ಸೋಮವಾರ, ಮಾರ್ಚ್ 1, 2021
30 °C

ಶಕ್ತಿ ತುಂಬಿ ಬರಲಿದೆ ಟಿವಿಎಸ್ ಎಕ್ಸ್‌ಎಲ್-100

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

ಶಕ್ತಿ ತುಂಬಿ ಬರಲಿದೆ ಟಿವಿಎಸ್ ಎಕ್ಸ್‌ಎಲ್-100

‘ಟಿವಿಎಸ್‌ ಎಕ್ಸ್‌ಎಲ್‌’ ಎಂಬ ಮೊಪೆಡ್‌ ಭಾರತದಲ್ಲಿ ತನ್ನ ಬೇರುಗಳನ್ನು ಎಷ್ಟು ಆಳವಾಗಿ ಬಿಟ್ಟಿದೆ ಎಂದರೆ, ಬೇರಾವ ಮೊಪೆಡ್‌ಗಳೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ‘ಕೈನೆಟಿಕ್‌’ ಕಂಪೆನಿ ಹೊರತರುತ್ತಿದ್ದ ‘ಲೂನಾ’ ಸಹ ಅತ್ಯುತ್ತಮ ಮೊಪೆಡ್‌ ಆಗಿದ್ದರೂ, ಕಂಪೆನಿಯೇ ಮುಚ್ಚಿ ಹೋದ ಕಾರಣಕ್ಕೆ ‘ಲೂನಾ’ ತೆರೆಮರೆಗೆ ಸರಿಯಿತು. ಆದರೆ, ‘ಟಿವಿಎಸ್‌ನ ಎಕ್ಸ್‌ಎಲ್‌’ ಮೊಪೆಡ್‌ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು, ಸೈ ಅನ್ನಿಸಿಕೊಂಡಿದೆ.70 ಸಿಸಿ ಎಂಜಿನ್‌ ಹೊಂದಿರುವ ‘ಟಿವಿಎಸ್‌ ಎಕ್ಸ್‌ಎಲ್‌’ ಇದೀಗ 100ಸಿಸಿ ಎಂಜಿನ್‌ ಇರುವ ಮೊಪೆಡ್‌ ಅನ್ನು ಹೊರಬಿಡಲಿರುವುದು ‘ಎಕ್ಸ್‌ಎಲ್‌’ ಅಭಿಮಾನಿಗಳಿಗೆ ಖುಷಿ ಮೂಡಿಸಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲೇ ಈ ಮೊಪೆಡ್‌ಗೆ ಹೆಚ್ಚು ಮಾರುಕಟ್ಟೆ ಇರುವುದು. ಇದಕ್ಕೆ ಕಾರಣ, ಈ ಮೊಪೆಡ್‌ನ ಗಡಸುತನ ಹಾಗೂ ಇದರ ಬಹುಮುಖ ಕಾರ್ಯವೈಖರಿಯ ಗುಣ. ಮೋಟಾರ್‌ ಸೈಕಲ್‌ಗೆ ಇರಬೇಕಾದ ಗಡಸುತನ, ಸ್ಕೂಟರ್‌ಗೆ ಇರಬೇಕಾದ ಬಹೂಪಯೋಗಿ ಗುಣ ‘ಟಿವಿಎಸ್‌ ಎಕ್ಸ್‌ಎಲ್‌’ ಮೊಪೆಡ್‌ನಲ್ಲಿದೆ.ದೊಡ್ಡ ಚಕ್ರಗಳು, ಗಡಸು ದೇಹ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದ್ದರೆ, ಬೇಕಾದಷ್ಟು ಸಾಮಗ್ರಿಯನ್ನು ಸಾಗಿಸುವಂತಹ ದೇಹ ರಚನೆ ಇದರ ಯಶಸ್ಸಿನ ಗುಟ್ಟು. ಇಷ್ಟು ದಿನ ಕೇವಲ 70 ಸಿಸಿ ಎಂಜಿನ್‌ ಹೊಂದಿದ್ದ ಈ ಮೊಪೆಡ್‌ಗೆ ಇದೀಗ 100 ಸಿಸಿ ಎಂಜಿನ್‌ ಕೂರಿಸಿ, ಅದೇ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವುದು ಇದರ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ.‘ಟಿವಿಎಸ್ ಎಕ್ಸ್‌ಎಲ್‌’ಗೂ ಮುಂಚೆ ‘ಟಿವಿಎಸ್‌ ಚಾಂಪ್‌’ ಎನ್ನುವ ಮೊಪೆಡ್ ಇತ್ತು. 50 ಸಿಸಿ ಒಳಗಿನ ಎಂಜಿನ್‌ ಇದ್ದ ಮೊಪೆಡ್‌ ಇದು. ಈ ಮೊಪೆಡ್‌ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡ ಕೂಡಲೇ ಅದನ್ನು ‘ಟಿವಿಎಸ್ ಎಕ್ಸ್‌ಎಲ್‌’ ಆಗಿ, ನಂತರ ‘ಎಕ್ಸ್‌ಎಲ್‌ ಸೂಪರ್‌’ ಆಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ನಂತರ, ‘ಎಕ್ಸ್‌ಎಲ್‌ ಹೆವಿಡ್ಯೂಟಿ’ ಎಂಬ ಅವತರಣಿಕೆಯನ್ನೂ ಬಿಡುಗಡೆಗೊಳಿಸಲಾಗಿತ್ತು. ಇದೀಗ 100 ಸಿಸಿ ಎಂಜಿನ್‌ ಕೂರಿಸುವ ಮೂಲಕ ಮತ್ತಷ್ಟು ಶಕ್ತಿಯನ್ನು ಇದಕ್ಕೆ ತುಂಬಲಾಗಿದೆ.ಅದೇ ವಿಶ್ವಾಸ: ಎಂಜಿನ್‌ ಮೇಲ್ದರ್ಜೆಗೆ ಏರಿರುವುದು ನಿಜ. ಆದರೆ, ಮೂಲ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ. ಅದರ ಮೂಲಕ ಅದೇ ವಿಶ್ವಾಸ ಇರಲಿದೆ. ಹಿಂಬದಿ ಸೀಟ್‌ ಕಳಚಿ ಲಗ್ಗೇಜ್‌ ಇರಿಸಿಕೊಳ್ಳಬಹುದಾದ ಅವಕಾಶವಿದೆ. ಟ್ಯಾಂಕ್‌ ಹಿಂಬದಿಯ ಖಾಲಿ ಜಾಗದಲ್ಲೂ ಲಗ್ಗೇಜ್‌ ಇಡಲು ಅವಕಾಶವಿದೆ. ಟ್ಯಾಂಕ್‌ ವಿನ್ಯಾಸವನ್ನು ಮಾತ್ರ ಕೊಂಚ ಬದಲಿಸಲಾಗಿದೆ. ವಿನ್ಯಾಸ ಉತ್ತಮವಾಗಿರುವುದು ಸಂತಸದ ಸಂಗತಿ. ಕೆಲವೊಮ್ಮೆ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ಅಂದ ಕೆಡುವ ಅಪಾಯವಿರುತ್ತದೆ. ಹಾಗಾಗಿ, ‘ಟಿವಿಎಸ್‌’ ಎಚ್ಚರಿಕೆ ವಹಿಸಿ, ವಿನ್ಯಾಸ ಮಾಡಿದಂತಿದೆ.ಏನು ಬದಲಾವಣೆ?

‘ಟಿವಿಎಸ್‌ ಎಕ್ಸ್‌ಎಲ್‌ 100’ ಮೊಪೆಡ್‌ನಲ್ಲಿ ಹೊಸ 100 ಸಿಸಿ ಎಂಜಿನ್ ಇರುವುದೇ ವಿಶೇಷ. 2 ಸ್ಟ್ರೋಕ್‌ ಎಂಜಿನ್‌ 4 ಸ್ಟ್ರೋಕ್‌ ಎಂಜಿನ್‌ಗೆ ಮೇಲ್ದರ್ಜೆಗೇರಿದೆ. 4.2 ಪಿಎಸ್‌ ಶಕ್ತಿ (6000ಆರ್‌ಪಿಎಂ) ಇದೆ. 6.3ಎನ್‌ಎಂ ಟಾರ್ಕ್‌ (3500 ಆರ್‌ಪಿಎಂ) ಇದೆ. ಚೈನ್‌ ಡ್ರೈವ್‌ ಇರುವುದು ಒಳ್ಳೆಯ ವಿಚಾರ. ಗಡಸುತನ ಸಿಗುತ್ತದೆ. ಬೆಲ್ಟ್‌ ಡ್ರೈವ್‌ ಇದ್ದರೆ, ತೊಂದರೆಯೇ ಹೆಚ್ಚು. ಅದನ್ನು ಬಿಟ್ಟರೆ ಮಿಕ್ಕಂತೆ ಹಳೆಯ ಗುಣಲಕ್ಷಣಗಳೇ ಮುಂದುವರಿದಿವೆ. ಹೊಸ ಎಕ್ಸಾಸ್ಟ್‌ ಪೈಪ್‌ ಇದೆ. ಸ್ಟಿಕರ್‌ಗಳನ್ನು ಬದಲಿಸಲಾಗಿದೆ. ಗಡುಸಾದ ಸಸ್ಪೆನ್ಷನ್‌ ‘ಎಕ್ಸ್‌ಎಲ್‌’ನ ಹೆಸರನ್ನು ಉಳಿಸಲಿದೆ.‘ಎಕ್ಸ್‌ಎಲ್‌ ಹೆವಿಡ್ಯೂಟಿ’ಯ ಬೆಲೆ 29 ಸಾವಿರ ರೂಪಾಯಿ ಇತ್ತು. ಈ ಹೊಸ ಮೊಪೆಡ್‌ ಬೆಲೆ ಒಂದೆರಡು ಸಾವಿರ ರೂಪಾಯಿ ಹೆಚ್ಚುವರಿಯಾಗಬಹುದಷ್ಟೇ. ಸದ್ಯಕ್ಕೆ ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ, ಉತ್ತರಾ ಖಂಡಗಳಲ್ಲಿ ಮಾತ್ರ ಈ ಮೊಪೆಡ್‌ ಲಭ್ಯವಿದೆ. ನಂತರದ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಮೊಪೆಡ್‌ ಲಭ್ಯವಾಗಲಿದೆ ಎನ್ನಲಾಗಿದೆ.              

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.