆಯೂ ಬದಲಾಯಿತು. ಹಾಗಾಗಿ ನಿರ್ದೇಶನಾಲಯಕ್ಕೆ ಸರಿಯಾದ ಅನುದಾನವೂ ದೊರೆಯಲಿಲ್ಲ. ನಮ್ಮಲ್ಲಿ ದೂರದೃಷಿ ಇಲ್ಲ. ಅದೊಂದು ಇದ್ದಿದ್ದರೆ, ಬೆಂಗಳೂರು ಸ್ವರ್ಗ ಆಗುತ್ತಿತ್ತು.ನಮ್ಮಲ್ಲಿ ಪರಿಣತರಿಗೆ ಕೊರತೆ ಇಲ್ಲ. ಆದರೆ ಒಂದು ನೀಲನಕ್ಷೆ ಸಿದ್ಧಪಡಿಸಿ ಕೆಲಸ ಮಾಡುವ ಪ್ರಕ್ರಿಯೆ ನಡೆಯುತ್ತಿಲ್ಲ. ರಸ್ತೆಗಳ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಒಂದು ನೀಲನಕ್ಷೆ ಸಿದ್ಧಪಡಿಸಿ ಕೆಲಸ ಆರಂಭಿಸಿದರೆ, 5ರಿಂದ 10 ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಬಹುದು.ಬೆಂಗಳೂರಿನ ವಿಸ್ತೀರ್ಣ 1,112 ಚದರ ಕಿ.ಮೀ. ಇದೆ. ಬೆಂಗಳೂರು ಇಷ್ಟು ಬೆಳೆದಿದ್ದು ಸಾಕು. ಬೆಂಗಳೂರಿನ ಸುತ್ತ 5 ಕಿ.ಮೀ.ನಷ್ಟು ಹಸಿರು ವಲಯ ನಿರ್ಮಿಸಿ, ಅದರ ನಂತರ ಉಪ ನಗರಗಳನ್ನು ಅಭಿವೃದ್ಧಿಪಡಿಸಬೇಕು. ಉಪ ನಗರಗಳಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕು. ಬೆಂಗಳೂರು ನಗರ ಮತ್ತು ಉಪ ನಗರಗಳ ನಡುವೆ ಮೇಲ್ಸೇತುವೆ ನಿರ್ಮಿಸಿ, ಸಂಪರ್ಕ ಕಲ್ಪಿಸಬೇಕು. ಹಿಂದೆ ಈ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಮಾಗಡಿ ರಸ್ತೆಯಲ್ಲಿ ಭೂಸ್ವಾಧೀನವೂ ಆಗಿತ್ತು. ಆದರೆ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ.ಈಗಲೂ ನಮ್ಮಲ್ಲಿ ಹೇಳಿಕೊಳ್ಳಲು ಒಂದೆರಡು ಉಪ ನಗರಗಳಿವೆ. ಆದರೆ ಕೆಂಗೇರಿ, ಯಲಹಂಕ ಉಪ ನಗರಗಳು ಎಲ್ಲ ಕಾರ್ಯಕ್ಕೂ ಬೆಂಗಳೂರನ್ನೇ ಆಶ್ರಯಿಸಬೇಕಾಗಿದೆ. ಹೊಸದಾಗಿ ನಿರ್ಮಿಸಬೇಕಿರುವ ಉಪ ನಗರಗಳಿಗೆ ಇಂಥ ಪರಿಸ್ಥಿತಿ ಎದುರಾಗಬಾರದು.ನಗರದ ಅಭಿವೃದ್ಧಿಗೆ ಏಕಗವಾಕ್ಷಿ ಪ್ರಾಧಿಕಾರ ಬೇಕು. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗ ಬೇರೆ ಬೇರೆ ಪ್ರಾಧಿಕಾರಗಳಿವೆ. ಆದರೆ ಅವುಗಳ ನಡುವೆ ಸಾಮರಸ್ಯವೇ ಇಲ್ಲವಾಗಿದೆ. ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ, ಬೆಂಗಳೂರಿನ ಅಭಿವೃದ್ಧಿಯ ಉಸ್ತುವಾರಿಯನ್ನು ಅವರಿಗೆ ವಹಿಸಬೇಕು. ಹಾಗೆಯೇ ಬೆಂಗಳೂರು ಮೇಯರ್ ಹುದ್ದೆಗೆ ಅಭ್ಯರ್ಥಿ ಜನರಿಂದ ನೇರವಾಗಿ ನೇಮಕ ಆಗುವಂಥ ಪದ್ಧತಿ ಜಾರಿಯಾಗಬೇಕು.ಪರಿಹಾರೋಪಾಯ

ಡಾಂಬರ್ ರಸ್ತೆಗಳು ಪ್ರತೀ ವರ್ಷ ಹಾಳಾಗುತ್ತವೆ. ಹಾಗಾಗಿ, 30- 40 ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆಗಳನ್ನೇಕೆ ನಿರ್ಮಿಸಬಾರದು? ಇದು ಬಿಟುಮಿನ್ ರಸ್ತೆಗಳಷ್ಟೇ ಬಾಳಿಕೆ ಬರುತ್ತದೆ.ನವದೆಹಲಿಯಲ್ಲಿ ಉದ್ಯಾನಗಳ ಅಡಿಯಲ್ಲಿ ತಳಮಹಡಿ ನಿರ್ಮಿಸಿ ಅಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಅದೇ ಮಾದರಿಯನ್ನು ಬೆಂಗಳೂರಿನಲ್ಲೂ ಅನುಸರಿಸಬಹುದು.ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು, ವ್ಯಾಪಾರ ನಡೆಸುತ್ತಿರುವವರನ್ನು ತಕ್ಷಣ ಎತ್ತಂಗಡಿ ಮಾಡಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು.

(ಲೇಖಕರು: ರಾಜ್ಯ ಸರ್ಕಾರದ ಸಂಚಾರ ವ್ಯವಸ್ಥೆ  ಸಲಹೆಗಾರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry