ಶಕ್ತಿ ಕ್ಷೇತ್ರ ಕೊಲ್ಲೂರು

7

ಶಕ್ತಿ ಕ್ಷೇತ್ರ ಕೊಲ್ಲೂರು

Published:
Updated:

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಶಕ್ತಿ ದೇವತೆಯ ಆರಾಧನಾ ಕೇಂದ್ರ. ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಸೌಪರ್ಣಿಕಾ ನದಿ ದಂಡೆಯ ಮೇಲಿರುವ ಕೊಲ್ಲೂರು ಅತ್ಯಂತ ಪ್ರಾಚೀನವಾದದು. ಈ ಕ್ಷೇತ್ರಕ್ಕೆ ವರ್ಷವಿಡೀ ಭಕ್ತರು ಭೇಟಿ ನೀಡುತ್ತಾರೆ.ಕೊಲ್ಲೂರು ಕ್ಷೇತ್ರದ ಮೂಲ ಹೆಸರು ‘ಮಹಾರಣ್ಯಪುರ’. ಇಲ್ಲಿ ತಪಸ್ಸು ಮಾಡಿದ ಕೋಲ ಮಹರ್ಷಿಯಿಂದಾಗಿ ‘ಕೋಲಾಪುರ’ವೆನಿಸಿ ನಂತರ ಕೊಲ್ಲೂರು ಆಗಿದೆ ಎಂದು ಹೇಳಲಾಗುತ್ತದೆ.ಸ್ಕಂದ ಪುರಾಣದಲ್ಲಿ ವಿವರಿಸಿದಂತೆ ಬಹಳ ಹಿಂದೆ ಕಂಹಾಸುರನೆಂಬ ರಾಕ್ಷಸನು ಭೈರವಿಯ ಉಪಾಸನೆಯಿಂದ ಶಕ್ತಿ ಪಡೆದು ಜನರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ. ಆಗ ತ್ರಿಮೂರ್ತಿಗಳು ಆದಿ ಶಕ್ತಿಯನ್ನು ಪ್ರಾರ್ಥಿಸಿ ಅವನ ಸಂಹಾರ ಮಾಡುವಂತೆ ವಿನಂತಿಸಿಕೊಂಡರು. ಅದನ್ನು ತಿಳಿದು ಅವನು ಋಷ್ಯಮೂಕ ಪರ್ವತಕ್ಕೆ ಓಡಿಹೋಗಿ ಅಲ್ಲಿ  ಘೋರ ತಪಸ್ಸು ಮಾಡಿದ. ಅವನಿಗೆ ವರ ನೀಡಲು ಬ್ರಹ್ಮದೇವನು ಪ್ರತ್ಯಕ್ಷನಾಗುವ ಮೊದಲೇ ಅವನನ್ನು ಆದಿಶಕ್ತಿ ‘ಮೂಕ’ನನ್ನಾಗಿ ಮಾಡಿದಳು.

 

ಇದರಿಂದ ಇನ್ನಷ್ಟು ಉಗ್ರನಾದ ಕಂಹಾಸುರ ತನ್ನ ರಾಕ್ಷಸೀ ಕೃತ್ಯಗಳನ್ನು ಮುಂದುವರಿಸಿದ. ಆಗ ಆದಿಶಕ್ತಿ ಸಕಲ ದೇವತೆಗಳೊಡಗೂಡಿ ಅವನನ್ನು ಸಂಹಾರ ಮಾಡಿ ಆನಂತರ ಕೋಲ ಮಹರ್ಷಿ ಪೂಜಿಸುತ್ತಿದ್ದ ಸ್ವಯಂಭು ಲಿಂಗದಲ್ಲಿ ಲೀನವಾದಳು. ಮೂಕಾಸುರನನ್ನು ವಧಿಸುವ ಮೂಲಕ ಜಗತ್ತಿಗೆ ಮಂಗಳವನ್ನುಂಟು ಮಾಡಿದ ಸ್ಥಳವನ್ನು ಶಿವ ಮತ್ತು ಶಕ್ತಿಯ ಸಂಗಮ ಎನ್ನಲಾಗುತ್ತದೆ. ಮೂಕಾಂಬಿಕೆಯನ್ನು

ಸರಸ್ವತಿ ಹಾಗೂ ಮಹಾಲಕ್ಷ್ಮಿಯ ರೂಪದಲ್ಲಿಯೂ ಇಲ್ಲಿ ಆರಾಧಿಸುತ್ತಾರೆ.ಕ್ರಿಸ್ತಶಕ ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರು ಕೊಲ್ಲೂರು ಕ್ಷೇತ್ರ ಪ್ರವೇಶ ಮಾಡಿದ್ದರು. ಇತಿಹಾಸ ತಜ್ಞರ ಪ್ರಕಾರ ಕೊಲ್ಲೂರು ಜೈನ- ಬೌದ್ಧರ ಧರ್ಮಕೇಂದ್ರವೂ ಆಗಿತ್ತು. 13ನೇ ಶತಮಾನದಲ್ಲಿ ಹೊನ್ನೆಯ ಕಂಬಳಿ ಅರಸರು ಮೂಕಾಂಬಿಕಾ ದೇವಸ್ಥಾನದ ಪೋಷಕರಾಗಿದ್ದರು. ದೇವಸ್ಥಾನದಲ್ಲಿರುವ ತಾಮ್ರ ಶಾಸನಗಳು ಕೆಳದಿ ರಾಜರು ನೀಡಿದ ದಾನ, ದತ್ತಿಗಳ ಕುರಿತು ಮಾಹಿತಿ ನೀಡುತ್ತವೆ.ಮೂಕಾಂಬಿಕಾ ದೇವಿಯ ಕೃಪಾಕಟಾಕ್ಷಕ್ಕಾಗಿ ಜನರು ವರ್ಷವಿಡೀ ಇಲ್ಲಿಗೆ ಬಂದು ವಿವಿಧ ಸೇವೆಗಳನ್ನು ಸಲ್ಲಿಸುತ್ತಾರೆ. ಧನ, ಧಾನ್ಯ ಹಾಗೂ ಸಮೃದ್ಧಿಗಾಗಿ ಪ್ರತಿ ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಆರೋಗ್ಯ, ವಿದ್ಯೆ, ಸಂಪತ್ತು, ವ್ಯವಹಾರ ವೃದ್ಧಿ ಇತ್ಯಾದಿಗಾಗಿ ಭಕ್ತರು ಹರಕೆ ಕಟ್ಟಿಕೊಂಡು ಇಲ್ಲಿಗೆ ಬಂದು ಸೇವೆ ಸಲ್ಲಿಸುತ್ತಾರೆ.  ಕೊಲ್ಲೂರಿಗೆ ಬರುವ ಭಕ್ತರಲ್ಲಿ ನೆರೆಯ ಕೇರಳ ಮತ್ತು ತಮಿಳುನಾಡುಗಳಿಂದ ಬರುವವರೇ ಹೆಚ್ಚು. ಮಕ್ಕಳಿಗೆ ಅಕ್ಷರಾಭ್ಯಾಸದ ಸಂಸ್ಕಾರ ನೀಡಲು ವಿದ್ಯಾದಶಮಿಯಂದು ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry