ಗುರುವಾರ , ಜೂನ್ 17, 2021
22 °C

ಶತಕದತ್ತ ಪಾಕೆಟ್ ಹರ್ಕ್ಯುಲಸ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಅರವತ್ತು ವರ್ಷದ ಹಿಂದೆ `ಮಿಸ್ಟರ್ ಯುನಿವರ್ಸ್~ ಆಗಿ ಭಾರತದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದ ಆ ಬಂಗಾಲಿ ಯುವಕ ಕಳೆದ ಮಾರ್ಚ್ 17ರಂದು ಸದ್ದಿಲ್ಲದೇ ಶತಕದತ್ತ ಹೆಜ್ಜೆ ಇಟ್ಟರು!ಅದರ ಹಿಂದಿನ ದಿನವಷ್ಟೇ ಬಾಂಗ್ಲಾದ ಮೀರ್‌ಪುರದಲ್ಲಿ ಸಚಿನ್ ತೆಂಡೂಲ್ಕರ್ ನೂರನೇ ಶತಕ ಸಿಡಿಸಿ ಸಂಭ್ರಮಿಸಿದ್ದರು. ಇತ್ತ ಕೋಲ್ಕತ್ತದಲ್ಲಿ `ಪಾಕೆಟ್ ಹರ್ಕ್ಯುಲಸ್~ ಎಂದೇ ಖ್ಯಾತರಾಗಿದ್ದ ಮನೋಹರ್ ಐಚ್ 99 ವಸಂತಗಳನ್ನು ದಾಟಿ ನೂರಕ್ಕೆ ಕಾಲಿಟ್ಟರು. ಆದರೆ ಅದು ದೇಶದ ಹೆಚ್ಚು ಮಂದಿಗೆ ಗೊತ್ತೇ ಆಗಲಿಲ್ಲ.1952ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ `ಮಿಸ್ಟರ್ ಯುನಿವರ್ಸ್~ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಈ ವಾಮನಮೂರ್ತಿ (4.11 ಅಡಿ ಎತ್ತರ) ಭಾರತದಿಂದ ಈ ಗೌರವ ಗಳಿಸಿದ ಮೊದಲ ದೇಹದಾರ್ಢ್ಯಪಟುವಾಗಿದ್ದರು. ಆದರೆ ಸಿಗಬೇಕಾದ ಪ್ರಚಾರ, ಪ್ರಶಸ್ತಿ, ಪುರಸ್ಕಾರ ಯಾವುದೂ ಇದುವರೆಗೆ ಸಿಕ್ಕಿಲ್ಲ.ಕೋಲ್ಕತ್ತದಿಂದ ದೂರವಾಣಿಯಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮನೋಹರ್ ಮತ್ತು ಅವರ ಪುತ್ರ 65 ವರ್ಷದ ಬಿಷ್ಣು  ಸಾಧನೆಗಳನ್ನು ಸ್ಮರಿಸಿದರು.

ವಿಭಜನಾಪೂರ್ವ ಬಾಂಗ್ಲಾ ದೇಶದ ಕುಗ್ರಾಮವೊಂದರಲ್ಲಿ ಹುಟ್ಟಿದ (17-03-1913) ಮನೋಹರ್ ಬೆಳೆದದ್ದು ಕೇವಲ 4.11 ಅಡಿ ಮಾತ್ರ. ವಿಭಜನೆ ನಂತರ ಪಶ್ಚಿಮ ಬಂಗಾಳಕ್ಕೆ ಬಂದು ನೆಲೆಸಿದ ಮನೋಹರ್ ಅವರ ಕುಟುಂಬ ಕಡುಬಡತನದಲ್ಲಿಯೇ ಬಾಲ್ಯ ಕಳೆದುಹೋಯಿತು.ಆದರೆ ಮನೆಯ ಸಮೀಪವಿದ್ದ ಜಿಮ್ನಾಷಿಯಂ ಕಸರತ್ತು ಮಾಡುತ್ತಿದ್ದ ದೇಹದಾರ್ಢ್ಯಪಟುಗಳನ್ನು ನೋಡಿ ತಾವು ಡಂಬೆಲ್‌ಗಳನ್ನು ಕೈಗೆತ್ತಿಕೊಂಡರು. ಹೊಟ್ಟೆಗೆ ಹಿಟ್ಟು ಹಾಕಲು ದಿನವಿಡಿ ದುಡಿಯುವ ಅನಿವಾರ್ಯತೆ.  ಸಣ್ಣ ಸ್ಪರ್ಧೆಗಳಲ್ಲಿ ದೇಹದಾರ್ಢ್ಯವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡರು.

 

ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗೆದ್ದ ಮನೋಹರ್, 1950ರಲ್ಲಿ ಮಿಸ್ಟರ್ ಹರ್ಕ್ಯುಲಸ್ ಚಾಂಪಿಯನ್‌ಷಿಪ್ ಗೆದ್ದು `ಪಾಕೆಟ್ ಹರ್ಕ್ಯುಲಸ್~ ಎಂದು ಕರೆಸಿಕೊಂಡರು.

1952ರಲ್ಲಿ ಲಂಡನ್‌ನಲ್ಲಿ `ಮಿಸ್ಟರ್ ಯುನಿವರ್ಸ್~ ಆದಾಗ ಅವರ ವಯಸ್ಸು 39. ಅದೇ ವರ್ಷ ಸ್ಕಾಟ್ಲೆಂಡ್‌ನಲ್ಲಿ ವಿಶ್ವ ಸ್ಪ್ರಿಂಗ್ ಪುಲ್ಲಿಂಗ್ (ಸ್ಪ್ರಿಂಗ್‌ನಿಂದ ಮಾಡಿದ ವ್ಯಾಯಾಮ ಸಲಕರಣೆ) ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದರು.

 

ಅವರ ವಯಸ್ಸು, ಬಡತನ, ದೇಹದ ಕಡಿಮೆ ಎತ್ತರದ ಸಮಸ್ಯೆಗಳು ಅವರ ಛಲದ ಮುಂದೆ ಸೋತುಹೋದವು. ನಂತರವೂ ಒಟ್ಟು ನಾಲ್ಕು ಬಾರಿ ಮಿಸ್ಟರ್ ಯುನಿವರ್ಸ್ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದರು. 1960ರಲ್ಲಿ ಇಂಡಿಯನ್ ಕ್ಲಾಸ್‌ನಲ್ಲಿ ಪ್ರಥಮರಾಗಿದ್ದರು.ಬಂಗಾಳಿ ಶೈಲಿಯ ಸಸ್ಯಹಾರಿ, ಮೀನು, ಮಾಂಸದ ತಿನಿಸುಗಳನ್ನು ಪ್ರೀತಿಯಿಂದ ತಿನ್ನುತ್ತಿದ್ದರು. ಈಗಲೂ ಪ್ರತಿದಿನ ಬೆಳಿಗ್ಗೆ 6.30ಕ್ಕೆ ಅವರ ದಿನಚರಿ ಆರಂಭವಾಗುತ್ತದೆ. ತಮ್ಮ ಎಲ್ಲ ಕೆಲಸಗಳನ್ನು ಅವರೇ ನಿರ್ವಹಿಸಿಕೊಳ್ಳುತ್ತಾರೆ. ಹೆಚ್ಚು ವ್ಯಾಯಾಮ ಮಾಡುವುದಿಲ್ಲ.ತಮ್ಮ ಮಗನ ಎರಡು ಜಿಮ್ನಾಷಿಯಂಗಳಲ್ಲಿ ಪ್ರತಿಭಾನ್ವಿತ ಹುಡುಗರಿಗೆ ಮಾರ್ಗದರ್ಶನ ನೀಡುತ್ತಾರೆ.  ಕಾಫಿ, ದಾಲ್ ರೋಟಿ, ಹುರಿದ ಮೀನಿನ ಖಾದ್ಯಗಳನ್ನು ಈಗಲೂ ತಿನ್ನುತ್ತಾರೆ. ಆದರೆ, ಬೇಕರಿ ತಿನಿಸು, ತಂಪುಪಾನೀಯಗಳನ್ನು ತಮ್ಮ ಜೀವನದಲ್ಲಿಯೇ ಮುಟ್ಟಿಲ್ಲ ಎನ್ನುತ್ತಾರೆ ಈ ದೀರ್ಘಾಯುಷಿ.ಹತ್ತು ವರ್ಷಗಳ ಹಿಂದೆ ಪತ್ನಿ ಜ್ಯೋತಿಕಾ ಅಗಲಿದ ಮೇಲೆ, ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರ ಕುಟುಂಬಗಳೊಂದಿಗೆ ಇದ್ದಾರೆ.ಮಗ ಬಿಷ್ಣು ಕೂಡ ಅಪ್ಪನಂತೆ ದೇಹದಾರ್ಢ್ಯಪಟು ಆದರೆ, ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ. ಎಲ್ ಎಂಡ್‌ಟಿ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದಾರೆ.ಮಾರ್ಚ್ 17ರಂದು ನಡೆದ ಜನ್ಮದಿನ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಪ್ರಮುಖ ರಾಜಕೀಯ ಪಕ್ಷಗಳ ಧುರೀಣರು ಭಾಗವಹಿಸಿದ್ದರು. 100ರ ಹೊಸ್ತಿಲಲ್ಲಿಯೂ ಚುರುಕಾಗಿ ಓಡಾಡಿಕೊಂಡಿದ್ದ ಮನೋಹರ ಅವರನ್ನು ನೋಡಿ ಬೆರಗಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.