ಶಕ್ತಿಪ್ರದರ್ಶನಕ್ಕೆ ಕಡಿವಾಣ: ಸಿ.ಎಂ ತಿರುಗೇಟು

7

ಶಕ್ತಿಪ್ರದರ್ಶನಕ್ಕೆ ಕಡಿವಾಣ: ಸಿ.ಎಂ ತಿರುಗೇಟು

Published:
Updated:

ಬೆಂಗಳೂರು/ಹುಬ್ಬಳ್ಳಿ: ಹುಟ್ಟುಹಬ್ಬದ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, `ಬಿಜೆಪಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಅವಕಾಶವೇ ಇಲ್ಲ~ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಹುಬ್ಬಳ್ಳಿಯಿಂದ ಕಾಶಿಯಾತ್ರೆಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಾಪಸಾದ ತಕ್ಷಣವೇ ತಮ್ಮ ಶಕ್ತಿ ಪ್ರದರ್ಶಿಸುವುದಾಗಿ ಎದುರಾಳಿಗಳ ವಿರುದ್ಧ ತೊಡೆತಟ್ಟಿದರು. `ಸಿಹಿ ಸುದ್ದಿ~ ಕೊಡುವ ಇಂಗಿತವನ್ನೂ ಹೊರ ಹಾಕಿದರು.

ಬೆಳಿಗ್ಗೆ 11.30ರ ಸುಮಾರಿಗೆ ಯಡಿಯೂರಪ್ಪ ಅವರು ಶಿವಮೊಗ್ಗದಿಂದ ಹುಬ್ಬಳ್ಳಿಗೆ ಬಂದರು. ನಂತರ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಬೆಂಬಲಿಗರ ಜೊತೆ ಕೆಲಕಾಲ ಸಮಾಲೋಚನೆ ನಡೆಸಿದರು. ಬಳಿಕ ಬಂಜಾರ ಸಮಾವೇಶದಲ್ಲಿ ಭಾಗವಹಿಸಿದರು. ನಂತರ ವಿಮಾನ ನಿಲ್ದಾಣಕ್ಕೆ ತೆರಳಿದ ಅವರು, ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸಂಸದ ಸುರೇಶ ಅಂಗಡಿ ಅವರೊಂದಿಗೆ ವಿಶೇಷ ವಿಮಾನದಲ್ಲಿ ಕಾಶಿಗೆ ತೆರಳಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು `ಕಾಶಿಗೆ ಹೋಗಿ ವಾಪಸು ಬಂದ ಮೇಲೆ ಸಿಹಿ ಸುದ್ದಿ ಕೊಡುವೆ. ನನ್ನ ಶಕ್ತಿ ಏನು ಎಂಬುದನ್ನು ತೋರಿಸುತ್ತೇನೆ~ ಎಂದು ಗುಡುಗಿದರು.

ಕಾಶಿ ಯಾತ್ರೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, `ಶಿವರಾತ್ರಿ ನಿಮಿತ್ತ ಕಾಶಿಗೆ ಹೊರಟಿರುವೆ. ಆದರೆ ಕಾಶಿಗೆ ಹೊರಟಿರುವುದನ್ನು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಅಪ್ಪ-ಮಗ ಲಘುವಾಗಿ ಮಾತನಾಡುವುದನ್ನು ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಲಿ~ ಎಂದು ಸಲಹೆ ನೀಡಿದರು.

`ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಶನಿವಾರ ನಡೆದ ಪಂಚಮಸಾಲಿ ಸಮಾವೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಬಂದಿದ್ದರೆ ಖಂಡಿತ ಭಾಗವಹಿಸುತ್ತಿದ್ದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಕ್ತಿಪ್ರದರ್ಶನಕ್ಕೆ ಅವಕಾಶ ಇಲ್ಲ: ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ~ದಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸದಾನಂದ ಗೌಡ, ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು. ಇದೇ  27ರಂದು ಯಡಿಯೂರಪ್ಪ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬೆಂಬಲಿಗರು ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿರುವ ಕುರಿತು ಪತ್ರಕರ್ತರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.

ಆಗ ತುಸು ಬಿರುಸಾಗಿಯೇ ಪ್ರತಿಕ್ರಿಯಿಸಿದ ಅವರು, `ಬಿಜೆಪಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಶಕ್ತಿ ಪ್ರದರ್ಶನ ಹಿಂದೆ ಎಂದಿಗೂ ನಡೆದಿಲ್ಲ, ಮುಂದೆಯೂ ನಡೆಯುವುದಿಲ್ಲ~ ಎಂದರು.

`ಬೆಂಬಲಿಗರ ವಿಷಯ ನನಗೆ ತಿಳಿದಿಲ್ಲ. ಆದರೆ ಮಾಧ್ಯಮಗಳ ಮೂಲಕ ವಿಷಯ ತಿಳಿದಿದ್ದೇನೆ ಅಷ್ಟೇ. ಸಮಸ್ಯೆ ಏನೇ ಇದ್ದರೂ, ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮಾತುಕತೆ ಮೂಲಕವಷ್ಟೇ ಬಗೆಹರಿಸಿಕೊಳ್ಳಲಾಗುವುದು~ ಎಂದು ಸ್ಪಷ್ಟಪಡಿಸಿದರು.

`ಬಿಜೆಪಿ ಒಬ್ಬ ವ್ಯಕ್ತಿಗೆ ಸೀಮಿತ ಆಗಿರುವ ಪಕ್ಷವಲ್ಲ. ಒಬ್ಬನ ಹೆಸರಿನಿಂದ ಏನೂ ನಡೆಯುವುದಿಲ್ಲ. ಇಲ್ಲಿ ವ್ಯಕ್ತಿ ಪ್ರತಿಷ್ಠೆ ಇಲ್ಲ. ಪಕ್ಷದ ಪ್ರತಿಷ್ಠೆಯೇ ಮುಖ್ಯ. ಬಿಜೆಪಿ ಈಗ ಏನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಸಂಘಟನಾ ಶಕ್ತಿಯೇ ಕಾರಣ. ಯಾವುದೇ ಒಬ್ಬ ವ್ಯಕ್ತಿಯಿಂದ ಈ ಸಾಧನೆ ಆಗಿಲ್ಲ~ ಎಂದರು.

`ಚಿಕ್ಕಮಗಳೂರು-ಉಡುಪಿ ಲೋಕಸಭಾ ಉಪ ಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕು ಎಂಬ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಣಯ ತೆಗೆದುಕೊಳ್ಳಲಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ನೋಡಿ ನಾವು ನಿರ್ಧರಿಸಲಿದ್ದೇವೆ. ಸದ್ಯ ನಾಲ್ವರ ಹೆಸರು ಚಾಲ್ತಿಯಲ್ಲಿ ಇದೆ. ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತದೆ. ನಮ್ಮ ಅಭ್ಯರ್ಥಿಯ ಗೆಲುವು ಬಿಜೆಪಿಯ ಗೆಲುವು. ಯಾವುದೇ ಒಬ್ಬ ವ್ಯಕ್ತಿಯ ಗೆಲುವು ಅಲ್ಲ~ ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.

`ಉಪ ಚುನಾವಣೆ ನಂತರ ಬಜೆಟ್ ಮಂಡಿಸಲಾಗುವುದು. ಕೃಷಿ ಬಜೆಟ್ ಈ ಬಾರಿಯೂ ಇರುತ್ತದೆ. ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುವುದು. ರೈತರಷ್ಟೇ ಅಲ್ಲದೇ ಈ ಬಾರಿಯ ಬಜೆಟ್‌ನಲ್ಲಿ ಯುವಕರಿಗೂ ಹೆಚ್ಚಿನ ನೆರವು ನೀಡಲಾಗುವುದು~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry