ಶನಿವಾರ, ಜೂನ್ 12, 2021
24 °C

ಶಕ್ತಿ ನಗರ ಬೆಳಗದ ‘ವಿದ್ಯುತ್‌ಶಕ್ತಿ’!

ಪ್ರಜಾವಾವಾಣಿ ವಾರ್ತೆ/ ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಶಕ್ತಿ ನಗರ ಬೆಳಗದ ‘ವಿದ್ಯುತ್‌ಶಕ್ತಿ’!

ಗುಲ್ಬರ್ಗ: ನಗರದ ಹೃದಯಭಾಗ, ಕೇಂದ್ರೀಯ ಬಸ್‌ ನಿಲ್ದಾಣಕ್ಕೆ ಹೊಂದಿ­ಕೊಂಡಿರುವ ಶಕ್ತಿನಗರ ಸೇರಿ ಕೆಲವು ಬಡಾವಣೆಗಳ ಮುಖ್ಯರಸ್ತೆಗಳಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಿಲ್ಲ. ಇದರಿಂದ ಸಂಜೆಯಾದರೆ ಜನರು ನಿರ್ಭಯದಿಂದ ಓಡಾಡಲು ಸಾಧ್ಯವಾಗುತ್ತಿಲ್ಲ.ಬಸ್‌ ನಿರ್ಗಮನ ದ್ವಾರದ ತಡೆ­ಗೋಡೆಯ ಮಗ್ಗಲಲ್ಲಿ ಜಿಡಿಎ ಅಭಿವೃದ್ಧಿಗೊಳಿಸಿರುವ ಡಾ.ಎಂ.ಆರ್‌. ತಂಗಾ ಬಡಾವಣೆಯ ಪ್ರವೇಶ ದ್ವಾರವಿದೆ. ಈ ಪ್ರವೇಶ ದ್ವಾರಕ್ಕೆ ಮುಖ ಮಾಡಿಕೊಂಡು ನಿಂತರೆ ಕತ್ತಲೆ ತುಂಬಿದ ಮುಖ್ಯರಸ್ತೆ ಆತಂಕ ಹುಟ್ಟಿಸುತ್ತದೆ. ದೀಪ ಹಾಕಿಕೊಂಡು ವಾಹನಗಳ ಓಡಾಟ ಬಿಟ್ಟರೆ, ಉಳಿದಂತೆಲ್ಲವೂ ಕತ್ತ­ಲುಮಯ. ನಡೆದುಕೊಂಡು ಹೋಗುವ ಹಿರಿಯ ವಯಸ್ಕರು, ಮಕ್ಕಳು ಹಾಗೂ ಮಹಿಳೆಯರು ರಾತ್ರಿ ಏಳು ಗಂಟೆ­ಯಾದರೆ ಮನೆ ಸೇರಿಕೊಳ್ಳಬೇಕು. ಇಲ್ಲದಿದ್ದರೆ, ವಾಹನಗಳಿಂದ ಬರುವ ದೀಪದಿಂದ ದಾರಿ ನೋಡಿಕೊಂಡು ಮುಂದೆ ಸಾಗುವ ಅನಿವಾರ್ಯತೆ ಎದುರಾಗುತ್ತದೆ.ರಸ್ತೆಯ ಬದಿ ಗಿಡಗಂಟಿಗಳು ಬೆಳೆದಿದ್ದು, ರಸ್ತೆಗಳಲ್ಲಿ ತಗ್ಗುಗಳು ಬಿದ್ದಿರುವುದರಿಂದ ಅನೇಕ ಜನರು ಕತ್ತಲಲ್ಲಿ ಮುಗ್ಗರಿಸಿ, ಸಾವರಿಸಿಕೊಂಡು ಹೋಗುವ ಪ್ರಸಂಗಗಳು ಮೇಲಿಂದ ಮೇಲೆ ನಡೆಯುತ್ತವೆ ಎನ್ನುವುದು ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಜಿಡಿಎ) ಅಭಿವೃದ್ಧಿಗೊಳಿಸಿರುವ ಡಾ.ಎಂ.­ಆರ್‌.ತಂಗಾ ಬಡಾವಣೆಯ ಮುಖ್ಯರಸ್ತೆಯಲ್ಲೆ ವಿದ್ಯುತ್‌ ದೀಪ­ಗಳಿಲ್ಲದಿರುವುದನ್ನು ಸರಿಪಡಿಸಿಲ್ಲ. ಇನ್ನು ಆ ಮಾರ್ಗದಲ್ಲೆ ಇರುವ ಬಡಾವಣೆ­ಗಳ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಕಳವು, ದರೋಡೆ ಪ್ರಕರಣಗಳು ಸಾಕಷ್ಟು ನಡೆದಿರುವ ಬಗ್ಗೆ ಬಡಾವಣೆ ಜನರು ವಿವರಿಸುತ್ತಾರೆ.ಕೇಂದ್ರೀಯ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಶಕ್ತಿ ನಗರ, ಕೋತಂಬರಿ ಲೇಔಟ್‌, ಘಾಟಗೆ ಲೇಔಟ್‌ ಹಾಗೂ ಸಿಐಬಿ ಕಾಲೋನಿಗಳಿಗೆ ಈ ಮುಖ್ಯರಸ್ತೆಯ ಮೂಲಕವೆ ಜನರು ಸಂಚರಿಸುತ್ತಾರೆ. ವಿದ್ಯುತ್‌ ಕಂಬಗಳನ್ನು ಹಾಕಲಾಗಿದೆ. ಹೀಗಾಗಿ ಇಂದಲ್ಲ ನಾಳೆ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತಾರೆ ಎಂದುಕೊಂಡಿರುವ ಬಡಾವಣೆಯ ನಿವಾಸಿಗಳು ಐದು ವರ್ಷದಿಂದ ಸಮಸ್ಯೆಯಲ್ಲೆ ಜೀವನ ಮುಂದುವ­ರಿಸಿದ್ದಾರೆ.ಕೇಂದ್ರೀಯ ಬಸ್‌ ಬಿಲ್ದಾಣವು ಹೈಮಾಸ್ಟ್ ವಿದ್ಯುತ್‌­ದೀಪಗಳಿಂದ ಝಗಮಗಿಸುತ್ತಿದ್ದರೆ, ಅದರ ತಡೆಗೋಡೆಗೆ ಹೊಂದಿಕೊಂಡ ಪ್ರದೇಶವೆಲ್ಲ ಕತ್ತಲೆಯ ಅವ್ಯವಸ್ಥೆ ತಾಂಡವವಾಡುತ್ತಿರುವುದು ರಾತ್ರಿ ಗೋಚರಿಸುತ್ತದೆ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.